Advertisement

ಕೊರಗರ ಕಥೆಯಲ್ಲಿ ಕೊರೆಯುತಿದೆ ಪ್ರಶ್ನೆ

06:00 AM Apr 05, 2018 | |

ಎಲ್ಲರಿಗೂ ಸೂರು, ಭೂಮಿ ಅಥವಾ ಆಕಳುಗಳನ್ನು ನೀಡುವ ಯೋಜನೆಗಳು ಸಮಸ್ಯೆಗೆ ಯಾವ ಪರಿಹಾರವನ್ನೂ ಒದಗಿಸಲಾರವು. ನಮಗಿರುವುದು ಪಶ್ಚಿಮಕ್ಕಿರುವಂತೆ ಬರಿಯ ಆರ್ಥಿಕ ಆಯಾಮವಷ್ಟೇ ಅಲ್ಲ, ಆರ್ಥಿಕತೆಯ ಆಚೆಗೆ ಮಾನವ ಬದುಕನ್ನು ಸಂಪನ್ನಗೊಳಿಸುವ ಸಾಂಸ್ಕೃತಿಕ ಆಯಾಮವಿದೆ.

Advertisement

ಕರಾವಳಿ ಕರ್ನಾಟಕದ, ಆರ್ಥಿಕವಾಗಿ-ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಹಾಗೂ ಬುಡಕಟ್ಟು ಸಂಸ್ಕೃತಿಯ ಎಲ್ಲ ಲಕ್ಷಣಗಳನ್ನು ಹೊಂದಿರುವ ಒಂದು ಜನವರ್ಗ ಕೊರಗ. ಕರ್ನಾಟಕ ಸರಕಾರ ಅವರನ್ನು ಪರಿಶಿಷ್ಟ ಬುಡಕಟ್ಟು ಅಥವಾ ಗಿರಿಜನ ಎಂಬುದಾಗಿ ಗುರುತಿಸಿದೆ. 1985-86ನೇ ಸಾಲಿನಿಂದ ಈ ಸಮುದಾಯವನ್ನು ದಕ್ಷಿಣ ಕನ್ನಡ ಜಿಲ್ಲೆಯ ಆದಿವಾಸಿ ಬುಡಕಟ್ಟು (ಕrಜಿಞಜಿಠಿಜಿvಛಿ ಖrಜಿಚಿಛಿ) ಎಂಬುದಾಗಿ ಕೇಂದ್ರ ಸರಕಾರ ಘೋಷಿಸಿ ಅವರ ಅಭಿವೃದ್ಧಿಗಾಗಿ ವಿಶಿಷ್ಟ ಯೋಜನೆಗಳನ್ನು ರೂಪಿಸಿದೆ.

ನಮ್ಮ ಶ್ರೇಣೀಕೃತ ಸಾಮಾಜಿಕ ಸಂರಚನೆಯಲ್ಲಿ ಕೊರಗರನ್ನು ಅಂತ್ಯಜರೆಂದು, ಚತುರ್ವರ್ಣಿಯ ವ್ಯವಸ್ಥೆಯಲ್ಲಿನ ಚಂಡಾಲ ವರ್ಗದಲ್ಲಿ ತೀರಾ ಕೊನೆಯವರೆಂದು ದಾಖಲೆಗಳಲ್ಲಿ ಹೇಳಿಕೊಂಡು ಬರಲಾಗಿದೆ. ಕೊರಗರು ಮೂಲತಃ ಕಾಡಿಗರು. ಗುಡ್ಡಬೆಟ್ಟಗಳಲ್ಲಿ, ಕಾಡಿನ ಸರಹದ್ದುಗಳಲ್ಲಿ ಬದುಕು ಮಾಡಿಕೊಂಡಿದ್ದ ಆದಿವಾಸಿ ಸಮು ದಾಯ. ಕಾಡಿನ ಸಂಪನ್ಮೂಲದೊಂದಿಗೆ ಹೆಣೆದುಕೊಂಡಿದ್ದ ಬದುಕು ಅವರದು. ಕಾಡುತ್ಪನ್ನ ಸಂಗ್ರಹ ಹಾಗೂ ಬೀಳು ಬಿದಿರು ಗಳಿಂದ ಮೊರ, ಬುಟ್ಟಿಗಳ ಸಿದ್ಧತೆಯಲ್ಲಿ ಜೀವನ ನಿರ್ವಹಣೆ ಮಾಡು ತ್ತಿರುವವರು. ಅವರು ಮೂಲತಃ ಅಲೆಮಾರಿಗಳು. ನೆಲೆ ನಿಂತ ಬದುಕು ಅವರದಲ್ಲ. ಕೃಷಿ ಅವರಿಗೆ ಅಪರಿಚಿತ. ತಮ್ಮ ಸಂಪ ನ್ಮೂಲಗಳ ಕೊರತೆ ಹಾಗೂ ಉತ್ಪನ್ನಗಳ ಬೇಡಿಕೆ ಕಡಿಮೆಯಾದಾಗ ಹೊಸ ನೆಲೆಯನ್ನು ಅರಸಿಕೊಂಡು ತಾತ್ಕಾಲಿಕವಾಗಿ ನೆಲೆ ಯೂರುವುದು ಅವರ ರೂಢಿ. ಇಂತಹ ನೆಲೆಗಳನ್ನು ವಾಸಸ್ಥಾನ ಗಳನ್ನು ಕೊಪ್ಪ/ಕೊಟ್ಟ ಎಂದು ಕರೆಯಲಾಗುತ್ತದೆ.

