Advertisement

ಟರ್ಕಿ ದೇಶದ ಕತೆ: ಹೆಬ್ಬೆರಳಿನಂಥ ಹುಡುಗ

08:15 AM Feb 25, 2018 | |

ಒಂದು ಹಳ್ಳಿಯಲ್ಲಿ ಒಬ್ಬ ಜವಳಿ ವ್ಯಾಪಾರಿಯಿದ್ದ. ಅವನು ಊರೂರಿಗೆ ಜವಳಿಯ ಗಂಟು ಹೊತ್ತು ವ್ಯಾಪಾರ ಮಾಡಿ ಕೈತುಂಬ ಗಳಿಸುತ್ತಿದ್ದ. ಅವನಿಗೆ ಬಹುಕಾಲ ಮಕ್ಕಳಾಗಿರಲಿಲ್ಲ. ಹಲವು ಹರಕೆಗಳನ್ನು ಹೊತ್ತುಕೊಂಡ ಬಳಿಕ ಒಬ್ಬ ಮಗ ಜನಿಸಿದ. ಮಗುವನ್ನು ನೋಡಿ ವ್ಯಾಪಾರಿಗೂ ಅವನ ಹೆಂಡತಿಗೂ ತುಂಬ ದುಃಖವಾಯಿತು. ಮಗು ಕೇವಲ ಹೆಬ್ಬೆರಳಿನಷ್ಟೇ ದೊಡ್ಡದಿತ್ತು. ವ್ಯಾಪಾರಿ ಮಗುವಿಗೆ ಅಲಿ ಎಂದು ಹೆಸರಿಟ್ಟ. ಅವನು ಎಲ್ಲರಂತೆ ಆಗಲಿ ಎಂದು ಪೌಷ್ಟಿಕ ಆಹಾರಗಳನ್ನು ನೀಡಿದ. ಹಲವು ಔಷಧೋಪಚಾರಗಳನ್ನು ಮಾಡಿದ. ಆದರೂ ಅಲಿಗೆ ವಯಸ್ಸು ಇಪ್ಪತ್ತಾದರೂ ಅವನು ಬೆರಳಿಗಿಂತ ದೊಡ್ಡದಾಗಿ ಬೆಳೆಯಲಿಲ್ಲ. ಇದನ್ನು ಕಂಡು ವ್ಯಾಪಾರಿಯು ಹೆಂಡತಿಯೊಂದಿಗೆ, “”ಇಂಥ ಮಗನನ್ನು ನಾವೇ ಜೀವನವಿಡೀ ಸಲಹಬೇಕಲ್ಲದೆ ಅವನು ಎಂದಿಗೂ ನಮ್ಮ ಬದುಕಿಗೆ ಆಧಾರವಾಗುವುದಿಲ್ಲ. ಅವನ ಗಾತ್ರವನ್ನು ನೋಡಿ ಎಲ್ಲರೂ ಗೇಲಿ ಮಾಡಿ ನಗುತ್ತಾರೆ. ಆದ್ದರಿಂದ ಈ ಸಲ ಜವಳಿ ವ್ಯಾಪಾರಕ್ಕೆ ಪರವೂರಿಗೆ ಹೋಗುವಾಗ ಅಲಿಯನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತೇನೆ. ಎಲ್ಲಾದರೂ ಅವನನ್ನು ಬಿಟ್ಟು ಬರುತ್ತೇನೆ, ಆಗದೆ?” ಎಂದು ಗುಟ್ಟಾಗಿ ಕೇಳಿದ.

