ನಾನೀಗ ಬರೆಯಲು ಹೊರಟಿರುವುದು ಮಂಗಳೂರಿನ 150 ವರ್ಷಗಳ ಇತಿಹಾಸವಿರುವ ವಿಶ್ವವಿದ್ಯಾನಿಲಯ ಕಾಲೇಜು ಕಟ್ಟಡದ ಒಂದು ಮೆಟ್ಟಿಲಿನ ಕುರಿತಾಗಿ. ನೋಡಲು ಇದೊಂದು ಬರೀ ಮೆಟ್ಟಿಲಷ್ಟೆ. ಆದರೆ, ನನಗೆ ಇದು ಒಂದು ಮೆಟ್ಟಿಲಷ್ಟೇ ಅಲ್ಲ, ನಾನು ಪ್ರತಿದಿನ ಜ್ಞಾನ ಸಂಪಾದನೆಗಾಗಿ ಹತ್ತಿದ ಮೆಟ್ಟಿಲು. ಕಾಲೇಜಿನ ಆವರಣದಲ್ಲಿರುವ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ವಿದ್ಯಾರ್ಥಿಯಾದ ನನಗೆ ಕಾಲೇಜಿನ ಕಟ್ಟಡ ಎಷ್ಟು ಅಚ್ಚರಿ ಮೂಡಿಸಿತೋ ಅಷ್ಟೇ ಅಚ್ಚರಿಯನ್ನು ಈ ಮೆಟ್ಟಿಲುಗಳು ಮೂಡಿಸಿದ್ದು ಸುಳ್ಳಲ್ಲ. ನನಗೆ ಮಾತ್ರವಲ್ಲ , ನೂರೈವತ್ತು ವರ್ಷಗಳಿಂದ ಎಷೋr ವಿದ್ಯಾರ್ಥಿಗಳು ಹತ್ತಿ ಇಳಿಯುವ ಮಧ್ಯದಲ್ಲಿ ಎಷ್ಟೋ ಜ್ಞಾನಪಡೆದು ಸಾಧನೆ ಮಾಡಲು ಸಾಧ್ಯ ಮಾಡಿಕೊಟ್ಟ ಮೆಟ್ಟಿಲು. ಜೀವನ ಪಾಠ ಕಳಿಸಿಕೊಟ್ಟ ಮೆಟ್ಟಿಲು. ಪಾಠ ಮಾಡಿ ಶಿಕ್ಷಕರು ತರಗತಿ ಕೊಠಡಿಯಿಂದ ಹೋದಾಗ ಆ ಮೆಟ್ಟಿಲಿನಲ್ಲಿ ನಿಂತು ಡೌಟ್ ಕ್ಲಿಯರ್ ಮಾಡಿದ ವಿಷಯಗಳೆಷ್ಟೋ!
ಅದೇ ರೀತಿ ಎಷ್ಟೋ ಸಲ ಕ್ಲಾಸ್ ಬಂಕ್ ಮಾಡಲು ದಾರಿಯಾದ ಮೆಟ್ಟಿಲು. ಪರೀಕ್ಷೆ ಬರೆಯುವ ಮುನ್ನ ಈ ಮೆಟ್ಟಿಲಿನಲ್ಲಿ ಕುಳಿತು ಓದಿದ ನೆನಪುಗಳು ಮತ್ತೆ ಮತ್ತೆ ನೆನಪಿಸುತ್ತಿದೆ. ಸ್ನೇಹಿತರೊಂದಿಗೆ ಮಾತನಾಡಿದ ಜಾಗ. ಗೆಳೆಯನಿಗೆ ತಮಾಷೆ ಮಾಡಿ ಓಡಿ ಹೋಗಿ ನಿಂತು ಕುಣಿದು ಸಂಭ್ರಮಿಸಿದ ಜಾಗ. ಮಳೆಗಾಲದಲ್ಲಿ ಮಿಂಚು, ಸಿಡಿಲ ಭಯದಿಂದ ಅಡಗಿ ಕುಳಿತ ಜಾಗ. ಪರೀಕ್ಷೆ ಬರೆದು ಬಂದ ನಂತರ ಪ್ರಶ್ನೆಪತ್ರಿಕೆ ಬಗ್ಗೆ ಸ್ನೇಹಿತರೊಂದಿಗೆ ಚರ್ಚೆ ನಡೆಸಿದ ಜಾಗ. ನಾವೆಷ್ಟೇ ದೂರ ಹೊರಟುಹೋದರೂ ಒಂದು ಕ್ಷಣ ಕಲಿತ ಶಾಲಾ- ಕಾಲೇಜು, ದಿನಾಲು ಕಾಲೇಜಿಗೆ ಓಡಾಡಿದ ರಸ್ತೆ, ಕ್ಲಾಸ್ ಟೀಚರ್, ನಗು, ತರಲೆ-ತಮಾಷೆಗಳು, ಕ್ಲಾಸ್ ಬೆಂಚುಗಳು, ಅದೇ ರೀತಿ ಈ ಮೆಟ್ಟಿಲು ಕೂಡ ಒಂದು ಮರೆಯಲಾಗದ ನೆನಪು.
ನೂರಾರು ವರ್ಷಗಳ ಹಿಂದೆ ಯಾರೋ ಬೆವರು ಹರಿಸಿ ನಿರ್ಮಿಸಿದ ಈ ಮೆಟ್ಟಿಲು ಇಂದಿಗೂ ಕೂಡ ಎಷ್ಟೋ ಜನರಿಗೆ ವಿದ್ಯೆ ಕಲಿಯಲು ಉಪಯೋಗವಾಗುತ್ತಿದೆ. ಪ್ರತಿವರ್ಷವೂ ಉತ್ತೀರ್ಣರಾಗಿ ಹೊರಗೆ ಹೋಗುವ ವಿದ್ಯಾರ್ಥಿಗಳು ಎಷ್ಟೋ ! ಅದೇ ರೀತಿ ವಿದ್ಯೆ ಪಡೆಯಲು ಬಂದವರೆಷ್ಟೋ ನಾ ಕಾಣೆ. ಇವತ್ತಿಗೆ ಉತೀ¤ರ್ಣರಾಗಿ ಹೊರಗೆ ಹೋಗುವವರ ಗುಂಪಿನಲ್ಲಿ ನಾನೂ ಕೂಡ ಒಬ್ಬ. ಮೊದಲ ಸಲ ಮೆಟ್ಟಿಲು ಹತ್ತುವಾಗ ಇದ್ದ ಭಯ, ಇಳಿಯುವಾಗ ನನಗೆ ತಿಳಿಯದೆ ಕಂಬನಿಯೊಂದು ಕಣ್ಣಿನೊಳಗೆಯೇ ಮುತ್ತಾಗಿತ್ತು. ನಾನಂತೂ ಒಂದು ಸಲ ತಿರುಗಿ ನೋಡಿ ಹೊರಟು ಬಂದೆ. ಆದರೆ, ಈ ಮೆಟ್ಟಿಲು ಮಾತ್ರ ವಿದ್ಯೆ ಅರಸಿ ಬರುವ ಎಷೋr ಮಕ್ಕಳನ್ನು ಜ್ಞಾನದೆಡೆಗೆ ತಲುಪಿಸಲು ದಾರಿಯಾಗಿ ಕಾಯುತ್ತಿದೆ.
ಮಹಮ್ಮದ್ ಸಂಜೀದ್
ಅಂತಿಮ ಬಿ.ಎ.,
ವಿಶ್ವ ವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು