Advertisement

ಸಾಲಿಗ್ರಾಮದ  ಶ್ರೀನಿವಾಸ ದೇವಾಡಿಗರ ಕುಟುಂಬದ ಕಥೆ-ವ್ಯಥೆ

05:05 PM Sep 26, 2017 | Team Udayavani |

ಕೋಟ : ಸಾಲಿಗ್ರಾಮ ಗುಂಡ್ಮಿಯ ಹಾಳೆಕೋಟೆ ಮೈದಾನ ಸಮೀಪ ಶ್ರೀನಿವಾಸ ದೇವಾಡಿಗ ಹಾಗೂ ಅವರ ಸಹೋದರಿ ದೇವಕಿ ದೇವಾಡಿಗ ಎನ್ನುವವರು ಎರಡು ದಶಕಗಳಿಂದ ಮರುಕಲು ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರಕಾರದ ವಸತಿ ಯೋಜನೆಗಳಿಗೆ ಆಯ್ಕೆಯಾದರೂ ಸೂಕ್ತ ಮಾರ್ಗದರ್ಶನವಿಲ್ಲದೆ ಕೊರಗುತ್ತಿದ್ದಾರೆ. ಇದೀಗ ಇವರ ಜೀವನಕ್ಕೆ ಆಧಾರವಾಗಿದ್ದ  ಜೋಪಡಿ ಕೂಡ ಕುಸಿದಿದ್ದು ಮುಂದೇನು ಎನ್ನುವ ಆತಂಕ ಎದುರಾಗಿದೆ.

Advertisement

ಶ್ರೀನಿವಾಸ ದೇವಾಡಿಗ ಅವರಿಗೆ ಮದುವೆಯಾಗಿ ಮಕ್ಕಳಿದ್ದು ಅವರು ಬೇರೆ ಕಡೆ ವಾಸಿಸುತ್ತಿದ್ದಾರೆ. ಹೀಗಾಗಿ ತನ್ನ ಅವಿವಾಹಿತ ತಂಗಿಯ ಜತೆಗೆ ಇವರು ಈ ಜೋಪಡಿಯಲ್ಲೆ ದಿನ ಕಳೆಯುತ್ತಿದ್ದಾರೆ. ಸ್ವಂತ ಜಾಗವಿಲ್ಲದೆ ಊರೂರು ಅಲೆದಾಡುತ್ತಿದ್ದ  ಇವರಿಗೆ ಇಪ್ಪತ್ತು ವರ್ಷದ ಹಿಂದೆ ಸರಕಾರದಿಂದ ಐದು ಸೆಂಟ್ಸ್‌ ಜಾಗ ಮಂಜೂರಾಗಿತ್ತು. ಅನಂತರ ಇದರಲ್ಲಿ ತೆಂಗಿನ ಗರಿಗಳಿಂದ ಜೋಪಡಿ ನಿರ್ಮಿಸಿ ವಾಸಿಸತೊಡಗಿದರು.  ಇಂದಿಗೂ ಅದೇ ಗುಡಿಸಲಿನಲ್ಲಿ ಈ ಕುಟುಂಬ ವಾಸಿಸುತ್ತಿದೆ.

ಗುಡಿಸಲು ಕುಸಿಯಿತು
ಮೊನ್ನೆ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ ಕುಸಿದಿದೆ. ಹೀಗಾಗಿ ಮನೆಯಲ್ಲಿ ಅಡುಗೆ ತಯಾರಿಸಲಾಗದೆ ಹೊರಗಡೆ ದೇವಸ್ಥಾನಗಳಿಗೆ ತೆರಳಿ ಅಣ್ಣ-ತಂಗಿ ಊಟ ಮಾಡುತ್ತಿದ್ದಾರೆ. ಶ್ರೀನಿವಾಸ ದೇವಾಡಿಗ ಅವರಿಗೆ ಕೆಲಸ ಮಾಡುವ ಸಾಮರ್ಥ್ಯವಿಲ್ಲ, ತಂಗಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಬೀಡಿ ಎಲೆ ಸಮಸ್ಯೆಯಿಂದ ಆ ಕೆಲಸ ಕೂಡ ಇಲ್ಲವಾಗಿದೆ. ತಿಂಗಳ ಮಾಸಾಶನದಲ್ಲೇ ದಿನ ಕಳೆಯಬೇಕಾದ ಪರಿಸ್ಥಿತಿ ಇದೆ.

