Advertisement

ನಕ್ಸಲರು ಭೇಟಿ ಇತ್ತ ಕುಟುಂಬದ ಕಣ್ಣೀರ ಕಥೆ

08:15 AM Feb 08, 2018 | |

ಸುಬ್ರಹ್ಮಣ್ಯ: ಅಂದು ನಾನು ಎಲ್ಲರಿಗೂ ಬೇಕಾಗಿದ್ದೆ; ಆದರೆ ಇಂದು ನನ್ನ ಆವಶ್ಯಕತೆ ಯಾರಿಗೂ ಇಲ್ಲ. ಸೂಟುಬೂಟು ಸದ್ದಿನ ಜತೆ ಅಂದು ಮನೆ ಬಾಗಿಲು ಬಡಿದ ಅಧಿಕಾರಿಗಳು, ಜನಪ್ರತಿನಿಧಿ ಗಳು ಆ ಬಳಿಕ ನನ್ನನ್ನು ಮರತೇ ಬಿಟ್ಟಿದ್ದಾರೆ. ಈ ರೀತಿ ಅಸಹಾಯಕತೆ, ಅಳಲು ತೋಡಿ ಕೊಂಡಿದ್ದು ಸುಬ್ರಹ್ಮಣ್ಯ ಪಳ್ಳಿಗದ್ದೆ ನಿವಾಸಿ ಬೆಳಿಯಪ್ಪ ಗೌಡ. ಇವರ ಮನೆಗೆ ಏಳು ವರ್ಷದ ಹಿಂದೆ ನಕ್ಸಲರು ಭೇಟಿ ಇತ್ತಿದ್ದರು. ಪಶ್ಚಿಮ ಘಟ್ಟದ ವಿವಿಧೆಡೆಗಳಲ್ಲಿ ಇತ್ತೀಚೆಗಿನ ಕೆಲವು ದಿನಗಳಲ್ಲಿ ಶಂಕಿತ ನಕ್ಸಲರ ಚಲನವಲನ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಬೆಳಿಯಪ್ಪ ಗೌಡರು ತಮ್ಮ ದುಗುಡ ಹಂಚಿಕೊಂಡರು.  

Advertisement

2012ರಲ್ಲಿ ಪಳ್ಳಿಗದ್ದೆಯಲ್ಲಿದ್ದ ಇವರ ಮನೆಗೆ ಒಂಬತ್ತು ಮಂದಿ ಶಸ್ತ್ರಧಾರಿ ನಕ್ಸಲರು ಭೇಟಿ ಇತ್ತಿದ್ದರು. ಅದು ಈ ಭಾಗಕ್ಕೆ ನಕ್ಸಲರ ಮೊದಲ ಪ್ರವೇಶ. ಬೆಳಿಯಪ್ಪ ಗೌಡರ ಮನೆಯಿಂದ ಆಹಾರ ಸಾಮಗ್ರಿ ಹಾಗೂ ಮಾಹಿತಿ ಪಡೆದುಕೊಂಡಿದ್ದ ನಕ್ಸಲರು, ತಾವು ಬಂದ ವಿಚಾರವನ್ನು ಬೇರೆ ಯಾರಿಗೂ ಹೇಳಬಾರದು ಎಂದು ತಾಕೀತು ಮಾಡಿದ್ದರು. ಬಾಯಿಬಿಟ್ಟರೆ ಕೊಲ್ಲುವ ಬೆದರಿಕೆ ಒಡ್ಡಿದ್ದರು. ಆ ಬಳಿಕ ನಕ್ಸಲ್‌ ಭೇಟಿ ವಿಚಾರ ಬಹಿರಂಗಗೊಂಡು ಈ ಭಾಗದಲ್ಲಿ ನಕ್ಸಲ್‌ ನಿಗ್ರಹ ಪಡೆ ಯೋಧರು ಶೋಧ ಕಾರ್ಯಾಚರಣೆ ನಡೆಸಿದ್ದರು.

ಹುಸಿಯಾದ ಭರವಸೆ
ಘಟನೆಯ ಬಳಿಕ ಎಎನ್‌ಎಫ್ ಯೋಧರು, ಅಧಿಕಾರಿಗಳು ಬೆಳಿಯಪ್ಪ ಗೌಡರ ಮನೆಗೆ ಭೇಟಿ ನೀಡಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಕುಟುಂಬಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದರು. ಆದರೆ ಮುಂದೆ ಅದ್ಯಾವುದೂ ಈಡೇರಲಿಲ್ಲ. 

