Advertisement

ಫೇಸ್‌ಬುಕ್‌ ವಾರ್ಡಿನ ಕತೆಗಳು

06:00 AM Sep 11, 2018 | |

ಫೇಸ್‌ಬುಕ್‌ ತನ್ನ ತಾಂತ್ರಿಕ ಗೂಡನ್ನು ತೊರೆದು, ಜೀವ- ಉಸಿರಿನ ಸ್ಥಾನವನ್ನು ಅತಿಕ್ರಮಿಸಿದೆ. ಹೈಸ್ಕೂಲ್‌, ಕಾಲೇಜು ವಿದ್ಯಾರ್ಥಿಗಳಿಗೂ ಅದೀಗ ನಿತ್ಯದ ಗುಂಗು. ಫೇಸ್‌ಬುಕ್‌ ಮೋಹವು ಇಂದು ಗೀಳಾಗಿ, ವಿದ್ಯಾರ್ಥಿಗಳ ಓದುವಿಕೆಗೆ ನಿರಂತರವಾಗಿ ಅಡ್ಡಿಯಾಗುತ್ತಿದೆ ಎನ್ನುವ ಆತಂಕವನ್ನು ಮನಃಶಾಸ್ತ್ರಜ್ಞರು ತೆರೆದಿಟ್ಟಿದ್ದಾರೆ. ತಾರುಣ್ಯದ ಉಲ್ಲಾಸವನ್ನು, ಹರೆಯದ ನೆಮ್ಮದಿಯನ್ನು ಈ ಮಾಯಾಜಾಲ ಹೇಗೆಲ್ಲ ನಿಯಂತ್ರಿಸುತ್ತಿದೆ? ಎಂತೆಂಥ ತಲ್ಲಣಗಳನ್ನು ಸೃಷ್ಟಿಸಿ, ಚಿಂತೆಗೆ ತಳ್ಳುತ್ತಿದೆ? ಎನ್ನುವ ಈ ನೈಜ ಕತೆಗಳು ನಿಮ್ಮ ಮನೆಯಲ್ಲಿ ನಡೆಯದೇ ಇರಲಿ ಎನ್ನುವುದು “ಜೋಶ್‌’ನ ಕಳಕಳಿ… 

Advertisement

ಅದು 2009ರ ಸುಮಾರು. ಫೇಸ್‌ಬುಕ್‌ ಭಾರತದಲ್ಲಿ ಆಗ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುತ್ತಿತ್ತಷ್ಟೇ. ಈ ಹೊತ್ತಿನಲ್ಲಿ ನನ್ನೆದುರು ಒಬ್ಬ ಎಸ್ಸೆಸ್ಸೆಲ್ಸಿ ಹುಡುಗ ಕೌನ್ಸೆಲಿಂಗ್‌ಗೆ ಕುಳಿತಿದ್ದ. ಅವನ ಹೆಸರು ರಾಜೇಶ್‌. ಚಟುವಟಿಕೆಯ ಹುಡುಗ. ಒಳ್ಳೆಯ ಅಂಕ ತೆಗೆಯುತ್ತಿದ್ದ ಕಾರಣ, ಯಾವ ಟೀಚರ್‌ಗೂ ಇವನ ಬಗ್ಗೆ ತಕರಾರಿರಲಿಲ್ಲ. ಆದರೆ, ಇದ್ದಕ್ಕಿದ್ದಂತೆ ಅವನು ಕ್ಲಾಸಿಗೆ ಗೈರಾಗತೊಡಗಿದ. ಇದು ಅಪ್ಪ- ಅಮ್ಮನಿಗೆ ದಿಗಿಲು ಹುಟ್ಟಿಸಿತು. ನನ್ನ ಬಳಿಗೆ ಕರೆತಂದರು. ಆಗಲೂ ಅವನು ಬಾಯಿ ಬಿಡಲಿಲ್ಲ. ಕೊನೆಗೆ ಅಪ್ಪ- ಅಮ್ಮನಿಗೆ ಆಚೆಗಿರಲು ಹೇಳಿದಾಗ, ನಿಧಾನಕ್ಕೆ ಎಲ್ಲವನ್ನೂ ಹೇಳಿದ. “ನನ್ನ ಪೋಸ್ಟ್‌ ಒಂದಕ್ಕೆ ಗೆಳೆಯನೊಬ್ಬ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದಾನೆ’ ಅಂದ. ಯಾವ ಪೋಸ್ಟ್‌? ಅಂಚೆಯಣ್ಣನ ಪೋಸ್ಟ್‌ಗೂ, ಈ ಕಾಮೆಂಟ್‌ಗೂ ಏನು ಸಂಬಂಧ?’ ಅಂತ ಕೇಳಿದ್ದೆ. “ಅಲ್ಲ ಮೇಡಂ, ನಾನು ಹೇಳ್ತಿರೋದು ಫೇಸ್‌ಬುಕ್‌ ಪೋಸ್ಟ್‌ ಬಗ್ಗೆ…’ ಎನ್ನುತ್ತಾ ಆಗಷ್ಟೇ ಟ್ರೆಂಡ್‌ ಆಗುತ್ತಿದ್ದ ಫೇಸ್‌ಬುಕ್‌ ಬಗ್ಗೆ ವಿವರವಾಗಿ ಹೇಳಿದ. ನನ್ನಲ್ಲಿ ಆಗ ಖಾತೆ ಇದ್ದಿರಲಿಲ್ಲ. ತಕ್ಷಣ ನನ್ನ ಕಂಪ್ಯೂಟರ್‌ ಕೊಟ್ಟೆ. ಆತನೇ ನನಗೆ ಖಾತೆ ತೆರೆದುಕೊಟ್ಟ. 