Advertisement

    ಹೆಂಡತಿಯೂ ಗಂಡನ ಮಾತಿಗೆ ಸಮ್ಮತಿಸಿದಳು. “”ಅವನು ತನ್ನ ಸ್ವಂತ ಕೆಲಸಗಳನ್ನು ಯಾವತ್ತಿಗೂ ಮಾಡಿಕೊಳ್ಳಲಾರ. ನಾವು ಸತ್ತಮೇಲೆ ಅವನಿಗೆ ಯಾರು ದಿಕ್ಕಾಗುತ್ತಾರೆ? ಆದ ಕಾರಣ ನೀನು ಅವನನ್ನು ಒಳ್ಳೆಯ ಸ್ಥಳ ನೋಡಿ ಅಲ್ಲಿ ಬಿಟ್ಟು ಬಾ” ಎಂದು ಹೇಳಿದಳು. ಮರುದಿನ ವ್ಯಾಪಾರಿ ಜವಳಿ ಮಾರಲು ಹೊರಟಾಗ ಮಗನನ್ನು ಕರೆದ. “”ಮನೆಯಲ್ಲಿ ಒಬ್ಬನೇ ಕುಳಿತು ಬೇಸರವಾಗುವುದಿಲ್ಲವೆ? ಬಾ, ನನ್ನ ಕಿಸೆಯೊಳಗೆ ಕುಳಿತುಕೋ. ಬೇರೆ ಬೇರೆ ಊರುಗಳಲ್ಲಿರುವ ವಿಶೇಷಗಳನ್ನು ನೋಡುವೆಯಂತೆ” ಎಂದು ಕರೆದ. ಅಲಿ ಸಂತೋಷದಿಂದ ತಂದೆಯ ಕಿಸೆಯೊಳಗೆ ಸೇರಿಕೊಂಡ. ವ್ಯಾಪಾರಿ ಜವಳಿಯ ಗಂಟು ಹೊತ್ತುಕೊಂಡು ನಡೆಯುತ್ತ ಕತ್ತಲಾಗುವಾಗ ಒಂದು ಊರನ್ನು ಸೇರಿದ.

    ಆ ಊರಿನಲ್ಲಿ ಹಲವು ಮಂದಿ ಯಾತ್ರಿಕರ ಜೊತೆಗೆ ಅಲಿಯ ತಂದೆ ಒಂದು ವಸತಿಗೃಹದಲ್ಲಿ ತಂಗಿದ. ರಾತ್ರೆ ಊಟ ಮುಗಿಸಿ ಮಗನೊಂದಿಗೆ ಮಲಗಿಕೊಂಡ. ಅಲಿಗೆ ನಿದ್ರೆ ಬಂದ ಬಳಿಕ ಅವನನ್ನು ಅಲ್ಲಿಯೇ ಬಿಟ್ಟು ಹೋಗುವುದೆಂದು ಅವನು ಯೋಚಿಸಿದ. ಆದರೆ ಆ ಹೊತ್ತಿಗೆ ಹಲವು ಮಂದಿ ಡಕಾಯಿತರು ವಸತಿಗೃಹಕ್ಕೆ ನುಗ್ಗಿದರು. ಅವರ ಕೈಯಲ್ಲಿ ಆಯುಧಗಳಿದ್ದವು. ಅವರು ಮಲಗಿರುವ ಯಾತ್ರಿಕರನ್ನು ಎಬ್ಬಿಸಿ, “”ನಿಮ್ಮ ಬಳಿ ಹಣ, ಒಡವೆಗಳು ಏನಿದ್ದರೂ ತೆಗೆದು ಕೊಟ್ಟುಬಿಡಿ. ಇಲ್ಲವಾದರೆ ನಿಮ್ಮನ್ನು ಕೊಂದು ಹಾಕುತ್ತೇವೆ” ಎಂದು ಆಯುಧಗಳನ್ನು ಝಳಪಿಸಿದರು.

