ಒಬ್ಬ ರಾಜನಿಗೆ ಸುಂದರಿಯಾದ ಒಬ್ಬಳೇ ಮಗಳಿದ್ದಳು. ರಾಜ ಅವಳನ್ನು ಅತಿಶಯವಾಗಿ ಪ್ರೀತಿಸುತ್ತಿದ್ದ. ತಾನು ಸುಂದರಿ ಎಂಬ ಅಹಂಕಾರ ಅವಳಿಗೆ ನೆತ್ತಿಗೇರಿತ್ತು. ತನ್ನ ಸ್ವಾರ್ಥ ಸಾಧನೆಗಾಗಿ ಏನು ಬೇಕಾದರೂ ಮಾಡುತ್ತಿದ್ದಳು. ಸುಳ್ಳು ಹೇಳುತ್ತಿದ್ದಳು. ಒಂದು ದಿನ ಸಂಜೆ ಅವಳು ಪಡು ಕಡಲಿನಲ್ಲಿ ಮುಳುಗುತ್ತಿರುವ ಸೂರ್ಯನನ್ನು ನೋಡಿದಳು. ತಂದೆಯ ಬಳಿಗೆ ಬಂದು, “”ಅಪ್ಪಾ, ನನಗೆ ಈ ಸೂರ್ಯನನ್ನೇ ಚೆಂಡನ್ನಾಗಿ ಬಳಸಿ ಆಟವಾಡಬೇಕೆಂಬ ಆಶೆಯಾಗಿದೆ. ಅವನನ್ನು ತರಿಸಿಕೊಡು” ಎಂದು ಕೇಳಿದಳು. ಈ ಮಾತಿಗೆ ರಾಜನು ಜೋರಾಗಿ ನಕ್ಕುಬಿಟ್ಟ. “”ಎಂಥ ಹುಚ್ಚು ಮಾತಿದು ಮಗಳೇ. ಸೂರ್ಯನ ಬಳಿಗೆ ಹೋಗಲು ಯಾರಿಂದಲೂ ಸಾಧ್ಯವಿಲ್ಲ, ಹಾಗೆಲ್ಲಾದರೂ ಮಾಡಿದರೆ ಸುಟ್ಟು ಬೂದಿಯಾಗುತ್ತೇವೆ. ಇನ್ನು ಅವನನ್ನು ಹಿಡಿಯುವ ಮಾತೆಲ್ಲಿ ಬಂತು? ಅದರ ಬದಲು ಚಿನ್ನದ ಚೆಂಡನ್ನು ಮಾಡಿಸಿಕೊಡುತ್ತೇನೆ. ಅದನ್ನೇ ಸೂರ್ಯನೆಂದು ಭಾವಿಸಿ ಆಟವಾಡು” ಎಂದು ಹೇಳಿದ. ರಾಜಕುಮಾರಿ ಈ ಮಾತಿಗೆ ಒಪ್ಪಿಕೊಂಡಳು. ರಾಜ ಚಿನಿವಾರರಿಂದ ಚಿನ್ನದ ಚೆಂಡನ್ನು ಮಾಡಿಸಿ ಮಗಳಿಗೆ ಕೊಟ್ಟ.
