Advertisement

ರಂಗವೇರಿದ ಕರಿಯಜ್ಜನ ಕತೆಕುಲು

08:39 PM Apr 18, 2019 | mahesh |

ಹನ್ನೆರೆಡು ಸಣ್ಣ ಕತೆಗಳ ಗೊಂಚಲಿನಿಂದ “ಬೈತರಿತಪುಂಡಿಲಾ ಗಾಂಧಿ ಅಜ್ಜೆರಾ’ “ಸೂತಕ’ ಮತ್ತು “ಗಡಿತ್ತಬೂಳ್ಯ’ ಎಂಬ ಕತೆಗಳನ್ನು ಆಯ್ದು ಖಒಂಡಿದ್ದರು. ಮೂರು ಕತೆಗಳ ಹಂದರದಲ್ಲಿ ತುಳುನಾಡಿನ,ಅದರಲ್ಲೂ ತೆಂಕನಾಡಿನ ತುಳು ಜೀವನದ ನೈಜ ಚಿತ್ರಣಗಳಿವೆ. ಗುತ್ತಿನ ಗತ್ತು ಗಮ್ಮತ್ತುಗಳ ಕಥನವಿದೆ.

Advertisement

ಕತೆ ಕಟ್ಟಿದರೆ ಚೆನ್ನ ,ಕವಿತೆ ಹುಟ್ಟಿದರೆ ಚೆನ್ನ ಎಂಬ ಮಾತು ಕತೆ-ಕವಿತೆಗಳ ಸೊಬಗನ್ನು ಎತ್ತಿತೋರುವ ಸೂಕ್ತಿ. ಕಟ್ಟುವುದು ಕೂಡ ಕಲಾ ಕೌಶಲ್ಯವೆ. ಹೀಗಾಗಿ ಅನೇಕ ಕತೆಗಳು ದೃಶ್ಯಮಾಧ್ಯಮವಾಗಿ ರಂಗದಲ್ಲಿ ಕಂಗೊಳಿಸುತ್ತವೆ. ಇದಕ್ಕೊಂದು ಉದಾಹರಣೆ ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಮುದ್ರಾಡಿಯ ನಮ್ಮ ತುಳುವೆರ್‌ ಕಲಾ ಸಂಘಟನೆಯ ಆಶ್ರಯದಲ್ಲಿ ಪ್ರದರ್ಶನಗೊಂಡ ಆನಂದ ಕೃಷ್ಣ (ಚೌಟರ) ಕರಿಯಜ್ಜನ ಕತೆಗಳು.

ಹನ್ನೆರೆಡು ಸಣ್ಣ ಕತೆಗಳ ಗೊಂಚಲಿನಿಂದ “ಬೈತರಿತಪುಂಡಿಲಾ ಗಾಂಧಿ ಅಜ್ಜೆರಾ’ “ಸೂತಕ’ ಮತ್ತು “ಗಡಿತ್ತಬೂಳ್ಯ’ ಎಂಬ ಕತೆಗಳನ್ನು ಆಯ್ದು ರಂಗಕ್ಕಾಗಿ ನಿರ್ದೇಶಿಸಿದವರು ಸಮಕಾಲೀನ ಕನ್ನಡ ರಂಗಭೂಮಿಯ ಅಗ್ರಮಾನ್ಯ ನಿರ್ದೆಶಕರಲ್ಲಿ ಒಬ್ಬರಾದ ಕೃಷ್ಣಮೂರ್ತಿ ಕವತ್ತಾರ್‌. ಉಡುಪಿಯ ಅಮೋಘ ಸಂಘಟನೆ ಇದಕ್ಕಾಗಿ ಆಯ್ದುಕೊಂಡದ್ದು ಈವರೆಗೆ ರಂಗವೇರದ ಹೊಸಬರನ್ನು ಎಂಬುದು ಗಮನಾರ್ಹ. ಅಮೋಘದ ಪೂರ್ಣಿಮಾ ಸುರೇಶ ಈ ವೇಳೆಗಾಗಲೇ ತುಳು -ಕೊಂಕಣಿ-ಕನ್ನಡದ ಪ್ರೇಕ್ಷಕರಿಗೆ ಚಿರಪರಿಚಿತ. ಇವರು ಗುತ್ತಿನ ಅಜ್ಜಿಯ ಪಾತ್ರವಹಿಸಿದ್ದರು.

