Advertisement

ಸೀರೆಯ ಹಿಂದಿನ ಮರೆಯದ ಕಥೆ

06:47 PM Nov 21, 2019 | mahesh |

ಸೀರೆ ಎಂದಾಕ್ಷಣ ಹುಡುಗಿಯರ ಮನದ ಮೂಲೆಯಲ್ಲಿ ಅನೇಕ ನೆನಪುಗಳು ರಿಂಗಣಿಸಲು ಪ್ರಾರಂಭಿಸುತ್ತದೆ. ಸದಾ ಜೀನ್ಸ್‌ ಪ್ಯಾಂಟ್‌, ಚೂಡಿದಾರ್‌ ತೊಡುವ‌ ಹುಡುಗಿಯು ಸೀರೆಯುಟ್ಟರೆ ಆಕೆಯಲ್ಲಿ ಲಜ್ಜೆ ಎನ್ನುವುದು ಹೆಜ್ಜೆಯನ್ನು ಹಿಂಬಾಲಿಸುತ್ತದೆ. ಪ್ರತಿಯೊಬ್ಬ ಹೆಣ್ಣು ತಾನು ಉಟ್ಟ ಮೊದಲ ಸೀರೆಯ ಹಿಂದೆ ಸಿಹಿ-ಕಹಿನೆನಪುಗಳು ಇದ್ದೇ ಇರುತ್ತದೆ. ಮತ್ತು ಹೆಚ್ಚಾಗಿ ಮೊದಲು ಉಟ್ಟ ಸೀರೆಯ ನೆನಪು ಪ್ರಾರಂಭವಾಗುವುದೇ ಅಮ್ಮನ ಸೀರೆಯಿಂದ. ಸೀರೆ ಎಂದಾಗ ನೆನಪಾಗುವುದೇ ಅಮ್ಮ. ಹೀಗೆ ಅಮ್ಮನ ಸೀರೆಯೊಂದಿಗೆ ಸುತ್ತಿಕೊಂಡ ಸುಂದರ ನೆನಪುಗಳಲ್ಲಿ ನನಗೆ ಕಾಡುವ ನೆನಪೆಂದರೆ ನಾನು ಮೊದಲು ಅಮ್ಮನ ಸೀರೆ ಉಟ್ಟದ್ದು. ನನ್ನ ಮೊದಲ ಸೀರೆಯನ್ನು ನಾನು ಇಚ್ಛೆಪಟ್ಟು ಉಟ್ಟದ್ದೇನೂ ಅಲ್ಲ. ಅಮ್ಮನ ಬಲವಂತಕ್ಕೆ ನಾನು ಸೀರೆಯನ್ನು ಉಟ್ಟುಕೊಂಡೆ. ಆ ದಿನ ನಾನು ಸೀರೆ ಉಟ್ಟು ಸಂಭ್ರಮಿಸಿದ ನೆನಪೇನೂ ನನಗಿಲ್ಲ.

Advertisement

ಆ ಸೀರೆಯನ್ನು ಸಂಭಾಳಿಸಲು ಸಿಕ್ಕ ಸಿಕ್ಕಲ್ಲಿ ಸುಮಾರು ಹತ್ತರಿಂದ ಹದಿನೈದು ಪಿನ್ನನ್ನು ಚುಚ್ಚಿದ್ದು, ಇಡೀ ಜಾತ್ರೆಯಲ್ಲಿ ಸೀರೆಯನ್ನು, ಸೆರಗನ್ನು ಎತ್ತಿಹಿಡಿದುಕೊಂಡು ಓಡಾಡಿದ್ದು ನೆನೆದಾಗ ನಗುಬರುತ್ತದೆ. ಅಂದು ದಿನಾ ಸೀರೆ ಉಡುವ ಅಮ್ಮ, ಅಜ್ಜಿಯನ್ನು ನೋಡಿ ಪಾಪ ಅಂದುಕೊಂಡದ್ದಂತೂ ಸತ್ಯ. ಆ ಬಿಸಿಲಿಗೆ, ಸುರಿಯುತ್ತಿದ್ದ ಬೆವರಿಗೆ ಇದೆಲ್ಲದ್ದಕ್ಕೂ ಕಾರಣವಾದ ಸೀರೆಗೆ ಅದೆಷ್ಟು ಶಾಪ ಹಾಕಿದ್ದೆನೋ ಗೊತ್ತಿಲ್ಲ. ಆದರೆ, ಮನೆಗೆ ಬಂದು ಸೀರೆಯನ್ನು ಬಿಚ್ಚಿ ಬಿಸಾಡುವಷ್ಟರಲ್ಲಿ ನನಗೆ ಹೋದ ಉಸಿರು ಮತ್ತೆ ಬಂದಂತಹ ಅನುಭವವಾಗಿದ್ದಂತೂ ನಿಜ.