ರಾಜಕುಮಾರಿ ಹೊತ್ತು ಕತ್ತಲಾಗುವವರೆಗೂ ಚಿನ್ನದ ಚೆಂಡಿನಲ್ಲಿ ಆಟವಾಡಿದಳು. ಕಡೆಗೆ ಚೆಂಡು ಪುಟಿಯುತ್ತ ಹೋಗಿ ಒಂದು ಬಾವಿಗೆ ಬಿತ್ತು. ತುಂಬ ನೀರಿರುವ ಆಳವಾದ ಬಾವಿಗೆ ಬಗ್ಗಿ ನೋಡಿ ರಾಜಕುಮಾರಿ ಅಸಹಾಯಳಾಗಿ ಅಳತೊಡಗಿದಳು. “”ಅಯ್ಯೋ, ನಾನು ಬಾವಿಗೆ ಇಳಿಯಲಾರೆನಲ್ಲ. ನನ್ನ ಚೆಂಡನ್ನು ಯಾರು ತಂದು ಕೊಡುತ್ತಾರೆ?” ಎಂದು ಕೂಗಿಕೊಂಡಳು. ಆಗ ಬಾವಿಯ ಕಟ್ಟೆಯಿಂದ ಒಂದು ಪುಟ್ಟ ಧ್ವನಿ, “”ರಾಜಕುಮಾರಿ, ನಿನ್ನ ಚೆಂಡನ್ನು ನಾನು ಹೆಕ್ಕಿ ತಂದುಕೊಟ್ಟರೆ ಆಗಬಹುದೆ?” ಎಂದು ಕೇಳಿತು. “”ಆಗದೆ ಏನು? ಯಾರು ತಂದುಕೊಟ್ಟರೂ ಆಗುತ್ತದೆ” ಎಂದಳು ರಾಜಕುಮಾರಿ. “”ಸುಮ್ಮನೆ ಯಾರು ತಂದುಕೊಡುತ್ತಾರೆ? ಪ್ರತಿಫಲವೆಂದು ನಾನು ಕೇಳಿದುದನ್ನು ಕೊಡುತ್ತೇನೆಂದು ಮಾತು ಕೊಡಬೇಕು” ಎಂದಿತು ಧ್ವನಿ. “”ಕೊಡುತ್ತೇನೆ ಮಹಾರಾಯಾ ಕೊಡುತ್ತೇನೆ. ಅಂಥ ಉಪಕಾರ ಮಾಡಿದವರಿಗೆ ಏನು ಕೇಳಿದರೂ ಕೊಡುವ ಸಾಮರ್ಥ್ಯ ನನಗಿದೆ. ಸಿರಿವಂತ ದೊರೆಯ ಒಬ್ಬಳೇ ಮಗಳು ನಾನು” ಎಂದು ಮಾತು ಕೊಟ್ಟಳು ರಾಜಕುಮಾರಿ.
ಅರೆಕ್ಷಣದಲ್ಲಿ ಯಾರೋ ಬಾವಿಗೆ ಧುಳುಮ್ಮನೆ ಜಿಗಿದು ಅರೆಕ್ಷಣದಲ್ಲಿ ಚೆಂಡಿನೊಂದಿಗೆ ಮೇಲೆ ಬರುವುದನ್ನು ರಾಜಕುಮಾರಿ ನೋಡಿದಳು. ಅದೊಂದು ದೊಡ್ಡ ಕಪ್ಪೆ! “”ರಾಜಕುಮಾರಿ, ಚೆಂಡು ತೆಗೆದುಕೋ. ಪ್ರತಿಫಲವಾಗಿ ನನ್ನನ್ನು ಮದುವೆಯಾಗು” ಎಂದು ಹೇಳಿ ಅದು ಚೆಂಡನ್ನು ನೀಡಿತು. ರಾಜಕುಮಾರಿ ಅಸಹ್ಯದಿಂದ ನಕ್ಕಳು. “”ಒಂದು ಕಪ್ಪೆಗೆ ನನ್ನಂತಹ ಸುಂದರಿ ಹೆಂಡತಿಯಾಗುವುದೆ? ಹೋಗು ಹೋಗು” ಎಂದು ಚೆಂಡನ್ನು ತೆಗೆದುಕೊಂಡು ಹೊರಟುಹೋದಳು. ಆದರೆ ಕಪ್ಪೆ$ ಬಿಡಲಿಲ್ಲ. ನೇರವಾಗಿ ರಾಜನ ಸಭೆಗೆ ಹೋಯಿತು. ರಾಜನ ಬಳಿ, “”ದೊರೆಯೇ ನಿಮ್ಮ ರಾಜ್ಯದಲ್ಲಿ ಕೊಟ್ಟ ಮಾತು ತಪ್ಪಿದವರನ್ನು ಏನು ಮಾಡುತ್ತೀರಿ?” ಎಂದು ಕೇಳಿತು. “”ನನ್ನ ಬಂಧುಗಳಾದರೂ ಸರಿ, ಮಾತಿಗೆ ತಪ್ಪಿದವರಿಗೆ ಮರಣದಂಡನೆಯೇ ಶಿಕ್ಷೆ” ಎಂದನು ರಾಜ. “”ನಿಮ್ಮ ಮಗಳು ನನಗೆ ಮಾತು ಕೊಟ್ಟು ತಪ್ಪಿದ್ದಾಳೆ. ಅವಳು ನನ್ನ ಇಚ್ಛೆಯಂತೆ ನನ್ನನ್ನು ಮದುವೆಯಾಗಬೇಕು. ಇಲ್ಲವಾದರೆ ನೀವು ಅವಳಿಗೆ ದಂಡನೆ ವಿಧಿಸಬೇಕು” ಎಂದು ಕಪ್ಪೆ$ನಡೆದ ವಿಷಯ ಹೇಳಿತು.