ಅಭಿವೃದ್ಧಿಯ ಪರಿಕಲ್ಪನೆ
ನಮ್ಮ ಸಾಮಾಜಿಕ ಸಂರಚನೆಯೊಳಗೆ ಮಾನವ ಪ್ರತಿಭಾಶಕ್ತಿಯ ಜೀವ ಸೆಲೆಗಳಾದ ಕೊರಗರು ತಮ್ಮದೇ ಅನನ್ಯತೆಯಲ್ಲಿ ಬದುಕುತ್ತಲೇ ಬಂದಿದ್ದಾರೆ. ಆದರೆ ಅಧಿಕಾರದ ಶಕ್ತಿ ರಾಜಕೀಯ, ನೆಲದ ಮೂಲವಾಸಿಗಳಾದ ಇವರನ್ನು ಅನಾಗರಿಕರೆಂದೂ, ಪಾಪಿಗಳೆಂದೂ, ಕೊಳಕರೆಂದೂ ಕರೆಯಿತು. 

ವಸಾಹತು ಸಂದರ್ಭದಲ್ಲಿ ಅವರನ್ನು ಕಾಡಿನಿಂದ ನಾಡಿಗೆ ತಂದು ಉಳ್ಳವರ ಗುಲಾಮರಾಗಿಸಿದರು. ಕಾಡಿನೊಳಗೆ ಬೀಳು ಬಿದಿರುಗಳೊಂದಿಗೆ, ಬೇಟೆ ಕುಣಿತಗಳೊಂದಿಗೆ ಇದ್ದ ಅವರ ಬದುಕಿನ ನೆಲೆ ತಪ್ಪಿಸಲಾಯಿತು. ಸ್ವಾತಂತ್ರೊÂàತ್ತರದಲ್ಲೂ ಅಭಿವೃದ್ಧಿಯ ನೆಪದಲ್ಲಿ ಈ ಪ್ರಕ್ರಿಯೆ ಮುಂದುವರಿದಿದೆ. ಕಾಡಿನ ನಂಟು ಕಡಿಯಿತು, ಆದರೆ ನಾಡಿನ ನೆಲದೊಂದಿಗೆ ನಂಟು ಸಾಧ್ಯವಾಗಲಿಲ್ಲ. ಈ ಬಿರುಕು ಸದ್ಯದ ಕೊರಗ ಸಮುದಾಯದ ಎದುರಿಗಿರುವ ಬಹುದೊಡ್ಡ ಸಂಘರ್ಷ. ಬಹುಶಃ ಇದು ಎಲ್ಲ ಬುಡಕಟ್ಟುಗಳ ಮುಂದಿರುವ ಇಂದಿನ ಸಮಸ್ಯೆಯೂ ಹೌದು.