   ಅಂದು ಆಗಿದ್ದಿಷ್ಟೇ: ಯಾವುದೋ ಒಂದು ಜಗಳದಲ್ಲಿ ರಾಜೇಶನ ಸ್ನೇಹಿತ ಅವಾಚ್ಯ ಪದಗಳನ್ನು ಬಳಸಿ, ಈತನ ತಾಯಿಯನ್ನು ಬಯ್ದಿದ್ದ. ತಾಯಿಗೆ ಏನಾದರೂ ಅಪಾಯವಾಗಬಹುದೆಂಬ ಭಯದಲ್ಲಿ, ತಾಯಿಯ ಭದ್ರತೆಗಾಗಿ ಇವನು ಶಾಲೆಗೆ ಹೋಗದೆ ಮನೆಯಲ್ಲಿ ಉಳಿದುಕೊಂಡಿರುವುದು ಗೊತ್ತಾಯಿತು.  ಶಾಲೆಯ ಗೈರುಹಾಜರಿಗೆ ಒಂದು ಪತ್ರವನ್ನು ನೀಡಿ, ಮತ್ತೆ ಒಂದು ವಾರ ಅವನಿಗೆ ಕೌನ್ಸೆಲಿಂಗ್‌ ನೀಡಿದೆ. ಈ ಫೇಸ್‌ಬುಕ್‌ ಬಗ್ಗೆ ನಾನೂ ತಿಳಿದು, ಅವನಿಗೆ ಮನೋಚಿಕಿತ್ಸೆ ನೀಡಿದ್ದೆ. ರಾಜೇಶ ಮತ್ತೆ ಶಾಲೆಗೆ ಹೊರಟ. ಒಳ್ಳೆಯ ಅಂಕಗಳನ್ನೂ ಪಡೆದ.

  ಅವತ್ತು ಅಪರೂಪದ ಘಟನೆ ಎಂಬಂತೆ ಕಣ್‌ಕಣ್‌ಬಿಟ್ಟಿದ್ದ ನನಗೆ, ಇಂದು ಫೇಸ್‌ಬುಕ್‌ ಭೂತದಂತೆ ಕಾಣುತ್ತಿದೆ. ತಿಂಗಳಿಗೆ ಹತ್ತಾರು, ಫೇಸ್‌ಬುಕ್‌ ಪ್ರಕರಣಗಳನ್ನು ಕೇಳಿಸಿಕೊಳ್ಳುತ್ತೇನೆ. ಕಾಮೆಂಟು, ಲೈಕುಗಳ ತಲೆಬಿಸಿಯಲ್ಲಿ ವಿದ್ಯಾರ್ಥಿಗಳ ಮನಸ್ಸು ವಿಲವಿಲಗೊಳ್ಳುತ್ತಿದೆ.