ನ್ಯಾಯವನ್ನು ತಪ್ಪದ ರಾಜ ಮಗಳನ್ನು ಕರೆಸಿ ವಿಚಾರಣೆ ಮಾಡಿದ. ಕಪ್ಪೆಯನ್ನು ಮದುವೆಯಾಗಲು ಆಜಾnಪಿಸಿದ. ವಿಧಿಯಿಲ್ಲದೆ ರಾಜಕುಮಾರಿ ಕಪ್ಪೆಯನ್ನು ವರಿಸಬೇಕಾಯಿತು. ಅದನ್ನು ತನ್ನ ಅಂತಃಪುರಕ್ಕೂ ಕರೆದುಕೊಂಡು ಹೋದಳು. ಆದರೆ ಗಂಡನೆಂದು ಆದರಿಸಲಿಲ್ಲ. ಪ್ರೀತಿ ಮಾಡಲಿಲ್ಲ. ಆದರೂ ಕಪ್ಪೆ ಅವಳ ಜೊತೆಗೆ ಠೀವಿಯಿಂದ ಹೋಗುತ್ತ ಬರುತ್ತ ಇತ್ತು.
ಹೀಗಿರಲು ಒಬ್ಬ ಶತ್ರು ರಾಜ ಭಾರೀ ಸೈನ್ಯದೊಂದಿಗೆ ಬಂದು ಆ ರಾಜ್ಯಕ್ಕೆ ಮುತ್ತಿಗೆ ಹಾಕಿದ. ಅವನು ವಯಸ್ಸಿನಲ್ಲಿ ವೃದ್ಧನಾಗಿದ್ದ. ಅವನಿಗೆ ಒಂದು ಕಣ್ಣು ಇರಲಿಲ್ಲ. “”ನನ್ನ ಜೊತೆಗೆ ಹೋರಾಡಿ ಗೆದ್ದುಕೊಳ್ಳಿ. ಆದರೆ ನನ್ನನ್ನು ಎದುರಿಸುವ ಶಕ್ತಿ ನಿಮ್ಮಲ್ಲಿಲ್ಲವಾದರೆ ನನಗೆ ನಿಮ್ಮ ರಾಜ್ಯ ಬೇಡ, ಬಂಗಾರ ಬೇಡ. ಸುಂದರಿಯಾದ ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ” ಎಂದು ಶತ್ರು ರಾಜ ಕೇಳಿದ. ಈ ಮಾತು ಕೇಳಿ ರಾಜನಿಗೆ ಕೋಪ ಬಂತು. “”ಎಂತಹ ಹುಚ್ಚುತನವಿದು! ನನ್ನ ಮಗಳಿಗೆ ಈಗಾಗಲೇ ವಿವಾಹವಾಗಿದೆ. ಅವಳಿಗೆ ಗಂಡನಿದ್ದಾನೆ. ಪುನಃ ಅವಳನ್ನು ನಿಮಗೆ ಕೊಡುವುದಾದರೂ ಹೇಗೆ?” ಎಂದು ಕೇಳಿದ. ಶತ್ರುರಾಜ ನಕ್ಕುಬಿಟ್ಟ. “”ನನಗೆ ಈ ವಿಷಯ ಗೊತ್ತಿದೆ. ಒಂದು ಕಪ್ಪೆಯೊಂದಿಗೆ ಮನುಷ್ಯರ ಮದುವೆಯಾಗುವುದುಂಟೆ? ಅದು ಮದುವೆಯೇ ಅಲ್ಲ. ಅವಳನ್ನು ನನಗೇ ಕೊಟ್ಟುಬಿಡಿ” ಎಂದು ಹೇಳಿದ. ರಾಜನು ಈ ಮಾತಿಗೆ ಒಪ್ಪಲಿಲ್ಲ. ಶತ್ರುರಾಜ ಯುದ್ಧಕ್ಕೆ ನಿಂತ. ಅವನ ಸೇನೆಯನ್ನು ಗೆಲ್ಲಲು ರಾಜನಿಗೆ ಸಾಧ್ಯವೇ ಇರಲಿಲ್ಲ.
