Advertisement

ಯೋಗ್ಯನಾಗುವ ಹಾದಿಯಲ್ಲಿ…ಪಂಚಾಯ್ತಿ ಸದಸ್ಯನ ಕಾಮಿಡಿ ಕಥೆ

07:40 AM Aug 11, 2017 | Team Udayavani |

ಹೊಸ ಮುಖವೇನಲ್ಲ. ಅದಕ್ಕೂ ಮುನ್ನ ಸಾಕಷ್ಟು ಪತ್ರಿಕಾಗೋಷ್ಠಿಗಳಲ್ಲಿ ಮಹೇಶ್‌ರನ್ನು ನೋಡಿದ್ದರು ಮಾಧ್ಯಮದವರು. ಅದರಲ್ಲೂ ಯೋಗರಾಜ್‌ ಭಟ್‌ ಅವರ ಚಿತ್ರಗಳ ಪತ್ರಿಕಾಗೋಷ್ಠಿಗಳಲ್ಲಿ, ಚಿತ್ರೀಕರಣ ಸ್ಪಾಟ್‌ಗಳಲ್ಲಿ ಮಹೇಶ್‌ ಹೆಚ್ಚಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಅದಕ್ಕೆ ಕಾರಣ, ಭಟ್ಟರ ಇತ್ತೀಚಿನ ಚಿತ್ರಗಳಿಗೆ ಮಹೇಶ್‌ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದರು. ಈಗ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ ಮಹೇಶ್‌, “ಅಯೋಗ್ಯ’ ಎಂಬ ಚಿತ್ರದ ಮೂಲಕ. ಚಿತ್ರದ ಮುಹೂರ್ತ ವರಮಹಾಲಕ್ಷ್ಮೀ ಹಬ್ಬದಂದು ನಡೆಯಿತು.

Advertisement

ಪತ್ರಿಕಾಗೋಷ್ಠಿ ನಡೆಯುವಾಗ ದೂರದಲ್ಲಿ ಕೈಕಟ್ಟಿ ನಿಂತಿರುತ್ತಿದ್ದ ಮಹೇಶ್‌, ಈ ಬಾರಿ ವೇದಿಕೆಯ ಮೇಲಿದ್ದರು. ಚಿತ್ರದ ಬಗ್ಗೆ ವಿವರ ನೀಡುವ ಜವಾಬ್ದಾರಿ ಅವರದ್ದಾಗಿತ್ತು. ಹಳೆಯದನ್ನು ನೆನಪಿಸಿಕೊಂಡು, ಹೊಸದರ ಕುರಿತು ಅವರು ಮಾತು ಶುರು ಮಾಡಿದರು. “ಅಯೋಗ್ಯ’ ಸಿನಿಮಾಗೆ ಗ್ರಾಮ ಪಂಚಾಯ್ತಿ ಸದಸ್ಯರೇ ಸ್ಫೂರ್ತಿಯಂತೆ. ಅದೇ ಕಾರಣಕ್ಕೆ “ಅಯೋಗ್ಯ’ ಎಂಬ ಹೆಸರ ಕೆಳಗೆ “ಗ್ರಾಮ ಪಂಚಾಯ್ತಿ ಸದಸ್ಯ’ ಎಂಬ ಅಡಿಬರಹವನ್ನು ಅವರು ಬರೆಸಿದ್ದಾರೆ.

