ಅಲ್ಲಿಗೆ ಸುಮಾರು ಒಂದುವರೆ ತಾಸಿನ ಪಯಣ. ಅಷ್ಟು ದೂರದ ಸ್ಥಳಕ್ಕೆ ಹೋಗುವ ಹೊತ್ತಿಗೆ, ಅರ್ಧ ಕಾರ್ಯಕ್ರಮವೇ ಮುಗಿದಿತ್ತು. ಜೈಕಾರ, ಕೂಗಾಟ, ಚೀರಾಟದ ನಡುವೆ ಕಾರ್ಯಕ್ರಮ ಮುಂದುವರೆದಿತ್ತು. ವೇದಿಕೆ ಮೇಲೆ ಬಂದವರು ಹೇಳಿದ್ದು ಮೂರ್‍ನಾಲ್ಕು ಮಾತು. ಅಷ್ಟಕ್ಕಾಗಿಯೇ ಅಷ್ಟು ದೂರ ಬರಬೇಕಿತ್ತಾ? ಎಂಬ ಬೇಸರದಲ್ಲೇ ಪತ್ರಕರ್ತರು ವೇದಿಕೆ ಮುಂದೆ ಕುಳಿತುಕೊಳ್ಳಬೇಕಾಯ್ತು. ರಶ್ಮಿಕಾ ಮಂದಣ್ಣ ವೇದಿಕೆಗೆ ಬಂದಾಗ ಮತ್ತದೇ ಕೇಕೆ, ಚಪ್ಪಾಳೆಗಳ ಸದ್ದು. ಕೈಗೆ ಮೈಕ್ ಹಿಡಿದ ಕನ್ನಡದ ನಟಿಯ ಬಾಯಲ್ಲಿ ಕನ್ನಡ ಬದಲು ಇಂಗ್ಲೀಷ್ ಮಾತುಗಳೇ ಹರಿದಾಡಿದವು. ನಿರೂಪಕ ಕನ್ನಡದಲ್ಲಿ ಪ್ರಶ್ನೆ ಕೇಳುತ್ತಾ ಹೋದಂತೆ, ಅವರು ಇಂಗ್ಲೀಷ್‌ನಲ್ಲೇ ಉತ್ತರಿಸುತ್ತಾ ಹೋದರು. ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ರಶ್ಮಿಕಾ ಮಂದಣ್ಣ, ಒಳ್ಳೆಯ ಮನರಂಜನೆ ಚಿತ್ರವಿದು, ನಾನು ಯಾರಿಗೂ ಇದುವರೆಗೆ “ಚಮಕ್’ ಕೊಟ್ಟಿಲ್ಲ’ ಎಂದಷ್ಟೇ ಹೇಳಿ ವೇದಿಕೆಯಿಂದ ಕೆಳಗಿಳಿದರು.
“ಜೂಮ್’ ಹಾಡಿಗೆ ಹೆಜ್ಜೆ ಹಾಕುತ್ತಲೇ ವೇದಿಕೆಗೆ ಬಂದ ಗಣೇಶ್, “ಸುನಿ ಒಂದು ಟೀಸರ್ ಬಿಟ್ಟರು. ನನ್ ಫ್ರೆಂಡ್ಸ್ ರೇಗ್ಸೋಕೆ ಶುರು ಮಾಡಿದರು. ಗಣಿ, ಯಾವಾಗ ಲೈಟ್ ಆಫ್ ಮಾಡ್ತೀಯೋ ಅಂತಿದ್ದಾರೆ. ಅದೇನೆ ಇರ್ಲಿ, ಇದೊಂದು ಮಜವಾದ ಚಿತ್ರ. ಎಲ್ಲರಿಗೂ ಹಂಡ್ರೆಡ್ ಪರ್ಸೆಂಟ್ ಮನರಂಜನೆ ಕೊಡುತ್ತೆ. “ಚಮಕ್’ ಹೆಸರಲ್ಲಿ ನಾನು ಕಿರುತೆರೆಯಲ್ಲಿ ನೂರಾರು ಎಪಿಸೋಡ್ ಕಾರ್ಯಕ್ರಮ ನಡೆಸಿದ್ದೇನೆ. ಈಗ ಅದೇ ಹೆಸರಿನಲ್ಲಿ ಚಿತ್ರವಾಗಿದೆ. ಇಲ್ಲಿ ಎಲ್ಲವೂ ಚೆನ್ನಾಗಿದೆ. ನನಗೆ ಜ್ಯೂಡ ಸ್ಯಾಂಡಿ ಸಂಗೀತ ಇಷ್ಟ. ಅದರಲ್ಲೂ “ಅರೇ ಅರೇ’ ಹಾಡು ನನ್ನ ಫೇವರೇಟ್’ ಅಂತ ಹೇಳಿ ಸುಮ್ಮನಾದರು.
