Advertisement

ಘಾನಾ ದೇಶದ ಕತೆ: ಲೋಭಿ ಮತ್ತು ಭಿಕ್ಷುಕ

05:54 PM May 04, 2019 | mahesh |

ಕೋಪ್ಪಿ ಅಮೆರೋ ಒಬ್ಬ ಶ್ರೀಮಂತ. ಅವನಿರುವ ಹಳ್ಳಿಗೆ ಅವನ ಹೆಸರನ್ನೇ ಇಟ್ಟಿದ್ದರು. ಅವನ ಮನೆಯಲ್ಲಿ ಬಂಗಾರದ ಕಂಬಗಳಿದ್ದವು, ಬೆಳ್ಳಿಯ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದ. ಚಿನ್ನದ ನಾಣ್ಯಗಳ ರಾಶಿಯಲ್ಲಿ ಮಲಗುತ್ತಿದ್ದ. ಇಷ್ಟೆಲ್ಲ ಇದ್ದರೂ ನೊಂದವರನ್ನು ಕಂಡರೆ ಅಯ್ಯೋ ಎಂದು ಮರುಗುವ ಒಳ್ಳೆಯ ಗುಣ ಅವನಲ್ಲಿರಲಿಲ್ಲ. ಅಮೆರೋ ಕಡು ಲೋಭಿ. ಮದುವೆಯಾಗಿ ಮಕ್ಕಳಾದರೆ ತಾನು ಕೂಡಿ ಹಾಕಿದ ಹಣ ಖರ್ಚಾಗುತ್ತದೆ ಎಂದು ಭಾವಿಸಿ ಮದುವೆ ಮಾಡಿಕೊಳ್ಳಲಿಲ್ಲ. ಸೇವಕರಿದ್ದರೆ ಈ ಸಂಪತ್ತಿಗೆ ದುರಾಶೆ ಪಡಬಹುದೆಂಬ ಕಾರಣಕ್ಕೆ ಎಲ್ಲ ಕೆಲಸಗಳನ್ನೂ ತಾನೇ ಮಾಡಿಕೊಳ್ಳುತ್ತಿದ್ದ.

Advertisement

ಒಂದು ಸಲ ಅಮೆರೋ ಮನೆಯಂಗಳದಲ್ಲಿ ಕುಳಿತು ತಿಂಡಿ ತಿನ್ನುವುದರಲ್ಲಿ ನಿರತನಾಗಿದ್ದ. ಆಗ ಅವನಿಗೆ ಅರಿವಿಲ್ಲದಂತೆ ತಟ್ಟೆಯಿಂದ ಮೂರು ತುಂಡು ತಿಂಡಿ ಕೆಳಗೆ ಬಿದ್ದಿತು. ಒಬ್ಬ ಭಿಕ್ಷುಕನು ಮೆಲ್ಲಗೆ ಬಂದು ಆ ತಿಂಡಿಯ ಚೂರುಗಳನ್ನು ಎತ್ತಿಕೊಂಡ. ಅಮೆರೋನ ಮುಂದಿದ್ದ ಬಂಗಾರದ ಕುರ್ಚಿಯ ಮೇಲೆ ಕುಳಿತುಕೊಂಡು ಮೂರು ತುಂಡುಗಳನ್ನೂ ಒಮ್ಮೆಲೇ ಬಾಯಿಗೆ ಹಾಕಿಕೊಂಡ. ತುಂಬ ದಿನಗಳಿಂದ ಆಹಾರ ಕಂಡಿರದ ಅವನಿಗೆ ತುಂಬ ಸಂತೋಷವಾಗಿತ್ತು. ಕುರ್ಚಿಯಲ್ಲಿ ಕಣ್ಮುಚ್ಚಿ ಕುಳಿತು ಆ ಸುಖವನ್ನು ಅನುಭವಿಸತೊಡಗಿದ ಅಷ್ಟರಲ್ಲಿ ಅಮೆರೋ ಭಿಕ್ಷುಕನನ್ನು ನೋಡಿದ. ಕೋಪದಿಂದ ಕುದಿದುಬಿಟ್ಟ. ತನ್ನ ತಟ್ಟೆಯಿಂದ ಬಿದ್ದ ತಿಂಡಿಯ ಚೂರುಗಳನ್ನು ತನಗೆ ಗೊತ್ತಾಗದ ಹಾಗೆ ಹೆಕ್ಕಬೇಕಿದ್ದರೆ ಎಷ್ಟು ಸೊಕ್ಕು ಇವನಿಗೆ! ಅಷ್ಟು ಸಾಲದೆಂಬಂತೆ ಮುತ್ತುರತ್ನಗಳನ್ನು ಕೂಡಿಸಿರುವ ತನ್ನ ಬಂಗಾರದ ಕುರ್ಚಿಯಲ್ಲಿ ಆರಾಮವಾಗಿ ತನ್ನೆದುರೇ ಕುಳಿತಿರುವುದನ್ನು ಕಂಡು ಆವೇಶದಿಂದ ಅವನ ಬಳಿಗೆ ಓಡಿಹೋದ. ತಿಂಡಿ ಅವನ ಗಂಟಲಿನಿಂದ ಕೆಳಗಿಳಿಯಬಾರದೆಂದು ಬಿಗಿಯಾಗಿ ಹಿಡಿದು, “”ಬಾಯಲ್ಲಿರುವುದನ್ನು ಕೆಳಗೆ ಉಗುಳು. ನನ್ನ ತಿಂಡಿಯ ಚೂರು ಕೂಡ ನಿನ್ನ ಹೊಟ್ಟೆ ಸೇರಬಾರದು” ಎಂದು ಗರ್ಜಿಸಿದ.