ಇತ್ತೀಚೆಗೆ ಒಬ್ಬಳು ವಿದ್ಯಾರ್ಥಿನಿ ಬಂದಿದ್ದಳು. ಅವಳಿಗೆ ಫೇಸ್‌ಬುಕ್‌ ಖಾತೆ ಇಲ್ಲದೇ ಇರುವುದೇ ದೊಡ್ಡ ಚಿಂತೆ. ಮೊದಲನೇ ಪಿಯುಸಿ ಓದುತ್ತಿದ್ದ ಅವಳಿಗೆ, ಸ್ನೇಹಿತರೆಲ್ಲರೂ ತರಗತಿಯಲ್ಲಿ ಎಂಜಾಯ್‌ ಮಾಡುತ್ತಿರುವುದನ್ನು ಕಂಡು ನಿರಾಸೆ ಉಕ್ಕುತ್ತಿತ್ತು. ಮನೆಯಲ್ಲಿ ಎಂಜಿನಿಯರಿಂಗ್‌ ಸೇರುವವರೆಗೂ ಫೋನು, ಕಂಪ್ಯೂಟರ್‌ ಏನೂ ಕೊಡಿಸುವುದಿಲ್ಲವೆಂದು ಹೇಳಿರುವುದು ಆಕೆಗೆ ಮಾನಸಿಕ ಯಾತನೆ ತಂದಿದೆ. ಗೆಳತಿಯರು ಯಾವ ಜೋಕು ಹೇಳಿ ನಗುತ್ತಿದ್ದಾರೆ ಎಂದು ಇವಳಿಗೆ ಅರ್ಥವಾಗುತ್ತಿಲ್ಲ. ಕೇಳಿದರೆ ಜಂಭದ ಕೋಳಿಗಳ ತರಹ ಆಡ್ತಾರೆ, ಫ್ರೆಂಡ್ಸೆಲ್ಲ. ಈಕೆಗೆ, ತಾನು ಅಪ್‌ಡೇಟ್‌ ಆಗುತ್ತಿಲ್ಲ ಅಂತನ್ನಿಸಲು ಶುರುವಾಗಿದೆ. 

Advertisement

ಕೌನ್ಸೆಲಿಂಗ್‌ ಪಾಠ: ಮೊಬೈಲು/ಫೇಸ್‌ಬುಕ್‌ ಖಾತೆ ಹೊಂದುವುದರಲ್ಲಿ ತಪ್ಪಿಲ್ಲ.  ಆದರೆ, ಅದನ್ನು ಹೊಂದಲು ಹಟಮಾರಿತನ ಬೇಡ.  ವಿದ್ಯೆಯ ಗುರಿಯನ್ನು ಮೊದಲು ತಲುಪಬೇಕು. ಫೋನ್‌ ತೆಗೆದುಕೊಟ್ಟರೂ ಅದನ್ನು ದುರ್ಬಳಕೆ ಮಾಡದ ಹಾಗೆ ವಿಶ್ವಾಸ ಬೆಳೆಸಿಕೊಳ್ಳಬೇಕು.  

ದ್ವಿತೀಯ ಪಿಯುಸಿ ಓದುತ್ತಿದ್ದ ಶಾಂತಿಗೆ ಸ್ನೇಹಿತರಿಂದ ಲೈಕ್ಸ್‌ ಪಡೆಯುವುದೇ ಹುಚ್ಚಾಗಿತ್ತು. ಅವಳ ಗುರಿ, ಪ್ರತಿ ಪೋಸ್ಟ್‌ಗೂ ಕನಿಷ್ಠ ನೂರು ಲೈಕ್ಸ್‌ ದಾಟುವುದು. ಚೆನ್ನಾಗಿ ಓದುತ್ತಿದ್ದ ಅವಳೇಕೋ ಈಗ ದಾರಿ ತಪ್ಪಿದ್ದಳು. ಸೆಲ್ಫಿà ತೆಗೆದುಕೊಳ್ಳುವ, ಬೆಳಗ್ಗೆ ಎಲ್ಲರಿಗಿಂತ ಮುಂಚೆಯೇ ಪೋಸ್ಟ್‌ ಹಾಕುವ ನೆಪದಲ್ಲಿ ಆಕೆ ಮೊದಲು ಟ್ಯೂಶನ್‌ ಬಿಟ್ಟಳು. ಕಾಲೇಜಿಗೂ ಅಪರೂಪವಾದಳು. ಸೆಲ್ಫಿà ತೆಗೆದುಕೊಳ್ಳುವುದನ್ನೇ ಇಡೀ ದಿನದ ಕೆಲಸ ಮಾಡಿಕೊಂಡಳು. ಪ್ರತಿ ಫೋಟೋವೂ ವಿಭಿನ್ನವಾಗಿರಬೇಕು, ಬೇರೆ ಬೇರೆ ಬಟ್ಟೆ ಧರಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು, ಮೇಕಪ್‌ ಬದಲಾಗಬೇಕು, ಹೇರ್‌ಸ್ಟೈಲ್‌ ಪ್ರತಿಸಲವೂ ಡಿಫ‌ರೆಂಟಾಗಿರಬೇಕು ಎನ್ನುವ ಹಠದಲ್ಲಿ ಸೆಲ್ಫಿ ಗೀಳಿಗೆ ಅಡಿಕ್ಟ್ ಆಗಿದ್ದಳು. ಈ ರ್‍ಯಾಂಕ್‌ ವಿದ್ಯಾರ್ಥಿನಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರಲೇ ಇಲ್ಲ. ಪರಿಣಾಮ, ಖನ್ನತೆಗೆ ಜಾರಿದಳು. ನಂತರ ಕೌನ್ಸೆಲಿಂಗ್‌ನಿಂದ ಚೇತರಿಸಿಕೊಂಡು, ಬಿ.ಸಿ.ಎ. ಮುಗಿಸಿ, ಈಗ ಕೆಲಸದಲ್ಲಿದ್ದಾಳೆ.

