Advertisement
ಒಂದು ದಿನ ಹೊಸಬನೊಬ್ಬ ರೈತನ ಮನೆಗೆ ಬಂದ. “”ನನ್ನ ಪರಿಚಯವಾಯಿತೆ? ನಾನು ಬಹು ವರ್ಷಗಳ ಹಿಂದೆ ಮನೆ ಬಿಟ್ಟುಹೋದ ನಿನ್ನ ಹಿರಿಯಣ್ಣ. ನಿನಗೆ ನೆನಪಿದೆಯೆ?” ಎಂದು ಕೇಳಿದ. “”ಇಲ್ಲವಲ್ಲ, ನನ್ನ ಅಪ್ಪ, ಅಮ್ಮ ಇಬ್ಬರೂ ಈಗ ಜೀವಂತವಾಗಿಲ್ಲ. ಅವರು ನನಗೊಬ್ಬ ಅಣ್ಣನಿದ್ದಾನೆಂದು ಹೇಳಿದ ನೆನಪಿಲ್ಲ. ಏನೇ ಇರಲಿ, ಅಣ್ಣ ಎಂದು ಹೇಳಿದೆಯಲ್ಲವೆ! ತುಂಬ ಸಂತೋಷವಾಯಿತು. ಬಾ, ನನ್ನೊಂದಿಗೆ ಮನೆಗೆ ಹೋಗಿ ಆರಾಮವಾಗಿ ಊಟ ಮಾಡಿ ಮಾತನಾಡೋಣ. ಮುಂದೆ ನನ್ನ ಜೊತೆಗೇ ನೀನೂ ಇರಬಹುದು” ಎಂದು ಕರೆದ.
Related Articles
Advertisement
ಮರುದಿನ ಇನ್ನೊಬ್ಬ ವ್ಯಕ್ತಿ ರೈತನ ಮನೆಗೆ ಬಂದ. “”ನಾನು ರಾಜನ ಸಭೆಯಿಂದ ಬಂದಿದ್ದೇನೆ. ನೀನು ನಿನ್ನ ದಾಯಾದಿಗೆ ಸೇರಿದ ಭಾಗವನ್ನು ಕೊಡುವುದಕ್ಕೆ ನಿರಾಕರಿಸಿರುವ ಬಗ್ಗೆ ನಿನ್ನ ಮೇಲೆ ದೂರು ಕೊಟ್ಟಿದ್ದಾನೆ. ವಿಚಾರಣೆಗಾಗಿ ನೀನು ನನ್ನೊಂದಿಗೆ ರಾಜನ ಸನ್ನಿಧಿಗೆ ಹೊರಟು ಬರಬೇಕು” ಎಂದು ಕರೆದ. ರೈತ ಧೈರ್ಯದಿಂದ ಅವನ ಜೊತೆಗೆ ಹೊರಟುಬಂದ. ಕಾಡುದಾರಿಯಲ್ಲಿ ತುಂಬ ಮುಂದೆ ಬಂದಾಗ ಆ ವ್ಯಕ್ತಿಯು ದೊಡ್ಡ ಸಂಕೋಲೆಯಿಂದ ರೈತನ ಕೈಕಾಲುಗಳನ್ನು ಬಂಧಿಸಿದ.
ರೈತನಿಗೆ ಅಚ್ಚರಿಯಾಯಿತು. “”ಅಣ್ಣ, ನಾನು ನಿನ್ನ ಜೊತೆಗೇ ಬರುತ್ತಿದ್ದೇನಲ್ಲ. ಸುಮ್ಮನೆ ಯಾಕೆ ನನ್ನನ್ನು ಸಂಕೋಲೆಯಿಂದ ಬಂಧಿಸುತ್ತಿರುವೆ?” ಎಂದು ಪ್ರಶ್ನಿಸಿದ. ವ್ಯಕ್ತಿಯು ಗಹಗಹಿಸಿ ನಕ್ಕ. “”ನಿನಗೆ ಮಾತ್ರ ಸಂಕೋಲೆ ತೊಡಿಸಿಲ್ಲ. ನೋಡು ಅವರೆಲ್ಲರನ್ನೂ” ಎಂದು ಕೈತೋರಿಸಿದ. ಆ ಕಡೆಗೆ ನೋಡಿದಾಗ ನೂರಾರು ಜನರು ಅವನಂತೆಯೇ ಸಂಕೋಲೆಯಿಂದ ಬಂಧಿತರಾಗಿರುವುದು ಕಾಣಿಸಿತು. “”ಏನು, ಇವರೆಲ್ಲರೂ ನನ್ನ ಹಾಗೆ ದಾಯಾದಿಗೆ ಭಾಗ ಕೊಡದ ಅಪರಾಧ ಮಾಡಿದವರೆ?” ಎಂದು ರೈತ ಬೆರಗಾಗಿ ಕೇಳಿದ.
