ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜುಲೈ ನಂತರವೂ ಮಳೆಯಾಗದಿದ್ದರೆ ನಗರದಲ್ಲಿ ಕುಡಿಯುವ ನೀರಿಗೂ ಜನ ಪರದಾಡಬೇಕಾಗುತ್ತದೆ. ಜನರಿಗೆ ನೀರು ಹೇಗೆ ಒದಗಿಸಬೇಕು ಎನ್ನುವುದರ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ನೀರಿನ ಅಭಾವ ಎದುರಿಸುತ್ತಿರುವ ಪ್ರಮುಖ 11 ನಗರಗಳ ಪಟ್ಟಿಯಲ್ಲಿ ಬೆಂಗಳೂರಿನ ಹೆಸರೂ ಇದೆ. ನಗರದಲ್ಲಿ ನೀರಿನ ಮೂಲಗಳು ಕಣ್ಮರೆಯಾಗುತ್ತಿವೆ. ಕೆರೆಗಳನ್ನು ಉಳಿಸಿಕೊಳ್ಳಲು ನಾವು ವಿಫಲವಾಗಿದ್ದು, ನೀರಿನ ಸಂಗ್ರವನ್ನೂ ಮಾಡುತ್ತಿಲ್ಲ.
ಜಲಮಂಡಳಿ ಮಳೆನೀರು ಕೊಯ್ಲಿಗೆ ಒತ್ತು ನೀಡದಿರುವುದು, ಇಂಗು ಗುಂಡಿಗಳನ್ನು ನಿರ್ಮಿಸದಿರುವುದೂ ಸಮಸ್ಯೆ ಜಟಿಲವಾಗಲು ಕಾರಣವಾಗಿದೆ. 1,410 ಟಿಎಂಸಿ ನೀರಿನಲ್ಲಿ ಶೇ.40ರಷ್ಟು ನೀರು ಸೋರಿಕೆಯಾಗುತ್ತಿದೆ ಎಂದರು.
ಸದಸ್ಯ ವಿಶ್ವನಾಥ್ ಮಾತನಾಡಿ, ಬೆಂಗಳೂರಿನಲ್ಲಿ 1300 ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಬೆಂಗಳೂರು ಜನಸಂಖ್ಯೆ 5 ಲಕ್ಷವಿದ್ದಾಗ ಹೆಸರಘಟ್ಟ ಕೆರೆಯ ನೀರನ್ನು ಅವಲಂಬಿಸಿದ್ದೆವು. ತಿಪ್ಪಗೊಂಡನ ಹಳ್ಳಿಕೆರೆ ನೀರು ಕಲುಷಿತಗೊಂಡಿದ್ದು, ಈಗ ಅದನ್ನೂ ಮರೆತಿದ್ದೇವೆ.
ಎತ್ತಿನ ಹೊಳೆ, ಲಿಂಗನಮಕ್ಕಿ ಮತ್ತು ಮೇಕೆದಾಟು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಇವುಗಳೆಲ್ಲಾ ನಂತರದ ಮಾತು, ಮೊದಲು ನೀರು ಉಳಿಸಿಕೊಳ್ಳಲು ಇರುವ ಸಾಧ್ಯತೆಗಳನ್ನು ಬಳಸಿಕೊಳ್ಳೋಣ. ಪ್ರತಿ ವರ್ಷ ವಾಡಿಕೆಯ ಮಳೆಯಾದರೂ, ಆ ನೀರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ.
ನೀರು ವ್ಯರ್ಥವಾಗುವುದನ್ನು ಮೊದಲು ತಪ್ಪಿಸಬೇಕು. ಇದಕ್ಕೆ ಬಿಬಿಎಂಪಿ ಕ್ರಿಯಾಯೋಜನೆ ರೂಪಿಸಿಕೊಳ್ಳಲಿ ಎಂದು ಸಲಹೆ ನೀಡಿದರು. ಸದಸ್ಯರಾದ ಕಟ್ಟೆ ಸತ್ಯನಾರಾಯಣ, ಉಮೇಶ್ ಶೆಟ್ಟಿ, ಶಾಸಕರಾದ ಸತೀಶ್ ರೆಡ್ಡಿ ಮತ್ತು ಮುನಿರತ್ನ ಮತ್ತಿತರರು ಧ್ವನಿ ಗೂಡಿಸಿದರು.