ಒಂದೂರಿನಲ್ಲಿ ಒಬ್ಬ ಅಗಸನಿದ್ದನು. ಅಗಸನ ಬಳಿ ದಷ್ಟಪುಷ್ಟವಾದ ಎರಡು ಕತ್ತೆಗಳಿದ್ದವು. ತನ್ನೆಲ್ಲಾ ಕೆಲಸಗಳಿಗೆ ಅವನು ಕತ್ತೆಯನ್ನೇ ಅವಲಂಬಿಸಿದ್ದನು. ಕತ್ತೆಗಳು ಮಾಲೀಕನ ಹೇಳಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದ್ದವು. ಕತ್ತೆಯು ಮಣಭಾರದ ಬಟ್ಟೆಗಳನ್ನು ಹೊತ್ತು ಊರಾಚೆಯ ಹೊಳೆಗೆ ಹೋಗಿ ಬರುತ್ತಿದ್ದವು. ಕತ್ತೆಯ ಮೇಲೆ ಬಟ್ಟೆ ಹಾಕಿ ಅಗಸ ಹಿಂದೆ ಬರುತ್ತಿದ್ದ. ಊರು ದಿನದಿಂದ ದಿನಕ್ಕೆ ಬೆಳೆಯತೊಡಗಿತು.
ಹೀಗೆ ದಿನದಿಂದ ದಿನಕ್ಕೆ ಬೆಳೆದ ಅಗಸ ತನ್ನ ಮನೆಯಲ್ಲೆ ಬಟ್ಟೆ ಇಸಿŒ ಮಾಡುತ್ತಿದ್ದವನು ಈಗ ಮಳಿಗೆಯಲ್ಲಿ ಲಾಂಡ್ರಿ ತಗೆದನು. ಅವನ ಅದೃಷ್ಟ ಖುಲಾಯಿಸಿತು. ಅಗಸ ಶ್ರೀಮಂತನಾದನು. ಮದುವೆಯೂ ಆಯಿತು. ಅಗಸನ ಪತ್ನಿ “ಈ ಹಾಳಾದ್ ಕತ್ತೆ ನಿಮಗೇಕೆ ಬೇಕು ಕಾಡಿಗೆ ಬಿಡಿ’ ಎಂದಳು. ಲಾಂಡ್ರಿಯಲ್ಲೆ ಬಟ್ಟೆ ಒಗೆಯುವುದರಿಂದ ಕತ್ತೆ ತನಗೆ ಉಪಯೋಗವಿಲ್ಲ ಎಂದು ಅಗಸ ಕತ್ತೆಯನ್ನು ಕಾಡಿಗೆ ಬಿಡಲು ಮುಂದಾದನು. ಆದರೆ ಅಗಸನ ತಾಯಿ “ಕತ್ತೆಗಳು ಅನಾದಿ ಕಾಲದಿಂದಲೂ ನಿಮ್ಮ ಅಪ್ಪ, ಅಜ್ಜಂದಿರ ಕಾಲದಿಂದಲೂ ನಮ್ಮಲ್ಲಿ ದುಡಿಯುತ್ತಿವೆ. ಕತ್ತೆಯನ್ನು ದುಡಿಸಿಕೊಂಡ ನಾವು ಈಗ ಈ ರೀತಿ ಮಾಡುವುದು ಸರಿಯಲ್ಲ. ಯಾವಾಗಲೂ ಹತ್ತಿದ ಏಣಿಯನ್ನು ಒದೆಯಬಾರದು. ಕತ್ತೆಗಳನ್ನು ಕಾಡಿಗೆ ಬಿಡುವ ಬದಲು ಕತ್ತೆಗಳ ಅವಶ್ಯಕತೆ ಇರೋ ಅಗಸನಿಗೆ ಹಸ್ತಾಂತರಿಸು’ ಎಂದಳು. “ಆಗಲಿ ಅಮ್ಮ’ ಎಂದ ಅಗಸ.
