Advertisement
ಮಂತ್ರಿಗಳು, ಹಿರಿಯರು ಅನಾನ್ಸೆಗೆ ಬುದ್ಧಿ ಹೇಳಿದರು. “”ಸಾಮ್ರಾಜ್ಯ ವಿಸ್ತರಣೆಯ ಹುಚ್ಚು ಅತಿಯಾಗಬಾರದು. ಇದರಿಂದ ತುಂಬ ಜನರಿಗೆ ಅನ್ಯಾಯವಾಗುತ್ತದೆ. ಸಿಂಹಾಸನದಲ್ಲಿ ಕುಳಿತು ಆಳುತ್ತಿದ್ದವರ ಸಂಸಾರ ಕಷ್ಟ ಅನುಭವಿಸುತ್ತದೆ. ಈ ದಂಡ ಯಾತ್ರೆಯನ್ನು ಇಲ್ಲಿಗೇ ನಿಲ್ಲಿಸಿಬಿಡಿ” ಎಂದು ಬೇಡಿಕೊಂಡರು. ಆದರೆ, ಅನಾನ್ಸೆ ಅವರ ಮಾತಿಗೆ ಕಿವಿಗೊಡಲಿಲ್ಲ. “”ಜಗತ್ತು ನನ್ನ ಕೈವಶವಾಗುವವರೆಗೂ ಯಾರ ಮಾತಿಗೂ ಸೊಪ್ಪು ಹಾಕುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ.
Related Articles
Advertisement
ತನಗೆ ರಾಣಿಯಾಗಲು ಯೋಗ್ಯಳಾದ ಯುವತಿಯನ್ನು ಹುಡುಕಿ ದೇವರೇ ಕಳುಹಿಸಿರಬೇಕೆಂದು ಅನಾನ್ಸೆ ಭಾವಿಸಿದ. ಅವಳನ್ನು ಮಾತನಾಡಿಸಲು ಪ್ರಯತ್ನಿಸಿದ. ಆದರೂ ಆಕೆ ದುಃಖ ನಿಲ್ಲಿಸಲಿಲ್ಲ. ತಾನು ಯಾರೆಂಬುದನ್ನು ಹೇಳಲಿಲ್ಲ. ಇಂತಹ ಸುಂದರಿ ತನ್ನ ರಾಣಿಯಾಗಲೇಬೇಕು, ಇವಳನ್ನು ಹೀಗೆಯೇ ಬಿಟ್ಟುಹೋಗಬಾರದು ಎಂದು ನಿರ್ಧರಿಸಿದ ಅನಾನ್ಸೆ. ಯುವತಿಯ ಕೈಹಿಡಿದು ಅರಮನೆಗೆ ಕರೆತಂದ. ಅವಳೆದುರು ಆಕರ್ಷಕವಾದ ಚಿನ್ನಾಭರಣಗಳನ್ನು ತಂದಿರಿಸಿದ. ರೇಷ್ಮೆಯ ವಸ್ತ್ರಗಳನ್ನು ತೋರಿಸಿ ಬೇಕಾದುದನ್ನು ಆರಿಸಿಕೊಳ್ಳಲು ಹೇಳಿದ. ಏನು ಮಾಡಿದರೂ ಯುವತಿ ಅವುಗಳನ್ನು ತಲೆಯೆತ್ತಿ ನೋಡಲಿಲ್ಲ. ಅಳುವುದನ್ನು ನಿಲಿಸಲಿಲ್ಲ.