ಶ್ರೀಮಂತನ ಹಿಡಿತದಲ್ಲಿ ಭಿಕ್ಷುಕ ಉಸಿರುಗಟ್ಟಿ ಒದ್ದಾಡತೊಡಗಿದ. ಆದರೂ ಅಮೆರೋ ಅವನ ಬಗೆಗೆ ಕರುಣೆ ತಾಳಲಿಲ್ಲ. ಆಗ ಆಕಾಶ ಮಾರ್ಗದಲ್ಲಿ ಸಂಚರಿಸುತ್ತಿದ್ದ ಒಬ್ಬ ದೇವದೂತ ಇದನ್ನು ನೋಡಿದ. ಕೂಡಲೇ ಕೆಳಗಿಳಿದು ಅಮೆರೋ ಮುಂದೆ ಕಾಣಿಸಿಕೊಂಡ. “”ನಿಜ, ಯಾರಿಗೂ ಏನೂ ಕೊಡದ ನಿನ್ನ ತಿಂಡಿಯನ್ನು ಹೆಕ್ಕಿ ತಿಂದು ಭಿಕ್ಷುಕ ಅಪರಾಧ ಮಾಡಿದ್ದಾನೆ. ಅವನ ತಪ್ಪಿಗೆ ನಾನು ಪ್ರಾಯಶ್ಚಿತ್ತ ವಿಧಿಸಿಕೊಳ್ಳುತ್ತೇನೆ. ಮೂರು ತುಂಡು ತಿಂಡಿಗೆ ಮೂರು ವರಗಳು. ನೀನು ಏನು ಕೇಳಿದರೂ ಕೊಡುತ್ತೇನೆ” ಎಂದು ಹೇಳಿದ.

ಅಮೆರೋ ಭಿಕ್ಷುಕನನ್ನು ಕೈಬಿಟ್ಟ. ದೇವದೂತನ ಕಡೆಗೆ ನೋಡಿದ. ತನ್ನ ಬಳಿ ಸಂಪತ್ತು ಧಾರಾಳವಾಗಿರುವಾಗ ಅವನಲ್ಲಿ ಕೇಳಿ ತೆಗೆದುಕೊಂಡರೂ ಅದನ್ನಿಡಲು ಜಾಗವಿಲ್ಲ. ಅದರ ಬದಲು ಬೇರೆ ಏನಾದರೂ ಕೋರಬೇಕು ಎಂದು ನಿರ್ಧರಿಸಿದ. “”ನೋಡು, ಆ ಭಿಕ್ಷುಕ ಕುಳಿತ ಕುರ್ಚಿ ಅಪವಿತ್ರವಾಗಿದೆ. ಮುಂದೆ ಬೇರೆ ಯಾರಾದರೂ ಅದನ್ನು ಮುಟ್ಟಿದರೆ ಅವರ ಕೈಗಳು ಕಲ್ಲಾಗಿ ಹೋಗಬೇಕು” ಎಂದು ಕೋರಿದ. “”ಹಾಗೆಯೇ ಆಗುತ್ತದೆ, ಮುಂದಿನ ವರ ಕೇಳು” ಎಂದ ದೇವದೂತ. “”ನನ್ನ ಮನೆಯ ಉಪಕರಣಗಳನ್ನು ಕೇಳಿಕೊಂಡು ತುಂಬ ಮಂದಿ ಬರುತ್ತಾರೆ. ನನ್ನ ಹೊರತು ಬೇರೆ ಯಾರಿಗೂ ಅವು ಎತ್ತಲಾಗದಷ್ಟು ಭಾರವಾಗಬೇಕು” ಎಂದು ಅಮೆರೋ ಬೇಡಿದ. “”ಅದೂ ಆಗುತ್ತದೆ. ಕೊನೆಯ ವರ ಏನು ಬೇಕು?” ದೇವದೂತ ಪ್ರಶ್ನಿಸಿದ. “”ನನ್ನ ಮನೆಯ ಪಕ್ಕದ ದಾರಿಯ ಬಳಿ ಒಂದು ಮರವಿದೆ. ವಿಶೇಷವಾದ ಈ ಮರದ ಎಲೆಗಳನ್ನು ದಾರಿಹೋಕರು ಮನ ಬಂದಂತೆ ಮುರಿದುಕೊಂಡು ಹೋಗುತ್ತಾರೆ. ಅದರ ಎಲೆಗಳ ರಸ ಹಚ್ಚಿದರೆ ಯಾವುದೇ ಕಾಯಿಲೆಯೂ ಶಮನವಾಗುತ್ತದೆ. ಇನ್ನು ಮುಂದೆ ಮರವನ್ನು ಬೇರೆಯವರು ಮುಟ್ಟಿದರೆ ಅವರ ಕೈಗಳು ಅಲ್ಲೇ ಅಂಟಿಕೊಳ್ಳಬೇಕು” ಎಂದು ಅಮೆರೋ ಬೇಡಿದ.