ನಗರದಲ್ಲಿ ಯಾವೊಬ್ಬ ಅಗಸನೂ ಈಗ ಕತ್ತೆ ಉಪಯೋಗಿಸುತ್ತಿರಲಿಲ್ಲ. ಹೀಗಾಗಿ ಅದನ್ನು ತೆಗೆದುಕೊಳ್ಳುವವರೇ ಇರಲಿಲ್ಲ. ಕಾಡಿಗೆ ಬಿಟ್ಟರೆ ತಾಯಿ ಗದರಿಸುತ್ತಾಳೆ, ಬಿಡದಿದ್ದರೆ ಹೆಂಡತಿ ಸಿಡುಕುತ್ತಾಳೆ. ಅಗಸನಿಗೆ ಎನು ಮಾಡುವುದು ತಿಳಿಯದಾಯಿತು. ಒಂದು ದಿನ ಅಗಸನ ತಾಯಿ ತೀರಿಕೊಂಡಳು. ಅಗಸ ತಾಯಿಯ ಅಂತಿಮ ಕಾರ್ಯ ಮುಗಿಸಿದ. ಇದಾಗಿ ಕೆಲದಿನಗಳಲ್ಲೇ ಕತ್ತೆಯನ್ನು ಹೊಡೆದು ಹೊಡೆದು ಕಾಡಿನತ್ತ ಓಡಿಸಿದ. ಕಾಡಿಗೆ ಹೋದ ಕತ್ತೆಗಳನ್ನು ತಿರುಗಿಯೂ ನೋಡಲಿಲ್ಲ. ಕತ್ತೆಗಳು ಮಾತ್ರ ಅಗಸ ಕಾಣುವವರೆಗೂ ತಿರುಗಿ ನೋಡುತ್ತಿದ್ದವು.
ಅಗಸ ಹೋದ ಸ್ವಲ್ಪ ಹೊತ್ತಿನಲ್ಲೇ ಕತ್ತೆಗಳು ಕಾಡಿನಿಂದ ಅಗಸನ ಮನೆಯ ಜಾಡು ಹಿಡಿದು ವಾಪಸ್ ಬಂದವು. ಅಷ್ಟರಲ್ಲಿ ಕತ್ತಲಾಗಿತ್ತು. ಮನೆಯ ಒಳಗಡೆ ಕಳ್ಳರು ಇರುವುದನ್ನು ಗಮನಿಸಿದ ಎರಡು ಕತ್ತೆಗಳು ಜೋರಾಗಿ ಕೂಗಲು ಪ್ರಾರಂಭಿಸಿದವು. ಕತ್ತೆಗಳ ಕೂಗಿನಿಂದ ಅಕ್ಕ ಪಕ್ಕದವರು ನಿದ್ದೆಯಿಂದೆದ್ದು ಹೊರಗಡೆ ಬಂದರು. ರಾತ್ರಿ ನಿದ್ದೆಗೆಡಿಸಿದ ಕೋಪದಿಂದ ಕತ್ತೆಗಳನ್ನು ಬಯ್ಯುತ್ತಾ ಅಗಸನಿಗೆ ಛೀಮಾರಿ ಹಾಕಲು ಹೋದಾಗ ಒಳಗಡೆ ಕಳ್ಳರು ಇರುವುದನ್ನು ಗಮನಿಸಿದರು. ಕಳ್ಳರು ಅಗಸನ ಕುತ್ತಿಗೆಗೆ ಚಾಕು ಹಿಡಿದು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದರು.
ಅಕ್ಕಪಕ್ಕದ ಮನೆಯವರು ಒಮ್ಮೆಲೇ ಒಳಗಡೆ ನುಗ್ಗಿ ಅಗಸನನ್ನು ರಕ್ಷಿಸಿದಲ್ಲದೆ, ಕಳ್ಳನನ್ನು ಹಿಡಿದರು. “ನಾನು ಕತ್ತೆಯನ್ನು ಹೊಡೆದು ಕಾಡಿಗೆ ಅಟ್ಟಿದ್ದೆ. ಆದರೆ ಕತ್ತೆಗಳು ನಮ್ಮ ಮನೆಗೆ ಬಂದು ಕಾಪಾಡಿವೆ. ಕತ್ತೆಯ ಋಣ ಇದು’ ಎನ್ನುತ್ತಾ ಕಣ್ಣೀರಾದನು. ಕತ್ತೆಯ ಮೈ ಸವರುತ್ತಾ ಒಳಗಡೆ ಕರೆದೊಯ್ದನು.
– ನಾಗರಾಜ ನಾಯಕ ಡಿ. ಡೊಳ್ಳಿನ, ಕೊಪ್ಪಳ