ಇದ್ಯಾಕೋ ವಿವಾದ ಆಗುವಂತೆ ಕಾಣುತ್ತಿದೆಯಲ್ಲಾ ಎಂದು ಪತ್ರಕರ್ತರಿಗೆ ಅನಿಸಿದ್ದುಂಟು. ತಾನು ಯಾರನ್ನೂ ಬಯ್ಯುತ್ತಿಲ್ಲ ಮತ್ತು ವಿವಾದ ಮಾಡಿಕೊಳ್ಳೋಕೂ ಇಷ್ಟ ಇಲ್ಲ ಎನ್ನುತ್ತಾರೆ ಮಹೇಶ್‌. “ಈ ಹೆಸರು ಇಡೋದಕ್ಕೂ ಕಾರಣವಿದೆ. ಅವನನ್ನ ಎಲ್ಲರೂ ಆ ಹಳ್ಳಿಯಲ್ಲಿ ಅಯೋಗ್ಯ ಅಂತಲೇ ಕರೆಯುತ್ತಿರುತ್ತಾರೆ. ಅವನಿಗೆ ತಾನೇಕೆ ಗ್ರಾಮ ಪಂಚಾಯ್ತಿ ಸದಸ್ಯ ಆಗಬಾರದು ಅಂತನಿಸುತ್ತದೆ. ಗ್ರಾಮ ಪಂಚಾಯ್ತಿ ಸದಸ್ಯನಾದ ಮೇಲೆ ಅವನು ಹೇಗೆ ಯೋಗ್ಯನಾಗಿ ಬದಲಾಗುತ್ತಾನೆ ಎನ್ನುವುದು ಕಥೆ. ಗ್ರಾಮ ಪಂಚಾಯ್ತಿ ಸದಸ್ಯರ ಮೇಲೆ ಹಲವು ಜವಾಬ್ದಾರಿಗಳಿರುತ್ತವೆ. ಆದರೆ, ಬಹಳಷ್ಟು ಜನ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ಕಾರಣಕ್ಕೆ ಈಗಲೂ ಹಳ್ಳಿಗಳಲ್ಲಿ ಶೌಚಾಲಯಕ್ಕೆಂದು ಬಯಲಿಗೆ ಹೋಗುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಮಹೇಶ್‌.

“ಅಯೋಗ್ಯ’ ಎಂದು ಕರೆಸಿಕೊಳ್ಳುವುದಕ್ಕೆ ತಮಗೇನೂ ಅಭ್ಯಂತರವಿಲ್ಲ ಎನ್ನುತ್ತಾರೆ ಸತೀಶ್‌ ನೀನಾಸಂ. ಅವರು ಈ ಚಿತ್ರದ ಹೀರೋ ಮತ್ತು “ಅಯೋಗ್ಯ’ನ ಪಾತ್ರವನ್ನು ಅವರೇ ಮಾಡುತ್ತಿದ್ದಾರೆ. “ನನಗೆ ಯಾವ ಬೇಸರವೂ ಇಲ್ಲ. ಏಕೆಂದರೆ, ನಾನೂ ಒಬ್ಬ ಮನುಷ್ಯ. ಒಬ್ಬ ಮನುಷ್ಯನಾಗಿ ಹಲವು ತಪ್ಪುಗಳನ್ನು ನಾನೂ ಮಾಡಿರುತ್ತೇನೆ. ಹಾಗಾಗಿ ನನಗೇನೂ ಸಮಸ್ಯೆಯಿಲ್ಲ ಮತ್ತು ಅಯೋಗ್ಯ ಎನ್ನುವುದನ್ನು ನೆಗೆಟಿವ್‌ ಆಗಿ ನೋಡಬೇಕಿಲ್ಲ. ಪ್ರೀತಿಗೂ, ತಮಾಷೆಗೂ ಅಯೋಗ್ಯ ಅಂತ ಕರೀತಾರೆ. ಹಾಗಾಗಿ ಅದರಲ್ಲೇನೂ ತಪ್ಪಿಲ್ಲ ಅಂತ ಭಾವನೆ. ಮಹೇಶ್‌ ಇಲ್ಲಿ ಒಂದೊಳ್ಳೆಯ ತಂಡವನ್ನ ಕಲೆ ಹಾಕಿದ್ದಾರೆ. ಒಳ್ಳೆಯ ಕಲಾವಿದರು ಮತ್ತು ತಂತ್ರಜ್ಞರು ಈ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ನಾನು ಸಹ ಅವರ ಮೇಲೆ ಮತ್ತು ಕಥೆಯ ಮೇಲೆ ನಂಬಿಕೆ ಇಟ್ಟು ಈ ಚಿತ್ರ ಒಪ್ಪಿದ್ದೀನಿ’ ಎಂದರು.

ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತವಿದೆ. ಪ್ರೀತಂ ಎನ್ನುವವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸುರೇಶ್‌, ಮೋಹನ್‌ ಎನ್ನುವವರು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್‌ ಕೆ.ಆರ್‌. ಪೇಟೆ, ಸರಿತ, ರವಿಶಂಕರ್‌, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ, ಬುಲೆಟ್‌ ಪ್ರಕಾಶ್‌, ಕುರಿ ಪ್ರತಾಪ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next