“”ನಿನ್ನ ಕೋರಿಕೆ ಈಡೇರುತ್ತದೆ. ಕೆಲವು ಸಲ ನಮ್ಮ ಕೋರಿಕೆಗಳಿಂದ ನಮಗೆ ತೊಂದರೆ ಬರುತ್ತದೆ. ಹೀಗಾದಾಗ ಬೇಕಿದ್ದರೆ ನನ್ನನ್ನು ಸ್ಮರಿಸಿಕೋ” ಎಂದು ಹೇಳಿ ದೇವದೂತ ಹೊರಟುಹೋದ. ಇದರಿಂದ ಅಮೆರೋ ಮನಸ್ಸಿಗೆ ನೆಮ್ಮದಿಯಾಯಿತು. ಬೇರೆಯವರು ತನ್ನ ವಸ್ತುಗಳಿಂದ ಸುಖ ಅನುಭವಿಸದ ಹಾಗೆ ಮಾಡಿಬಿಟ್ಟೆ ಎಂದು ಬೀಗಿದ.

Advertisement

ಆಮೇಲೆ ಅಮೆರೋ ದೊಡ್ಡ ಧರ್ಮಾತ್ಮನ ಹಾಗೆ ವರ್ತಿಸತೊಡಗಿದ. ಬೀದಿಯಲ್ಲಿ ಹೋಗುವ ಜನರನ್ನು ಕರೆದು, “”ಬನ್ನಿ, ಬನ್ನಿ. ನನ್ನ ಆತಿಥ್ಯ ಸ್ವೀಕರಿಸಿ ಹೋಗಿ” ಎಂದು ಕರೆಯುತ್ತಿದ್ದ. ಅವರು ಮನೆಯೊಳಗೆ ಬಂದರೆ ಬಂಗಾರದ ಕುರ್ಚಿಯನ್ನು ತೋರಿಸುತ್ತಿದ್ದ. ಪಾಪ, ಕುರ್ಚಿಯನ್ನು ಮುಟ್ಟಿದ ಕೂಡಲೇ ಅವರ ಕೈಗಳು ಶಿಲೆಯಾಗುತ್ತಿದ್ದವು. ತಮ್ಮ ದುರವಸ್ಥೆಗೆ ದುಃಖೀಸುತ್ತ ಅವರು ಹೋಗುವುದನ್ನು ಕಂಡು ಸಂತೋಷಪಡುತ್ತಿದ್ದ. ಹಾಗೆಯೇ ತನ್ನ ಮನೆಯ ಪಾತ್ರೆಗಳನ್ನು, ಉಪಕರಣಗಳನ್ನು ಎದುರಿಗೇ ತಂದಿಡುತ್ತಿದ್ದ. ಹಳ್ಳಿಯವರೊಂದಿಗೆ, “”ಇದರಲ್ಲಿ ನಿಮ್ಮ ಅಗತ್ಯಕ್ಕೆ ಬೇಕಾದ ಯಾವುದೇ ಉಪಕರಣವನ್ನೂ ಒಯ್ಯಬಹುದು. ನಾಲ್ಕು ಮಂದಿಗೆ ಉಪಕಾರ ಮಾಡಿ ಪುಣ್ಯ ಸಂಪಾದಿಸಬೇಕೆಂಬ ಬಯಕೆ ನನ್ನದು” ಎಂದು ಉದಾರವಾಗಿ ಹೇಳುತ್ತಿದ್ದ. ಆದರೆ ಅವನ ಉಪಕರಣಗಳನ್ನು ಮಿಸುಕಾಡಿಸಲೂ ಸಾಧ್ಯವಾಗದೆ ಜನರು ಬೆವರಿಳಿಸುವುದು ನೋಡಿ ಅವನಿಗೆ ತುಂಬ ಸಂತೋಷವಾಗುತ್ತಿತ್ತು.