    ಯಾತ್ರಿಕರೆಲ್ಲ ಭಯಗೊಂಡರು. ತಮ್ಮಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದು ಡಕಾಯಿತರಿಗೆ ಒಪ್ಪಿಸಲು ಮುಂದಾದರು. ಆಗ ವ್ಯಾಪಾರಿಯ ಕಿಸೆಯೊಳಗಿರುವ ಅಲಿ ಗಟ್ಟಿ ದನಿಯಿಂದ, “”ಯಾರೋ ಅದು ಬೆದರಿಕೆ ಒಡ್ಡುತ್ತಿರುವುದು? ನಿಮ್ಮನ್ನು ಅರೆಕ್ಷಣದಲ್ಲಿ ಸುಟ್ಟು ಭಸ್ಮ ಮಾಡುತ್ತೇನೆ” ಎಂದು ಅಬ್ಬರಿಸಿದ. ಡಕಾಯಿತರು ಈ ಎಚ್ಚರಿಕೆ ಎಲ್ಲಿಂದ ಬರುತ್ತಿದೆಯೆಂದು ಅತ್ತಿತ್ತ ನೋಡಿದರು. ಆದರೆ ಯಾರೂ ಕಾಣಿಸಲಿಲ್ಲ. ಅದೃಶ್ಯವಾದ ಯಾವುದೋ ಶಕ್ತಿ ತಮ್ಮನ್ನು ಕೊಲ್ಲಬಹುದೆಂದು ಹೆದರಿ ಅವರು ಶಸ್ತ್ರಾಸ್ತ್ರಗಳನ್ನು ಅಲ್ಲಿಯೇ ಎಸೆದು ಓಡಿಹೋದರು. ತಮ್ಮ ಹಣವೂ ಜೀವವೂ ಉಳಿಯಿತೆಂದು ಯಾತ್ರಿಕರು ಸಂತೋಷಪಟ್ಟರು. ಆದರೆ, “”ಡಕಾಯಿತರನ್ನು ಓಡಿಸುವ ದನಿ ನಿನ್ನ ಕಡೆಯಿಂದ ಬಂದಿತಲ್ಲವೆ, ಇದು ಹೇಗೆ ಸಾಧ್ಯವಾಯಿತು?” ಎಂದು ಕೇಳಿದರು.

    ವ್ಯಾಪಾರಿ ಕಿಸೆಯಿಂದ ಮಗನನ್ನು ಹೊರಗೆ ತೆಗೆದು ಎಲ್ಲರಿಗೂ ತೋರಿಸಿದ. “”ಇಂದು ನಮ್ಮ ಹಣ ಮತ್ತು ಜೀವ ರಕ್ಷಿಸಿದವನು ಇವನು. ಹುಟ್ಟುವಾಗಲೇ ಹೆಬ್ಬೆರಳಿನ ಗಾತ್ರವಾಗಿದ್ದು ಈಗಲೂ ಹಾಗೆಯೇ ಇರುವ ನನ್ನ ಮಗ ಅಲಿ” ಎಂದು ಹೇಳಿದ. ಆದರೆ ಯಾರೂ ವ್ಯಾಪಾರಿಯ ಮಾತನ್ನು ನಂಬಲಿಲ್ಲ. “”ಏನಿದು, ಒಬ್ಬ ಯುವಕ ಇಷ್ಟು ಚಿಕ್ಕದಾಗಿರಲು ಸಾಧ್ಯವೆ? ನೀನು ಒಬ್ಬ ಮಾಂತ್ರಿಕನಾಗಿರಬಹುದು. ಮಾಟ, ಮಂತ್ರ ಮಾಡಿ ಇವನನ್ನು ಹೀಗೆ ಮಾಡಿರಬಹುದು. ಬಾ, ನೀನು ಊರನ್ನು ಆಳುವ ರಾಜನ ಸಭೆಗೆ. ಅಲ್ಲಿ ನಿನ್ನ ವಿಚಾರಣೆ ನಡೆದಾಗ ಸತ್ಯ ಏನೆಂಬುದು ಹೊರಬೀಳುತ್ತದೆ” ಎಂದು ಹೇಳಿ ಅವನನ್ನು ಹಗ್ಗದಿಂದ ಕಟ್ಟಿ ಹಾಕಿದರು. “”ಅಣ್ಣ, ನಾನು ಮೋಸಗಾರನಲ್ಲ, ಮಂತ್ರವಾದಿಯಲ್ಲ. ಹುಟ್ಟಿನಿಂದಲೇ ನನ್ನ ಮಗ ಹೀಗೆಯೇ ಇದ್ದಾನೆ” ಎಂದು ವ್ಯಾಪಾರಿ ಎಷ್ಟು ಬೇಡಿಕೊಂಡರೂ ಯಾರಿಗೂ ನಂಬಿಕೆ ಬರಲಿಲ್ಲ. ಬೆಳಗಾದ ಕೂಡಲೇ ಎಲ್ಲರೂ ಜತೆಗೂಡಿ ವ್ಯಾಪಾರಿಯನ್ನು ಅಲಿಯೊಂದಿಗೆ ರಾಜನ ಸನಿಹ ಕರೆದುಕೊಂಡು ಹೋದರು.

