Advertisement

ಮಹಾಯುದ್ಧ ಮುಗಿದದ್ದು ತಿಳಿಯದೆ, ಕಾಡಿನಲ್ಲಿಯೇ ಅವಿತಿದ್ದ

09:54 AM Apr 05, 2019 | Hari Prasad |

ಹಿರೂ ಒನೋಡ, ಜಪಾನ್‌ ಸೇನೆಯಲ್ಲಿ ಅಧಿಕಾರಿಯಾಗಿದ್ದಾತ. ದೇಶಕ್ಕಾಗಿ ಹೋರಾಡುವುದೆಂದರೆ ಅದರಷ್ಟು ಪರಮೋಚ್ಛ ಸೇವೆ ಬೇರೆ ಯಾವುದೂ ಇಲ್ಲವೆಂದು ನಂಬಿದ್ದವ. ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಆತನನ್ನು ಫಿಲಿಪ್ಪೀನ್ಸ್‌ ಬಳಿ ನಿಯೋಜಿಸಲಾಗಿತ್ತು. ಜಪಾನಿ ಪಡೆಗಳ ಮೇಲೆ ಶತ್ರು ಪಾಳೆಯದವರು ತೀವ್ರತರವಾದ ದಾಳಿ ನಡೆಸಿದಾಗ ಜಪಾನಿ ಸೇನೆ ಅನಿವಾರ್ಯವಾಗಿ ಹಿಮ್ಮೆಟ್ಟಲೇಬೇಕಾಯಿತು. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸೈನಿಕರು ಕಾಡಿಗೆ ನುಗ್ಗಿದರು. ಅವರಲ್ಲಿ ಹಿರೂ ಕೂಡಾ ಇದ್ದರು. ದುರಾದೃಷ್ಟವಶಾತ್‌ ಜಪಾನಿ ಸೈನಿಕರಲ್ಲಿ ಅವರನ್ನು ಹೊರತುಪಡಿಸಿ ಯಾರೊಬ್ಬರೂ ಉಳಿಯಲಿಲ್ಲ. ಗೆರಿಲ್ಲಾ ಯುದ್ಧಕಲೆಯಲ್ಲಿ ಪರಿಣತಿ ಪಡೆದಿದ್ದ ಹಿರೂ, ಕಾಡಿನಲ್ಲಿ ಯಾರ ಕಣ್ಣಿಗೂ ಬೀಳದಂತೆ ಎಚ್ಚರವಹಿಸಿದರು. ಕಾಡಿನಲ್ಲಿ ಸಿಕ್ಕ ಬಾಳೆಹಣ್ಣು, ತೆಂಗಿನಕಾಯಿ ಮುಂತಾದ ಆಹಾರವನ್ನೇ ಸೇವಿಸಿ ತಮ್ಮ ಜೀವ ಉಳಿಸಿಕೊಂಡರು. ಯುದ್ಧ ಕೊನೆಯಾಗಿದ್ದೂ ಅವರಿಗೆ ತಿಳಿಯಲಿಲ್ಲ. ಒಂದು ರೀತಿಯ ಮನೋಬ್ರಾಂತಿಗೆ ಅವರು ಒಳಗಾಗಿದ್ದರು. ಕಾಡಿಗೆ ಕಟ್ಟಿಗೆ ತರಲು ಬಂದ ನಾಗರಿಕರನ್ನೇ ಸೈನಿಕರೆಂದು ತಿಳಿದು ಹಲ್ಲೆ ನಡೆಸಿದ್ದರು. ಈ ರೀತಿಯಾಗಿ ಹಿರೂ ಸುಮಾರು 29 ವರ್ಷಗಳನ್ನು ಶತ್ರುಭಯದಿಂದ ಕಾಡಿನಲ್ಲಿಯೇ ಕಳೆದರು. ಆತನನ್ನು ಮರಳಿ ತಾಯ್ನಾಡಿಗೆ ಕರೆತರಲು ಸರ್ಕಾರ ವಿಶೇಷ ನಿಯೋಗವನ್ನೇ ಅವನಿದ್ದಲ್ಲಿಗೆ ಕಳಿಸಿತು.

Advertisement

ಹಿರೂ ಟೊಕಿಯೋಗೆ ಕಾಲಿಟ್ಟಾಗ ಅವನನ್ನು ಸ್ವಾಗತಿಸಲು ಅಪಾರ ಜನಸ್ತೋಮವೇ ನೆರೆದಿತ್ತು. ದಶಕಗಳ ಹಿಂದೆ ತಾನು ಫಿಲಿಪ್ಪೀನ್ಸ್‌ಗೆ ಹೊರಡುವಾಗ ಇದ್ದ ಜಪಾನ್‌ನ ಪರಿಸ್ಥಿತಿಯೇ ಬೇರೆ. ಎಲ್ಲೆಲ್ಲೂ ಬಾಂಬುಗಳ ಸುರಿಮಳೆ, ಗಲಭೆ, ದೊಂಬಿ, ಅರಾಜಕತೆ. ಅದೇ ಈಗ ಎತ್ತರದ ಗಗನಚುಂಬಿ ಕಟ್ಟಡಗಳು, ವಾಹನಗಳು, ರಸ್ತೆಗಳು ಎಲ್ಲವನ್ನೂ ನೋಡಿ ಹಿರೂಗೆ ಕನಸಿನ ನಗರಿಗೆ ಬಂದ ಅನುಭವವಾಗಿತ್ತು!

— ಹವನ

Advertisement

Udayavani is now on Telegram. Click here to join our channel and stay updated with the latest news.

Next