ಕೌನ್ಸೆಲಿಂಗ್‌ ಪಾಠ: ಲೈಕ್ಸ್‌  ಎಂದರೆ ಗುರುತಿಸುವಿಕೆ.  ಪ್ರತಿಯೊಬ್ಬರಲ್ಲೂ ಇನ್ನೊಬ್ಬರು ನನ್ನನ್ನು ಗುರುತಿಸಲಿ ಎಂಬ ಆರೋಗ್ಯಕರ ಚಡಪಡಿಕೆ ಇರುತ್ತದೆ.  ಅದು ಹಿತವಾದ ಚಡಪಡಿಕೆ ಆದರಷ್ಟೇ ನಮ್ಮಲ್ಲಿ ಸೃಜನಶೀಲತೆ ಹೆಚ್ಚುತ್ತದೆ. ಇಲ್ಲದಿದ್ದರೆ ಅದು ಗೀಳಾಗಿ ಬದುಕು ಮತ್ತು ಭವಿಷ್ಯಕ್ಕೆ ಮಾರಕವಾಗುತ್ತದೆ.

ಇನ್ನೊಬ್ಬ ಹುಡುಗ ಬಂದಿದ್ದ. ಅವನಿಗೆ ತನ್ನ ಹುಟ್ಟುಹಬ್ಬದ ದಿನ ನೆಚ್ಚಿನ ಸ್ನೇಹಿತ ಶುಭಾಶಯ ಕೋರಲಿಲ್ಲ ಎಂಬುದೇ ಬೇಜಾರು. ಸ್ನೇಹಿತನಿಗೆ ಇವನು ನೋಟ್ಸ್‌ ಕೊಟ್ಟು ಸಾಕಷ್ಟು ನೆರವಾಗಿದ್ದ. ಆ ಸ್ನೇಹಿತನ ಮೇಲೆ ಇವನಿಗೆ ಕೋಪ ಶುರುವಾಗಿತ್ತು. ಎಲ್ಲರಿಗೂ ವಿಶ್‌ ಮಾಡುವ ಅವನು ನನಗೆ ವಿಶ್‌ ಮಾಡಲಿಲ್ಲ ಎಂದು ಅವನಿಗೆ ಕೀಳರಿಮೆ ಬಂದಿತ್ತು. ಜೊತೆಗೆ, ಈತ ಸದಾ ಫೇಸ್‌ಬುಕ್‌ ನೋಡುತ್ತಾನೆಂದು, ಮನೆಯಲ್ಲಿ ಇಂಟರ್‌ನೆಟ್‌ ತೆಗೆಸಿಬಿಟ್ಟರು. ಇದರಿಂದ ಸಿಟ್ಟು ಇನ್ನೂ ಜಾಸ್ತಿಯಾಯಿತು. ಹೀಗಾಗಿ ಪರೀಕ್ಷೆಗೆ ನಿಗಾ ಇಟ್ಟು ಓದಲು ಆಗಲಿಲ್ಲ. ಕಡೇ ಗಳಿಗೆಯ ಕೌನ್ಸೆಲಿಂಗ್‌ ಪರಿಣಾಮಕಾರಿಯಾಗುವುದಿಲ್ಲ. ಕಡಿಮೆ ಅಂಕಗಳು ಬಂದವು.

ಕೌನ್ಸೆಲಿಂಗ್‌ ಪಾಠ: ಆಪ್ತರು ಲೈಕ್‌ ಒತ್ತಬೇಕು ಎಂದು ನಿರೀಕ್ಷಿಸುವುದು ತಪ್ಪು. ಅದು ಅವರವರ ನಿರ್ಧಾರ, ಸಮಯ- ಸಂದರ್ಭಕ್ಕೆ ಸಂಬಂಧಿಸಿದ ವಿಚಾರ. ಇದನ್ನೇ ಪ್ರತಿಷ್ಠೆಗೆ ತೆಗೆದುಕೊಳ್ಳಬಾರದು.

ಗೌರಿಯ ಸ್ನೇಹಿತೆ ಬೇಸಿಗೆ ರಜೆಯಲ್ಲಿ ಮುಂಬೈ- ದಿಲ್ಲಿಯಲ್ಲಿ ಸುತ್ತಾಡಿ ಬಂದಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾಳೆ. ಗೌರಿಗೆ, ತನ್ನ ಸ್ನೇಹಿತೆಯ ಮೇಲೆ ಹೊಟ್ಟೆಕಿಚ್ಚು ಶುರುವಾಗಿದೆ. ಆಕೆಗೆ ಬಂದಿರುವ ಅಭಿನಂದನೆಯ ಕಾಮೆಂಟ್ಸುಗಳನ್ನು ಕಂಡು, ಇವಳು ನಿತ್ಯವೂ ಕುಗ್ಗುತ್ತಿದ್ದಾಳೆ. ಆ ಸ್ನೇಹಿತೆಯಂತೂ ಇವಳಿಗೆ ಹೊಟ್ಟೆಕಿಚ್ಚಾಗಲಿ ಎಂದೇ ಮತ್ತೆ ಮತ್ತೆ ಪೋಸ್ಟ್‌ ಮಾಡುತ್ತಿದ್ದಳು. ಗೌರಿ ಮನೆಯಲ್ಲಿ ಗಲಾಟೆ ತೆಗೆದಿ¨ªಾಳೆ. ಮುಂದಿನ ರಜೆಗೆ ಅಮೆರಿಕಾಕ್ಕೆ ಕರೆದುಕೊಂಡು ಹೋಗಬೇಕು ಅಂತ ಹಠ ಹಿಡಿದಿದ್ದಾಳೆ. ಅಪ್ಪ- ಅಮ್ಮ ಒಪ್ಪದೇ ಇದ್ದಾಗ, ಮನೆಯ ಸಾಮಾನುಗಳನ್ನೆಲ್ಲ ಪುಡಿಪುಡಿ ಮಾಡಿದ್ದಾಳೆ. ಇದೆಲ್ಲ ಅವಾಂತರದ ನಂತರ ಅವಳು ನನ್ನ ಬಳಿ ಬಂದಿದ್ದಳು.

ಕೌನ್ಸೆಲಿಂಗ್‌ ಪಾಠ: ಸುತ್ತಾಟದ ಫೋಟೋ ಹಾಕುವುದರಿಂದ ತಮ್ಮ ಪ್ರತಿಷ್ಠೆ ಹೆಚ್ಚುತ್ತೆ ಎಂದು ಭಾವಿಸುವುದು ತಪ್ಪು. ಹೊಟ್ಟೆಕಿಚ್ಚು ಎನ್ನುವುದು ದೀಪದ ಹುಳು. ಅದು ಬೆಂಕಿಗೆ ಆಹುತಿ ಆಗುತ್ತಲೇ ಇರುತ್ತೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕೇ ಹೊರತು, ನಮ್ಮನ್ನು ಇನ್ಯಾರಿಗೋ ಹೋಲಿಸಿಕೊಂಡು, ಪೈಪೋಟಿಗೆ ಇಳಿಯುವುದು ತಪ್ಪು. 