Advertisement

    ಯಾತ್ರಿಕರು ರಾಜನ ಬಳಿ ವ್ಯಾಪಾರಿಯ ಮೇಲೆ ದೂರು ಸಲ್ಲಿಸಿದರು. “”ಇವನೊಬ್ಬ ಮಾಟಗಾರನೇ ಇರಬೇಕು ನೋಡಿ, ಒಬ್ಬ ಯುವಕನನ್ನು ಮಂತ್ರ ಹಾಕಿ ಹೆಬ್ಬೆರಳಿನಷ್ಟೇ ದೊಡ್ಡದಾಗಿ ಮಾಡಿದ್ದಾನೆ. ಅವನು ತನ್ನ ಮಗ ಎಂದು ಸುಳ್ಳು ಬೇರೆ ಹೇಳುತ್ತಾನೆ. ಇವನು ಬೇರೆಯವರಿಗೆ ತೊಂದರೆ ಕೊಡುವ ಮೊದಲು ಇವನಿಗೆ ತಕ್ಕ ಶಿಕ್ಷೆ ವಿಧಿಸಬೇಕು” ಎಂದು ಪ್ರಾರ್ಥಿಸಿದರು.

    ರಾಜನು ಅಲಿಯನ್ನು ನೋಡಿದ. ಅವನಿಗೆ ತುಂಬ ಆಶ್ಚರ್ಯವಾಯಿತು. ಅವನಿಗೆ ಒಬ್ಬಳು ಪ್ರೀತಿಯ ಮಗಳಿದ್ದಳು. ಕೆಲವು ಸಮಯದ ಹಿಂದೆ ಅವಳು ಅಕಸ್ಮಾತಾಗಿ ಒಂದು ಉಂಗುರವನ್ನು ನುಂಗಿದ್ದಳು. ಏನು ಉಪಾಯ ಮಾಡಿದರೂ ಅದನ್ನು ಹೊರಗೆ ತೆಗೆಯಲು ಸಾಧ್ಯವಾಗಿರಲಿಲ್ಲ. ಇದೇ ಚಿಂತೆಯಲ್ಲಿ ಅವಳು ಆಹಾರ, ನಿದ್ರೆಗಳಿಲ್ಲದೆ ಸೊರಗಿ ಹೋಗಿದ್ದಳು. ಅವಳಿಗೆ ಅಲಿಯನ್ನು ನೋಡಿದರೆ ಸಂತೋಷವಾಗಬಹುದೆಂದು ಭಾವಿಸಿ ರಾಜನು ಅವಳನ್ನು ಸಭೆಗೆ ಕರೆಸಿಕೊಂಡು ಅಲಿಯನ್ನು ತೋರಿಸಿದ.

