Advertisement
ಹೊಸ ಉದ್ಯಮಗಳನ್ನು ಹುಟ್ಟು ಹಾಕಿಸಿ ಯಶಸ್ವಿಗೊಳಿಸಿದ ಸಾಹಸಿ ಉದ್ಯಮಿಗಳ ಮಾತು ಬಂದಾಗ ಬಿಲ್‌ಗೇಟ್ಸ್ , ಇನ್‌ಫೋಸಿಸ್ ನಾರಾಯಣಮೂರ್ತಿಯಂಥವರ ಹೆಸರುಗಳು ಮುಂದಾಗುವುದು ಸಹಜ. ಆದರೆ, ನನಗೆ ನಮ್ಮ ಕಮಲಳ ಹೆಸರೇ ನೆನಪಾಗುತ್ತದೆ. ನೆರಿಗೆ ಅತ್ತಿತ್ತ ಆಗದಂತೆ ಸೀರೆ ಉಟ್ಟು, ಹೆಗಲಿಗೊಂದು ವ್ಯಾನಿಟಿ ಬ್ಯಾಗ್ ಸಿಕ್ಕಿಸಿಕೊಂಡು, ಓಡಿಕೊಂಡೇ ಎಂಬಂತೆ ರೈಲು ನಿಲ್ದಾಣಕ್ಕೆ ಧಾವಿಸುವ ಕಮಲಳನ್ನು ಎರಡು ಮೊಮ್ಮಕ್ಕಳ ಅಜ್ಜಿಯೆಂದರೆ ಯಾರೂ ನಂಬಲಿಕ್ಕಿಲ್ಲ. ಹದಿನೈದು ವರ್ಷಕ್ಕೆ ಮದುವೆಯಾಗಿ ಮೂವತ್ತು ವರ್ಷಕ್ಕೆ ಅಜ್ಜಿಯಾದ ಅವಳು ಮಾತಿನಲ್ಲಿ, ಕೆಲಸದಲ್ಲಿ, ನಡಿಗೆಯಲ್ಲಿ ಚುರುಕೇ ಚುರುಕು. ನಸುಕಿನ ನಾಲ್ಕು ಗಂಟೆಗೆ ಮನೆಯಿಂದ ಹೊರಟರೆ ರಾತ್ರಿ ಎಂಟಕ್ಕೆ ವಾಪಸು. ಒಂಬತ್ತು-ಹತ್ತು ಮನೆಗಳಲ್ಲಿ ಅಡುಗೆ, ವಸ್ತ್ರ-ಪಾತ್ರೆ-ನೆಲ ಶುಚಿಗೊಳಿಸು ವುದು ಎಂದು ದಿನವಿಡೀ ದುಡಿದರೂ, ಅವಳ ಮನೆಯ ಖರ್ಚಿಗೆ ಸಾಲದಾಗುತ್ತಿತ್ತು.
Related Articles
Advertisement
ವ್ಯಾಪಾರ ಹೆಚ್ಚಿದಂತೆ ಕಮಲಳ ಆರ್ಥಿಕ ಪರಿಸ್ಥಿತಿ ಸುಧಾರಿಸತೊಡಗಿತು. “ಮನೆಕೆಲಸ’ಗಳನ್ನೆಲ್ಲ ಬಿಟ್ಟು ಪೂರ್ಣಪ್ರಮಾಣದ ವ್ಯಾಪಾರಸ್ಥೆಯಾದಳು. ಹಿಗ್ಗುತ್ತಿರುವ ತನ್ನ ಸಂಸಾರಕ್ಕಾಗಿ, ಒತ್ತೂತ್ತಿನ ಮೂರು ಚಿಕ್ಕ ಮನೆಗಳನ್ನು ಪಡಕೊಂಡು, ಮಕ್ಕಳನ್ನು ಆ ಮನೆಗಳಿಗೆ ಸಾಗಹಾಕಿ, ಮನೆಯಲ್ಲಿ ಸದಾ ನಡೆಯುತ್ತಿದ್ದ ರಾದ್ಧಾಂತಗಳಿಗೆ ಮುಕ್ತಾಯ ಹಾಡಿದಳು. ಮರಾಠವಾಡದ ಹಳ್ಳಿಯಲ್ಲಿದ್ದ ಜಾಗದಲ್ಲಿ ಮನೆಕಟ್ಟಿ ಹಬ್ಬ-ಹುಣ್ಣಿಮೆಗಳಿಗೆ ಸಂಸಾರಸಮೇತ ಹೋಗಿಬರತೊಡಗಿದಳು. ಸಾವಿರ ರೂಪಾಯಿಗಳಿಗೂ ಮಿಕ್ಕಿ ಹಣ ತೆತ್ತು ಕೊಂಡುಕೊಂಡಿದ್ದ ಪೊಮೆರೇನಿಯನ್ ನಾಯಿಮರಿಯಂತೂ ಅವಳ ಮನೆಯಲ್ಲಿ ಸಂತಸದ ಕೋಲಾಹಲವನ್ನೇ ಎಬ್ಬಿಸಿತ್ತು. ಇದೇ ಸಮಯದಲ್ಲಿ ಆಧಾರ್ ಕಾರ್ಡು ಮಾಡಿಸಲು ಎಲ್ಲರೂ ಓಡಾಡುತ್ತಿರುವಾಗ, “ಆಧಾರ ಕೇಂದ್ರಗಳಿಗೆಲ್ಲ ಹೋಗಲು ಯಾರಿಗೆ ಪುರುಸೊತ್ತು’ ಎಂದು ಕಮಲ ತನ್ನ ಮನೆಯಲ್ಲಿದ್ದ ಹತ್ತು-ಹನ್ನೊಂದು ಜನಗಳಿಗೆ ಪ್ರತಿ ತಲೆಗೆ ಐನೂರು ರೂಪಾಯಿಗಳಂತೆ ಏಜಂಟನೊಬ್ಬನಿಗೆ ಮುಂಚಿತವಾಗಿ ಹಣ ಕೊಟ್ಟದ್ದು ಪರಿಚಿತರೆಲ್ಲರಿಗೆ ಆಶ್ಚರ್ಯದ ಆಘಾತ ತಂದಿತ್ತು.
ಮನೆಯಲ್ಲಿ ಧಾರಾಳವಾಗಿ ಓಡಾಡುತ್ತಿರುವ ಹಣವನ್ನು ಕಂಡ ಕಿರಿಯ ಮಗನಿಗೆ, ತಾನೊಂದು ದೊಡ್ಡ ಕಾರನ್ನು ಕೊಳ್ಳಬೇಕೆಂಬ, ಬಹುದಿನಗಳ ಕನಸನ್ನು ನೆನಸಾಗಿಸುವ ಆಸೆ. ಕಮಲಳಿಗೆ ಕಿರಿಮಗನನ್ನು ನಿರಾಶೆಗೊಳಿಸುವ ಮನಸ್ಸಾಗಲಿಲ್ಲ. ಮುಂಗಡ ಹಣ ತೆತ್ತು, ಉಳಿದದ್ದಕ್ಕೆ ಬ್ಯಾಂಕಿನಿಂದ ಸಾಲ ಎತ್ತಿ ಕಾರು ಮನೆಬಾಗಿಲಿಗೆ ಬಂತೇ ಬಂತು. ಆದರೆ, ಕಾರು ಚಲಾಯಿಸುವುದನ್ನು ಕಲಿತರೂ, ಕಿರಿಯ ಮಗನಿಗೆ ಪೂರ್ಣ ಧೈರ್ಯ ಬರಲಿಲ್ಲ. ಬೇರೊಬ್ಬ ಚಾಲಕನನ್ನು ನೇಮಿಸಿ, ಅದನ್ನು ವಿಮಾನನಿಲ್ದಾಣದ ಬಾಡಿಗೆಗೆ ಉಪಯೋಗಿಸುವ ಏರ್ಪಾಡಾಯಿತು. ಇನ್ನೇನು ಕಾರಿನ ಬಾಡಿಗೆಯ ಹಣ ದೊರೆಯಲು ಶುರುವಾಗಬೇಕೆನ್ನುವಾಗ, ಕಾರಿನ ಅಪಘಾತದಲ್ಲಿ ಚಾಲಕ ಸೆರೆಯಾದ. ಹಣ ವಸೂಲಿಗಾಗಿ ಜೈಲಿಗೆ ತಡಕಾಡುವ ಪರಿಸ್ಥಿತಿ. ಹಾಗೂ ಹೀಗೂ, ಕಾರಿನ ಕತೆ ಅನಿಶ್ಚಿತತೆಯಲ್ಲಿಯೇ ಕೊನೆಗೊಂಡಿತು. ಆದರೆ, ಮಸಾಲೆ ವ್ಯಾಪಾರ ಮುಂದೆ ಸಾಗುತ್ತಲೇ ಇತ್ತಾಗಿ ಕಾರಿನಿಂದಾದ ನಷ್ಟವು ಆರ್ಥಿಕವಾಗಿ ಅವಳನ್ನು ಮುಗಿಸಲಿಲ್ಲ. ಪ್ಲಾಸ್ಟಿಕ್ ಹಾಳೆಯಿಂದ ಅವಳ ಅಂಗಡಿಯು ಕೈಗಾಡಿಗೆ, ಕ್ರಮೇಣ ಮರದ ಕಪಾಟಿಗೆ ವರ್ಗಾವಣೆಯಾಗಿ ವಿಕಾಸಹೊಂದಿತ್ತು.