ಅಂತಿಮವಾಗಿ, ಈ ಫೇಸ್‌ಬುಕ್‌ ನಮಗೆ ಒಡ ಹುಟ್ಟಿದ ಸಂಬಂಧಿಯೇನೂ ಅಲ್ಲ. ಅದರ ಮೇಲೇಕೆ ಅಷ್ಟು ನಂಟು? ಪ್ರೀತಿ?- ಇದನ್ನು ಮಕ್ಕಳು ಮೊದಲು ಅರಿತುಕೊಳ್ಳಬೇಕು. ಫೇಸ್‌ಬುಕ್‌ನಂಥ ಜಾಲತಾಣಗಳು ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಗೇ ಬೇಲಿ ಹಾಕುತ್ತವೆ. ಆಲೋಚನೆಗಳನ್ನು ನಿಯಂತ್ರಿಸುತ್ತಿರುತ್ತವೆ. ಪುಸ್ತಕ ಓದುವುದು, ಅರಿವು ಹೆಚ್ಚಿಸುವ ತಾಣಕ್ಕೆ ಪ್ರವಾಸ, ಸಂಗೀತ ಕಲಿಕೆ, ಕ್ರೀಡೆಯನ್ನು ಅಪ್ಪಿಕೊಳ್ಳುವುದು… ಇಂಥ ಹವ್ಯಾಸಕ್ಕೆ ಜೋತುಬಿದ್ದಾಗ ಆಗುವ ಖುಷಿಯನ್ನು ಫೇಸ್‌ಬುಕ್‌ ನೀಡುವುದಿಲ್ಲ. ಯಾವುದೋ ಅಪರಿಚಿತ ಮುಖವನ್ನೇ ಸ್ನೇಹಿತ ಎಂದು ಭ್ರಮಿಸುವುದಕ್ಕಿಂತ, ಪಕ್ಕದಲ್ಲೇ ಇರುವ ಸುಂದರಸ್ನೇಹಿ ಮನಸ್ಸುಗಳೊಂದಿಗೆ, ಒಳ್ಳೆಯ ಭಾವನೆಗಳೊಂದಿಗೆ ಬೆರೆಯಿರಿ. ಓದು ಮುಗಿಯುವ ತನಕ ಫೇಸ್‌ಬುಕ್‌ ಮುಟ್ಟುವುದಿಲ್ಲ ಎಂಬ ಶಪಥ ಕೈಗೊಳ್ಳಿ. ಅಂತಿಮವಾಗಿ ನೀವು ಗುರಿಮುಟ್ಟಿದಾಗ, ನಿಮಗೆ ಗೊತ್ತಿಲ್ಲದಂತೆ ಫಾಲೋವರ್ಸ್‌ ಹುಟ್ಟಿಕೊಂಡಿರುತ್ತಾರೆ. ಅಪಾರ ಸ್ನೇಹವಲಯ ಸೃಷ್ಟಿಯಾಗುತ್ತೆ. ನಿಮ್ಮ ಬಗ್ಗೆ ಒಳ್ಳೆಯ ಕಾಮೆಂಟುಗಳೇ ಬಾಯಿಂದ ಬಾಯಿಗೆ ಹರಿದಾಡುತ್ತಿರುತ್ತವೆ. ನಮ್ಮಂಥ ಕೌನ್ಸೆಲರ್‌ ಬಳಿ ಬರುವುದೂ ತಪ್ಪುತ್ತದೆ!

  ಒಂದು ವೇಳೆ ಫೇಸ್‌ಬುಕ್‌ ಬೇಕು, ಅದನ್ನು ಧನಾತ್ಮಕವಾಗಿ ಬಳಸಿಕೊಳ್ಳುತ್ತೇನೆ ಎಂಬ ಆತ್ಮವಿಶ್ವಾಸ ನಿಮಗಿದ್ದರೆ, ಎಚ್ಚರದಿಂದಲೇ ಬಳಸಿ.

