ತುಳು ಆಲ್ಬಂ ಮೂಲಕವೇ ಬಣ್ಣದ ಲೋಕಕ್ಕೆ ಕಾಲಿರಿಸಿ ಬಳಿಕ, ತೆಲುಗು, ಕನ್ನಡ ಸಿನೆಮಾದಲ್ಲಿ ವಿಭಿನ್ನ ರೋಲ್‌ನಲ್ಲಿ ಮಿಂಚುತ್ತಿದ್ದ ಕರಾವಳಿಯ ಬೆಡಗಿ ಚಾಂದಿನಿ ಅಂಚನ್ ಈಗ ತುಳು ಸಿನೆಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷವೆಂದರೆ ಗ್ಲಾಮರ್ ಲುಕ್‌ನಲ್ಲಿ ಮಿಂಚುತ್ತಿದ್ದ ಚಾಂದಿನಿ ಈಗ ಪಕ್ಕಾ
‘ಕಾರಣಿಕ ಕಥೆ’ಯಾಧಾರಿತ ತುಳು ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮಂಗಳೂರಿನ ಸೈಂಟ್ ಆ್ಯನ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಚಾಂದಿನಿ ಕುವೆಂಪು ವಿ.ವಿ.ಯಲ್ಲಿ ಬಿಎಸ್ಸಿ ಮುಗಿಸಿದ್ದರು. ಶಾಲಾ-ಕಾಲೇಜು ದಿನದಲ್ಲಿ ಉತ್ತಮ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿರುವ ಅವರು ಮಾಡೆಲಿಂಗ್‌ನಲ್ಲೂ ಕೈಯಾಡಿಸಿದ್ದಾರೆ. 2014ರಲ್ಲಿ ಹೊಸದಿಲ್ಲಿಯಲ್ಲಿ ಜರಗಿದ ಮಿಸ್ ಗ್ಲೋರಿ ಆಫ್ ಇಂಡಿಯಾದಲ್ಲಿಯೂ ಭಾಗವಹಿಸಿದ್ದಾರೆ.
ಮಂಗಳೂರಿನ ಯುವ ಉದ್ಯಮಿ ಮಹೇಂದ್ರ ಕುಮಾರ್ ಅವರು ತಮ್ಮ ‘ಫಿಯೋನಿಕ್ಸ್ ಫಿಲಂಸ್’ ಲಾಂಛನದ ಮೂಲಕ ಪ್ರಥಮ ಸಿನೆಮಾವಾಗಿ ನಡೆಸುತ್ತಿರುವ ‘ಸತ್ಯದಪ್ಪೆ ಕಲ್ಲುರ್ಟಿ’ ಸಿನೆಮಾದಲ್ಲಿ ‘ಕಲ್ಲುರ್ಟಿ’ ಪಾತ್ರದಲ್ಲಿ ಅವರು ಮಿಂಚುತ್ತಿದ್ದಾರೆ.
ಈಗಾಗಲೇ ಶೇ. 50ರಷ್ಟು ಶೂಟಿಂಗ್ ಕಂಡಿರುವ ಈ ಸಿನೆಮಾ ಮಳೆ ಮುಗಿದ ಬಳಿಕ ಎರಡನೇ ಹಂತದ ಶೂಟಿಂಗ್ ಕಾಣಲಿದೆ. ಭಕ್ತ ಜನರ ರಕ್ಷೆ ಮತ್ತು ದುಷ್ಟ ಜನರ ಶಿಕ್ಷೆಗಾಗಿ ಕಲ್ಲುರ್ಟಿ ತಾಯಿ ಧರೆಗಿಳಿದು ಬರಲು ಕಾರಣವಾಗಿದೆ. ಈ ಕುರಿತ ತಾಯಿಯ ಹುಟ್ಟು, ಬೆಳೆದು ಬಂದ ಬಗೆ, ತುಳುನಾಡಿನಲ್ಲಿ ನೆಲೆಯಾದ ಕಥೆಯನ್ನು ಒಳಗೊಂಡಂತೆ ‘ಸತ್ಯದಪ್ಪೆ ಕಲ್ಲುರ್ಟಿ’ ಮೂಡಿಬರುತ್ತಿದೆ.
ತುಳು ಆಲ್ಬಂನಲ್ಲಿ ಮೊದಲು ಕಾಣಿಸಿದ ಚಾಂದಿನಿ ಬಳಿಕ ತೆಲುಗು ಸಿನೆಮಾದತ್ತ ಕಣ್ಣಿಟ್ಟಿದ್ದರು. ಅಲ್ಲಿ ‘ರುದ್ರ ಐಪಿಎಸ್’ ಸಿನೆಮಾದಲ್ಲಿ ಚಾಂದಿನಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅನಂತರ ಕನ್ನಡಕ್ಕೆ ಆಗಮಿಸಿದ ಚಾಂದಿನಿ ಉಪೇಂದ್ರ ಅವರ ಜತೆಗೆ ಸಿನೆಮಾ ಮಾಡಿದರು. ‘ಹೋಂ ಮಿನಿಸ್ಟರ್’ ಸಿನೆಮಾದಲ್ಲಿ ಕಾಣಿಸಿಕೊಂಡ ಚಾಂದಿನಿ ಇನ್ನಷ್ಟು ಸಿನೆಮಾದ ಆಫರ್‌ನಲ್ಲಿದ್ದಾರೆ.
ದಿನೇಶ್ ಇರಾ