ಮನೆ ನೆಲಸಮ ಬೆದರಿಕೆ
ಪಳ್ಳಿಗದ್ದೆಯ ಮೂಲ ಮನೆ ಹಾಗೂ ಕೃಷಿ ಭೂಮಿ ತ್ಯಜಿಸಿದ ಬಳಿಕ ಬೆಳಿಯಪ್ಪ ಗೌಡರು ಕುಲ್ಕುಂದ ಬಳಿ ಮೂಸೆಕುಂಞಿ ಅವರ ವಶದಲ್ಲಿದ್ದ, ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದ ಗೋಮಾಳದ 0.5 ಸೆಂಟ್ಸ್‌ ಜಾಗವನ್ನು ಸಾಲವಾಗಿ ಪಡೆದ 1 ಲಕ್ಷ ರೂ. ಬೆಲೆ ತೆತ್ತು ಖರೀದಿಸಿದರು. ಸಾಲ ಮಾಡಿ ಜಾಗ ಖರೀದಿಸಿ ಮನೆ ಕಟ್ಟಿದಾಗ ಸ್ಥಳೀಯ ಅಧಿಕಾರಿಗಳು ಅದಕ್ಕೆ ಅಡ್ಡಗಾಲು ಹಾಕಿದರು. ಮನೆ ತೆರವುಗೊಳಿಸುವಂತೆ, ಇಲ್ಲವಾದರೆ ನೆಲಸಮ ಮಾಡುವುದಾಗಿ ಬೆದರಿಸಿದರು. ಮೆಸ್ಕಾಂನವರು ವಿದ್ಯುತ್‌ ಸಂಪರ್ಕದ ವಯರ್‌ಗಳನ್ನು ಕಿತ್ತು ಹಾಕಿ ತೊಂದರೆ ನೀಡಿದರು. ಪಳ್ಳಿಗದ್ದೆಯಲ್ಲಿ ಇವರಿಗಿದ್ದ 40 ಸೆಂಟ್ಸ್‌ ಜಾಗ ಹಡಿಲು ಬಿದ್ದಿದೆ, ಮನೆ ಸಂಪೂರ್ಣ ನೆಲಸಮಗೊಂಡಿದೆ.

ಬಡತನದ ಜೀವನ; ಮುಗಿಯದ ಬವಣೆ
ಪತಿ-ಪತ್ನಿಯದು ಕೂಲಿ ಕೆಲಸ. ಮನೆಯಲ್ಲಿ ತೀರದ ಬಡತನವಿದೆ. ಜಾಗ ಖರೀದಿಸಲು ಮಾಡಿದ ಸಾಲ ತೀರಿಸುವುದಕ್ಕಾಗಿ ಬೆಳಿಯಪ್ಪ ಗೌಡರ ಮಗ ಶಾಲೆ ಬಿಟ್ಟು ಖಾಸಗಿ ಕೆಲಸಕ್ಕೆ ಸೇರಿದ್ದಾನೆ. ಹಿರಿಯ ಪುತ್ರಿ ಖಾಸಗಿ ಮೆಡಿಕಲ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಇನ್ನೊಬ್ಟಾಕೆ ಪಿಯುಸಿ ಕಲಿತಿದ್ದಾಳೆ. ಹಿರಿಯ ಪುತ್ರಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ನೌಕರಿ ನೀಡುವ ಸಲುವಾಗಿ ಪೊಲೀಸ್‌ ವರಿಷ್ಠಾಧಿಕಾರಿಗಳೇ ಶಿಫಾರಸು ಪತ್ರ ನೀಡಿದ್ದರೂ ಅದನ್ನು ಯಾರೂ ಗಣನೆಗೆ ತೆಗೆದುಕೊಂಡಿಲ್ಲ.

Advertisement

ನಕ್ಸಲ್‌ ಭೇಟಿ, ಶೋಧ ಕಾರ್ಯಾಚರಣೆಯ ಬಳಿಕ ಈ ಕುಟುಂಬಕ್ಕೆ ಸರಕಾರ ಜಿಲ್ಲಾಡಳಿತದ ಮೂಲಕ ರಕ್ಷಣೆ, ನಿವೇಶನ, ಸವಲತ್ತು, ಭದ್ರತೆ ಒದಗಿಸುವ ಭರವಸೆ ನೀಡಿತ್ತು. ಕೆಲವು ದಿನ ಅಧಿಕಾರಿಗಳು, ಪೊಲೀಸರ ಬೂಟುಗಳು, ವಾಹನಗಳು ಇವರ ಮನೆ ಪರಿಸರದಲ್ಲಿ ಸದ್ದು ಮಾಡಿದ್ದು ಬಿಟ್ಟರೆ ರಕ್ಷಣೆಯೂ ಇಲ್ಲ, ಬದುಕಿಗೆ ನೆಲೆಯೂ ಇಲ್ಲವಾಗಿದೆ. ಕಾರ್ಕಳ ನಕ್ಸಲ್‌ ನಿಗ್ರಹ ದಳ ಅಧೀಕ್ಷಕರು ಈ ಕುಟುಂಬಕ್ಕೆ ಅತಿ ಆವಶ್ಯಕವಾಗಿ ನಿವೇಶನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ, ಜಿ.ಪಂ. ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಜಿಲ್ಲಾಧಿಕಾರಿ ಮತ್ತು ಎ.ಸಿ. ಅವರು ಕ್ರಮಕ್ಕಾಗಿ ತಹಶೀಲ್ದಾರ್‌ ಅವರ ಕಚೇರಿಗೆ ಸೂಚಿಸಿದ್ದರೂ ಇದುವರೆಗೆ ಪ್ರಯೋಜನ ಆಗಿಲ್ಲ.