ಮೂರು ಕತೆಗಳ ಹಂದರದಲ್ಲಿ ತುಳುನಾಡಿನ,ಅದರಲ್ಲೂ ತೆಂಕನಾಡಿನ ತುಳು ಜೀವನದ ನೈಜ ಚಿತ್ರಣಗಳಿವೆ. ಗುತ್ತಿನ ಗತ್ತು ಗಮ್ಮತ್ತುಗಳ ಕಥನವಿದೆ. ಕುಲೀನ ಗುತ್ತು ಮನೆತನದಲ್ಲಿ ಹುಟ್ಟಿದ ಕರಿಯ, ಮುಳ್ಳಿ ಎಂಬ ಅಸ್ಪೃಶ್ಯ ಹೆಣ್ಣಿನ ಎದೆಹಾಲುಂಡು ಬೆಳೆಯುವುದು ದೊಡ್ಡದಾದ ಮೇಲೂ ಅವಳನ್ನು ನಿತ್ಯ ಕಾಣುವುದು .ಅವಳ ಬೈತರಿತಪುಂಡಿ (ಹುಲ್ಲು ಭತ್ತದ ಅಕ್ಕಿಯಿಂದ ಮಾಡಿದ ತಿಂಡಿ)ತಿನ್ನುವುದು. ಇನ್ನೊಂದೆಡೆ ಹರಿಜನೋದ್ಧಾರದ ಪ್ರಭಾವಕ್ಕೆ ಒಳಗಾದ ಗಾಂಧಿ ಅಜ್ಜನ ಮಕ್ಕಳು. ಗಾಂಧಿ ಧೋರಣೆಯನ್ನು ಟೀಕಿಸುತ್ತಲೆ ಗಾಂಧಿ ತತ್ವ ಬದುಕಿನಲ್ಲಿ ಹೆಣೆದುಕೊಂಡ ಕರಿಯಣ್ಣ ಗುತ್ತಿನ ಯಜಮಾನ, ಶಾಲಾಮಕ್ಕಳು ಹಾಗೂ ಮಾಸ್ತರರ ಸುತ್ತ ಹೆಣೆದ ಕತೆಯಿದೆ.

ಸೂತಕ ಕತೆಯಲ್ಲಿ ಈ ಗುತ್ತಿನ ಮನೆ, ಆಟಿ ತಿಂಗಳು ವರ್ಷಂಪ್ರತಿ ನಡೆಯುವ ಸತ್ತವರಿಗೆ ಉಣಬಡಿಸುವ ಕಾಲಕ್ಕೆ ಚೋಮಕ್ಕನ ಮೈಮೇಲೆ ಕುಲೆ ಆವೇಶವಾಗುವುದು, ಕರಿಯಣ್ಣನಿಗೆ ಸೂತಕದ ಛಾಯೆ. ಅದಕ್ಕೆ ಕಾರಣ ಮುಳ್ಳಿಯ ಸಾವಿನ ದುರಂತದ ಕಥೆಯಿದೆ. ಕರಿಯಣ್ಣನ “ಶೂರ್ಪನಖೀ’ ಯಕ್ಷಗಾನ ತಾಳಮದ್ದಳೆಯ ತುಣುಕು ಸನ್ನಿವೇಶಗಳೊಂದಿಗೆ ತುಳುನಾಡಿನ ಜನ ಜೀವನದ ಒಳ ಪರಿಚಯ ನಡೆಯುತ್ತಾ ಹೋಗುತ್ತದೆ.