ನಿಮ್ಮನ್ನು ನೀವೇ ಕೇಳಿಕೊಳ್ಳಿ…
1. ನಿಮ್ಮ ಫೇಸ್‌ಬುಕ್‌ ಬಳಕೆಯ ಉದ್ದೇಶವೇನು?
2. ದಿನಕ್ಕೆ ಎಷ್ಟು ಗಂಟೆ ಫೇಸ್‌ಬುಕ್‌ನಲ್ಲಿ ಕಳೆಯುತ್ತಿದ್ದೀರಿ? ಅಪ್ಪ- ಅಮ್ಮನ ಜೊತೆಗೆ ಎಷ್ಟು ಹೊತ್ತು ಕಳೆಯುತ್ತಿದ್ದೀರಿ?
3. ನಿಮ್ಮ ಸ್ನೇಹಿತರಲ್ಲಿ ಅಪರಿಚಿತರು ಎಷ್ಟು?
4. ನಿಮ್ಮ ಸ್ನೇಹಿತರ ಪೋಸ್ಟ್‌ ನೋಡಿದಾಗ, ನಿಮಗೆ ಅಸೂಯೆ ಉಂಟಾಗುತ್ತದೆಯೇ?
5. ಸ್ನೇಹಿತರು ಹಿಡಿಸದೇ ಇದ್ದಾಗ, ಅವರನ್ನು ಅನ್‌ಫ್ರೆಂಡ್‌ ಮಾಡುತ್ತಿದ್ದೀರಾ?
6. ಫೇಸ್‌ಬುಕ್‌ ಖಾತೆ ಹೊಂದಿದ್ದು, ನಂತರ ಅದನ್ನು ನಿಷ್ಕ್ರಿಯಗೊಳಿಸಿದ್ದೀರಾ? ಇದಕ್ಕೆ ಕಾರಣಗಳೇನು?

ಈ ಸತ್ಯನಿಮಗೆ ಗೊತ್ತೇ?
– ಫೇಸ್‌ಬುಕ್‌ ಎನ್ನುವುದು ಪ್ರತಿಷ್ಠೆ ಸಾಧಿಸಲು ಇರುವ ವೇದಿಕೆ ಅಲ್ಲ.
– ಇನ್ನೊಬ್ಬರ ಪೋಸ್ಟ್‌ ನೋಡಿ, ಹೊಟ್ಟೆಕಿಚ್ಚು ಪಡುವುದರಲ್ಲಿ ಅರ್ಥವಿಲ್ಲ.
– ಲೈಕ್ಸ್‌, ಕಾಮೆಂಟ್ಸ್‌ಗಳು ಪರೀಕ್ಷೆಯ ಅಂಕಗಳಾಗಿ ಪರಿವರ್ತನೆ ಆಗುವುದಿಲ್ಲ. ಅವು ಊಟವನ್ನೂ ಹಾಕುವುದಿಲ್ಲ.
– ಯಾರಾದರೂ ಕೆಟ್ಟದಾಗಿ ಕಾಮೆಂಟಿಸಿದಾಗ, ಒಂದು ಎಮೋಜಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದರೆ ಎಲ್ಲವೂ ಶಾಂತ.
– ಆತುರದಿಂದ, ಉದ್ವಿಗ್ನತೆಯಿಂದ ಪೋಸ್ಟ್‌ ಹಾಕಲು ಹೋಗಬೇಡಿ.
– ಸಮಾಜಕ್ಕೆ ಅಹಿತವಾದ ಯಾವುದೇ ಸಂದೇಶವನ್ನೂ ಫೇಸ್‌ಬುಕ್‌ ಮೂಲಕ ಹಬ್ಬಿಸಬೇಡಿ.

ಇದು ಖನ್ನತೆಯ ರಾಜ
ಹೆಚ್ಚು ಲೈಕ್‌ ಬೀಳಲಿಲ್ಲ- ಶೇ.38
ಪೋಸ್ಟ್‌ ಕಂಡು ಹೊಟ್ಟೆಕಿಚ್ಚು- ಶೇ.22
ಕಾಮೆಂಟ್‌ಗೆ ವ್ಯಘ್ರರಾಗಿ- 17
ಫೋಟೋ ಬ್ಲಿರ್‌ ಆದಾಗ- 10
ಸ್ನೇಹಿತರ ಸಂಖ್ಯೆ ಕಡಿಮೆ- 8
ಇತರೆ- 5
(ಈ ಸರ್ವೇಯು ಫೇಸ್‌ಬುಕ್‌ನಿಂದ ಖನ್ನತೆಗೆ ಜಾರಿ, ಕೌನ್ಸೆಲಿಂಗ್‌ಗೆ ಬಂದಂಥವರ ಅಭಿಪ್ರಾಯಗಳನ್ನು ಆಧರಿಸಿದೆ) 

– ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next