ಆದರೂ ಅನಾನ್ಸೆ ತನ್ನ ರಾಣಿಯಾದರೆ ಅವಳು ಸಂತೋಷಪಟ್ಟು ದುಃಖವನ್ನು ನಿಲ್ಲಿಸಬಹುದು ಎಂದು ಭಾವಿಸಿ ಮಂತ್ರಿಗಳನ್ನು ಕರೆದ. ಮದುವೆಗೆ ಸಿದ್ಧತೆ ಮಾಡಲು ಹೇಳಿದ. ಆಗ ದೈವಜ್ಞರು ತಡೆದರು. “”ದೊರೆಯೇ, ಅಳುತ್ತಲೇ ಇರುವ ಯುವತಿಯನ್ನು ಮದುವೆಯಾಗುವುದರಿಂದ ಶ್ರೇಯಸ್ಸು ಸಿಗುವುದಿಲ್ಲ. ಇಡೀ ರಾಜ್ಯದಲ್ಲಿ ಡಂಗುರ ಸಾರಿಸಿ. ಅವಳು ದುಃಖ ತ್ಯಜಿಸಿ ನಗುವ ಹಾಗೆ ಮಾಡಿದವರಿಗೆ ಕೇಳಿದ ಬಹುಮಾನ ಕೊಡುವುದಾಗಿ ತಿಳಿಸಿ. ಅನಂತರ ಮದುವೆಯಾಗಿ” ಎಂದು ಸಲಹೆ ನೀಡಿದರು. ಅನಾನ್ಸೆಗೆ ಅವರ ಸಲಹೆ ಸರಿಯೆನಿಸಿತು. ಮಂತ್ರಿಗಳೊಂದಿಗೆ ಹಾಗೆಯೇ ಡಂಗುರ ಸಾರಲು ಆಜ್ಞಾಪಿಸಿದ.
ಡಂಗುರ ಕೇಳಿ ದೇಶದ ಮೂಲೆಮೂಲೆಯಿಂದಲೂ ಜನ ಸಾಲಾಗಿ ಬಂದರು. ಯುವತಿಯ ಮುಂದೆ ನಗು ತರಿಸುವ ಅಭಿನಯ ಮಾಡಿದರು, ಮಾತುಗಳನ್ನು ಹೇಳಿದರು. ತಮಗೆ ತಿಳಿದಿರುವ ಎಲ್ಲ ವಿಧದ ಕಸರತ್ತುಗಳನ್ನು ನಡೆಸಿದರು. ಆದರೆ, ಅವರ ಪ್ರಯತ್ನಗಳು ವಿಫಲವಾದವು. ಯುವತಿ ಅವರ ಕಡೆಗೆ ತಲೆಯೆತ್ತಿ ನೋಡಲಿಲ್ಲ. ದುಃಖ ನಿಲ್ಲಿಸಲಿಲ್ಲ. ದಿನ ಕಳೆದ ಹಾಗೆ ಅವಳನ್ನು ನಗಿಸಲೆಂದು ಬರುವವರ ಸಂಖ್ಯೆಯೂ ವಿರಳವಾಯಿತು. ಏನು ಮಾಡಿದರೂ ಆಕೆ ನಗುವುದಿಲ್ಲ ಎಂಬ ಸುದ್ದಿ ಹರಡಿದಾಗ ಅದಕ್ಕಾಗಿ ಮುಂದೆ ಬರಲು ಎಲ್ಲರೂ ಹಿಂದೇಟು ಹಾಕಿದರು.
ಇದರಿಂದ ಅನಾನ್ಸೆಗೆ ದುಃಖವಾಯಿತು. ಹೇಗಾದರೂ ಅವಳೇ ತನ್ನ ರಾಣಿಯಾಗಬೇಕು ಎಂಬ ಹಟದಲ್ಲಿ ಅವನು ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಾದ. ಮತ್ತೆ ದೇಶದಲ್ಲಿ ಡಂಗುರ ಹೊಡೆಸಿದ. ಇದಕ್ಕಾಗಿ ಯಾರೇ ಆಗಲಿ, ಏನು ಕೋರಿಕೆ ಅಪೇಕ್ಷಿಸಿದರೂ ಕೊಡುವುದಕ್ಕೆ ಮುಂದಾದ. ಇದನ್ನು ಕೇಳಿ ಒಬ್ಬ ಯುವಕ ಅರಮನೆಗೆ ಬಂದ. “”ದೊರೆಯೇ, ಯುವತಿಯನ್ನು ನಾನು ದುಃಖ ತ್ಯಜಿಸಿ, ಬಿದ್ದು ಬಿದ್ದು ನಗುವ ಹಾಗೆ ಮಾಡುತ್ತೇನೆ. ಹೀಗೆ ಮಾಡಬೇಕಿದ್ದರೆ ನೀವು ಒಂದು ದಿನದ ಮಟ್ಟಿಗೆ ನಿಮ್ಮ ಕಿರೀಟವನ್ನು ನನ್ನ ತಲೆಯ ಮೇಲಿರಿಸಬೇಕು. ಸಿಂಹಾಸನದ ಮೇಲೆ ಕೂಡಿಸಿ ರಾಜನಾಗಿ ಅಭಿಷೇಕ ಮಾಡಬೇಕು. ರಾಜನಾಗಿರುವ ನನ್ನ ಆಜ್ಞೆಗಳನ್ನು ಒಂದು ದಿನ ತಾವು ಕೂಡ ಪಾಲಿಸಬೇಕು. ಒಪ್ಪಿಗೆಯೇ?” ಎಂದು ಕೇಳಿದ.