ಹಾಗಂತ ಕಮಲಳ ಮಸಾಲೆಪುಡಿಯ ವ್ಯಾಪಾರ ಸುಗಮವಾಗೇನೂ ಇರಲಿಲ್ಲ. ಮುನ್ಸಿಪಾಲಿಟಿಯ ಕಾಯಿದೆ-ಕಾನೂನಿನ ಹೊಡೆತಗಳು ಬೀಳುತ್ತಲೇ ಇರುತ್ತಿದ್ದುವು. ಜೊತೆಯಲ್ಲಿ, ಅವಳ ಭರದ ವ್ಯಾಪಾರ-ವಹಿವಾಟಿನ ವೈಖರಿಯನ್ನು ಎರಡೂ ಮಗಂದಿರಿಗೆ ತಮ್ಮದಾಗಿಸಲು ಆಗಲಿಲ್ಲ. ಕಮಲಳ ಅತಿ ದೊಡ್ಡ ದುರ್ಬಲತೆಯೆಂದರೆ ಅವಳ ಅಶಿಕ್ಷಿತತೆ. ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಂತ ಉದ್ದಿಮೆಗಾಗಿ ಸರಕಾರವು ಒದಗಿಸುವ ಸಹಾಯ, ರಿಯಾಯಿತಿ, ಬ್ಯಾಂಕಿನ ಸಾಲ, ಅಧಿಕಾರಿಗಳನ್ನು ಸಂಪರ್ಕಿಸುವ ವಿಧಾನ ಇತ್ಯಾದಿಗಳ ತಿಳುವಳಿಕೆಯಾಗಲಿ, ಅರ್ಜಿಹಾಕಲು ಬೇಕಾಗುವ ಅಕ್ಷರಜ್ಞಾನವಾಗಲಿ- ಯಾವುವೂ ಅವಳಲ್ಲಿ ಇರಲಿಲ್ಲ. ಇನ್ನು, ಕಾಯಿದೆ-ಕಾನೂನುಗಳ ಬಗ್ಗೆ ಇರುವ ಅಜ್ಞಾನದ ಸಂಪೂರ್ಣ ದುರುಪಯೋಗವನ್ನು ಪಡೆಯುವ ಪೊಲೀಸರೂ, ಸರಕಾರೀ ಅಧಿಕಾರಿಗಳೂ, ಇತರ ದುರುಳರೂ ಇದ್ದೇ ಇದ್ದರು. ಇಂಥ ದುರ್ಗಮ ದಾರಿಯಲ್ಲೂ ಅವಳು ಯಶಸ್ಸು ಸಾಧಿಸಿ, ತನ್ನ ಮನೆಯ ಪರಿಸ್ಥಿತಿಯಲ್ಲಿ ಗಮನೀಯವಾದ ಸುಧಾರಣೆಯನ್ನು ತಂದುದು ಒಂದು ವಿಸ್ಮಯವೆನ್ನಬೇಕು.
ಕಮಲಳ ಸಾಹಸದ ಕತೆಯ ಪುನರಾವರ್ತನೆ ನಮ್ಮ ದೇಶದ ಎಲ್ಲಾ ಕಡೆಗಳಲ್ಲೂ ಆಗುತ್ತಿರುತ್ತದೆ. ಅದೇ ಅಶಿಕ್ಷಿತತೆ, ಆದರೆ ಅವೇ ಆಶಯ, ಕನಸು, ಹುಮ್ಮಸ್ಸು, ಸಾಹಸ! ಕೆಲ ಹೆಂಗಳೆಯರ ಕತೆಗಳು ಹೆಚ್ಚಿನ ಯಶಸ್ಸು ಗಳಿಸಿದರೆ, ಕೆಲವರದ್ದು ಅಸಫಲತೆಯಲ್ಲಿ ಮುಕ್ತಾಯವಾಗುತ್ತಿರುತ್ತವೆ. ಇವರಿಗೆಲ್ಲ ಶಿಕ್ಷಣವಿದ್ದಿದ್ದರೆ ಮಾತ್ರ, ಬಹುತೇಕ ಕತೆಗಳು ಸುಖಾಂತವಾಗಿರುತ್ತಿದ್ದವು ಎನ್ನುವುದರಲ್ಲಿ ಸಂಶಯವಿಲ್ಲ.
ಮಿತ್ರಾ ವೆಂಕಟ್ರಾಜ್