Advertisement

ಹೊಸ ವಿ.ವಿ.ಗಳ ಸ್ಥಿತಿ ಅಯೋಮಯ: ಇನ್ನೂ ಲಭ್ಯವಾಗದ ಅನುದಾನ, ಮೂಲಸೌಕರ್ಯ

01:42 AM Jul 24, 2023 | Team Udayavani |

ಬೆಂಗಳೂರು: ಹಿಂದಿನ ಸರಕಾರ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಇರಬೇಕು ಎಂಬ ಉದ್ದೇಶದಿಂದ ರಾಜ್ಯದ ಏಳು ಜಿಲ್ಲೆಗಳಲ್ಲಿ ಪ್ರಾರಂಭಿಸಿರುವ ಏಳು ಹೊಸ ವಿಶ್ವವಿದ್ಯಾನಿಲಯಗಳ ಸ್ಥಿತಿ ಸೂಕ್ತ ಅನುದಾನ, ಮೂಲ ಸೌಕರ್ಯ ಮತ್ತು ಬೋಧಕ-ಬೋಧಕೇತರ ಸಿಬಂದಿ ಇಲ್ಲದೆ ಶೋಚನೀಯವಾಗಿದೆ.

Advertisement

ಮಂಡ್ಯ, ಹಾಸನ, ಬೀದರ್‌, ಚಾಮರಾಜನಗರ, ಹಾವೇರಿ, ಕೊಪ್ಪಳ, ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ವಿ.ವಿ.ಗಳು ಸ್ಥಾಪನೆ ಗೊಂಡಿವೆ. ಬೊಮ್ಮಾಯಿ ಸರಕಾರ 2022ರ ಕೊನೆಯ ಭಾಗದಲ್ಲಿ ಈ ಜಿಲ್ಲೆಗಳಲ್ಲಿ ವಿ.ವಿ. ಸ್ಥಾಪನೆಗೆ ಒಪ್ಪಿಗೆ ಸೂಚಿಸಿ ಪ್ರತೀ ವಿ.ವಿ.ಗೆ ತಲಾ 2 ಕೋಟಿ ರೂ.ಗಳನ್ನು ಮೀಸಲಿರಿಸಿ ಆದೇಶ ಹೊರಡಿಸಿತ್ತು. ಆದರೆ ಈ ಅನುದಾನ ಸಾಲದೆ ವಿ.ವಿ.ಗಳು ಸೊರಗಿವೆ.

ಮೂಲಸೌಕರ್ಯಗಳು ಇಲ್ಲದ್ದರಿಂದ ವಿದ್ಯಾರ್ಥಿಗಳೂ ದಾಖಲಾಗುತ್ತಿಲ್ಲ. ಕುಲಪತಿಗಳಿಗೆ ಕಾರು ಕೊಳ್ಳಲು ಕೂಡ ಹಣವಿಲ್ಲ ಎಂದು ಕುಲಪತಿಯೊಬ್ಬರು ತಮ್ಮ ಬಳಿ ಅಲವತ್ತುಕೊಂಡಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್‌ ಇತ್ತೀಚೆಗಷ್ಟೆ ಮಾಧ್ಯಮಗಳ ಮುಂದೆ ಹೇಳಿದ್ದರು.

ಈ ಏಳು ವಿ.ವಿ.ಗಳಿಗೆ ಇನ್ನೂ ಮಾತೃ ವಿ.ವಿ.ಯಿಂದ ಬೋಧಕ ಮತ್ತು ಬೋಧ ಕೇತರ ಸಿಬಂದಿ ವಿಭಜನೆ ಆಗಿಲ್ಲ. ಕುಲಪತಿ ಮತ್ತು ಕುಲಸಚಿವರ ನೇಮಕ ಮಾತ್ರ ಆಗಿದೆ. ಎಷ್ಟು ಬೋಧಕ ಮತ್ತು ಬೋಧಕೇತರ ಸಿಬಂದಿ ಲಭಿಸಬಹುದು ಎಂಬ ಅಂದಾಜು ಇಲ್ಲ. ಉಳಿದ ಹುದ್ದೆಗಳಿಗೆ ಮತ್ತು ಅತಿಥಿ ಬೋಧಕರ ನೇಮಕ ಪ್ರಕ್ರಿಯೆಗೆ ಇನ್ನಷ್ಟೇ ಚಾಲನೆ ನೀಡಬೇಕಿದೆ.

