ಉಪ್ಪಿನಂಗಡಿ ಬಳಿಯ ದವಳಗಿರಿ ಕಾಡು ಟ್ರೆಕ್ಕಿಂಗ್‌ಗೆ ಅದ್ಭುತವಾದ ಜಾಗ ಅಂತ ಅವನಿಗೆ ಗೊತ್ತಾಗುತ್ತಿದ್ದಂತೆಯೇ, ಅವನು ತನ್ನ ಸ್ನೇಹಿತರೊಂದಿಗೆ ವೀಕೆಂಡ್ ಪ್ಲಾನ್ ಮಾಡುತ್ತಾನೆ. ಬೆಂಗಳೂರಿನಿಂದ ಉಜಿರೆಗೆ ಹೋಗುವಷ್ಟರಲ್ಲೇ ರಾತ್ರಿ ಹತ್ತು ಗಂಟೆ ದಾಟಿರುತ್ತದೆ. ಅಲ್ಲಿಂದ ಉಪ್ಪಿನಂಗಡಿಗೆ ಹೋಗಬೇಕು. ಯಾವುದೇ ಬಸ್ ಸಿಗುವುದಿಲ್ಲ. ಈ ಮೂವರ ಜೊತೆಗೆ, ಉಪ್ಪಿನಂಗಡಿಗೆ ಹೊರಟ ಇನ್ನೊಬ್ಬ ಸೇರಿಕೊಳ್ಳುತ್ತಾನೆ. ಬಸ್ಸಿಗೆ ಕಾದರೆ ಪ್ರಯೋಜನವಿಲ್ಲ, ಎಂದು ಆ ನಾಲ್ವರು ಒಂದು ಕಾರು ಮಾಡಿಕೊಂಡು ಉಪ್ಪಿನಂಗಡಿಗೆ ಹೊರಡುತ್ತಾರೆ.
ಉಪ್ಪಿನಂಗಡಿಗೆ ಇನ್ನು ಆರೇ ಮೈಲಿ ಇದೆ ಎನ್ನುವಾಗ, ದಾರಿಯಲ್ಲೊಂದು ಮರ ಬಿದ್ದಿರುತ್ತದೆ. ಆ ಮರ ಪಕ್ಕಕ್ಕೆ ಸರಿಸಿ ಬರುತ್ತೀನಿ ಎಂದು ಕಾರಿನಿಂದ ಕೆಳಗಿಳಿಯುವ ಡ್ರೈವರ್ ಎಲ್ಲೋ ಮಾಯವಾಗುತ್ತಾನೆ. ಇತ್ತ … ಇಷ್ಟಕ್ಕೂ ಆ “6ನೇ ಮೈಲಿ’ಯ ಬಳಿ ಏನಾಯಿತು? ಅದನ್ನ ಹೇಳ್ಳೋದೂ ಸರಿಯಲ್ಲ, ಕೇಳ್ಳೋದೂ ಸರಿಯಲ್ಲ. ಇಷ್ಟೆಲ್ಲಾ ಕೇಳಿದ ಮೇಲೆ ಇದು ಮತ್ತೂಂದು ದೆವ್ವದ ಚಿತ್ರವಿರಬಹುದು ಎಂಬ ಅನುಮಾನ ಬರಬಹುದು.
ಹಾಗೇನಾದರೂ ಸಂಶಯವಿದ್ದರೆ, ತಲೆಯಿಂದ ತೆಗೆದು ಹಾಕಿ. “6ನೇ ಮೈಲಿ’ಗಲ್ಲಿನ ಬಳಿ ಯಾವುದೇ ದೆವ್ವವಿಲ್ಲ, ವಿಕಾರವಾದ ಮುಖಗಳಿಲ್ಲ, ಆತ್ಮಕಥೆಯಂತೂ ಅಲ್ಲವೇ ಅಲ್ಲ. ಇದೊಂದು ಪಕ್ಕಾ ಥ್ರಿಲ್ಲರ್ ಸ್ಟೋರಿ. ಚಾರಣಕ್ಕೆಂದು ಹೋದವರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಏನೆಲ್ಲಾ ಆಗುತ್ತದೆ ಎಂಬ ವಿಷಯವನ್ನಿಟ್ಟುಕೊಂಡು ಸೀನಿ ಕಥೆ ಮಾಡಿದ್ದಾರೆ. ಹಾಗೆ ನೋಡಿದರೆ, “6ನೇ ಮೈಲಿ’ ತೀರಾ ದೊಡ್ಡ ಚಿತ್ರವೇನಲ್ಲ.