Advertisement

ನಮ್ಮ ಅಭಿವೃದ್ಧಿಯ ನಿರ್ವಚನ ಆರ್ಥಿಕ ಅಭಿವೃದ್ಧಿಯನ್ನಷ್ಟೇ ಪರಿಗಣಿಸುತ್ತದೆ. ಇಲ್ಲಿ ಅಭಿವೃದ್ಧಿ ಎಂದರೆ ನಗರೀಕರಣ, ಕೈಗಾರಿಕೀಕರಣ. ಈ ಪರಿಭಾಷೆಯಲ್ಲಿ ಬುಡಕಟ್ಟುಗಳ ಅಭಿವೃದ್ಧಿ ಎಂದರೆ ಕಾಡಿನ ಒಳಗೆ ಹಾಗೂ ಅಂಚುವಾಸಿಗಳಾದ ಬುಡಕಟ್ಟು ಸಮುದಾಯಗಳನ್ನು ನಗರವಾಸಿಗಳಾಗುವುದಕ್ಕೆ ತಕ್ಕ ಭೂಮಿಕೆ ಯನ್ನು ಸೃಷ್ಟಿಸುವುದು. ಕೊರಗರ ಸಂದರ್ಭದಲ್ಲಿ ಕಾಡಾಡಿಗಳಾ ಗಿದ್ದ ಅವರಿಗೆ ನಾಡೊಳಗೆ ಸರಕಾರಿ ವಸತಿ ಯೋಜನೆಯಡಿಯಲ್ಲಿ ಸೂರು ಕಟ್ಟಿಕೊಟ್ಟು ಫ‌ಲಾನುಭವಿಗಳನ್ನಾಗಿ ಮಾಡುವುದು. ಇದು ಕೊರಗರಿಗೆ ಇದ್ದ ಜೀವನೋಪಾಯದ ಶಕ್ತಿಮೂಲ ಗಳನ್ನು ಉದಾ: ವೈದ್ಯ, ಕಾಡುತ್ಪತ್ತಿ, ಬಿಳಲು ಬಿದಿರಿನ ಕಲೆಗಾರಿಕೆ, ಕುಣಿತ ಎಲ್ಲವನ್ನೂ ನಾಶಮಾಡಿ ಅವರನ್ನು ಪರತಂತ್ರಕ್ಕೆ ಒಡ್ಡುತ್ತದೆ. ಈ ಬಗೆಯ ಅಸಹಾಯಕತೆ ಅವರ ಆತ್ಮವಿಶ್ವಾಸವನ್ನು ಕಳೆಯುತ್ತದೆ. ಎಲ್ಲರಿಗೂ ಸೂರು, ಭೂಮಿ ಅಥವಾ ಆಕಳುಗಳನ್ನು ನೀಡುವ ಯೋಜನೆಗಳು ಸಮಸ್ಯೆಗೆ ಯಾವ ಪರಿಹಾರವನ್ನೂ ಒದಗಿಸ ಲಾರವು. ನಮಗಿರುವುದು ಪಶ್ಚಿಮಕ್ಕಿರುವಂತೆ ಬರಿಯ ಆರ್ಥಿಕ ಆಯಾಮವಷ್ಟೇ ಅಲ್ಲ, ಆರ್ಥಿಕತೆಯ ಆಚೆಗೆ ಮಾನವ ಬದುಕನ್ನು ಸಂಪನ್ನಗೊಳಿಸುವ ಸಾಂಸ್ಕೃತಿಕ ಆಯಾಮವಿದೆ. ಹೀಗಾಗಿ ಪಶ್ಚಿಮದ ಅಭಿವೃದ್ಧಿ ಎಂದರೆ ಆರ್ಥಿಕ ಚೈತನ್ಯ ಎನ್ನುವ ಪರಿಕಲ್ಪನೆ ನಮ್ಮ ಸಂದರ್ಭಕ್ಕೆ ಒಗ್ಗುವುದಿಲ್ಲ. ಆದ್ದರಿಂದ ನಮ್ಮ ಅಭಿವೃದ್ಧಿಯಲ್ಲಿ ಆರ್ಥಿಕ ಮಾನಕಗಳ ಜೊತೆಗೆ ನಾವು ಸಾಂಸ್ಕೃತಿಕ ಸಾಮಾಜಿಕ ಅಂಶಗಳನ್ನು ಇಟ್ಟುಕೊಂಡೇ ನೋಡಬೇಕು. ಆರ್ಥಿಕತೆಗೆ ನೀಡಿದ ಅತಿಯಾದ ಮಹತ್ವ ನಮ್ಮ ಬುಡಕಟ್ಟು ಸಮುದಾಯದ ಸಾಮಾಜಿಕ ಸಾಂಸ್ಕೃತಿಕ ಬದುಕಿಗೆ ಹೊಸ ಸಂಘರ್ಷವನ್ನು ಒಡ್ಡಿದೆ. ಒಂದು ಬುಡಕಟ್ಟಿನ ಸಾಮಾಜಿಕ ಸಾಂಸ್ಕೃತಿಕ ಅಗತ್ಯ ಮತ್ತು ಅನುಭವ ಇನ್ನೊಂದು ಬುಡಕಟ್ಟಿಗಿಂತ ಭಿನ್ನ. ಹೀಗಾಗಿ ಬುಡ ಕಟ್ಟೊಂದರ ಅಭಿವೃದ್ಧಿ ಕ್ರಿಯಾಯೋಜನೆಗಳನ್ನು ಅವರ ಸಂಸ್ಕೃ ತಿಯ ಒಳಗಡೆಯೇ, ಅವರ ಬದುಕಿನ ವಿನ್ಯಾಸದ ನೆಲೆಯಲ್ಲಿಯೇ ಹುಟ್ಟುಹಾಕಬೇಕು. ಅದಲ್ಲದೆ ಇದನ್ನು ಏಕರೂಪಿಯಾಗಿ ರೂಪಿಸುವುದಲ್ಲ ಮತ್ತು ಅನ್ವಯಗೊಳಿಸುವುದಲ್ಲ. ಹೀಗೆ ಮಾಡು ವು ದರಿಂದ ಬುಡಕಟ್ಟುಗಳ ಈಗಿರುವ ಸ್ಥಿತಿಗೆ ಇನ್ನಷ್ಟು ಹೊಸ ಸಮಸ್ಯೆ, ಒತ್ತಡಗಳನ್ನು ತಂದೊಡ್ಡುತ್ತದೆ. ಈ ಮಾತನ್ನು ಕೊರಗರ ಸಂದರ್ಭದಲ್ಲಿ ಹೇಳುವುದಾದರೆ ಮೂಲತಃ ಕೃಷಿಕರಲ್ಲದ, 
ಕೃಷಿಯ ಅನುಭವವಿಲ್ಲದ ಕೊರಗರಿಗೆ ಭೂಮಿ ಮತ್ತು ಉಳುಮೆಯ ಸಾಮಗ್ರಿಗಳನ್ನು ಒದಗಿಸಿದುದು ಅವರಲ್ಲಿ ಹೊಸ ಸಮಸ್ಯೆ ಮತ್ತು ಅತಂತ್ರತೆಯನ್ನು ತಂದು ಹಾಕಿದೆ. ಪಿತೃಪ್ರಧಾನ ವಾದ ಸಾಮಾಜಿಕ ಹಾಗೂ ರಾಜಕೀಯ ಯೋಜನೆಗಳು ಮಾತೃಪ್ರಧಾನವಾದ ಕೊರಗ ಸಮುದಾಯಕ್ಕೆ ಯುಕ್ತವಾಗಿಲ್ಲ. ಇದು ಕೊರಗ ಫ‌ಲಾನುಭವಿಗಳಿಗೆ ಅನೇಕ ಇಕ್ಕಟ್ಟು, ಗೊಂದಲವನ್ನು ಸೃಷ್ಟಿಸಿದೆ. ಇವು ಅವರ ಬಂಧುತ್ವ ವ್ಯವಸ್ಥೆ ಹಾಗೂ ಅಲ್ಲಿನ ಹೆಣ್ಣಿನ ಬದುಕಿಗೆ ಆಘಾತಕಾರಿಯಾಗಿದೆ. ಹೀಗೆ ನಮ್ಮ ಅಭಿವೃದ್ಧಿ ಯೋಜನೆಗಳಿಗೆ ಸಮುದಾಯದ ಆರ್ಥಿಕ ಮತ್ತು ಸಾಂಸ್ಕೃತಿಕ ಜಗತ್ತಿನ ನಡುವೆ ಸಂವಾದವಿಲ್ಲದಿರುವುದು ಬುಡಕಟ್ಟುಗಳ ಅಭಿವೃದ್ಧಿಯಲ್ಲಿರುವ ಬಹುದೊಡ್ಡ ತೊಡಕು.

