ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. “ಪಾವಗಡ’ದ ಹೆಸರು ವಿವಿಧ ಬಗೆಗಳಲ್ಲಿ ಲಭಿಸುತ್ತದೆ. ಬೆಟ್ಟದ ಬುಡದಲ್ಲಿರುವ ಈಶ್ವರ ದೇವಾಲಯದ ಶಾಸನ “ಪಾಗೊಂಡೆ’ ಎಂದಿದ್ದರೆ, ಕಮ್ಮಾರಗುಂಡಿನ ಶಾಸನವು “ಪಾವಗೊಂಡ’ ಎಂದು, ಹುಲಿಬೆಟ್ಟದ ಶಾಸನ “ಪಾವುಗೊಂಡ’ ಎಂದು ಕರೆದಿದೆ. ವೆಂಕಟಪತಿರಾಯನ ಶಾಸನದಲ್ಲಿ ಪಾಮುಕೊಂಡ ಎಂದು ಸ್ಪಷ್ಟವಾಗಿ ದಾಖಲಿಸಲಾಗಿದೆ. ಶಾಸನತಜ್ಞ ಬೆಂಜಮಿನ್ ಲೂಯಿಸ್ ರೈಸ್ ತಿಳಿಸುವಂತೆ, ಇಲ್ಲಿರುವ ಹಾವಿನ ಕಲ್ಲಿಂದಾಗಿ ಈ ಹೆಸರು ಬಂದಿದೆ ಎಂಬ ಅಭಿಪ್ರಾಯವಿದೆ. ಇದಕ್ಕೆ ಪೂರಕವಾಗಿ ಇಲ್ಲಿನ ಬೆಟ್ಟವು ಹಾವಿನ ಆಕಾರದಲ್ಲಿ ಇದೆ. ಕ್ರಿ.ಶ. 1767ರ ವೇಳೆಗೆ ಮರಾಠರು ಮಧುಗಿರಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು 7 ವರ್ಷಗಳ ಕಾಲ ಇಲ್ಲಿ ಅಧಿಕಾರ ನಡೆಸಿ, ಪಾಗೊಂಡ, ಪಾಮುಕೊಂಡವನ್ನು “ಪಾವಗಡ’ ಎಂಬುದಾಗಿ ಪರಿವರ್ತಿಸಿದರು ಎಂದು ಹೇಳಲಾಗುತ್ತದೆ.