“”ನೀನು ಅವಳನ್ನು ಖಂಡಿತ ನಗುವಂತೆ ಮಾಡುವೆಯಾದರೆ ನಾನು ಯಾವುದನ್ನೂ ನಿರಾಕರಿಸುವುದಿಲ್ಲ. ಇದರಲ್ಲಿ ವಿಫಲ ನಾದರೆ ನಾನು ಕೊಡುವ ಶಿಕ್ಷೆಯನ್ನು ನೀನು ಅನುಭವಿಸಲು ಸಿದ್ಧನಿರಬೇಕು” ಎಂದು ಹೇಳಿ ಅನಾನ್ಸೆ ಯುವಕನ ತಲೆಯ ಮೇಲೆ ಕಿರೀಟವನ್ನಿರಿಸಿದ. ಸಿಂಹಾಸನದ ಮೇಲೆ ಕೂಡಿಸಿ ರಾಜನನ್ನಾಗಿ ಮಾಡಿದ. ಮರುಕ್ಷಣವೇ ಯುವಕ, “”ನಾನು ರಾಜನಾಗಿ ಆಜ್ಞಾಪಿಸುತ್ತಿದ್ದೇನೆ. ನೀನು ಹರಕು ಬಟ್ಟೆಗಳನ್ನು ಧರಿಸಿ, ಕೈಯಲ್ಲಿ ಒಡಕು ತಟ್ಟೆ ಹಿಡಿದುಕೊಂಡು ಬಂದು ಅರಮನೆಯ ಮುಂದೆ ನಿಂತು ಭಿಕ್ಷೆ ಹಾಕುವಂತೆ ಕೂಗಿ ಕರೆ ಯಬೇಕು. ಮರುಕ್ಷಣವೇ ಯುವತಿಯು ದುಃಖವನ್ನು ತ್ಯಜಿಸಿ ನಗುವುದನ್ನು ನೀನೇ ನೋಡುವೆಯಂತೆ” ಎಂದು ಹೇಳಿದ.
ಅನಾನ್ಸೆ ಅದೇ ರೀತಿ ಭಿಕ್ಷುಕನಾಗಿ ಬಂದು ಅರಮನೆಯ ಬಳಿ ನಿಂತಿರುವುದನ್ನು ಮಹಡಿಯ ಮೇಲೆ ನಿಂತು ನೋಡಿದ ಯುವತಿ ಬಿದ್ದು ಬಿದ್ದು ನಗುವುದಕ್ಕೆ ಆರಂಭಿಸಿದಳು. ಅವಳು ನಗುತ್ತಿರುವುದನ್ನು ಅನಾನ್ಸೆ ನೋಡಿದ. ಕೈಯಲ್ಲಿದ್ದ ತಟ್ಟೆಯನ್ನು ಕೆಳಗೆ ಎಸೆದು ಸಂತೋಷದಿಂದ ಕುಣಿದಾಡಿದ. “”ನನ್ನ ಮನಸ್ಸು ಗೆದ್ದ ಯುವತಿ ನಗುತ್ತಿದ್ದಾಳೆ! ಮಂತ್ರಿಗಳೇ ಬನ್ನಿ, ಮದುವೆಗೆ ತಯಾರಿ ನಡೆಸಿ” ಎಂದು ಕೂಗಿದ.