ಒಂದೂಮುಕ್ಕಾಲು ತಾಸಿನೊಳಗೆ ಹೇಳಬೇಕಾಗಿದ್ದನ್ನು ಸೀನಿ ಹೇಳಿಬಿಡುತ್ತಾರೆ. ಆದರೆ, ಅದೇ ಸ್ವಲ್ಪ ಎಳೆದಂತಾಗಿದೆ. ಚಾರಣಕ್ಕೆ ಹೋಗುವ ಮುನ್ನ ಪ್ಲಾನಿಂಗ್ ಮಾಡುವುದು, ಶಾಪಿಂಗ್ ಮಾಡುವುದು ಮುಂತಾದ ವಿಷಯಗಳನ್ನು ಕಟ್ ಮಾಡಿದ್ದರೆ ಆಗ ಚಿತ್ರ ಇನ್ನಷ್ಟು ನೋಡಿಸಿಕೊಂಡು ಹೋಗುತಿತ್ತು. ಅದೆಲ್ಲಕ್ಕಿಂತ ಹೆಚ್ಚಾಗಿ ಈ ತರಹದ ಚಿತ್ರಗಳಿಗೆ ಇನ್ನಷ್ಟು ರೋಚಕತೆಯ ಅವಶ್ಯಕತೆ ಇದೆ.
ಒಂದಿಷ್ಟು ತಿರುವುಗಳು ಮತ್ತು ಸಸ್ಪೆನ್ಸ್ ಅಂಶಗಳಿದ್ದರೆ ಇನ್ನೂ ಚೆನ್ನಾಗಿರುತಿತ್ತು. ಹಾಗಾಗಿ ಚಿತ್ರ ಸ್ವಲ್ಪ ನಿಧಾನವಾಗುತ್ತದೆ. ದ್ವಿತೀಯಾರ್ಧದಲ್ಲಿ ಪೊಲೀಸ್ ತನಿಖೆಯಿಂದಾಗಿ ಚಿತ್ರ ಸ್ವಲ್ಪ ವೇಗ ಪಡೆದುಕೊಳ್ಳುತ್ತದೆ. ಈ ದೃಶ್ಯಗಳನ್ನು ಸೀನಿ ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಪೊಲೀಸರು ಇಡೀ ಪ್ರಕರಣವನ್ನುನ್ನು ಹೇಗೆ ಬೇಧಿಸುತ್ತಾರೆ ಮತ್ತು ಏನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಚಿತ್ರದಲ್ಲಿ ಅಭಿನಯ ಎನ್ನುವುದಕ್ಕಿಂತ ತಾಂತ್ರಿಕ ಅಂಶಗಳು ಖುಷಿ ಕೊಡುತ್ತದೆ.
ಪರಮೇಶ್ ಛಾಯಾಗ್ರಹಣ, ಸಾಯಿಕಿರಣ್ ಹಿನ್ನೆಲೆ ಸಂಗೀತ, ವಸಿಷ್ಠ ಸಿಂಹ ಅವರ ಹಾಡು, ಆ ಹಾಡಿನಲ್ಲಿ ಬರುವ ಗ್ರಾಫಿಕ್ಸ್ … ಗಮನಸೆಳೆಯುತ್ತದೆ. ಇನ್ನು ಸಂಚಾರಿ ವಿಜಯ್, ನೇತ್ರಾ, ಕೃಷ್ಣ ಹೆಬ್ಟಾಳೆ ಮುಂತಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಚಿತ್ರಕಥೆಯನ್ನೂ ಬರೆದಿರುವ ಸೀನಿ ಇನ್ನಷ್ಟು ಚುರುಕುತನ ಪ್ರದರ್ಶಿಸಿದ್ದರೆ, “6ನೇ ಮೈಲಿ’ ಚಿತ್ರವು ಚಿತ್ರರಂಗಕ್ಕಲ್ಲದಿದ್ದರೂ, ಚಿತ್ರತಂಡಕ್ಕಾದರೂ ಒಂದು ಮೈಲಿಗಲ್ಲಾಗುತಿತ್ತು.
ಚಿತ್ರ: 6ನೇ ಮೈಲಿ
ನಿರ್ದೇಶನ: ಸೀನಿ
ನಿರ್ಮಾಣ: ಡಾ.ಬಿ.ಎಸ್. ಶೈಲೇಷ್ ಕುಮಾರ್
ತಾರಾಗಣ: ಸಂಚಾರಿ ವಿಜಯ್, ನೇತ್ರ, ಕೃಷ್ಣ ಹೆಬ್ಟಾಳೆ, ರಘು ಪಾಂಡೇಶ್ವರ್ ಮುಂತಾದವರು
* ಚೇತನ್ ನಾಡಿಗೇರ್