ನಾನು ಬಿಚ್ಚಿಟ್ಟ ಸೀರೆಯನ್ನು ಅಮ್ಮ ಮಡಚಿಡುವಾಗ ಅದೆಲ್ಲೋ ಸಿಕ್ಕಿಕೊಂಡು ಹರಿದುಹೋಗಿದ್ದು ಅಮ್ಮನ ಕಣ್ಣಿಗೆ ಬಿದ್ದಿತ್ತು. ಆಗ ಅಮ್ಮ “ಅಯ್ಯೋ ನನ್ನ ಅಮ್ಮನ ಸೀರೆಯನ್ನು ಹಾಳುಮಾಡಿದ್ಯಲ್ಲೇ’ ಅಂತ ಬೈಯಲು ಪ್ರಾರಂಭಿಸಿದರು. ಮೊದಲೇ ಸೀರೆ ಉಟ್ಟು ಆಯಾಸವಾಗಿದ್ದ ನನಗೆ “”ಅಮ್ಮ, ಅಷ್ಟೊಂದು ಸೀರೆ ಇದ್ಯಲ್ಲಮ್ಮ. ಇದೊಂದು ಸ್ವಲ್ಪ ಹರಿದುಹೋದದ್ದಕ್ಕೆ ಸುಮ್ಮನೆ ಬೈಯಬೇಡ ನನಗೆ” ಅಂದೆ. ಅದೆಲ್ಲಿತ್ತೋ ಅಮ್ಮಂಗೆ ಸಿಟ್ಟು ಬಂದು ತಲೆಯ ಮೇಲೆ ಒಂದು ಮೊಟಕಿ ಇನ್ನಷ್ಟು ಬೈದು ಕಣ್ಣಂಚಲ್ಲಿ ಒಂದು ತೊಟ್ಟು ನೀರು ಸುರಿಸಿ ಒಳಗೆ ಹೋಗಿ ಬಾಗಿಲನ್ನು ಡಬ್‌ ಅಂತ ಹಾಕ್ಕೊಂಡವಳು ಹೊರಗೆ ಬಂದಿದ್ದು ಅಪ್ಪ ಕರೆದ ಮೇಲೆಯೇ. “ಅಯ್ಯೋ, ನನ್ನ ಅಮ್ಮ ಎಷ್ಟು ಇಮೋಷನಲ್‌!’ ಅಂತ ರೇಗಿಸ್ತಿದ್ದೆ. ಆದರೆ, ಇಂದು ನಾನು ಮದುವೆಯಾಗಿ ನನ್ನ ಅಮ್ಮನ ಸೀರೆಯನ್ನು ಸ್ಪರ್ಶಿಸಿದಾಗ ಆಕೆಯ ಬೆಚ್ಚನೆಯ ಮಡಿಲು ನೆನಪಾಗುತ್ತದೆ. ಆಕೆ ನನ್ನ ಪಕ್ಕದಲ್ಲೇ ಇದ್ದಾಳೆ ಎನ್ನುವ ಅನುಭವವಾಗುತ್ತ¨

ಶ್ರೀರಕ್ಷಾ ರಾವ್‌ ಪುನರೂರು
ದ್ವಿತೀಯ ಬಿಎ (ಪತ್ರಿಕೋದ್ಯಮ), ಆಳ್ವಾಸ್‌ಕಾಲೇಜು, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next