ಅವರು ತುಂಬಾ ಓದಿದ್ದಾರೆ. ಪ್ರಪಂಚ ಜ್ಞಾನ ತಿಳ್ಕೊಂಡಿದ್ದಾರೆ. ಆದರೆ, ಕೆಲಸ ಮಾಡೋಕೆ ಮಾತ್ರ ಅವರಿಗೆ ಇಷ್ಟವಿಲ್ಲ…!
-ಇದು “ಪುರುಸೋತ್ ರಾಮ’ ಚಿತ್ರದ ನಾಯಕರ ವಿಷಯ. ಹೌದು. ಈ ಚಿತ್ರದಲ್ಲಿ ಮೂವರು ಹೀರೋಗಳಿದ್ದಾರೆ. ರವಿಶಂಕರ್‌ಗೌಡ, ಶಿವರಾಜ್ ಕೆ.ಆರ್.ಪೇಟೆ ಮತ್ತು ಸರು. 25, 35 ಮತ್ತು 40 ಪ್ಲಸ್ ವಯಸ್ಸಿನವರ ಕಥೆ ಮತ್ತು ವ್ಯಥೆ ಇದು. ಈಗಾಗಲೇ ಚಿತ್ರೀಕರಣ ಸಂಪೂರ್ಣ ಮುಗಿದಿದೆ. ಚಿತ್ರದ ಬಗ್ಗೆ ಹೇಳಲೆಂದೇ ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು. ಅಂದು ಟ್ರೇಲರ್ ಬಿಡುಗಡೆಗೆ ರಾಘವೇಂದ್ರ ರಾಜಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಅವರೊಂದಿಗೆ ಮನುರಂಜನ್ ಕೂಡ ಇದ್ದು, ಚಿತ್ರತಂಡಕ್ಕೆ ಶುಭಕೋರಿದರು.
ಚಿತ್ರಕ್ಕೆ ಸರು ನಿರ್ದೇಶಕರಷ್ಟೇ ಅಲ್ಲ, ನಾಯಕರಾಗಿಯೂ ನಟಿಸಿದ್ದಾರೆ. ಮೊದಲು ಮಾತಿಗಿಳಿದ ಸರು ಹೇಳಿದ್ದಿಷ್ಟು. “ಇದು ಮೂವರು ಗೆಳೆಯರ ಕಥೆ. ಆ ಮೂವರು ಚೆನ್ನಾಗಿ ಓದಿ ತಿಳಿದುಕೊಂಡವರು. ಆದರೆ, ಕೆಲಸ ಮಾಡೋಕೆ ಇಷ್ಟವಿಲ್ಲದವರು. ಕಾರಣ, 15 ಸಾವಿರ ಸಂಬಳಕ್ಕೆ ಯಾಕೆ ಕೆಲಸ ಮಾಡಬೇಕು ಎಂಬ ಸೋಮಾರಿತನ. ಪ್ರತಿ ದಿನ ಎಲ್ಲರ ಕಾಲೆಳೆದು ಅಲೆದಾಡುವ ಅವರ ಲೈಫಲ್ಲಿ ಏನೆಲ್ಲಾ ಆಗುತ್ತೆ ಎಂಬುದೇ ಒನ್‌ಲೈನ್. 28 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರ ಈಗ ಬಿಡುಗಡೆಗೆ ತಯಾರಾಗುತ್ತಿದೆ’ ಎಂದು ವಿವರ ಕೊಟ್ಟರು ಸರು.