ವ್ಯಕ್ತಿ ಇನ್ನಷ್ಟು ಜೋರಾಗಿ ನಕ್ಕ. “”ಶುದ್ಧ ಅಮಾಯಕ ನೀನು. ನಿನ್ನಂತಹ ಅಮಾಯಕರೇ ನನಗೆ ಸಂಪತ್ತು ತರುವವರು. ನಾನು ಗುಲಾಮರ ವ್ಯಾಪಾರಿ. ನಿನ್ನ ಬಳಿಗೆ ದಾಯಾದಿಯಂತೆ ನಟಿಸುತ್ತ ಬಂದವನು ನನ್ನ ಸಹಚರ. ದೇಹದಲ್ಲಿ ದುಡಿಯಲು ಕಸುವಿರುವವರನ್ನು ಯಾವುದಾದರೂ ಒಂದು ವಿಧದಿಂದ ಮೋಸಪಡಿಸಿ ನಮ್ಮ ಜೊತೆಗೆ ಬರುವ ಹಾಗೆ ಮಾಡುತ್ತೇವೆ. ಒಮ್ಮೆ ಬಂದವರು ಜೀವಮಾನವಿಡೀ ತಪ್ಪಿಸಿಕೊಳ್ಳದಂತೆ ಸಂಕೋಲೆಯಿಂದ ಬಂಧಿಸಿ ರಾಜನ ಬಳಿಗೆ ಕರೆದೊಯ್ಯುತ್ತೇವೆ. ನಿಮ್ಮನ್ನು ತನ್ನ ಅರಮನೆಯ ಕೆಲಸಕ್ಕೆ ತೊಡಗಿಸಿ ರಾಜನು ಪ್ರತಿಯಾಗಿ ನಮಗೆ ಮೂಟೆ ತುಂಬ ಚಿನ್ನದ ನಾಣ್ಯಗಳನ್ನು ಕೊಡುತ್ತಾನೆ. ಇದು ನಮ್ಮ ವ್ಯಾಪಾರದ ಗುಟ್ಟು” ಎಂದು ಹೇಳಿದ.
ಎಲ್ಲ ಗುಲಾಮರ ಜೊತೆಗೆ ರೈತನನ್ನೂ ನಡೆಸಿಕೊಂಡು ವ್ಯಾಪಾರಿಯು ರಾಜನ ಸನ್ನಿಧಿಗೆ ತಲುಪಿದ. “”ಎಷ್ಟೊಂದು ಜನರನ್ನು ಕರೆತಂದಿರುವೆ! ನನಗೆ ತುಂಬ ಸಂತೋಷವಾಗಿದೆ. ಪ್ರತಿಯೊಬ್ಬ ಗುಲಾಮನ ಬಂಧನವನ್ನು ಕಳಚಿಬಿಡು. ಅವರನ್ನು ನೋಡಿದ ಬಳಿಕ ಯೋಗ್ಯತೆಗೆ ತಕ್ಕಂತೆ ಬೆಲೆಯನ್ನು ನಿರ್ಧರಿಸುತ್ತೇನೆ” ಎಂದು ರಾಜನು ಹೇಳಿದ. ವ್ಯಾಪಾರಿಯು ಗುಲಾಮರ ಸಂಕೋಲೆಗಳನ್ನು ತೆಗೆದುಹಾಕಿದ.
ಮರುಕ್ಷಣವೇ ರೈತನು ಮಿಂಚಿನ ವೇಗದಲ್ಲಿ ಎಲ್ಲರ ನಡುವಿನಿಂದ ತಪ್ಪಿಸಿಕೊಂಡು ಹೊರಗೆ ಓಡತೊಡಗಿದ. ವ್ಯಾಪಾರಿಯು, “”ದೊರೆಯೇ, ಅವನನ್ನು ತಪ್ಪಿಸಿಕೊಳ್ಳಲು ಬಿಡಬೇಡಿ. ಆ ಗುಲಾಮ ತುಂಬ ಚಾಲಾಕಿಯಾಗಿದ್ದಾನೆ. ಯುದ್ಧ ಸಂದರ್ಭದಲ್ಲಿ ಅವನಂತಹ ವೇಗದ ಓಟಗಾರರು ನಿಮ್ಮಲ್ಲಿದ್ದರೆ ತುಂಬ ಸಹಾಯವಾಗುತ್ತದೆ. ಅಶ್ವದಳದ ಸೈನಿಕರನ್ನು ಕಳುಹಿಸಿ ಅವನನ್ನು ಹುಡುಕಿಸಿ ಕರೆತರಲು ಹೇಳಿ” ಎಂದು ಕೇಳಿಕೊಂಡ. ರಾಜನು ಕೂಡಲೇ ಸೈನಿಕರಿಗೆ ಆಜ್ಞೆ ಮಾಡಿದ.