    ರಾಜಕುಮಾರಿ ಅಚ್ಚರಿಯಿಂದ ನಗುತ್ತ ಅಲಿಯನ್ನು ತನ್ನ ಅಂಗೈಯ ಮೇಲಿಟ್ಟು ಕಣ್ಣುಗಳ ಬಳಿಗೆ ತಂದಳು. ಆಗ ರಾಜಕುಮಾರಿಯ ಉಸಿರಾಟದಿಂದಾಗಿ ಅಲಿ ಸರಕ್ಕನೆ ಅವಳ ಮೂಗಿನೊಳಗೆ ಸೇರಿಕೊಂಡ. ಅದರಿಂದ ರಾಜಕುಮಾರಿಗೆ ಒಂದರ ಹಿಂದೊಂದರಂತೆ ಸೀನುಗಳು ಬಂದವು. ಆಗ ಅವಳ ಹೊಟ್ಟೆಯೊಳಗೆ ಸೇರಿಕೊಂಡಿದ್ದ ಉಂಗುರ ಮೂಗಿನ ಮೂಲಕ ಪುಸಕ್ಕನೆ ಹೊರಗೆ ಬಂದುಬಿದ್ದಿತು. ಅದರೊಂದಿಗೆ ಅಲಿಯು ಹೊರಗೆ ಬಂದನು. ಮರುಕ್ಷಣವೇ ಆಶ್ಚರ್ಯಕರವಾಗಿ ಅವನು ಎಲ್ಲರ ಹಾಗೆ ದೊಡ್ಡವನಾಗಿ ನಿಂತನು.

    “”ಇದೇನು ಆಶ್ಚರ್ಯ! ಹೆಬ್ಬೆರಳಿನಷ್ಟು ದೊಡ್ಡದಿದ್ದ ನೀನು ರಾಜಕುಮಾರಿಯ ಮೂಗಿನೊಳಗೆ ಹೋಗಿ ಹೊರಗೆ ಬರುವಾಗ ಹೇಗೆ ಇಷ್ಟು ದೊಡ್ಡವನಾಗಿಬಿಟ್ಟೆ?” ಎಂದು ರಾಜನು ಕೇಳಿದ. “”ನಾನು ಕಳೆದ ಜನ್ಮದಲ್ಲಿ ಹುಡುಗಾಟಿಕೆಯಿಂದ ಒಂದು ಕಪ್ಪೆಯನ್ನು ಡಬ್ಬದೊಳಗೆ ತುಂಬಿಸಿ ಹೂಳಿಬಿಟ್ಟಿದ್ದೆ. ಇದಕ್ಕಾಗಿ ದೇವರು ನನಗೆ ಈ ಜನ್ಮದಲ್ಲಿ ಇಂತಹ ಕಷ್ಟ ಅನುಭವಿಸುವಂತೆ ಮಾಡಿದ. ಆದರೆ ನನ್ನಿಂದಾಗಿ ಬೇರೆಯವರಿಗೆ ಉಪಕಾರ ದೊರಕಿದರೆ ಎಲ್ಲರ ಹಾಗೆ ಆಗುವೆನೆಂದು ದೇವರು ಹೇಳಿದ. ರಾಜಕುಮಾರಿಗೂ ಯಾತ್ರಿಕರಿಗೂ ಮಾಡಿದ ಉಪಕಾರ ನನಗೆ ಮರುಜನ್ಮ ನೀಡಿದೆ” ಎಂದು ಅಲಿ ತನ್ನ ಹಿಂದಿನ ಕತೆಯನ್ನು ಹೇಳಿದ. ತನ್ನ ಮಗಳ ಕಷ್ಟವನ್ನು ನೀಗಿದ ಅಲಿಗೆ ರಾಜನು ಅವಳನ್ನು ಕೊಟ್ಟು ಮದುವೆ ಮಾಡಿದ. ಮುಂದೆ ಆ ರಾಜ್ಯದ ರಾಜನೂ ಆದ ಅಲಿ ತಂದೆ, ತಾಯಿಗಳನ್ನು ಅಲ್ಲಿಗೇ ಕರೆಸಿಕೊಂಡು ಸುಖವಾಗಿದ್ದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next