ನಿರ್ದೇಶಕ ಸುನಿ ಅಂದು ಗೊಂದಲದಲ್ಲಿದ್ದರು. ಎಲ್ಲಾ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದರಿಂದ ಅತ್ತಿಂದಿತ್ತ ಓಡಾಡಿಕೊಂಡಿದ್ದರು. ವೇದಿಕೆ ಮೇಲೇರಿದ ಸುನಿ, “ನಾನೂ “ಚಮಕ್’ ಕೊಟ್ಟಿದ್ದೇನೆ. ಅಮ್ಮನಿಗೆ ಆಫೀಸ್‌ನಲ್ಲಿದ್ದೀನಿ ಅಂತ ಹೇಳಿ ಗರ್ಲ್ಫ್ರೆಂಡ್ ಜತೆಗಿರುತ್ತಿದ್ದೆ. ಗರ್ಲ್ಫ್ರೆಂಡ್‌ಗೆ ಆಫೀಸ್‌ನಲ್ಲಿದ್ದೀನಿ ಅಂತ ಹೇಳಿ ಅಮ್ಮನ ಜೊತೆ ಇರುತ್ತಿದ್ದೆ. ಇನ್ನು, ಈ ಶೀರ್ಷಿಕೆ ಕೊಟ್ಟಿದ್ದು ಗಣೇಶ್ ಸರ್. ಮೊದಲ ಚಿತ್ರಕ್ಕೆ “ಖುಷ್ ಖುಷಿ’ ಅಂತ ನಾಮಕರಣ ಮಾಡಿದ್ದೆ. ರಕ್ಷಿತ್, “ಸಿಂಪಲ್ಲಾಗೊಂದ್ ಲವ್‌ಸ್ಟೋರಿ’ ಇಡೋಣ ಅಂದರು. ಆಮೇಲೆ “ಖುಷ್ ಖುಷೀಲಿ’ ಅಂತ ಹೆಸರಿಟ್ಟು ಸಿನಿಮಾ ಮಾಡೋಕೆ ಹೊರಟೆ. ನಿರ್ಮಾಪಕ ಅಶು ಬೆದ್ರ ಅವರು, “ಸಿಂಪಲ್ಲಾಗ್ ಇನ್ನೊಂದ್ ಲವ್‌ಸ್ಟೋರಿ’ ಅಂತ ಇಡೋಣವೆಂದರು. “ಚಮಕ್’ ಚಿತ್ರಕ್ಕೂ “ಖುಷ್ ಖುಷೀಲಿ’ ಇಟ್ಟಿದ್ದೆ. ಗಣೇಶ್ ಸರ್, ಚಿತ್ರದ ನಾಯಕ ಇಲ್ಲಿ ಎಲ್ಲರಿಗೂ ಚಮಕ್ ಕೊಡ್ತಾನೆ. “ಚಮಕ್’ ಅಂತ ಇಡೋಣ ಅಂದರು. ಅದೇ ಫಿಕ್ಸ್ ಆಯ್ತು’ ಅಂತ ವಿವರಿಸಿದರು.
ಗಣೇಶ್ ಅವರಿಲ್ಲಿ ತುಂಬಾ ಸ್ಟೈಲಿಷ್ ಆಗಿ ಕಾಣಾ¤ರೆ. ಚಿತ್ರ ಕೂಡ ತುಂಬಾನೇ ವಿಭಿನ್ನವಾಗಿದೆ. ಈಗಿನ ಯೂತ್ಸ್ಗೆ ಪಕ್ಕಾ ಸಿನಿಮಾ ಇದು. ವಿಶೇಷವೆಂದರೆ, ಐದು ಹಾಡುಗಳನ್ನೂ ಹೊಸಬರೇ ಬರೆದಿದ್ದಾರೆ ಅಂತ ಹೇಳುವ ಹೊತ್ತಿಗೆ ಸಮಯ ಮೀರಿತ್ತು. ಅದರ ನಡುವೆ ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ ತಮ್ಮ ಗಾಯಕರ ಜತೆ ಹಾಡಿ, ರಂಜಿಸಿದರು. ಇದೇ ವೇಳೆ “ಅರ್ಜುನ್ ರೆಡ್ಡಿ’ ಚಿತ್ರದ ನಾಯಕ ವಿಜಯ್ ದೇವರಕೊಂಡ ವೇದಿಕೆಗೆ ಬಂದರು. ಎಲ್ಲರ ಜೊತೆಗೂಡಿ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದರು. ನಿರ್ಮಾಪಕ ಚಂದ್ರಶೇಖರ್ ಮತ್ತು ಚಿತ್ರತಂಡ ಸುಕ್ರಿ ಬೊಮ್ಮೇಗೌಡ ಅವರನ್ನು ಸನ್ಮಾನಿಸಿತು.
– ವಿಜಯ್ ಭರಮಸಾಗರ