ನಾಲ್ಕು ದಿನಗಳಲ್ಲಿ ಸಿನಿಮಾ ಮಾಡುವುದಕ್ಕೆ ನಿರ್ಧಾರ ಆಯಿತಂತೆ. ಅದಾಗಿ ಕೆಲವೇ ದಿನಗಳಿಗೆ ಚಿತ್ರ ಸಹ ಶುರುವಾಗಿದೆ.ಹೀಗೆ ಸ್ವಲ್ಪ ಗ್ಯಾಪನಲ್ಲೇ ಶುರುವಾದ ಸಿನಿಮಾಗೆ ಏನು ಹೆಸರಿಡೋದು ಎಂದು ಚಿತ್ರತಂಡ ಯೋಚಿಸುತ್ತಿದ್ದಾಗ, ಯಾಕೆ “ಗ್ಯಾಪಲ್ಲೊಂದು ಸಿನಿಮಾ’ ಅಂತ ಹೆಸರಿಡಬಾರದು ಎಂಬ ಸಲಹೆ ಬಂದಿದೆ. ಈ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡ ಚಿತ್ರತಂಡವು, ಚಿತ್ರಕ್ಕೆ “ಗ್ಯಾಪಲ್ಲೊಂದು ಸಿನಿಮಾ’ ಎಂಬ ಹೆಸರನ್ನಿಟ್ಟಿದೆ.
ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಹಾಡುಗಳು ಸಹ ಬಿಡುಗಡೆಯಾಗಿದೆ. “ಗ್ಯಾಪಲ್ಲೊಂದು ಸಿನಿಮಾ’ ಎಂಬ ಸಿನಿಮಾ ಇದೆ ಎಂದು ಹಲವರಿಗೆ ಗೊತ್ತಾಗಿದ್ದೇ ಈ ಚಿತ್ರದ ಹಾಡುಗಳು ಬಿಡುಗಡೆ ಸಮಾರಂಭದಲ್ಲಿ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ನಟಿ ಭಾವನಾ ಬಂದಿದ್ದರು. ಶ್ರೀಧರ್ ಕಶ್ಯಪ್ ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಅವರು ಬಿಡುಗಡೆ
ಮಾಡಿದರು.
ಈ ಚಿತ್ರಕ್ಕೆ ಸಾಹಿತ್ಯ ಮತ್ತು ಚಿತ್ರಕಥೆಯನ್ನು ಬರೆದು ನಿರ್ದೇಶಿಸಿರುವವರು ಮಂಜು ಹೆದ್ದೂರ್. ಇದು ಅವರ ನಿರ್ದೇಶನದ ಮೊದಲ ಚಿತ್ರ. ಇದೊಂದು ಹೊಸ ರೀತಿಯ ಸಿನಿಮಾ ಎನ್ನುತ್ತಾರೆ ಮಂಜು. “ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಚಿತ್ರ. ಹೊಸ ತರಹದ ಸಿನಿಮಾ. ಇದು ಹೇಗೆ ಜನರಿಗೆ ತಲುಪುತ್ತದೋ ಎಂಬ ಭಯವಿದೆ. ಅದೇ ರೀತಿ ಒಂದೊಳ್ಳೆಯ ಚಿತ್ರ ಮಾಡಿದ ಖುಷಿ ಇದೆ. ಇಡೀ ಚಿತ್ರವನ್ನು ಒಂದೇ ಹಳ್ಳಿಯಲ್ಲಿ ಶೂಟ್ ಮಾಡಿದ್ದೇವೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಶರವಣ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ’ ಎಂದರು.
ಶಶಿ, ಈ ಚಿತ್ರದ ಹೀರೋ. ಅವರು ಮಂಜು ನಿರ್ದೇಶನದ ಒಂದು ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಂತೆ.
ಒಂದು ದಿನ ಆ ಚಿತ್ರ ನಿಂತಿದೆ. ಆಗ ನಿರ್ದೇಶಕರು, “ಹೊಸ ಸಿನಿಮಾ ಮಾಡೋಣ ಅಂತಿದ್ದೀನಿ, ಸಪೋರ್ಟ್ ಮಾಡ್ತೀಯ’
ಎಂದರಂತೆ. ಆಗ ತಲೆ ಬಗ್ಗಿಸಿದ ಶಶಿ ಇನ್ನೂ ಎತ್ತಿಲ್ಲ. “ಅವರು ಯಾವತ್ತೂ ನನ್ನ ನಟ ಅಂತ ನೋಡಲಿಲ್ಲ. ಸ್ನೇಹಿತನ ತರಹ, ಮಗು ತರಹ ನೋಡಿದರು. ತುಂಬಾ ಪ್ರೋತ್ಸಾಹ ಕೊಟ್ಟರು. ಒಂದೊಳ್ಳೆಯ ಚಿತ್ರ ಮಾಡಿದ್ದೀವಿ. ನಿಮ್ಮ ಪ್ರೋತ್ಸಾಹವೂ ಅಗತ್ಯ’ ಎಂದರು.
ಶಶಿಗೆ ನಾಯಕಿಯಾಗಿ ಮಮತಾ ರಾಹುತ್ ಇದ್ದಾರೆ. ಮಂಜುಳಾ ಮತ್ತು ಮಾಲಾಶ್ರೀ ಅವರನ್ನು ಮಿಕ್ಸ್ ಮಾಡಿರುವಂತಹ ಬಾಯಿಬಡುಕಿ ಮಂಗಳಾ ಎಂಬ ಪಾತ್ರದಲ್ಲಿ ಅವರು ನಟಿಸಿದ್ದಾರಂತೆ. “ಇಡೀ ಚಿತ್ರವನ್ನ ತಿಪಟೂರಿನ ಮಡೇನೂರು ಎಂಬ ಕಡೆ ಚಿತ್ರೀಕರಿಸಲಾಗಿದೆ. ಅಲ್ಲಿ ಅಷ್ಟಾಗಿ ನೀರಿನ ವ್ಯವಸ್ಥೆ ಇಲ್ಲ. ಈ ಚಿತ್ರ ಹಿಟ್ ಆಗಿ, ನಿರ್ಮಾಪಕರು ನನಗೇನಾದರೂ ಶೇರ್ ಕೊಟ್ಟರೆ, ಅಲ್ಲಿಗೆ ಸಹಾಯ ಮಾಡೋಣ ಅಂತಿದ್ದೀನಿ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು.