Advertisement
ಈ ಸಹೋದರರನ್ನು ಪರೀಕ್ಷೆ ಮಾಡಬೇಕೆಂದು ಒಬ್ಬ ದೇವದೂತನಿಗೆ ಮನಸ್ಸಾಯಿತು. ಅವನು ಬಡ ಸಂನ್ಯಾಸಿಯ ವೇಷದಲ್ಲಿ ಭಿಕ್ಷೆ ಬೇಡಿಕೊಂಡು ಭೂಮಿಗೆ ಬಂದ. ಪೇರಳೆ ಮರದ ಕಾವಲು ಕಾಯುತ್ತಿದ್ದ ದೊಡ್ಡವನ ಬಳಿಗೆ ಹೋಗಿ, “”ತುಂಬ ದಿನಗಳಿಂದ ಆಹಾರ ಕಂಡಿಲ್ಲ. ಏನಾದರೂ ಕೊಡುತ್ತೀಯಾ?” ಎಂದು ಕೇಳಿದ. ದೊಡ್ಡವನು ಅವನ ಬಗೆಗೆ ಮರುಕಪಟ್ಟು ತನ್ನ ಪಾಲಿನ ಬಂಗಾರದ ಹಣ್ಣನ್ನು ಅವನಿಗೆ ಕೊಟ್ಟು ಅದೊಂದು ದಿನ ಉಪವಾಸ ಆಚರಿಸಿದ. ಮರುದಿನ ದೇವದೂತ ಮಧ್ಯಮನ ಬಳಿಗೆ ಹೋಗಿ ಹಾಗೆಯೇ ಬೇಡಿಕೊಂಡಾಗ ಅವನೂ ತನ್ನ ಪಾಲಿನ ಹಣ್ಣನ್ನು ಉದಾರವಾಗಿ ನೀಡಿದ. ಮರುದಿನ ಕಿರಿಯ ಕೂಡ ದೇವದೂತನಿಗೆ ತನಗೆ ಸಿಗಬೇಕಾದ ಬಂಗಾರದ ಹಣ್ಣನ್ನು ಕೊಟ್ಟುಬಿಟ್ಟ.
Related Articles
Advertisement
ದೇವದೂತನು ಕಿರಿಯನ ಬಳಿ ಯಾವ ಕೋರಿಕೆ ನೆರವೇರಿಸಬೇಕು ಎಂದು ಕೇಳಿದಾಗ ಅವನು, “”ಜಗತ್ತಿನಲ್ಲೇ ಸುಂದರಿಯಾದ, ಬುದ್ಧಿವಂತೆಯಾದ, ನನ್ನನ್ನು ಪ್ರೀತಿಸುವ ಹುಡುಗಿ ನನಗೆ ಹೆಂಡತಿಯಾಗಬೇಕು” ಎಂದು ಕೋರಿದ. ಅದರಿಂದ ದೇವದೂತನ ಮುಖದಲ್ಲಿ ಚಿಂತೆ ಕಾಣಿಸಿತು. “”ಅಂತಹ ಹುಡುಗಿ ಜಗತ್ತಿನಲ್ಲಿ ಒಬ್ಬಳು ಮಾತ್ರ ಇದ್ದಾಳೆ. ಅವಳು ಒಬ್ಬ ರಾಜನ ಕುಮಾರಿ. ಅವಳನ್ನು ವಿವಾಹ ಮಾಡಿಕೊಡಬೇಕೆಂದು ಕೇಳಲು ಇಬ್ಬರು ಶೂರ ರಾಜಕುಮಾರರು ಅಲ್ಲಿಗೆ ಬಂದು ಒತ್ತಾಯಿಸುತ್ತಿದ್ದಾರೆ. ಆದಕಾರಣ ನಾವು ಈಗಲೇ ಅಲ್ಲಿಗೆ ಹೋಗಬೇಕು” ಎಂದು ಹೇಳಿ ಸಣ್ಣವನ ಜೊತೆಗೆ ರಾಜನ ಬಳಿಗೆ ಹೋದ. ಯೋಗ್ಯನಾದ ಸಣ್ಣವನಿಗೆ ಕುಮಾರಿಯನ್ನು ಕೊಟ್ಟು ಮದುವೆ ಮಾಡುವಂತೆ ಹೇಳಿದ.
ರಾಜನು ಅಸಹಾಯನಾಗಿ, “”ನನ್ನ ಕುಮಾರಿಯನ್ನು ಮದುವೆಯಾಗಲು ಬಯಸಿ ಶೂರರಾದ, ಧೀರರಾದ ಇಬ್ಬರು ರಾಜಕುಮಾರರು ಬಂದಿರುವಾಗ ನಾನು ಒಬ್ಬ ಬಡ ಯುವಕನಿಗೆ ಅವಳನ್ನು ಮದುವೆ ಮಾಡಿಕೊಟ್ಟರೆ ಅವರು ಕೋಪಗೊಂಡು ನನ್ನನ್ನು ಕೊಂದು ಹಾಕಬಹುದು. ಆದ್ದರಿಂದ ನೀವು ಏನಾದರೂ ಒಂದು ಪರೀಕ್ಷೆ ಮಾಡಿ ಅವರನ್ನು ಸೋಲಿಸಿದರೆ ನಿಮ್ಮ ಅಪೇಕ್ಷೆಯಂತೆಯೇ ನಡೆದುಕೊಳ್ಳಲು ಸಾಧ್ಯವಾಗುತ್ತದೆ” ಎಂದು ಹೇಳಿದ. ದೇವದೂತನು ರಾಜಕುಮಾರರನ್ನು ಬಳಿಗೆ ಕರೆದ. “”ನೋಡಿ, ನಿಮ್ಮ ಶೌರ್ಯವನ್ನು ಪರೀಕ್ಷೆ ಮಾಡಿ ರಕ್ತ ಹರಿಸಲು ನನಗಿಷ್ಟವಿಲ್ಲ. ರಾಜಕುಮಾರಿಯ ಕೈ ಹಿಡಿಯಲು ಯಾರು ಅರ್ಹರೆಂದು ತಿಳಿಯಲು ಒಂದು ಚಿಕ್ಕ ಪರೀಕ್ಷೆ ಮಾಡುತ್ತೇನೆ. ಮೂವರಿಗೂ ಒಂದೊಂದು ದ್ರಾಕ್ಷೆಯ ಬಳ್ಳಿ ಕೊಡುತ್ತೇನೆ. ಅದನ್ನು ಪ್ರತ್ಯೇಕವಾಗಿ ನೀವು ನೆಡಬೇಕು. ರಾಜಕುಮಾರಿಯ ಮೇಲೆ ನಿಜವಾಗಿಯೂ ಯಾರಿಗೆ ಪ್ರೀತಿ ಇದೆಯೋ ಅವರು ನೆಟ್ಟ ಬಳ್ಳಿ ನಾಳೆ ಸೂರ್ಯ ಉದಯಿಸುವಾಗ ಚಪ್ಪರ ತುಂಬ ಹರಡಿ ಗೊಂಚಲು ಗೊಂಚಲು ಹಣ್ಣುಗಳನ್ನು ಬಿಟ್ಟಿರುತ್ತದೆ. ಆಗ ಉಳಿದ ಇಬ್ಬರು ಅದನ್ನು ನೆಟ್ಟವನಿಗೆ ಅವಳ ಮದುವೆಯಾಗಲು ಅಡ್ಡಿ ಮಾಡಬಾರದು” ಎಂದು ಹೇಳಿದ.
ರಾಜಕುಮಾರರು ದೇವದೂತನ ಮಾತುಗಳಿಗೆ ಸಮ್ಮತಿ ಸೂಚಿಸಿದರು. ದೇವದೂತ ಅವರಿಗೆ ಒಂದೊಂದು ದ್ರಾಕ್ಷೆ ಬಳ್ಳಿ ನೀಡಿ ನೆಡಲು ತಿಳಿಸಿದ. ಸಣ್ಣವನಿಗೂ ಒಂದು ಬಳ್ಳಿ ನೀಡಿದ. ಮರುದಿನ ಬೆಳಕು ಹರಿದಾಗ ರಾಜಕುಮಾರರು ನೆಟ್ಟ ಬಳ್ಳಿಗಳು ಒಣಗಿ ಹೋಗಿದ್ದವು. ಸಣ್ಣವನ ಬಳ್ಳಿಯಲ್ಲಿ ದ್ರಾಕ್ಷೆ ಗೊಂಚಲು ತೂಗಾಡುತ್ತಿತ್ತು. ರಾಜಕುಮಾರರು ತಮಗೆ ಅವಳ ಕೈ ಹಿಡಿಯುವ ಯೋಗ್ಯತೆ ಇಲ್ಲವೆಂದು ಒಪ್ಪಿಕೊಂಡು ಹೊರಟುಹೋದರು.
ರಾಜ ತನ್ನ ಕುಮಾರಿಯನ್ನು ಸಣ್ಣವನಿಗೆ ಮದುವೆ ಮಾಡಿಕೊಟ್ಟ. ಆದರೆ ಬಡ ಯುವಕನೊಬ್ಬ ಅಳಿಯನಾಗಿರುವುದು ಅವನಿಗೆ ಇಷ್ಟವಾಗಲಿಲ್ಲ. ಅದು ಗೌರವಕ್ಕೆ ಕುಂದು ಎಂದು ಭಾವಿಸಿದ. ಒಂದು ದಿನ ರಾತ್ರೆ ತನ್ನ ಮಗಳಿಗೂ ಅಳಿಯನಿಗೂ ಎಚ್ಚರ ತಪ್ಪುವ ಔಷಧಿ ಯನ್ನು ಊಟದಲ್ಲಿ ಬೆರೆಸಿ ಬಡಿಸಲು ಅಡುಗೆಯವರಿಗೆ ಹೇಳಿದ. ಮೈಮರೆತು ಮಲಗಿದ್ದ ಅವರಿಬ್ಬರನ್ನೂ ರಾಜನ ಆಜ್ಞೆಯಂತೆ ಸೇವಕರು ಹೊತ್ತುಕೊಂಡು ಹೋಗಿ ಗೊಂಡಾರಣ್ಯದಲ್ಲಿ ಬಿಟ್ಟುಬಂದರು. ಎಚ್ಚರಗೊಂಡ ಅವರಿಗೆ ಎಲ್ಲಿಗೂ ಹೋಗಲು ದಾರಿ ಕಾಣಿಸಲಿಲ್ಲ. ಸಣ್ಣವನು ಮರದ ಕೊಂಬೆ ಮತ್ತು ಎಲೆಗಳನ್ನು ಉಪಯೋಗಿಸಿ ಒಂದು ಗುಡಿಸಲು ಕಟ್ಟಿದ. ರಾಜಕುಮಾರಿಯು ಗಂಡನನ್ನು ದೂಷಿಸದೆ ಕಾಡಿನಲ್ಲಿ ಸಿಗುವ ಕಂದಮೂಲಗಳನ್ನು ಆರಿಸಿ ತಂದು ಅವನೊಂದಿಗೆ ತಿನ್ನುವುದನ್ನು ಕಲಿತುಕೊಂಡಳು.
ಹೀಗಿರುವಾಗ ದೇವದೂತನಿಗೆ ಮೂವರೂ ಸಹೋದರರನ್ನು ಪರೀಕ್ಷಿಸುವ ಮನಸ್ಸಾಯಿತು. ಒಬ್ಬ ಭಿಕ್ಷುಕನ ವೇಷ ಧರಿಸಿ ದೊಡ್ಡವನ ಮನೆಗೆ ಬಂದು ಅರ್ಧ ಲೋಟ ದ್ರಾಕ್ಷಾರಸ ಕೊಡುವಂತೆ ಕೇಳಿದ. ದೊಡ್ಡವನು ಕಣ್ಣು ಕೆಂಪಗೆ ಮಾಡಿ, “”ಅರ್ಧ ಲೋಟ ದ್ರಾಕ್ಷಾರಸದ ಬೆಲೆ ಎಷ್ಟು ಚಿನ್ನದ ನಾಣ್ಯಗಳಾಗುತ್ತದೆಂದು ನಿನಗೆ ಗೊತ್ತಿದೆಯೆ? ಬೇಡಿ ತಿನ್ನುವ ಮನುಷ್ಯನಿಗೆ ದ್ರಾûಾರಸವೂ ಬೇಕೆ?” ಎಂದು ಕೇಳಿ ಅವನ ಕೊರಳಿಗೆ ಕೈಹಾಕಿ ಹೊರಗೆ ದಬ್ಬಿದ. ದೇವದೂತ ಬೇರೇನೂ ಹೇಳಲಿಲ್ಲ. ದ್ರಾಕ್ಷಾರಸ ತುಂಬಿದ ನದಿಯ ಬಳಿಗೆ ಹೋದ. ತನ್ನ ಮಂತ್ರದಂಡವನ್ನು ತೆಗೆದು ಮುಟ್ಟಿಸಿದ. ಅದರಲ್ಲಿ ಮೊದಲಿನಂತೆ ಬರೇ ನೀರು ತುಂಬಿಕೊಂಡಿತು. ಅವನು ತಿರುಗಿ ನೋಡದೆ ಹೊರಟುಹೋದ.
ಮಧ್ಯಮನ ಬಳಿಗೆ ಬಡರೈತನ ವೇಷದಲ್ಲಿ ಬಂದು ದೇವದೂತ ಮಗಳ ಮದುವೆಗಾಗಿ ಒಂದು ಕುರಿಯನ್ನು ಕೊಡುವಂತೆ ಯಾಚಿಸಿದ. ಮಧ್ಯಮನು ಕೊಡಲಿಲ್ಲ. “”ಒಂದು ಕುರಿ ಕಡಮೆಯಾದರೂ ಹಣದ ಖಜಾನೆಯಲ್ಲಿ ಖಾಲಿ ಜಾಗ ಉಳಿದುಕೊಳ್ಳುತ್ತದೆ, ಹೋಗು ಹೋಗು ಏನೂ ಕೊಡಲಾರೆ” ಎಂದು ನಿರ್ದಯೆಯಿಂದ ಹೇಳಿದ. ದೇವದೂತ ಮೌನವಾಗಿ ಹೋಗಿ ಕುರಿಗಳು ಸಿಗುವ ಹೊಲವನ್ನು ಮಂತ್ರದಂಡದಿಂದ ಸ್ಪರ್ಶಿಸಿದ. ಕುರಿಗಳ ಬದಲು ಪಾರಿವಾಳಗಳೇ ಅಲ್ಲಿ ತುಂಬಿಕೊಂಡವು.
ದೇವದೂತ ಸಣ್ಣವನ ಗುಡಿಸಲಿಗೆ ವೃದ್ಧನ ವೇಷ ಧರಿಸಿ ಬಂದು ಊಟ ಬೇಡಿದ. ಸಣ್ಣವನು ಸಂಕೋಚದಿಂದ ಒಂದು ರೊಟ್ಟಿಯನ್ನು ತಂದು ಅವನ ಮುಂದಿರಿಸಿದ. “”ಕಾಡಿನಲ್ಲಿ ಕಾಳುಗಳಿಲ್ಲ. ಮರದ ಹಿಟ್ಟಿನಿಂದ ನನ್ನ ಹೆಂಡತಿ ಒಂದು ರೊಟ್ಟಿ ತಯಾರಿಸಿದ್ದಾಳೆ. ತಾವು ಇಷ್ಟವಾದರೆ ಸ್ವೀಕರಿಸಿ. ಇದೊಂದು ದಿನ ನಾವು ಉಪವಾಸ ಇರುತ್ತೇವೆ” ಎಂದು ಹೇಳಿದ. ದೇವದೂತನ ಮುಖ ಸಂತೋಷದಿಂದ ಮಿನುಗಿತು. “”ಒಳ್ಳೆಯ ಗುಣಕ್ಕೆ ದೇವರು ಸದಾ ಒಳ್ಳೆಯದೇ ಮಾಡುತ್ತಾನೆ” ಎಂದು ಹೇಳಿ ಮಂತ್ರದಂಡದಿಂದ ಗುಡಿಸಲನ್ನು ಮುಟ್ಟಿದ. ಅದು ಅರಮನೆಯಾಯಿತು. ಕಾಡು ಮಾಯವಾಗಿ ದೊಡ್ಡ ರಾಜ್ಯವಾಯಿತು. ಸಣ್ಣವ ಸುಖವಾಗಿದ್ದ.
ಪ. ರಾಮಕೃಷ್ಣ ಶಾಸ್ತ್ರಿ