ನಾಯಕ ರವಿಶಂಕರ್ ಗೌಡ ಅವರಿಗೆ ಇದೊಂದು ಹೊಸ ಬಗೆಯ ಚಿತ್ರವಂತೆ. ಆ ಬಗ್ಗೆ ಹೇಳುವ ಅವರು, “ತುಂಬಾ ಓದಿಕೊಂಡು, ಕೆಲಸಕ್ಕೆ ಹೋಗದೆ ಕಟ್ಟೆ ಮೇಲೆ ಕುಳಿತು ಕೆಲಸಕ್ಕೆ ಬಾರದ ಮಾತುಗಳನ್ನಾಡಿಕೊಂಡಿರುವಂತಹವರ ಕುರಿತ ಕಥೆ ಇಲ್ಲಿದೆ. ಇಲ್ಲಿರುವ ಮೂರು ಪಾತ್ರಗಳು ಕೂಡ ಸದಾ ನೆಗೆಟಿವ್ ಮಾತುಗಳನ್ನೇ ಹೇಳಿಕೊಂಡು ಕಾಲ ಕಳೆಯುವ ವ್ಯಕ್ತಿತ್ವ ಹೊಂದಿವೆ. ಪುರುಸೋತ್ ಇರುವ ಮೂವರ ಮೂಲಕ ನಿರ್ದೇಶಕರು ಇಲ್ಲೊಂದು ಸಂದೇಶ ಕೊಟ್ಟಿದ್ದಾರೆ. ಹಾಸ್ಯದ ಮೂಲಕವೇ ಗಂಭೀರ ವಿಷಯ ಹೇಳಿದ್ದಾರೆ. ಮೂವರು ಗೆಳೆಯರು ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬ ಗಾದೆಯಂತೆ ನಡೆದುಕೊಳ್ಳುವವರು. ಬೇಜವಾಬ್ದಾರಿಯಿಂದ ವರ್ತಿಸುವ ಅವರ ಬದುಕಲ್ಲಿ ಏನಾಗುತ್ತೆ ಎಂಬುದನ್ನು ವಿಶೇಷವಾಗಿ ಚಿತ್ರಿಸಲಾಗಿದೆ’ ಎಂದರು ರವಿಶಂಕರ್‌ಗೌಡ.
ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಅವರಿಗೆ ಮತ್ತೆ ಗುರುತಿಸಿಕೊಳ್ಳುವಂತಹ ಪಾತ್ರ ಸಿಕ್ಕಿದೆಯಂತೆ. “ಮೂವರು ಪುರುಸೋತ್‌ಗಳು ಮಾಡುವ ಕೀಟಲೆ, ದಾಂಧಲೆ ವಿಷಯಗಳಿದ್ದರೂ, ಅದು ಹಾಸ್ಯದ ಮೂಲಕ ಒಂದಷ್ಟು ಬೆಳಕು ಚೆಲ್ಲುತ್ತದೆ. ಮೊದಲ ಸಲ ಮಾನಸ ನಿರ್ಮಾಣ ಮಾಡಿದ್ದಾರೆ. ರವಿಶಂಕರ್‌ಗೌಡ ಅವರೊಂದಿಗೆ ಮೊದಲ ಸಲ ನಟಿಸಿದ್ದು ಖುಷಿ ಕೊಟ್ಟಿದೆ. ಕಥೆ ಬಗ್ಗೆ ಹೇಳುವುದಿಲ್ಲ. ಸಿನಿಮಾ ನೋಡಿದವರಿಗೆ ಬೇಸರ ಆಗುವುದಿಲ್ಲ’ ಎಂಬುದು ಶಿವರಾಜ್ ಮಾತು.
ನಿರ್ಮಾಪಕಿ ಮಾನಸ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಅವರು ರಾಜಕೀಯ ರಂಗದಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ನಿರತರಾಗಿದ್ದವರು. ಸಿನಿಮಾ ನಿರ್ಮಾಣ ಮಾಡುವ ಯಾವುದೇ ಯೋಚನೆ ಮಾಡದ ಅವರಿಗೆ ಆಕಸ್ಮಿಕವಾಗಿ ನಿರ್ಮಾಣಕ್ಕಿಳಿಯುವಂತೆ ಮಾಡಿದೆ. “ಪುರುಸೋತ್‌ರಾಮ’ ಒಂದು ಹೊಸ ಬಗೆಯ ಹಾಸ್ಯ ಚಿತ್ರ. ಹಾಗಂತ ಕಾಮಿಡಿಯೇ ಇಲ್ಲ. ಗಂಭೀರ ಇರುವ ವಿಷಯಗಳೂ ಇವೆ’ ಎಂದರು.
ಹಿರಿಯ ಕಲಾವಿದ ಜನಾರ್ದನ್ ಅವರಿಲ್ಲಿ ನಾಯಕನ ತಂದೆ ಪಾತ್ರ ಮಾಡಿದ ಬಗ್ಗೆ ಹೇಳಿಕೊಂಡರು. ಇದಕ್ಕೂ ಮುನ್ನ, ರಾಘವೇಂದ್ರ ರಾಜಕುಮಾರ್, ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಕೋರಿದರು. ಮನುರಂಜನ್ ಸಹ ಚಿತ್ರತಂಡದ ಶ್ರಮ ಮೆಚ್ಚಿಕೊಂಡರು. ಅನೂಷಾ, ಚಂದ್ರಶೇಖರ್ ಬಂಡಿಯಪ್ಪ. ರಮೇಶ್, ವಾಸು, ಸಂಗೀತ ನಿರ್ದೇಶಕ ಶುದ್ದೋರಾಯ್ ಇತರರು ಇದ್ದರು.