ಆಗ ರಾಜನಾಗಿದ್ದ ಯುವಕ ಅನಾನ್ಸೆಯ ಬಳಿಗೆ ಬಂದ. “”ಅವಸರ ಮಾಡಬೇಡ. ಯುವತಿ ನಗುತ್ತಿರುವುದು ನಿನ್ನನ್ನು ಮದುವೆಯಾಗುವುದಕ್ಕಾಗಿ ಅಲ್ಲ, ನಿನಗೆ ಬಂದ ದುರವಸ್ಥೆಗಾಗಿ ನಗುತ್ತಿದ್ದಾಳೆ. ಅವಳು ಒಂದು ದೇಶದ ರಾಜಕುಮಾರಿ. ನಾನು ಒಂದು ದೇಶದ ರಾಜಕುಮಾರ. ನಿನ್ನ ಸಾಮ್ರಾಜ್ಯ ವಿಸ್ತರಣೆಯ ದಾಹದ ಫಲವಾಗಿ ನಮ್ಮ ಬಂಧುಗಳೆಲ್ಲರೂ ಹರಕು ಬಟ್ಟೆ ತೊಟ್ಟು ಭಿಕ್ಷೆ ಬೇಡುತ್ತಿದ್ದಾರೆ. ನಿನಗೆ ಇಂತಹ ಗತಿ ಬರುವವರೆಗೂ ಅಳು ನಿಲ್ಲಿಸುವುದಿಲ್ಲ ಎಂದು ಶಪಥ ಮಾಡಿದ್ದ ರಾಜಕುಮಾರಿಯ ಬಯಕೆ ಈಗ ನೆರವೇರಿದೆ. ನೀನು ಇದೊಂದು ದಿನದ ಮಟ್ಟಿಗೆ ರಾಜನಾಗಿ ನನಗೆ ಅಧಿಕಾರ ನೀಡಿರುವೆ. ನಾನು ಆಜ್ಞಾಪಿಸಿದರೆ ನಿನ್ನ ತಲೆಯನ್ನು ಉರುಳಿಸಬಹುದು. ನಿನಗೆ ಬದುಕುವ ಆಶೆಯಿದ್ದರೆ ಮುಂದೆ ಯಾವ ರಾಜ್ಯವನ್ನೂ ಆಕ್ರಮಣ ಮಾಡುವುದಿಲ್ಲ ಎಂದು ಒಪ್ಪಿಕೋ. ನೀನು ಮದುವೆಯಾಗಲು ಬಯಸಿದ ಇದೇ ರೂಪವತಿಯೊಂದಿಗೆ ನನಗೆ ಮೊದಲೇ ಮದುವೆ ನಿಶ್ಚಿತಾರ್ಥವಾಗಿದೆ. ನಮ್ಮ ಮದುವೆಯನ್ನು ನೀನೇ ನೆರವೇರಿಸಿ, ನಿನ್ನ ವಶದಲ್ಲಿರುವ ಎಲ್ಲ ರಾಜ್ಯಗಳನ್ನೂ ಮೊದಲು ರಾಜರಾಗಿದ್ದವರಿಗೇ ಒಪ್ಪಿಸಿಬಿಡು” ಎಂದು ಹೇಳಿದ.
“”ನನಗೆ ಬುದ್ಧಿ ಬಂತು. ಜೀವದ ಬೆಲೆ ಏನೆಂಬುದು ಅರ್ಥ ವಾಯಿತು. ನನ್ನಿಂದಾಗಿ ಅನ್ಯಾಯಕ್ಕೊಳಗಾದ ಎಲ್ಲ ರಾಜರಿಗೂ ಮತ್ತೆ ಅವರ ರಾಜ್ಯವನ್ನು ಒಪ್ಪಿಸುತ್ತೇನೆ. ನ್ಯಾಯ, ನೀತಿಗಳಿಂದ ನನ್ನ ರಾಜ್ಯವನ್ನು ಪರಿಪಾಲನೆ ಮಾಡುತ್ತೇನೆ” ಎಂದು ಅನಾನ್ಸೆ ಒಪ್ಪಿದ. ಹಾಗೆಯೇಬದುಕಿದ. ಪ. ರಾಮಕೃಷ್ಣ ಶಾಸ್ತ್ರಿ