ಈ ವಿಷಯ ತಿಳಿದು ರಾಜಕುಮಾರಿ ಅಳತೊಡಗಿದಳು. ಶತ್ರುರಾಜ ಗೆಲ್ಲುತ್ತಾನೆ, ನಾನು ಅವನ ವಶವಾಗುವ ಬದಲು ಸಾಯುವುದೇ ಮೇಲು ಎಂದು ಹೇಳಿಕೊಂಡಳು. ಆಗ ಕಪ್ಪೆ, “”ರಾಜಕುಮಾರಿ, ಚಿಂತಿಸಬೇಡ, ಶತ್ರುವನ್ನು ನಾನು ಓಡಿಸುತ್ತೇನೆ. ನೋಡು ನನ್ನ ಪರಾಕ್ರಮ” ಎಂದು ಹೇಳಿತು. ಅಂದು ರಾತ್ರೆ ಸಾವಿರಾರು ಕಪ್ಪೆಗಳು ಒಂದೇ ಸವನೆ ಕೂಗಿ ಕೂಗಿ ಮಳೆಯನ್ನು ಕರೆದವು. ಅದರಿಂದಾಗಿ ಅನಿರೀಕ್ಷಿತವಾಗಿ ಭಾರೀ ಮಳೆ ಸುರಿಯಿತು. ಶತ್ರು ರಾಜನ ಶಸ್ತ್ರಾಸ್ತ್ರಗಳೆಲ್ಲವೂ ಪ್ರವಾಹದಲ್ಲಿ ಮುಳುಗಿಹೋದವು. ಯುದ್ಧ ಮಾಡಲಾಗದೆ ಅವನು ಪಲಾಯನ ಮಾಡಿದ. ರಾಜಕುಮಾರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. “”ನೀನು ನಿಜವಾದ ಗಂಡಸು ಕಣೋ” ಎಂದು ಕಪ್ಪೆಯನ್ನು ಎತ್ತಿ ಮುದ್ದಿಟ್ಟಳು.
ಮರುಕ್ಷಣವೇ ಕಪ್ಪೆ ಮಾಯವಾಗಿ ಅಲ್ಲೊಬ್ಬ ಸುಂದರನಾದ ರಾಜಕುಮಾರ ನಿಂತಿದ್ದ. “”ಮಂತ್ರಿಯ ಕುತಂತ್ರದಿಂದ ಮಾಟಗಾರರು ನನ್ನನ್ನು ಮತ್ತು ನನ್ನ ನಿಷ್ಠಾವಂತ ಪ್ರಜೆಗಳನ್ನು ಕಪ್ಪೆಗಳನ್ನಾಗಿ ಮಾಡಿದ್ದರು. ರಾಜಕುಮಾರಿಯೊಬ್ಬಳು ಪ್ರೀತಿಯಿಂದ ಮುತ್ತಿಟ್ಟಾಗ ನಮ್ಮ ಈ ಜನ್ಮ ತೊಲಗಿ ಮೊದಲಿನಂತಾಗುತ್ತೇವೆಂದು ಹೇಳಿದ್ದರು. ಈಗ ನಿನ್ನಿಂದಾಗಿ ನಾನು ಮರಳಿ ಮನುಷ್ಯನಾಗಿದ್ದೇನೆ. ಬಾ, ನನ್ನ ಅರಮನೆಗೆ ಹೋಗಿ ಅಲ್ಲಿ ಸುಖವಾಗಿರೋಣ” ಎಂದು ಅವನು ಹೇಳಿದ.
ಪರಾಶರ