Advertisement

ಗಡಿತ್ತಬೂಳ್ಯ (ಗುತ್ತಿನ ಮನೆಯ ದೈವದ ಯಜಮಾನಿಕೆಗೆ ವೀಳ್ಯಪಡೆಯವುದು) ಕರಿಯಣ್ಣ ಹುಟ್ಟಿಬೆಳೆದ ಗುತ್ತಿಗೂ ಚೇಳೂರು ಗುತ್ತಿಗೂ ಹತ್ತಿರದ ಸಂಬಂಧ ಮಾಗಣೆಯ ಬೂತ ಮಲೆರಾಯ. ಇದರ ಭಂಡಾರವಿರುವುದು ಗುತ್ತಿನ ಮನೆಯಲ್ಲಿ. ಕರಿಯಣ್ಣ ಎಳವೆಯನಿದ್ದಾಗ ಗಡಿತ್ತ ಬೂಳ್ಯವನ್ನು ಚೇಳೂರಿನ ಬಾಳಪ್ಪಣ್ಣ ಹೇಗೋ ಪಡೆದ. ಕರಿಯಣ್ಣ ದೊಡ್ಡದಾದ ಮೇಲೆ ಈ ವಿಚಾರದಲ್ಲಿ ಸಂಘರ್ಷ ನಡೆದು ಎರಡೂ ಬಣಗಳು ಹೊಡೆದಾಟಕ್ಕೆ ನಿಲುತ್ತವೆ. ಕರಿಯಣ್ಣನ ಶೌರ್ಯದ ಮುಂದೆ ನಿಲ್ಲಲಾಗದೆ ಬಾಳಪ್ಪಣ್ಣ ಹಿಂತಿರುಗಿದ್ದು, ಕರಿಯ ಮನೆಗೆ ಬಾರದಿರುವುದು, ಅವನಿಗಾಗಿ ಹುಡುಕಾಟ. ಕರಿಯಣ್ಣನ ಕೋಣೆಯಲ್ಲಿ ಗುತ್ತಿನ ಯಜಮಾನನಿಗೆ ಬಾಳಪ್ಪಣ್ಣನ ಹೆಂಡತಿಯ ಕರಿಮಣಿ, ಮೂಗುತಿ ಪತ್ತೆ. ಕರಿಯಣ್ಣ ಗುತ್ತಿನ ಮನೆಗೆ ವಾಪಾಸು- ಕತೆಯು ಸುಖಾ0ತ್ಯ.

ಕರಿಯಜ್ಜ (ಯುವಕ) ಪಾತ್ರದಲ್ಲಿ ಪ್ರಸಾದ ಕೊಂಡಾಡಿ ಮತ್ತು ನಾರಾಯಣ ಕಾಮತ್‌ (ಪ್ರೌಢರಾಗಿ), ಮಾಸ್ತರರಾಗಿ ಸತ್ಯಾನಂದ ನಾಯಕ್‌ ಪ್ರೌಢ ಅಭಿನಯ ನೀಡಿದರು. ಚೇಳೂರು ಗುತ್ತಿನ ಯಜಮಾನ ಬಾಳಪ್ಪ( ಆಶೋಕ ಜೋಗಿ ) ಬಾಳಪ್ಪಣನ ಹೆಂಡತಿಯಾಗಿ ಗೀತಾ ದಯಾನಂದ ಗಡಿತ ಬೂಳ್ಯದಲ್ಲಿ ಗಮನಸೆಳೆದರು. ಚಿಕ್ಕ ಪಾತ್ರವಾದರು ಪೂರ್ಣಿಮಾ ಸುರೇಶ್‌ (ಗುತ್ತಿನ ಅಜ್ಜಿಯ ಪಾತ್ರದಲ್ಲಿ ಗಮನಸೆಳೆದರು). ಅವಿನಾಶ್‌, ದೇವರಾಜ್‌ ಶಾಸ್ತ್ರಿ, ರವಿನಾಯಕ್‌, ಅಶೋಕ ಜೋಗಿ, ಅನಿಲ್‌ ಶೆಟ್ಟಿ, ಗಾಂಧಿ ಮಕ್ಕಳು ಹಾಗೂ ನಿರೂಪಕರಾಗಿ ನಾಟಕದುದ್ದಕ್ಕೂ ಕಾಣಿಸಿಕೊಂಡರು.ಶುಭ ಮತ್ತು ಅವಿನಾಶ್‌ ಅವರ ನೃತ್ಯ ಸಮುಚಿತವಾಗಿತ್ತು. ಶಬರಿ ಆರಾಧ್ಯ ನಟನೆ (ಮುಳ್ಳಿ)ಯಲ್ಲಿ ಹಾಗೂ ತೆಂಬರೆ ಮತ್ತು ಸಂಗೀತದಲ್ಲಿ ನಾಟಕಕ್ಕೆ ಕಳೆಯೇರಿಸಿದರು. ಗುರುದತ್‌ ತಬಲವಾದಕರಾಗಿದ್ದರು.

ಅಂಬಾತನಯ ಮುದ್ರಾಡಿ

Advertisement

Udayavani is now on Telegram. Click here to join our channel and stay updated with the latest news.

Next