ಗೊಂಬೆ ಹೇಳುತೈತೆ, ಮತ್ತೆ
ಮತ್ತೆ ಮತ್ತೆ ಹೇಳುತೈತೆ
ನಾನೇ ರಾಜಕುಮಾರ!
ಕಸ್ತೂರಿ ನಿವಾಸದ ಶೂಟಿಂಗ್ ನಿಲ್ಲಿಸಿಬಿಡಬೇಕೆಂಬ ಗೌಡರ “ಆರ್ಡರ್’ ಸಿಡಿಲು ಬಡಿದಂತಾಗಿತ್ತಾದರೂ ದೊರೆಯವರು ಸ್ವಲ್ಪವೂ ವಿಚಲಿತರಾಗದೆ, “ಅದೇನ್ ವಿಷ್ಯ ಕೇಳ್ಕೊಂಡ ಬನ್ನಿ ಭಗವಾನ್! ನಾನ್ ಶೂಟಿಂಗ್ ನಿಲ್ಸ ಲ್ಲ! ಕಂಟಿನ್ಯೂ ಮಾಡ್ತಿರ್ತೀನಿ!’ ಎಂದರು. ನಾನು ಹೊರಹೋದೆ.
ಗೌಡರು ಆಚೆ ಇದ್ದ ಮರದ ನೆರಳಿನಲ್ಲಿದ್ದ ಕುರ್ಚಿಯ ಮೇಲೆ ಕುಳಿತಿದ್ದರು. ಆಗಿನ ಕಾಲದಲ್ಲಿ ಶೂಟಿಂಗ್ ಎಂದರೆ ಜಾತ್ರೆಗಳಿಗೆ ಬರುವ ಬಸ್ಸುಗಳು ಸಾಲುಸಾಲಾಗಿ ನಿಂತಿರುವಂತೆ ಒಬ್ಬ ಕಲಾವಿದನಿಗೆ ಒಂದು “ಕ್ಯಾರವಾನ್ ‘ ನಂತೆ ನಿಂತಿರುವ ದೃಶ್ಯ ಕಂಡು ಬರುತ್ತಿರಲ್ಲಿಲ್ಲ. ಆಕಾಶವೇ ಮೇಲ್ಛಾವಣಿ, ನೆಲದ ಮೇಲಿನ ಹಸಿರು ಹುಲ್ಲೇ ನೆಲಹಾಸು, ಮರದ ನೆರಳೇ “ಕ್ಯಾಬಿನ್’. ಬೀಸುವ ತಂಗಾಳಿಯೇ ಎ.ಸಿ. ಅದು 1970ನೇ ಇಸವಿ ಎಂದು ಮತ್ತೆ ಜ್ಞಾಪಿಸುತ್ತೇನೆ. ಅಂದಿನ ಬೆಂಗಳೂರು ಇಂದಿನ ಕಾಂಕ್ರೀಟ್ ಕಾಡಾಗಿರದೆ, ಹಸಿರು ಮರ-ಗಿಡಗಳ ಬೀಡಾಗಿತ್ತು. ವಿದೇಶೀಯರು ನಮ್ಮ ಬೆಂಗಳೂರನ್ನು “ಬೆಂಗಳೂರ್ ಇಸ್ ದ ಓನ್ಲಿ ಏರ್ ಕಂಡಿಷನ್ಡ್ ಸಿಟಿ ಆಫ್ ಇಂಡಿಯಾ’ ಎಂದು ಹಾಡಿಹೊಗಳಿದ್ದ ಕಾಲ! ಗೌಡರು ಕೂತಲ್ಲೇ ಹೋಗಿ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತೆ.
“ಶೂಟಿಂಗ್ ನಿಲ್ಸೊಕೆ ಹೇಳಿದ್ರಂತೆ!’
“ಹೌದು! ಹೇಳ್ದೆ. ಇಲ್ಲೀವರ್ಗೂ ಶೂಟಿಂಗ್ ಮಾಡಿದ್ನೆಲ್ಲಾ ರೀ-ಶೂಟ್ ಮಾಡಿ!
“ಯಾಕೆ? ನಿಮಗೆ ಯಾವುದಾದರೂ ಪೋರ್ಷನ್ ಹಿಡಿಸಿಲ್ಲ ಅಂದ್ರೆ ಹೇಳಿ! ಆ ಪೋರ್ಷ್‌ನ್ ಮಾತ್ರ ರೀ-ಶೂಟ್ ಮಾಡೋಣ’.
“ಎಲ್ಲಾ ಸ್ಟಾಪ್ ಮಾಡಿ. ಇದನ್ನ ಕಲರ್‌ನಲ್ಲಿ ಶೂಟ್ ಮಾಡೋಣ!
ನನಗೆ ಹೋದ ಜೀವ ಬಂದಂತ್ತಾಗಿತ್ತು. ದೊರೆಯವರಿಗೆ ಹೇಳಿ ಅವರನ್ನು ಕರೆದುಕೊಂಡು ಬರುತ್ತೇನೆಂದು ಹೇಳಿ ಹೋಗಿ ದೊರೆಯವರನ್ನು ಕರೆತಂದೆ. ಅವರು ಬಂದವರೇ. “ಗೌಡ್ರೇ, ಈಗ ಶೂಟ್ ಮಾಡಿರೋದನ್ನೇಲ್ಲಾ ಕಲರ್‌ನಲ್ಲಿ ರೀ ಶೂಟ್ ಮಾಡೋಕೆ ವಿಪರೀತ ಖರ್ಚಾಗುತ್ತೆ’ ಎಂದರು.
“ಖರ್ಚಿನ ವಿಷಯ ನನಗೆ ಬಿಡಿ, ನಾನ್ ನೋಡ್ಕೊತೀನಿ!’ ಎಂದರು ಗೌಡರು.
“ಹಾಗಲ್ಲ, ಸೆಟ್ಗೇನೇ ಒಂದೂಕಾಲು ಲಕ್ಷದವರೆಗೂ ಖರ್ಚಾಗಿದೆ. ಕಲರ್ ಮಾಡಬೇಕೆಂದರೆ ಸೆಟ್ ಬಣ್ಣವನ್ನೆಲ್ಲಾ ಬದಲಾಯಿಸಬೇಕು. ಕಲರ್ ಫಿಲಂನೆಗೆಟಿವ್, ಪಾಸಿಟಿವ್, ಪ್ರಾಸೆಸಿಂಗ್ ಛಾರ್ಜಸ್, ಪ್ರಿಂಟ್ ಕಾಸ್ಟ್ ಎಲ್ಲಾ ಬಹಳ ದುಬಾರಿಯಾಗುತ್ತದೆ. ಸಾಲದ್ದಕ್ಕೆ ಎಲ್ಲಾ ಕಾಸ್ಟ್ಯೂಮೂ ಬದಲಾಯಿಸ್ಬೇಕಾಗುತ್ತೆ. ಇದೆಲ್ಲಾ ಬೇಕಾ?’ ಎಂದರು ದೊರೆ.
“ಖರ್ಚು ಎಷ್ಟಾದರೂ ಆಗ್ಲೀ ಅಂತ ಆಗ್ಲೇ ಹೇಳಿದ್ನಲ್ಲಾ?’ ಎಂದು ಪ್ರತ್ಯುತ್ತರ ಕೊಟ್ಟರು ಗೌಡರು.
ಆಗ ನನ್ನ ವ್ಯವಹಾರ ಜ್ಞಾನ ಜಾಗೃತವಾಯಿತು. ನಾನೆಂದೆ “ಮಾಡ್ತೀರಾ ಗೌಡ್ರೇ, ಕೊನೇಗೆ ಆ ಖರ್ಚನ್ನೆಲ್ಲಾ ನಿರ್ಮಾಪಕರಾದ ನಮ್ಮ ತಲೇ ಮೇಲೆ ಹಾಕ್ತೀರಲ್ವಾ?. ಈವಾಗಿರೋ ಹಾಗೇ ಕಂಟಿನ್ಯೂ ಮಾಡೋಣ!’
“ಒಂದ್ಕೆಲ್ಸ ಮಾಡೋಣ! ರಾಜ್‌ಕುಮಾರ್ ಅವರ ಅಭಿಪ್ರಾಯ ಕೇಳೋಣ! ಅವರು ಒಪ್ಕೊಂಡ್ರೆ ಖರ್ಚಿನ ವಿಷಯಕ್ಕೆ ಆಮೇಲೆ ಬರೋಣ! ಏನಂತೀರಾ?’ ಗೌಡರ ಈ ಸಲಹೆಗೆ ಒಪ್ಪಿ ರಾಜ್ ಬಳಿಗೆ ನಡೆದೆವು.
ರಾಜ್ “ಮೇಕಪ್ ರೂಂ’ನಲ್ಲಿದ್ದರು. ಗೌಡರೇ ವಿಷಯವನ್ನೆಲ್ಲಾ ವಿವರಿಸಿದರು. ಕ್ಷಣಹೊತ್ತು ಯೋಚಿಸಿ ರಾಜ್ ಹೇಳಿದರು,
“ನೋಡಿ ಯಜಮಾನ್ರೇ. ಮೊದಲೇ ಇದು ಶಿವಾಜಿ ಗಣೇಶನ್ ಅವರೇ ಕಥೆ ಚೆನ್ನಾಗಿಲ್ಲ, ಮಾಡೋದು ಬೇಡ! ಎಂದು ಹೇಳಿದ ಚಿತ್ರ. ಇದರ ಮೇಲೆ ಸುಮ್ನೆ ಖರ್ಚು ಮಾಡೋದು ಬೇಡಾ ಅನ್ಸುತ್ತೆ. ಈಗಿದರ ಶೂಟಿಂಗ್ ನಿಲ್ಸಿದ್ರೆ ಇಲ್ಲೀವರೆಗೂ ಆಗಿರೋ ಸಿಕ್ಕಾಪಟ್ಟೆ ಖರ್ಚು, ಪಟ್ಟ ಶ್ರಮ, ಎಲ್ಲಾ ವೇಸ್ಟ್ ಆಗೋಗುತ್ತೆ. ಇನ್ನೂ ಒಂದು ವಿಷ್ಯ, ನಮ್ಮ ಕನ್ನಡದ ಜನ ಇದು ಕಪ್ಪು -ಬಿಳುಪಾ, ವರ್ಣಚಿತ್ರನಾ ಅಂತ ನೋಡೋದಿಲ್ಲ. ಚಿತ್ರ ಚೆನ್ನಾಗಿದ್ರೆ. ನೋಡ್ತಾರೇ, ಇಲ್ಲಿದ್ರೆ ಬಿಡ್ತಾರೆ. ಈ ಚಿತ್ರಾನೂ ಅಷ್ಟೇ! ನಂಗಂತೂ ದುಡ್ಡು ದಂಡ ಮಾಡೋದು ಸ್ವಲ್ಪಾನೂ ಇಷ್ಟವಿಲ್ಲ!’ ಎಂದು ಬಿಟ್ಟರು.
“ಸರಿ ನಿಮಗಿಷ್ಟ ಇಲ್ಲಾ ಅಂದ್ಮೇಲೆ ಯಾರೇನ್ಮಾಡೋಕಾಗುತ್ತೆ. ಏನೋ ಆಸೆ ಆಯ್ತು, ಬಂದು ಹೇಳ್ದೇ. ಬರ್ತೀನಿ!’ ಎಂದು ನಿರಾಶಾಭಾವದಿಂದ ಗೌಡರು ಹೊರನಡೆದರು.
“ನಾನು ಹೇಳಿದ್ದು ಸರಿ ಅಲ್ವಾ, ದೊರೆಯವ್ರೇ!’ ಎಂದರು ರಾಜ್
“ನಂಗೂ ಅಷ್ಟೇ ಇಲ್ಲೀವರ್ಗೂ ಮಾಡಿದ್ದನ್ನೆಲ್ಲಾ ವೇಸ್ಟ್ ಮಾಡೊಕೆ ಸ್ವಲ್ಪಾನೂ ಇಷ್ಟ ಇರಲಿಲ್ಲ’ ಎಂದರು ದೊರೆ.