ರೈತನು ತಪ್ಪಿಸಿಕೊಂಡು ಕಾಡು ಸೇರಿದ. ಹಸಿವು, ಬಾಯಾರಿಕೆಗಳಿಂದ ಒಂದು ಹೆಜ್ಜೆಯನ್ನೂ ಮುಂದಿಡಲಾಗದೆ ಒಂದೆಡೆ ಕುಳಿತುಕೊಂಡಿರುವಾಗ ಒಂದು ಸಿಂಹವು ಕುಂಟುತ್ತ ಅವನ ಬಳಿಗೆ ಬಂದಿತು. ಎದ್ದು ಓಡಲು ಶಕ್ತಿಯಿಲ್ಲದ ರೈತ, “”ಬಾ, ನನ್ನನ್ನು ಕೊಂದು ತಿಂದುಬಿಡು. ರಾಜನ ಬಳಿ ಗುಲಾಮನಾಗಿ ಜೀವನವಿಡೀ ದುಡಿಯುವ ಬದಲು ತಕ್ಷಣ ಸಾವು ಬಂದರೆ ನನಗೂ ಒಳ್ಳೆಯದು. ನಿನ್ನ ಹಸಿವು ನೀಗಿಸಿದ ಪುಣ್ಯವಾದರೂ ಸಿಗುತ್ತದೆ” ಎಂದು ಅದನ್ನು ಕರೆದ. ಆದರೆ ಸಿಂಹ ಅವನ ಮೇಲೆ ನೆಗೆಯಲಿಲ್ಲ. ಬಳಿಗೆ ಬಂದು ಮುಂಗಾಲನ್ನೆತ್ತಿ ಮೌನವಾಗಿ ನಿಂತುಕೊಂಡಿತು.
ರೈತ ಸಿಂಹದ ಮುಂಗಾಲನ್ನು ನೋಡಿದ. ಒಂದು ದೊಡ್ಡ ಮುಳ್ಳು ಚುಚ್ಚಿಕೊಂಡು ಗಾಯದಲ್ಲಿ ಕೀವು ಆಗಿತ್ತು. ಸಿಂಹವು ನರಳುತ್ತಿತ್ತು. ರೈತನಿಗೆ ಅದರ ನೋವು ಅರ್ಥವಾಯಿತು. ಉಪಾಯದಿಂದ ಸಿಂಹದ ಕಾಲಿಗೆ ಚುಚ್ಚಿಕೊಂಡಿರುವ ಮುಳ್ಳನ್ನು ಹೊರಗೆ ತೆಗೆದ. ಸನಿಹವಿದ್ದ ಬಳ್ಳಿ, ಸೊಪ್ಪುಗಳನ್ನು ತಂದು ಅರೆದು ಗಾಯಕ್ಕೆ ಲೇಪಿಸಿದ. ನೋವು ಶಮನವಾದ ಬಳಿಕ ಸಿಂಹ ಹೊರಟುಹೋಯಿತು. ಅಷ್ಟರಲ್ಲಿ ರಾಜನ ಭಟರು ಕುದುರೆಯ ಮೇಲೇರಿಕೊಂಡು ಅಲ್ಲಿಗೆ ಬಂದರು. ಸುಲಭವಾಗಿ ರೈತನನ್ನು ಹಿಡಿದು ಬಂಧಿಸಿ ರಾಜನ ಬಳಿಗೆ ಕರೆದೊಯ್ದರು.
ರೈತನನ್ನು ನೋಡಿ ರಾಜನು ಕೋಪದಿಂದ, “”ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ತಪ್ಪಿಗೆ ಕ್ಷಮೆಯೇ ಇಲ್ಲವೆಂಬುದು ನಿನಗೆ ಗೊತ್ತಿದೆಯೇ? ನಿನ್ನನ್ನು ಒಂದು ಸಿಂಹಕ್ಕೆ ಆಹಾರವಾಗಿ ಕೊಡುವುದೇ ಅಪರಾಧಕ್ಕೆ ತಕ್ಕ ದಂಡನೆ. ನೀನು ಅನುಭವಿಸುವ ನೋವು ಇತರ ಗುಲಾಮರಿಗೂ ಪಾಠವಾಗಬೇಕು” ಎಂದು ಹೇಳಿ ಭಟರೊಂದಿಗೆ ಕಾಡಿನಿಂದ ಒಂದು ಸಿಂಹವನ್ನು ಹಿಡಿದು ತರಲು ಆಜ್ಞಾಪಿಸಿದ. ಭಟರು ಕಾಡಿಗೆ ಹೋದರು. ಒಂದು ಬೋನಿನಲ್ಲಿ ಸಿಂಹವನ್ನು ಹಿಡಿದು ತಂದರು.