ಸಂಘ-ಸಂಸ್ಥೆಗಳ ಸಹಕಾರ ಅಗತ್ಯ
ಇದೀಗ ಈ ಕುಟುಂಬ ವಾಜಪೇಯಿ ವಸತಿ ಯೋಜನೆಗೆ ಆಯ್ಕೆಯಾಗಿದೆ. ಆದರೆ ಅನುದಾನ ಕಂತು – ಕಂತುಗಳಲ್ಲಿ ಸಿಗುವುದರಿಂದ  ಆರಂಭದಲ್ಲಿ ಹಣ  ತೊಡಗಿಸಲು  ಸಾಧ್ಯವಾಗುತ್ತಿಲ್ಲ. ಸಂಘ-ಸಂಸ್ಥೆಗಳು ಮುಂದೆ ನಿಂತು ಈ ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ನೆರವಾದರೆ ತುಂಬಾ ಅನುಕೂಲವಾಗಲಿದೆ.  ವಸತಿ ಯೋಜನೆಯಿಂದ 2.70ಲಕ್ಷ ರೂ. ಅನುದಾನ ದೊರೆಯುವುದರಿಂದ  ಸಂಘಟನೆಗಳಿಗೆ ಹೆಚ್ಚಿನ ಹೊರೆಯಾಗಲಾರದು. ಒಟ್ಟಾರೆ ಈ ಬಡ  ಕುಟುಂಬಕ್ಕೆ ನೆಲೆ ಒದಗಿಸಲು ಒಂದಷ್ಟು ಸಹಕಾರ ಅಗತ್ಯವಿದೆ.  

ಸಹಾಯ ನೀಡುವಿರಾದರೆ…
ಸಹಾಯ ಮಾಡುವವರು 7259876463 ಮೊಬೈಲ್‌ ಅಥವಾ ಸಾಲಿಗ್ರಾಮ ಸಿಂಡಿಕೇಟ್‌ ಬ್ಯಾಂಕ್‌ನ ಖಾತೆ ಸಂಖ್ಯೆ 01312200087623, ಐ.ಎಫ್‌.ಎಸ್‌. ಸಂಖ್ಯೆ  ಎಸ್‌.ವೈ.ಎನ್‌.ಬಿ. 0000131ಗೆ ಹಣ ಜಮಾ ಮಾಡಬಹುದು.

Advertisement

ನಾನು ಇಪ್ಪತ್ತು ವರ್ಷದಿಂದ ತಂಗಿಯೊಂದಿಗೆ ಈ ಜೋಪಡಿಯಲ್ಲಿ ವಾಸಿಸುತ್ತಿದ್ದೇನೆ. ಹೆಂಡತಿ, ಮಕ್ಕಳು ಬೇರೆ ಕಡೆ ಇದ್ದಾರೆ. ಇದೀಗ ನಮಗೆ ಆಧಾರವಾಗಿದ್ದ ಜೋಪಡಿ ಕುಸಿದಿದೆ.  ಪ.ಪಂ.ನವರು ವಸತಿ ಯೋಜನೆಗೆ ನೀವು ಆಯ್ಕೆಯಾಗಿದ್ದೀರಿ, ಮನೆ ನಿರ್ಮಿಸಿದರೆ ಹಂತ-ಹಂತವಾಗಿ ಹಣ ಸಿಗುತ್ತದೆ ಎಂದಿದ್ದಾರೆ. ಆದರೆ ತಳಪಾಯ ಹಾಕಿ ಮನೆ ಆರಂಭಿಸಲು ನನ್ನಲ್ಲಿ ಶಕ್ತಿ ಇಲ್ಲ. ಯಾವುದಾದರು ಸಂಘ-ಸಂಸ್ಥೆಗಳು ನೆರವಾದರೆ ಸಹಾಯವಾಗುತ್ತದೆ.
ಶ್ರೀನಿವಾಸ ದೇವಾಡಿಗ

ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next