ಹಾಗಾದರೆ ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಯನ್ನು ಉಳಿಸಿ ಕೊಂಡು ಅವರ ಅಭಿವೃದ್ಧಿಯನ್ನು ಮಾಡುವುದು ಹೇಗೆ ಎನ್ನುವ ಪ್ರಶ್ನೆ. ಇದು ಬಹಳ ಸೂಕ್ಷ್ಮವಾದ ಪ್ರಶ್ನೆ. ನಮ್ಮ ಮುಂದಿರುವ ಆರ್ಥಿಕ, ಸಾಂಸ್ಕೃತಿಕ ಸಂದರ್ಭದಲ್ಲಿ ಈ ಪ್ರಶ್ನೆಯನ್ನು ಬಿಡಿಸಿ ಕೊಳ್ಳುವುದು ಹೇಗೆ? ಬುಡಕಟ್ಟುಗಳ ಅಭಿವೃದ್ಧಿ ಅವರ ಸಾಂಸ್ಕೃತಿಕ ಬದುಕಿಗೆ ಪುನಶ್ಚೇತನ ನೀಡುವುದೆಂದರೇನು? ಅವರ ಸಂಗೀತ, ಕುಣಿತ, ವಾದ್ಯ, ಭಾಷೆ, ಜ್ಞಾನ, ಕೌಶಲ್ಯಗಳನ್ನು ಇತ್ಯಾತ್ಮಕವಾಗಿ ಕಟ್ಟಿಕೊಡುವುದು. ಕೊರಗರಲ್ಲಿರುವ ಪಾರಂಪರಿಕ ವೈದ್ಯಜ್ಞಾನ, ಬೇಟೆ ತಂತ್ರ, ರಂಗಸಾಮರ್ಥ್ಯ, ಕಲೆ, ಭಾಷಾ ಸಂಪತ್ತನ್ನು ಪ್ರಸ್ತುತ ಅಗತ್ಯದ ಸಾಧ್ಯತೆಯಾಗಿ ಪುನರ್‌ನಿರ್ಮಾಣ ಮಾಡುವುದು. ಇದು ಸಾಹಿತ್ಯ, ಜಾನಪದ ಉತ್ಸವಗಳಲ್ಲಿ, ಹಬ್ಬ ಜಾತ್ರೆಯಂತಹ ಸಂದರ್ಭಗಳಲ್ಲಿ ಅವರನ್ನು ಪ್ರದರ್ಶನದ ರಂಗಿನ ವಸ್ತುವಾಗಿಸುವ ಅಥವಾ ವಿದ್ವಾಂಸರ ಅಧ್ಯಯನದ ಸರಕಾಗಿಸುವ, ಇಲ್ಲವೇ ರಾಜಕಾರಣಿಗಳ ಪ್ರತಿಷ್ಠೆ ಪ್ರಚಾರಕ್ಕೆ ಪ್ರಯೋಗಪಶುವಾಗಿಸುವ ಪ್ರಕ್ರಿಯೆಯಲ್ಲಿ ನಿಲ್ಲದೆ ನಿರಂತರ ಯೋಜನೆಯ ಮೂಲಕ ಅದು ಅವರ ಬದುಕಿಗೆ ಹೊಸ ಜೀವಶಕ್ತಿ ತುಂಬುವಲ್ಲಿ, ಆತ್ಮವಿಶ್ವಾಸವನ್ನು ಕಟ್ಟಿಕೊಡುವಲ್ಲಿ ಆಗಬೇಕಾಗಿದೆ.