ಸಿಂಹದ ಬೋನಿನೊಳಗೆ ರೈತನನ್ನು ತಳ್ಳಿದರು. ಸಿಂಹವು ಗರ್ಜಿಸುತ್ತ ರೈತನೆಡೆಗೆ ಹಾರಿತು. ಆದರೆ ಅವನ ಸಮೀಪ ಹೋದ ಕೂಡಲೇ ಸಾಕಿದ ನಾಯಿಯ ಹಾಗೆ ಬಾಲ ಅಲ್ಲಾಡಿಸಿತು. ಅವನ ತೊಡೆಯ ಮೇಲೆ ತಲೆಯಿರಿಸಿ ಸುಮ್ಮನೆ ಮಲಗಿಕೊಂಡಿತು. ರಾಜನಿಗೆ ಆಶ್ಚರ್ಯವಾಯಿತು. ಕ್ರೂರವಾದ ಸಿಂಹವೊಂದು ಇವನ ಮುಂದೆ ಹೀಗೆ ವರ್ತಿಸಬೇಕಾದರೆ ಇವನೊಬ್ಬ ಮಹಾತ್ಮನಿರಬಹುದು ಅಥವಾ ಮಾಂತ್ರಿಕನಿರಬಹುದು ಎಂದು ಅವನಿಗನಿಸಿ ಗೂಡಿನಿಂದ ಹೊರಗೆ ಕರೆತರಲು ಆಜ್ಞೆ ಮಾಡಿದ. ಬಳಿಗೆ ಕರೆದು ವಿಚಾರಿಸಿದ.
ರೈತನು, “”ದೊರೆಯೇ, ನಾನು ಮಾಟಗಾರನೂ ಅಲ್ಲ, ಮಹಾತ್ಮನೂ ಅಲ್ಲ. ಒಬ್ಬ ಸಾಮಾನ್ಯನಾದ ರೈತ. ಸಿಂಹವು ತಾನು ಮನುಷ್ಯನಂತೆ ಕೃತಘ್ನನಲ್ಲ, ಮೋಸಗಾರನಲ್ಲ ಎಂದು ತೋರಿಸಿಕೊಡಲು ತನ್ನ ಕ್ರೌರ್ಯವನ್ನು ತ್ಯಜಿಸಿದೆ” ಎಂದು ವಿನಯದಿಂದ ನಿವೇದಿಸಿದ.
ರಾಜನು ಹುಬ್ಬೇರಿಸಿದ. “”ನಿನ್ನ ಮಾತು ನನಗೆ ಅರ್ಥವಾಗಲಿಲ್ಲ. ಏನು ವಿಷಯ ನಡೆದಿದೆ ಎಂಬುದನ್ನು ಒಂದೂ ಬಿಡದೆ ವಿವರಿಸು” ಎಂದು ಹೇಳಿದ. ರೈತನು ತನ್ನನ್ನು ಕರೆತಂದಿರುವ ವ್ಯಾಪಾರಿಯತ್ತ ಬೆರಳು ತೋರಿಸಿದ. ಅವನು ಮಾಡಿದ ಮೋಸವನ್ನೂ ವಿವರಿಸಿದ. “”ಮನುಷ್ಯ ತನ್ನ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ. ಆದರೆ ಮೃಗಗಳು ಹಸಿವಿಗಾಗಿ ಮಾತ್ರ ಕೊಲ್ಲುತ್ತವೆ. ಉಪಕಾರವನ್ನು ಸ್ಮರಿಸಿಕೊಳ್ಳುತ್ತವೆ” ಎಂದು ನಡೆದ ಕತೆಯನ್ನು ಹೇಳಿದ.
ರಾಜನು, “”ಈ ರೈತನ ಒಳ್ಳೆಯ ಗುಣಕ್ಕೆ ಮೆಚ್ಚಿಕೊಂಡಿದ್ದೇನೆ. ಅವನಿಗೆ ಹೊರುವಷ್ಟು ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿ. ಮೋಸಗಾರನಾದ ವ್ಯಾಪಾರಿಯು ಕರೆತಂದ ಎಲ್ಲರಿಗೂ ಗುಲಾಮಗಿರಿಯಿಂದ ವಿಮೋಚನೆ ನೀಡಿ. ವ್ಯಾಪಾರಿಯನ್ನು ಸಿಂಹದ ಬೋನಿನೊಳಗೆ ದೂಡಿ ಅದಕ್ಕೆ ಆಹಾರವಾಗಲು ಕಳುಹಿಸಿ” ಎಂದು ಹೇಳಿದ.
ಪ. ರಾಮಕೃಷ್ಣ ಶಾಸ್ತ್ರಿ