ಕಲಘಟಗಿ: ಅತಿವೃಷ್ಟಿ ಮತ್ತು ನೆರೆ ಹಾವಳಿಯಿಂದಾಗಿ ಮತಕ್ಷೇತ್ರದಾದ್ಯಂತ ಸುಮಾರು ನೂರು ಕೋಟಿಗೂ ಮಿಕ್ಕಿದ ಹಾನಿಯುಂಟಾಗಿದ್ದು, ಅದನ್ನು ಸರಿಪಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ಸವಾಲಾಗಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು.
ಮತಕ್ಷೇತ್ರದಾದ್ಯಂತ ಸುಮಾರು 180ಕ್ಕೂ ಹೆಚ್ಚು ಶಾಲಾ ಕೊಠಡಿಗಳು ಜಖಂಗೊಂಡಿವೆ. ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಡೌಗಿನಾಲಾದ ಹರಿವಿನಿಂದಾಗಿ ಅಕ್ಕಪಕ್ಕದ ಜಮೀನುಗಳು ಕೊರೆತಕ್ಕೆ ಈಡಾಗಿವೆ. ಅಲ್ಲಿನ ಹೊನ್ನಾಪುರ, ಕುಂಬಾರಕೊಪ್ಪ, ಕೋಗಿಲಗೇರಿ, ಕಡಬಗಟ್ಟಿ, ಬೆಣಚಿ ಭಾಗದ ಜನರ ದುಸ್ಥಿತಿ ಹೇಳತೀರದು. ವೀರಾಪುರ ಗ್ರಾಮದ ಕೆರೆ ಒಡೆದಿರುವುದರಿಂದ ನೀರಿನ ರಭಸಕ್ಕೆ 10 ವರ್ಷದ ಮಾವಿನ ಗಿಡಗಳು ಹಾಗೂ ರೈತರು ಬೆಳೆದ ಕಬ್ಬು, ಜೋಳ ಮುಂತಾದ ಬೆಳೆಗಳೆಲ್ಲ ಬೇರು ಸಹಿತ ಕಿತ್ತು ಹೋಗಿವೆ. ಕಂಬಾರಗಣವಿ-ಹೊನ್ನಾಪುರ ರಸ್ತೆ ಮಧ್ಯದ ಸೇತುವೆ ಕೊಚ್ಚಿ ಹೋಗಿ ಜನ ಸಂಕಷ್ಟದಲ್ಲಿದ್ದಾರೆ ಎಂದು ವಿವರಿಸಿದರು.
ಕಲಘಟಗಿ-ತಡಸ ರಸ್ತೆಯಲ್ಲಿ ಹಿಂಡಸಗೇರಿ ಸೇತುವೆ ಕೊಚ್ಚಿ ಹೋಗಿ ವಾಹನ ಸಂಚಾರವೇ ಕಡಿತಗೊಂಡಿದೆ. ಇದರಿಂದಾಗಿ ತಾಲೂಕಿನ ಆ ಭಾಗದ 20-25 ಹಳ್ಳಿಗಳ ಜನರಿಗೆ ಸಾರಿಗೆ ಸಮಸ್ಯೆ ಉಂಟಾಗಿದೆ. ನೀರಸಾಗರ ಜಲಾಶಯ ಮತ್ತು ಕಲಘಟಗಿ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಬೆಣಚಿ ಕೆರೆ ತುಂಬಿ ಕೋಡಿ ಹರಿದಿರುವುದರಿಂದ ಕೆಳ ಭಾಗದ ರೈತರು ಆತಂಕಗೊಂಡಿದ್ದರು. ಯಾವುದೇ ಪ್ರಾಣ ಹಾನಿ ಜರುಗದಿದ್ದರೂ ಅಪಾರ ಬೆಳೆಹಾನಿಯಾಗಿದೆ.
ಬೇಡ್ತಿ ಹಾಗೂ ಶಾಲ್ಮಲಾ ಜಂಟಿಯಾಗಿ ಹರಿದಿರುವ ಪ್ರದೇಶಗಳಲ್ಲಿ ದಂಡೆಗಳಲ್ಲಿರುವ ರೈತರ ಪಂಪ್‌ಹೌಸ್ ಮತ್ತು ಪಂಪ್‌ಸೆಟ್‌ಗಳು ಕೊಚ್ಚಿ ಹೋಗಿವೆ. ವಿದ್ಯುತ್ ಕಂಬಗಳು ಮತ್ತು ಟಿಸಿಗಳು ಧರೆಗುರುಳಿದ್ದು, ಅನೇಕ ಗ್ರಾಮಗಳಲ್ಲಿ ಅಂಧಕಾರ ಮನೆ ಮಾಡಿದೆ. ಕುಡಿಯುವ ನೀರಿಗೆ ಕೊರತೆ ಉಂಟಾಗಿದೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಿರತರಾಗಿದ್ದಾರೆ ಎಂದು ತಿಳಿಸಿದರು.
Advertisement
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅತಿವೃಷ್ಟಿಯಿಂದ ಕ್ಷೇತ್ರದಲ್ಲಾದ ಹಾನಿ ವಿವರ ನೀಡಿ ಮಾತನಾಡಿದ ಅವರು, ಅಳ್ನಾವರ ಭಾಗದ ಹುಲಿಕೇರಿಯ ಇಂದಿರಮ್ಮನ ಕೆರೆ ತಡೆಗೋಡೆಯುದ್ದಕ್ಕೂ ಸೋರುವಿಕೆ ಪ್ರಾರಂಭವಾಗಿದೆ. ಪಕ್ಕದ ಗುಡ್ಡದ ಭಾಗ ಬಹಳಷ್ಟು ಕೊರೆತಕ್ಕೆ ಈಡಾಗಿದೆ. ಕಾಲುವೆ ಮಾರ್ಗ ಮಧ್ಯದ ಜಮೀನುಗಳಿಗೆಲ್ಲ ಹಾನಿಯುಂಟಾಗಿದೆ. ಈ ಕುರಿತು ಅಧಿಕಾರಿ ವರ್ಗಕ್ಕೆ ಮಾರ್ಗದರ್ಶನ ಮಾಡಿದ್ದು, ಸೂಕ್ತ ಕ್ರಮ ಜರುಗಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು.
Related Articles
Advertisement
ಕ್ಷೇತ್ರದಾದ್ಯಂತ ಅಂದಾಜು 28,813 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಕಂದಾಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಜಂಟಿಯಾಗಿ ಸಮೀಕ್ಷೆ ನಡೆಸಿ ಬೆಳೆ ಹಾನಿ ಅಂದಾಜು ತಯಾರಿಸಲು ಸೂಚಿಸಲಾಗಿದೆ. ಸರ್ಕಾರ ತುರ್ತಾಗಿ 1 ಕೋಟಿ ಅನುದಾನ ನೀಡಿದೆ. ಸುಮಾರು 2500 ಮನೆಗಳು ಜಖಂಗೊಂಡಿದ್ದು ಬಹುತೇಕವಾಗಿ ಪರಿಹಾರ ಹಣವನ್ನು ನೇರವಾಗಿ ಅವರವರ ಖಾತೆಗೆ ಜಮೆ ಮಾಡಲಾಗುತ್ತಿದೆ. •ಸಿ.ಎಂ. ನಿಂಬಣ್ಣವರ, ಶಾಸಕ