ಏಳು ವರ್ಷಗಳ ಅಲೆದಾಟ
ಈಗಿನ ಮನೆಗೆ ಹಕ್ಕುಪತ್ರ ನೀಡುವಂತೆ ಬೆಳಿಯಪ್ಪ ಗೌಡರು ಐದು ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಹಕ್ಕುಪತ್ರ ಮಂಜೂರಾತಿಗೆ ಹಾಗೂ ಇತರ ಸೌಲಭ್ಯಕ್ಕಾಗಿ ಒಟ್ಟು ಏಳು ವರ್ಷಗಳಿಂದ ವಿವಿಧ ಇಲಾಖೆಗಳ ಕಚೇರಿಗಳಿಗೆ ಓಡಾಟ ನಡೆಸಿದ್ದಾರೆ. ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅಲೆದಾಟ ನಡೆಸಿದರೂ ಇಲ್ಲಿಯ ತನಕ ಯಾವ ಸೌಲಭ್ಯವೂ ದೊರಕಿಲ್ಲ. ವಾರದ ಹಿಂದೆಯಷ್ಟೇ ತಾಲೂಕು ದಂಡಾಧಿಕಾರಿ ಕಚೇರಿಗೆ ತೆರಳಿ ಸಮಸ್ಯೆ ಹೇಳಿಕೊಂಡಾಗ ಹಕ್ಕುಪತ್ರಕ್ಕೆ ಮತ್ತೂಮ್ಮೆ ಅರ್ಜಿ ಕೊಡಿ ಎಂದು ಹೇಳಿ ಕಳುಹಿಸಿಕೊಟ್ಟಿದ್ದಾರೆ. ಬದುಕಿನಲ್ಲಿ ಎದುರಾಗುವ ಸವಾಲಿಗೆ ಅಂಜಿ ಸೋಲುವವರೇ ಜಾಸ್ತಿ. ಅಂತಹ ಸವಾಲುಗಳನ್ನು ದಿಟ್ಟತನದಿಂದ ಎದುರಿಸಿಯೂ ಇಂದು ಕಣ್ಣೀರಿನಲ್ಲಿ ಕೈತೊಳೆಯಬೇಕಾದ ದುಃಸ್ಥಿತಿ ಬೆಳಿಯಪ್ಪ ಗೌಡರದು. ಒಂದೆಡೆ ನಕ್ಸಲ್‌, ಇನ್ನೊಂದೆಡೆ ಆಡಳಿತ ಹೀಗೆ ಇಕ್ಕೆಡೆಗಳಿಂದಲೂ ತುಳಿತಕ್ಕೆ ಒಳಪಟ್ಟ ಈ ಕುಟುಂಬದ ನೆರವಿಗೆ ಸರಕಾರ, ಜಿಲ್ಲಾಡಳಿತ ಸ್ಪಂದಿಸಬೇಕಿದೆ. 

ಸಂತ್ರಸ್ತರು ಕಚೇರಿಗೆ ಆಗಮಿಸಿ ಅಹವಾಲು ಹೇಳಿಕೊಂಡಿದ್ದಾರೆ. ಕೆಲವು ದಾಖಲೆಗಳ ಆವಶ್ಯಕತೆಯಿದೆ. ವಾಸವಿರುವ ಮನೆಯ ಭಾವಚಿತ್ರ ಸಹಿತ ದಾಖಲೆ ತರಲು ಸೂಚಿಸಿದ್ದೇವೆ. ನಿವೇಶನದ ಹಕ್ಕುಪತ್ರ ನೀಡಲು ಬದ್ಧರಿದ್ದೇವೆ.
– ಕುಂಞಮ್ಮ, ಸುಳ್ಯ ತಹಶೀಲ್ದಾರ್‌

ಜಾಗದ ರೆಕಾರ್ಡ್‌ಗಾಗಿ ಐದು ವರ್ಷಗಳಿಂದ ಡಿ.ಸಿ. ಕಚೇರಿ, ಎ.ಸಿ. ಕಚೇರಿ, ತಹಶೀಲ್ದಾರ್‌ ಕಚೇರಿ, ಕಂದಾಯ ಕಚೇರಿ, ಗ್ರಾ.ಪಂ.ಗಳಿಗೆ ತೆರಳಿ ಸೋತಿದ್ದೇನೆ. ಶಾಸಕರ ಸಹಿತ ಎಲ್ಲ ಜನಪ್ರತಿನಿಧಿ ಗಳನ್ನೂ ಭೇಟಿಯಾಗಿದ್ದೇನೆ. ನ್ಯಾಯ ಸಿಕ್ಕಿಲ್ಲ.
ಸಂತ್ರಸ್ತ ಬೆಳಿಯಪ್ಪ ಪಳ್ಳಿಗದ್ದೆ

ಬಾಲಕೃಷ್ಣ ಭೀಮಗುಳಿ 

Advertisement

Udayavani is now on Telegram. Click here to join our channel and stay updated with the latest news.

Next