“ಬನ್ನಿ ದೊರೆ, ಶೂಟಿಂಗ್ ಕಂಟಿನ್ಯೂ ಮಾಡೋಣ!’ ಎಂದು ನಾನು ಹೇಳ್ದೆ, ಹೊರಬಂದು ನೋಡಿದರೆ ಗೌಡರ ಕಾರು ಅಲ್ಲೆಲ್ಲೂ ಕಾಣಿಸಲಿಲ್ಲ! ಕಸ್ತೂರಿ ನಿವಾಸವನ್ನು ಕಲರ್‌ನಲ್ಲಿ ತೆಗೆಯಬೇಕೆಂಬ ಅವರ ಆಸೆ ಬಲು ಎತ್ತರವಾಗಿತ್ತೆಂಬ ಅರಿವು ನಮಗಾಗಿತ್ತು. ಆದರೆ ಕಾಲ ಮಿಂಚಿತ್ತು.
ಆದರೆ ಆನಂತರ ಅವರ ಆ ಆಸೆಯನ್ನು ಕೃತಿಗಿಳಿಸಿದವರು ಅವರ ಕಿರಿಯ ಪುತ್ರ ಕೆ.ಸಿ.ಎನ್ ಮೋಹನ್. “ಡಿ.ಜಿ ಮ್ಯಾಟಿಕ್ಸ್’ ಎಂಬ ಸಂಸ್ಥೆಯ ಸುಂದರ್‌ರಾಜ್ ಅವರ ಜೊತೆ ಸೇರಿ ಎರಡು ಕೋಟಿಗಳ ವೆಚ್ಚದಲ್ಲಿ “ಕಸ್ತೂರಿ ನಿವಾಸ’ವನ್ನು ವರ್ಣರಂಜಿತವನ್ನಾಗಿಸಿ ತಮ್ಮ ತಂದೆಯ ಆತ್ಮಕ್ಕೆ ಶಾಂತಿ ನೀಡಿದರು.
ಕಪ್ಪು ಬಿಳುಪಿನ ಚಿತ್ರ ಬಿಡುಗಡೆಯಾದ ಸುಮಾರು 50 ವರ್ಷಗಳ ನಂತರ ಬಿಡುಗಡೆಯಾದ “ಕಸ್ತೂರಿ ನಿವಾಸ’ ವರ್ಣಚಿತ್ರ 100 ದಿನಗಳ ಪ್ರದರ್ಶನ ಕಂಡಿದ್ದು, ಕನ್ನಡ ಚಿತ್ರರಂಗದಲ್ಲೊಂದು ದಾಖಲೆ. ಜನರ ಮನದಲ್ಲಿ ರಾಜ್ ಬಗ್ಗೆ ಇದ್ದ ಅಚ್ಚಳಿಯದ ಅಭಿಮಾನ, ಅವರ ಕಲಾ ಪ್ರತಿಭೆಗೆ ಇದ್ದ ಸೆಳೆತದ ಶಕ್ತಿ, “ಕಸ್ತೂರಿ ನಿವಾಸ’ದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ ಸಾಹಿತ್ಯ, ಜಯಂತಿ, ರಾಣಿ, ಅಶ್ವತ್ಥ್ರವರುಗಳ ಅಭಿನಯ ಪ್ರತಿಭಾ ಕೊಡುಗೆ, ಇವೆಲ್ಲದರ ಸಾಮೂಹಿಕ ಆಕರ್ಷಣೆ ಎಲ್ಲವೂ ಸೇರಿ ಈ ಚಿತ್ರವನ್ನು ಕನ್ನಡ ಚಿತ್ರರಂಗದ “ಸಾರ್ವಕಾಲಿಕ ಅತಿಶ್ರೇಷ್ಠ’ ಚಿತ್ರವಾಗಿಸಿದೆ.
ಈ ಚಿತ್ರದ ಒಂದು ಹಾಡಂತೂ, 50 ವರ್ಷಗಳಾದ ಮೇಲೂ ತನ್ನ ಹಿಡಿತವನ್ನು ಇಂದಿಗೂ ಸಂಗೀತಪ್ರಿಯರ ಮೇಲೆ ಸಾಧಿಸಿದೆ ಎಂದರೆ ಎಂತಹವರಿಗಾದರೂ ಅಚ್ಚರಿಯ ಸಂಗತಿಯೇ ಸರಿ. ಇಂದಿಗೂ ಅದೆಷ್ಟೋ ಆರ್ಕೆಸ್ಟ್ರಾ ತಂಡಗಳಿಗೆ ರಾಜ್ ಅವರರ “ಆಡಿಸಿ ನೋಡೂ, ಬೀಳಿಸಿ ನೋಡು… ‘ ಸಾಂಗೇ ಫೇವರಿಟ್. ಈ ಹಾಡು ಜನಿಸಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ಹೀರೋನ ಸ್ವಾಭಿಮಾನವನ್ನು ಹಾಡಿನ ರೂಪದಲ್ಲೇಕೆ ತೋರಿಸಬಾರದು ಎಂಬುದು ಉದಯ ಶಂಕರ್ ಆಲೋಚನೆ. ಆಗ ಅವನ ನೆನಪಿಗೆ ಬಂದ್ದು ಜಿ.ಬಿ.ಎಸ್ ಕಥೆ ಹೇಳುವಾಗ “ಈ ಕಥೆಯ ನಾಯಕ ಬಹಳ ಸ್ವಾಭಿಮಾನಿ. ನಮ್ಮೂರಿನ ತಂಜಾವೂರು ಬೊಂಬೆ ಇದ್ದಹಾಗೆ. ಎಷ್ಟೇ ಉರುಳಿಸಿ ಮತ್ತೆ ತಲೆಯೆತ್ತಿಕೊಂಡು ನಿಲ್ಲುತ್ತೆ’ ಎಂದಿದ್ದರು. ಉದಯ ಹೇಳಿದ “ಲೋ ಭಗವಾನ, ಜಿ.ಬಿ.ಎಸ್ ಹೇಳಿದ್ರಲ್ಲಾ ತಂಜಾವೂರು ಬೊಂಬೆಂತ ಅದಿಲ್ಲೆಲ್ಲಾದರೂ ಸಿಗುತ್ತಾ?’ ಎಂದ. “ದಸರಾ ಬೊಂಬೆಗಳನ್ನು ಮಾರೋ ಅಂಗಡೀಲಿ ಸಿಗಬಹ್ದು ಆದರೆ ಈಗ ದಸರಾ ಟೈಂ ಅಲ್ವಲ್ಲಾ? ಆದ್ರೂ ಟ್ರೈ ಮಾಡ್ತೀನಿ. ಸರ್ಕಾರದ ಹ್ಯಾಂಡ್‌ಕ್ರಾಪ್ಟ್ ಶೋರೂಂ “ಕುರಲಗಂ’ ಇದ್ಯಲ್ಲಾ ಅಲ್ಲಿ ಸಿಕ್ಕಿದ್ದರೆ ಉಂಟು ಇಲ್ದಿದ್ರೆ ಇಲ್ಲ!’ ಎಂದು ನಾನೆಂದೆ.
ಮಾರನೆಯ ದಿನವೇ “ಕುರಲಗಂ’ಗೆ (“ಕುರಲಗಂ’- ತಮಿಳು ನಾಡಿನ ಕರಕುಶಲ ವಸ್ತುಗಳ ಹೋಲ್‌ಸೇಲ್/ರಿಟೇಲ್ ಮಾರಾಟ ಮಳಿಗೆ) ಭೇಟಿ ನೀಡಿ ವಿಚಾರಿಸಲು, ಅಲ್ಲಿದ್ದ ಸೇಲ್ಸ್‌ಮ್ಯಾನ್ “ಅದು ಸ್ಟಾಕ್ ಇಲ್ಲಾ ಸರ್! ದಸರಾ ಟೈಂನಲ್ಲಿ ಬರುತ್ತೆ. ಬರ್ತಾ ಇದ್ದಾಗೇ ಖಾಲೀ ಆಗ್ಬಿಡುತ್ತೆ! ಅಂದ. ಅಷ್ಟರಲ್ಲೇ ಪಕ್ಕದಲ್ಲಿದ್ದ ಮತ್ತೊಬ್ಬ ಸೇಲ್ಸ್ ಮ್ಯಾನ್ ಹೇಳಿದ “ನಾನು ಗೋಡೌನಲ್ಲಿ ಒಂದು ಪೀಸ್ ನೋಡಿದ್ದೆ. ಮೂಗಿಗೆ ಪೆಟ್ಟು ಬಿದ್ದದೇಂತ ಕಂಡೆಂಮ್ ಮಾಡಿದ್ವೀವಿ!’ ಅದು ಸಿಕ್ಕಿದ್ರೆ. ಇವ್ರಿಗಿಷ್ಟವಾದ್ರೆ ತೊಗೋಳ್ಳಿ!’ ಅದು ಮಾರಾಟವಾದರೆ ಸಾಕು ಎಂಬಂತಿತ್ತು ಅವನ ಧ್ವನಿ. “ಅದನ್ನೇ ತೋರಿಸಿ ‘ ಎಂದೆ. ಅವನು ತಂದ ಬೊಂಬೆಯನ್ನು ಕೊಂಡು ತಂದು ಉದಯನ ಮುಂದಿಟ್ಟೆ. ಯಾವ ರೀತಿಯಲ್ಲಿ ಆಡಿಸಿದರೂ ಅದರ ತಲೆ ಮೇಲಕ್ಕೆದ್ದು ನಿಲ್ಲುತ್ತಿತ್ತು. ಅದನ್ನು ನೋಡುತ್ತಲೇ ಒಂದು ಸಿಗರೇಟ್ ಹಚ್ಚಿದ. ಒಂದು ಖಾಲೀ ಹಾಳೆಯ ಮೆಲೆ ಏನನ್ನೋ ಗೀಚಿದ, ಅದನ್ನು ನನ್ನ ಕೈಗಿಟ್ಟು “ಓದಿ ಹೇಗಿದೆ ಹೇಳು!’ ಎಂದ. ಓದಿ ವಿಸ್ಮಿತನಾಗಿಬಿಟ್ಟು ಕೇಳಿದೆ “ಅಲ್ವೋ ಉದಯ, ನಿಂಗ್ಯಾವಾಗೋ ಇಷ್ಟೊಳ್ಳೇ ಥಾಟ್ಸ್ ಬರುತ್ತೆ? ಅದಕ್ಕವನಂದ “ನಿಂಗಿಷ್ಟವಾದ್ರೆ ವೆಂಕಟೇಶನಿಗೆ ಹೇಳು, ಇದಕ್ಕೆ ಒಂದು ಟ್ಯೂನ್ ಮಾಡ್ಬೇಕು ಅಂತ. ನಾನಂತೂ ಇದರಲ್ಲಿರೋ ಒಂದಕ್ಷರಾನೂ ಬದಲಾಯಿಸೋಲ್ಲ!’ ಎಂದು ಬಿಟ್ಟ. ಉದಯ ಹೇಳಿದ್ದನ್ನು ವೆಂಕಟೇಶನಿಗೆ ಹೇಳಿದಾಗ ಅವನದನ್ನು ಛಾಲೆಂಜ್ ಆಗಿ ಸ್ವೀಕರಿಸಿದ. ಉದಯ್ ನನಗಿತ್ತ ಚೀಟಿಯಲ್ಲಿದ್ದ ಸಾಲುಗಳಿವು:
“ಆಡಿಸಿ ನೋಡೂ ಬೀಳಿಸಿನೋಡೂ ಉರುಳಿಹೋಗದು,
ಏನೇ ಬರಲಿ ಯಾರಿಗೂ ಸೋತು ತಲೆಯಬಾಗದು
ಎಂದಿಗೂ ನಾನು ಹೀಗೇ ಇರುವೆ ಎಂದು ನಗುತಲಿರುವುದು
ಹೀಗೆ ನಗುತಲಿರುವುದು…’
ಈ ಹಾಡಿನ ಜನಪ್ರಿಯತೆ ಜನಜನಿತ! ಜಗಜ್ಜನಿತ!!
ಇದೇ ಹಾಡನ್ನೂ ಚಿತ್ರದಲ್ಲಿ ಮತ್ತೊಮ್ಮೆ ಹಾಡಬೇಕಾದ ಸಂದರ್ಭ ಒದಗಿಬಂತು ಅದೂ ಬಹು ಅನಿರೀಕ್ಷಿತವಾಗಿ.
(ಕೆ. ಎಸ್ ಭಗವಾನ್ “ರೂಪತಾರಾ’ ಮಾರ್ಚ್, 2023ರ ಸಂಚಿಕೆಗೆ ಕೊನೆಯದಾಗಿ ಬರೆದ ಅಂಕಣ)