ಪುನಶ್ಚೇತನದ ದಾರಿಯಲ್ಲಿ ಹೊರಟಾಗ ಇನ್ನೊಂದು ಇಕ್ಕಟ್ಟು ಎದುರಾಗುತ್ತದೆ. ಪ್ರಸ್ತುತ ನಮ್ಮ ಶೈಕ್ಷಣಿಕ ವ್ಯವಸ್ಥೆ, ಉದ್ಯೋಗ ನೀತಿಗಳು ಪಾಶ್ಚಾತ್ಯ ಮಾದರಿಯಲ್ಲಿಯೆ ರೂಪಿತವಾದವುಗಳು. ಇಂಥ ವ್ಯವಸ್ಥೆ ಬುಡಕಟ್ಟೊಂದರ ಸಾಂಸ್ಕೃತಿಕ ಪುನಶ್ಚೇತನಕ್ಕೆ ಅನುಕೂಲವಾಗಿದೆಯೇ? ನಮ್ಮ ಒಟ್ಟು ವ್ಯವಸ್ಥೆಯೇ ಪಶ್ಚಿಮ ಮುಖೀಯಾಗಿರುವಲ್ಲಿ ಬುಡಕಟ್ಟೊಂದನ್ನು ಅದರದೇ ಆದ ಅನನ್ಯತೆಯಲ್ಲಿ ಉಳಿಸಿಡುವ ಪ್ರಯತ್ನ ಹೇಗೆ ಅರ್ಥ ಪೂರ್ಣ ವಾದೀತು? ಇದು ವ್ಯವಸ್ಥೆಯ ಸಾಂಪ್ರದಾಯಿಕ ಪರಿಸರಕ್ಕೆ ಅವರನ್ನು ಜೋಡಿಸಿಟ್ಟಂತೆಯೇ ಆಗುತ್ತದೆ. ಈ ಮಾತನ್ನು ಇನ್ನೊಂದು ನೆಲೆಯಲ್ಲಿಯೂ ವಿಸ್ತರಿಸಬಹುದು. ಬುಡಕಟ್ಟಿನ ಪಾರಂಪರಿಕ ಕಲಾವಿದನೊಬ್ಬನಿಗೆ ಅಥವಾ ಅವನ ಜ್ಞಾನಶಕ್ತಿಗೆ ಇಂದಿನ ಉದ್ಯೋಗನೀತಿ ಎಷ್ಟರ ಮಟ್ಟಿಗೆ ಆಶಾದಾಯಕವಾಗಿದೆ ಎನ್ನುವುದು. ಯಾಕೆಂದರೆ ಎಲ್ಲವನ್ನೂ ಅಕ್ಷರ ಆಳುತ್ತಿರುವ ಈ ಹೊತ್ತಿನಲ್ಲಿ ಅವನಲ್ಲಿರುವ ಜ್ಞಾನ ಅಥವಾ ಕಲೆ ಅವನ ಹಸಿವು ಮತ್ತು ನಿರೀಕ್ಷೆಯನ್ನು ತಣಿಸಲು ಸಮರ್ಥವಾಗಿದೆಯೇ? ಇಲ್ಲಿನ ವೈರುಧ್ಯ ಎಂದರೆ ಬುಡಕಟ್ಟೊಂದರ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸುವ ಪ್ರಯತ್ನಗಳು ಅವರನ್ನು ಆರ್ಥಿಕ ಚೈತನ್ಯದಿಂದ ವಂಚಿಸುತ್ತವೆ. ಅವರನ್ನು ಮುಖ್ಯಧಾರೆಗೆ ಸೇರಿಸುವ, ಆರ್ಥಿಕ ಚೈತನ್ಯ ನೀಡುವ ಪ್ರಯತ್ನ ಅವರ ಸಾಂಸ್ಕೃತಿಕ ವಿಶಿಷ್ಟತೆಯನ್ನು ನಾಶ ಮಾಡುತ್ತದೆ. ಇಂತಹ ವೈರುಧ್ಯದಲ್ಲಿ ಬುಡಕಟ್ಟುಗಳು ಇಂದು ಬದುಕುತ್ತಿವೆ.

