Advertisement

ಬೂದನಗುಡ್ಡ ಮೂರ್ತಿ ಭಗ್ನ ಪ್ರಕರಣ: 8 ಜನರ ಬಂಧನ

12:54 PM Jun 17, 2019 | Suhan S |

ಕಲಘಟಗಿ: ತಾಲೂಕಿನ ಉಗ್ಗಿನಕೇರಿ ಗ್ರಾಪಂ ವ್ಯಾಪ್ತಿಯ ಬೂದನಗುಡ್ಡದ ಬಸವೇಶ್ವರ ದೇವಸ್ಥಾನದ ಬಸವೇಶ್ವರ ಮೂರ್ತಿ ಭಗ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ.

Advertisement

ಕರುವಿನಕೊಪ್ಪದ ಲಕ್ಷ್ಮಣ ಚಂಡೂನವರ, ಚಳಮಟ್ಟಿಯ ಮಹಾಂತೇಶ ಮಾಳಗಿ, ಸಿದ್ದರಾಮ ಮರದನ್ನವರ, ಮಿಶ್ರಿಕೋಟಿಯ ಶಿವರಾಜ ಜೀವಕನ್ನವರ, ನಾಗರಾಜ ಚೌಡಪ್ಪನವರ, ಲಾಲಸಾಬ ಹಾಜಿಸಾಬ ಬಾವಿ, ರವಿ ಕೋಳೂರ, ಮಂಜುನಾಥ ಮೊಸಳೆಣ್ಣವರ ಬಂಧಿತರು. ಆರೋಪಿಗಳಿಂದ ಎರಡು ದ್ವಿಚಕ್ರ ವಾಹನ ಹಾಗೂ ಒಂದು ಬ್ಯಾಟರಿ ವಶಪಡಿಸಿಕೊಳ್ಳಲಾಗಿದೆ.

ಮೇ 28ರಂದು ಮಧ್ಯರಾತ್ರಿ ದೇವಸ್ಥಾನದ ಬೀಗ ಒಡೆದು ಒಳ ಹೋಗಿದ್ದ ಆರೋಪಿಗಳು, ಬಸವೇಶ್ವರ ಮೂರ್ತಿಗೆ ಬೆಂಕಿ ಹಚ್ಚಿ ಕಿವಿಯ ಭಾಗ ವಿರೂಪಗೊಳ್ಳುವಂತೆ ಮಾಡಿದ್ದರು. ಇಷ್ಟೇ ಅಲ್ಲದೇ ಪಕ್ಕದಲ್ಲಿಯೇ ಇದ್ದ ಅರಣ್ಯ ಇಲಾಖೆಯ ಕೊಠಡಿಯ ಬೀಗ ಒಡೆದು ಅಲ್ಲಿನ ವೈರ್‌ಸೆಟ್‌ಗಳನ್ನು ನಾಶಪಡಿಸಿ ಬ್ಯಾಟರಿಗಳನ್ನೂ ಕದ್ದು ಪರಾರಿ ಆಗಿದ್ದರು. ಈ ಕುರಿತಂತೆ ಮೇ 29ರಂದು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎಸ್‌ಪಿ ಜಿ. ಸಂಗೀತಾ ಹಾಗೂ ಡಿಎಸ್‌ಪಿ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಕಲಘಟಗಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಘಟಗಿ ಠಾಣೆಯ ಇನ್ಸ್‌ಪೆಕ್ಟರ್‌ ವಿಜಯ ಬಿರಾದಾರ, ಪಿಎಸ್‌ಐ ಆನಂದ ಢೋಣಿ, ಸಿಬ್ಬಂದಿ ಎನ್‌.ಎಂ. ಹೊನ್ನಪ್ಪನವರ, ಆತ್ಮಾನಂದ ಬೆಟಗೇರಿ, ಎಚ್.ಎಂ.ನರರುಂದ, ಎಸ್‌.ಡಿ. ಮಲ್ಲನಗೌಡ್ರ, ಬಿ.ಎ. ಶಿರಕೋಳ, ದೇವೆಂದ್ರ ನಾಯಕ್‌, ಎಮ್‌.ಎಲ್. ಪಾಶ್ಚಾಪುರ, ಜಿ.ಬಿ.ಕಾಂಬಳೆ, ಉಳವೀಶ ಸಂಪಗಾವಿ, ಎನ್‌.ಪಿ. ಸಣ್ಣಮೇಟಿ, ಶಿವಾನಂದ ಕಾಂಬಳೆ, ಎ.ಎಮ್‌. ನವಲೂರ ತನಿಖಾ ತಂಡದಲ್ಲಿ ಇದ್ದರು.

ದೇವರ ಮೂರ್ತಿಯ ಹಣೆಯೊಳಗೆ ಅಪಾರ ಬೆಲೆಬಾಳುವ ಹವಳ, ವಜ್ರ, ಮುತ್ತು ಇರುತ್ತವೆ. ಅವುಗಳನ್ನು ಕಳವು ಮಾಡಬೇಕು ಎಂಬ ಮೂಢ ನಂಬಿಕೆಯಿಂದ ದೇವರ ಮೂರ್ತಿಯ ತಲೆಯ ಮೇಲೆ ಬೆಂಕಿಹಚ್ಚಿ ವಿರೂಪಗೊಳಿಸಿದ್ದಾರೆ. ನಂತರ ಅರಣ್ಯ ಇಲಾಖೆಯ ಕೊಠಡಿಯಲ್ಲಿ ಸಿಸಿ ಕ್ಯಾಮರಾ ಸಾಧನಗಳಿರುತ್ತವೆ ಎಂಬ ಕಲ್ಪನೆಯಲ್ಲಿ ಅಲ್ಲಿಯ ವೈರ್‌ಲೆಸ್‌ ಸೆಟ್‌ಗಳನ್ನು ನಾಶಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next