ಕನ್ನಡದಲ್ಲಿ ಇತ್ತೀಚೆಗೆ ಮ್ಯೂಸಿಕ್ ವಿಡಿಯೋ ಆಲ್ಬಂ ಟ್ರೆಂಡ್ ನಿಧಾನವಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಚಿತ್ರರಂಗಕ್ಕೆ ಅಡಿಯಿಡಲು ಕನಸು ಕಾಣುತ್ತಿರುವವರು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಹುಡುಕುತ್ತಿರುವ ಹೊಸಬರಿಗೆ ಇಂತಹ ಮ್ಯೂಸಿಕ್ ಆಲ್ಬಂಗಳು ನಿಧಾನವಾಗಿ ಕೈ ಹಿಡಿಯುತ್ತಿವೆ. ಈಗ ಇಂಥದ್ದೇ ಒಂದು ಹೊಸಬರ ತಂಡ “ಕಳ್ದೋಗ್ಬುಟ್ಟೆ ಕಣೆ’ ಎನ್ನುವ ಮ್ಯೂಸಿಕ್ ವಿಡಿಯೋ ಆಲ್ಬಂ ಮೂಲಕ ಚಿತ್ರರಂಗಕ್ಕೆ ಅಡಿಯಿಡುವ ತಯಾರಿಯಲ್ಲಿದೆ.
ಸುಮಾರು 18 ವರ್ಷಗಳಿಂದ ಸಂಗೀತ ಮತ್ತು ನೃತ್ಯರಂಗದಲ್ಲಿ ಸಕ್ರಿಯವಾಗಿರುವ, “ಟೀಂ ಯುವಾಸ್ ಡ್ಯಾನ್ಸ್ ಕಂಪೆನಿ’ ಎಂಬ ಸುಮಾರು 40-50 ಜನರ ನೃತ್ಯ ತಂಡವನ್ನು ನಡೆಸಿಕೊಂಡು ಬರುತ್ತಿರುವ ಯುವರಾಜ್ ವೈ ಬುಲ್, “ವೈ ಬುಲ್’ ಮತ್ತು “ಕಳ್ದೋಗ್ಬುಟ್ಟೆ ಕಣೆ’ ಎನ್ನುವ ಮ್ಯೂಸಿಕ್ ಆಲ್ಬಂ ಅನ್ನು ಹೊರತಂದಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರ ಸಮ್ಮುಖದಲ್ಲಿ ತಂಡ, “ವೈ ಬುಲ್’ ಮತ್ತು “ಕಳ್ದೋಗ್ಬುಟ್ಟೆ ಕಣೆ’ ಮ್ಯೂಸಿಕ್ ಆಲ್ಬಂ ಅನ್ನು ಹೊರತಂದಿದೆ.
ಇದೇ ವೇಳೆ ಮಾತನಾಡಿದ ಮ್ಯೂಸಿಕ್ ಆಲ್ಬಂನ ರೂವಾರಿ ಯುವರಾಜ್, “ಮೊದಲಿನಿಂದಲೂ ಚಿತ್ರರಂಗದಲ್ಲಿ ಏನಾದರೂ ಸಾಧಿಸಬೇಕು ಎಂಬ ಕನಸಿನಿಂದ ಇಲ್ಲೇ ಕೆಲಸ ಮಾಡುತ್ತಿದ್ದೇನೆ. ಆದರೆ ಅನೇಕ ನಿರ್ಮಾಪಕರು ಮತ್ತು ನಿರ್ದೇಶಕರ ಬಳಿ ಅವಕಾಶ ಕೇಳಿಕೊಂಡು ಹೋದರೂ, ಸಿಗದಿದ್ದಾಗ ನಾವೇ ಯಾಕೆ ಒಂದು ಮ್ಯೂಸಿಕ್ ಆಲ್ಬಂ ಮಾಡಬಾರದು ಎಂಬ ಯೋಚನೆ ಬಂತು. ನಂತರ ನಮ್ಮ ಒಂದಷ್ಟು ಜನ ಸ್ನೇಹಿತರ ಜೊತೆ ಸೇರಿಕೊಂಡು “ಕಳ್ದೋಗ್ಬುಟ್ಟೆ ಕಣೆ’ ಎನ್ನುವ ಮ್ಯೂಸಿಕ್ ಆಲ್ಬಂ ಮಾಡಲು ಮುಂದಾದೆವು.
ಇದು ನಮ್ಮ ಪ್ರತಿಭೆಯನ್ನು ಚಿತ್ರರಂಗಕ್ಕೆ ಮತ್ತು ಜನರ ಮುಂದೆ ತೋರಿಸುವ ಸಣ್ಣ ಪ್ರಯತ್ನ. ಮುಂದೆ ಇದೇ ರೀತಿ ಚಿತ್ರಗಳನ್ನು ಮಾಡುವ ಯೋಚನೆ ಇದೆ’ ಎಂದು ತಮ್ಮ ಕನಸುಗಳನ್ನು ತೆರೆದಿಟ್ಟರು. ಇನ್ನು “ವೈ ಬುಲ್’ ಮತ್ತು “ಕಳ್ದೋಗ್ಬುಟ್ಟೆ ಕಣೆ’ ಎರಡೂ ಮ್ಯೂಸಿಕ್ ವಿಡಿಯೋ ಆಲ್ಬಂನಲ್ಲಿ ಯುವರಾಜ್ ಅವರೇ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ “ವೈ ಬುಲ್’ ವಿಡಿಯೋ ಆಲ್ಬಂ ಸಾಂಗ್ ಯೂ-ಟ್ಯೂಬ್‌ನಲ್ಲಿ ಸುಮಾರು 60 ಲಕ್ಷ ಜನ ವೀಕ್ಷಿಸಿ, ಮೆಚ್ಚುಗೆಯನ್ನು ಸೂಚಿಸಿದ್ದಾರೆ.
“ಕಳ್ದೋಗ್ಬುಟ್ಟೆ ಕಣೆ’ ಮ್ಯೂಸಿಕ್ ಆಲ್ಬಂನಲ್ಲಿ ಯುವರಾಜ್ ಅವರಿಗೆ “ರನ್ ಆ್ಯಂಟನಿ’ ಚಿತ್ರದ ಖ್ಯಾತಿಯ ಸುಶ್ಮಿತಾ ಜೋಶಿ ನಾಯಕಿಯಾಗಿ ಹೆಜ್ಜೆ ಹಾಕಿದ್ದಾರೆ. ಸದ್ಯ “ಕಳ್ದೋಗ್ಬುಟ್ಟೆ ಕಣೆ’ ಮ್ಯೂಸಿಕ್ ಆಲ್ಬಂ ಸಂಗೀತ ಪ್ರಿಯರನ್ನು ನಿಧಾನವಾಗಿ ಸೆಳೆಯುತ್ತಿದ್ದು, ಹೊಸಬರ ಪ್ರಯತ್ನಕ್ಕೆ ಪ್ರಶಂಸೆ ಸಿಗುತ್ತಿದೆ.