ತನ್ನ ವಿಶೇಷವಾದ ಮರದ ಬಗೆಗೂ ಅಷ್ಟೇ, ಅಮೆರೋ ಎಲ್ಲರೊಂದಿಗೆ, “”ನಿಮಗೆ ಏನು ಕಾಯಿಲೆ ಇದ್ದರೂ ಸಂಕೋಚ ಪಡಬೇಡಿ. ನನ್ನ ಮರದ ಎಲೆಗಳನ್ನು ಯಾಕೆ ಕಿತ್ತು ತೆಗೆದಿರಿ ಎಂದು ನಾನು ಪ್ರಶ್ನಿಸುವುದಿಲ್ಲ. ಬೇಕಾದಂತೆ ಎಲೆಗಳನ್ನು ತೆಗೆದುಕೊಳ್ಳಿ, ರೋಗ ನಿವಾರಣೆ ಮಾಡಿಕೊಳ್ಳಿ” ಎಂದು ಧಾರಾಳವಾಗಿ ಹೇಳಿದ. ಅವನ ಮಾತು ನಂಬಿ ಎಲೆ ಕೀಳಲು ಹೋದವರ ಕೈಗಳು ಅಲ್ಲೇ ಅಂಟಿಕೊಂಡು ಬೆರಳುಗಳನ್ನೇ ಕತ್ತರಿಸಿ ಬಿಡಿಸಿಕೊಳ್ಳಬೇಕಾಯಿತು. ಇದರಿಂದ ಅವನಿಗೆ ಮರುಕ ಹುಟ್ಟಲಿಲ್ಲ. ತನಗೆ ಸೇರಿದ ಸೊತ್ತುಗಳನ್ನು ಯಾರು ಬಯಸಿದರೂ ಅವರು ನೋವು ಅನುಭವಿಸಬೇಕು ಎಂದು ಮನಸ್ಸಿನಲ್ಲೇ ಸಂತಸಪಟ್ಟ.

ಒಂದು ಸಲ ರಾತ್ರೆ ವಿಪರೀತ ಹಿಮ ಬೀಳುತ್ತಿತ್ತು. ಮೈ ಕೊರೆಯುವ ಚಳಿಯೂ ಇತ್ತು. ಆಗ ಅಮೆರೋ ಮನೆಯ ಕೊಟ್ಟಿಗೆಯಲ್ಲಿದ್ದ ಹಸು ಜೋರಾಗಿ ಕೂಗಿತು. ಏನಾಯಿತೆಂದು ನೋಡಲು ಅಮೆರೋ ಕತ್ತಲಿನಲ್ಲೇ ಹೊರಗೆ ಬಂದ. ದೀಪ ಉರಿಸಿದರೆ ಎಣ್ಣೆ ವ್ಯರ್ಥವಾಗುತ್ತದೆಂದು ಅವನ ಭಾವನೆ. ಆದರೆ ತಡವಿಕೊಂಡು ಮುಂದೆ ಹೋಗುವಾಗ ನೀರು ತುಂಬಿದ ಬಾವಿಯೊಳಗೆ ಬಿದ್ದುಬಿಟ್ಟ. ಚಳಿಯಿಂದಾಗಿ ಪ್ರತಿ ಕ್ಷಣವೂ ಅವನಿಗೆ ತನ್ನ ಜೀವ ಹೋಗುತ್ತಿರುವ ಅನುಭವವಾಯಿತು. ಹೇಗಾದರೂ ಬದುಕಿದರೆ ಸಾಕು ಎಂಬ ಆಶೆಯಿಂದ ಸನಿಹದ ಮನೆಗಳ ಜನರನ್ನು ಹೆಸರು ಹಿಡಿದು ಕೂಗಿ ರಕ್ಷಣೆಗೆ ಬರುವಂತೆ ಬೇಡಿಕೊಂಡ.