ಕೊರಗರನ್ನು ಹೆಚ್ಚೆಚ್ಚು ನಾಗರಿಕರನ್ನಾಗಿ ಮಾಡುವ ಸರಕಾರ ಅದೇ ಹೊತ್ತಿಗೆ ಅವರ ಸಾಂಸ್ಕೃತಿಕ ಬದುಕನ್ನು ದಾಖಲಿಸುವ ಪ್ರವೃತ್ತಿಯ ದ್ವಂದ್ವ ಕೊರಗರ ಸಂಘರ್ಷವನ್ನು ಚೆನ್ನಾಗಿ ಸಂಕೇತಿಸುತ್ತದೆ. ಅಭಿವೃದ್ಧಿಯ ಈ ಉತ್ಸಾಹ ಮತ್ತು ಕಾಳಜಿಯ ಒಳಸತ್ಯವನ್ನು ನಾವು ಗ್ರಹಿಸಬೇಕಾಗಿದೆ. ಕಾಡಿನ ನೆಲೆ ತಪ್ಪಿಸಿ ಅಭಿವೃದ್ಧಿ ಯೋಜನೆಯ ಆಕರ್ಷಕ ಆಮಿಷವನ್ನು ಒಡ್ಡಿದ್ದು ಕೊರಗರ ಅಥವಾ ಅಂತಹ ಬುಡಕಟ್ಟುಗಳ ಅಭಿವೃದ್ಧಿಗಾಗಿ ಅಲ್ಲದೆ ಕಾಡಿನ ಸಂಪತ್ತು ಹಾಗೂ ಸಂಪನ್ಮೂಲಗಳು ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಹಾಗೂ ದೇಶೀಯ ದೊರೆಗಳ ಅಭಿವೃದ್ಧಿಗಾಗಿ ಎಂಬ ನೆಲೆಯಿಂದ ಕಂಡುಕೊಳ್ಳಬೇಕಾಗಿದೆ. 