ಅಮೆರೋ ನೆರೆಕರೆಯ ಜನ ಕೆಟ್ಟವರಾಗಿರಲಿಲ್ಲ. ಅವನ ರಕ್ಷಣೆ ಮಾಡಲು ಬಂದರು. ಆದರೆ ಆಳವಾದ ಬಾವಿಗಿಳಿಯಲು ಯಾರಿಗೂ ಧೈರ್ಯವಿರಲಿಲ್ಲ. ಆಗ ಅಮೆರೋ ತನ್ನ ಕುರ್ಚಿಯನ್ನು ಹಗ್ಗದಲ್ಲಿ ಬಾವಿಗಿಳಿಸಿದರೆ ತಾನು ಅದರ ಮೇಲೆ ಕುಳಿತುಕೊಳ್ಳುತ್ತೇನೆ, ಬಳಿಕ ಮೇಲಕ್ಕೆಳೆಯಬಹುದೆಂದು ಹೇಳಿದ. ಆದರೆ ಜನಗಳು ಅದಕ್ಕೆ ಒಪ್ಪಲಿಲ್ಲ. “”ನಮ್ಮ ಕೈಗಳು ಶಿಲೆಯಾಗಲು ನಮಗೆ ಇಷ್ಟವಿಲ್ಲ” ಎಂದರು. ವಿಧಿಯಿಲ್ಲದೆ ಅಮೆರೋ ದೇವದೂತನನ್ನು ನೆನೆದ. ತನ್ನ ಒಂದು ವರವನ್ನು ಮರಳಿ ತೆಗೆದುಕೊಳ್ಳಲು ಬೇಡಿದ. ದೇವದೂತನು ಆಕಾಶದಿಂದ, “”ಸುಮ್ಮನೆ ವರವನ್ನು ಮರಳಿ ತೆಗೆದುಕೊಳ್ಳಲಾಗದು. ನಿನ್ನ ಎಲ್ಲ ಬಂಗಾರವನ್ನು ಜನರಿಗೆ ಹಂಚಬೇಕು” ಎಂದು ಹೇಳಿದ. ವಿಧಿಯಿಲ್ಲದೆ ಅಮೆರೋ ಒಪ್ಪಿಕೊಂಡ. ಬಳಿಕ ಸೇರಿದವರು ಅವನನ್ನು ಮೇಲಕ್ಕೆ ತಂದರು.

ಚಳಿಯಿಂದ ನಡುಗುತ್ತಿದ್ದ ಅಮೆರೋಗೆ ಬೆಂಕಿಯ ಅಗ್ಗಿಷ್ಟಿಕೆ ಬೇಕಿತ್ತು. ಆದರೆ ಅವನ ಮನೆಯ ಉಪಕರಣಗಳನ್ನು ಯಾರಿಗೂ ಮುಟ್ಟಲು ಸಾಧ್ಯವಿರಲಿಲ್ಲ. ತನ್ನ ಪ್ರಾಣ ರಕ್ಷಣೆಗಾಗಿ ಅಮೆರೋ ಆ ವರವನ್ನು ಮರಳಿ ಪಡೆಯಲು ದೇವದೂತನಿಗೆ ಹೇಳಿದ. ಅದಕ್ಕಾಗಿ ತನ್ನ ಮನೆಯನ್ನು ಬಡವರಿಗೆ ಬಿಟ್ಟುಕೊಡಲು ಒಪ್ಪಿದ. ಇನ್ನು ಅವನ ಗಾಯಗಳಿಗೆ ಚಿಕಿತ್ಸೆ ಮಾಡಲು ವಿಶೇಷ ಮರದ ಎಲೆಗಳು ಬೇಕಾಗಿದ್ದವು. ಬೇರೆಯವರು ಎಲೆ ಕೊಯಿದು ತರುವಂತಾಗಲಿ ಎಂದು ದೇವದೂತನನ್ನು ಕೋರಿದ. ಹಾಗೆ ಮಾಡಬೇಕಿದ್ದರೆ ತನ್ನ ಆಸ್ತಿಯೆಲ್ಲವನ್ನೂ ಊರಿನವರಿಗೆ ಹಂಚಲು ಸಿದ್ಧನಾದ. ಅಮೆರೋ ಸರ್ವಸ್ವವನ್ನು ಕಳೆದುಕೊಂಡರೂ ವಿವೇಕ ತಂದುಕೊಂಡ. ಎಲ್ಲರಂತೆ ದುಡಿದು, ಎಲ್ಲರ ಜೊತೆಗೆ ಬೆರೆತು ಬದುಕಿದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next