ಇಡಿಯಾಗಿ ನಮ್ಮ ದೇಶವನ್ನು ಪಶ್ಚಿಮಕ್ಕೆ ಒತ್ತೆಯಿಟ್ಟಿರುವ ಈ ಸಂದರ್ಭದಲ್ಲಿ ನಮ್ಮ ಜೀವನ ವಿಧಾನ, ನೀತಿಗಳು ಪಶ್ಚಿಮದಲ್ಲಿ ಅಚ್ಚುಗೊಳ್ಳುತ್ತಿವೆ. ಇದು ಬುಡಕಟ್ಟೊಂದಕ್ಕೆ ತನ್ನ ಅಗತ್ಯವನ್ನು ಕಂಡುಕೊಳ್ಳುವ ಮತ್ತು ಅನುಭೋಗಿಸುವ ಸಾಮಾನ್ಯ ಆಯ್ಕೆಯ ಹಕ್ಕನ್ನೂ ಇಲ್ಲವಾಗಿಸಿದೆ.
ಕೊನೆಯ ಮಾತು:

1     ಕೊರಗರ ಗತ ಇತಿಹಾಸವನ್ನು ಮೌಖೀಕ ಸಾಕ್ಷ್ಯಾಧಾರಗಳ ಮೂಲಕ ಮರುರಚಿಸುವ ಮೂಲಕ ಅವರು ಕಳೆದುಕೊಂಡಿರುವ ಆತ್ಮವಿಶ್ವಾಸವನ್ನು ಕುದುರಿಸಬೇಕು.

2    ಜಾನಪದ ಅಧ್ಯಯನಕಾರರ ಶೋಧಗಳು ಅವರ ಸಾಂಸ್ಕೃತಿಕ ಬದುಕಿನ ಅವಮಾನಕ್ಕೆ ಕಾರಣವಾಗಬಾರದು. ಈ ಎಚ್ಚರವನ್ನು ಇಟ್ಟುಕೊಂಡೇ ಬುಡಕಟ್ಟು ಸಮುದಾಯದ ಜಾನಪದ ಸಂಗತಿಗಳನ್ನು ಅರ್ಥೈಸಬೇಕು.

3    ಗತಾನುಗತಿಕವಾಗಿ ಅವರ ಬದುಕಿನೊಂದಿಗೆ ಅಂಟಿಕೊಂಡು ಬಂದಿರುವ ಅವೈಚಾರಿಕ ನಂಬಿಕೆಗಳನ್ನು ಅವರಿಂದ ಕದಲಿಸಬೇಕು, ಜೊತೆಗೆ ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿರುವ ಕರಕುಶಲ ಕೌಶಲ್ಯ, ಕುಣಿತ, ಸಂಗೀತಗಳನ್ನು ಪುನರ್‌ ನವೀಕರಿಸಿ ಅವುಗಳಿಗೆ ಗೌರವ ಬರುವಂತೆ ಮಾಡಬೇಕು.

4    ನಮ್ಮ ಅಭಿವೃದ್ಧಿಯ ಪರಿಕಲ್ಪನೆ ಪಶ್ಚಿಮದಿಂದ ಸ್ವೀಕರಿಸಿದ್ದು ಮತ್ತು ಅದು ಇಡಿಯಾಗಿ ಆರ್ಥಿಕ ನೆಲೆಯನ್ನು ಆಧರಿಸಿರುವಂತಹದು. ಇಂತಹ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಸಾಂಸ್ಕೃತಿಕ ಬಹುರೂಪತೆಗಳ ಕಡೆಗೆ ನೋಟ ಇಲ್ಲ. ಇದು ಪ್ರಗತಿಯ ನೆಪದಲ್ಲಿ ನಮ್ಮ ಬುಡಕಟ್ಟುಗಳಿಗಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು, ಅವರ ಶಕ್ತಿಮೂಲಗಳನ್ನು ನಾಶ ಮಾಡಿದೆ.

ಪ್ರೊ. ಎ.ವಿ. ನಾವಡ

Advertisement

Udayavani is now on Telegram. Click here to join our channel and stay updated with the latest news.

Next