ಹಲವು ಪ್ರಶ್ನೆಗಳು
ಈ ವಿ.ವಿ.ಗಳು ತಮ್ಮ ಮೂಲ ಗಳಿಂದ ಆದಾಯ ಸೃಜಿಸ ಬೇಕು ಎಂದು ಸರಕಾರ ಹೇಳಿತ್ತು. ಆದರೆ ಅಗತ್ಯ ಮೂಲಸೌಕರ್ಯ, ಕಟ್ಟಡ, ಪ್ರಯೋಗಾಲಯ, ಗ್ರಂಥಾಲಯಗಳ ಸ್ಥಾಪನೆಗೆ ಹಣ ನೀಡದಿದ್ದರೆ ಅವು ಸ್ವಂತ ಕಾಲಿನಲ್ಲಿ ನಿಲ್ಲಲು ಸಾಧ್ಯವೇ, ಇಂತಹ ವಿ.ವಿ.ಗಳಲ್ಲಿ ಓದುವ ವಿದ್ಯಾರ್ಥಿಗಳ ಸ್ಥಿತಿ ಏನು ಎಂಬ ಪ್ರಶ್ನೆಗೆ ಉತ್ತರವಿಲ್ಲ.

Advertisement

ಹೊಸ ಸರಕಾರ ಜಿಲ್ಲೆಗೊಂದು ವಿ.ವಿ. ಚಿಂತನೆಯ ಬಗ್ಗೆ ಹೆಚ್ಚೇನೂ ಆಸಕ್ತಿ ಹೊಂದಿಲ್ಲ. ಆದರೆ ಹೊಸ ವಿ.ವಿ.ಗಳನ್ನು ಮುಚ್ಚುವ ಅಥವಾ ಮಾತೃ ವಿ.ವಿ.ಗಳ ಜತೆ ವಿಲೀನಗೊಳಿಸುವ ಇರಾದೆಯೂ ಸರಕಾರಕ್ಕೆ ಇದ್ದಂತಿಲ್ಲ.

2-3 ವಾರಗಳಲ್ಲಿ ಸ್ಪಷ್ಟ ಚಿತ್ರಣ
ವಿ.ವಿ.ಗಳಲ್ಲಿ ಪದವಿ ತರಗತಿಗಳಿಗೆ ದಾಖಲಾತಿ ನಡೆಯುತ್ತಿದೆ. ಉಳಿದಂತೆ ನಾವು ಸರಕಾರದ ಆದೇಶಕ್ಕೆ ಕಾಯುತ್ತಿದ್ದೇವೆ. ಸೂಕ್ತ ಪ್ರಮಾಣದ ಸಿಬಂದಿ ನೇಮಕ ಮತ್ತು ಅನುದಾನದ ಬಗ್ಗೆ ಸರಕಾರದಿಂದ ಇನ್ನಷ್ಟೇ ಸೂಚನೆ ಸಿಗಬೇಕಿದೆ. ಇನ್ನು 2-3 ವಾರಗಳಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು ಎಂದು ಹೊಸ ವಿ.ವಿ.ಯ ಕುಲಪತಿಯೊಬ್ಬರು ತಿಳಿಸಿದರು.

ಹಿಂದೆ ಹೊಸ ವಿ.ವಿ.ಗಳ ಸ್ಥಾಪನೆ ಸಂದರ್ಭ ಒಬ್ಬರು ವಿಶೇಷ ಅಧಿಕಾರಿ ಯನ್ನು ನೇಮಿಸಲಾಗುತ್ತಿತ್ತು. ಅವರು ವಿ.ವಿ.ಗೆ ಅಗತ್ಯವಾದ ಮೂಲ ಸೌಕರ್ಯಗಳ ವ್ಯವಸ್ಥೆ ಮಾಡುತ್ತಿದ್ದರು. ಆದರೆ ಕಳೆದ ಸರಕಾರ ನೇರವಾಗಿ ಕುಲಪತಿ ಮತ್ತು ಕುಲಸಚಿವರನ್ನೇ ನೇಮಿಸಿದೆ. ಇದರಿಂದ ಮೂಲ ಸೌಕರ್ಯಸ‌ಮಸ್ಯೆ ಕಾಡುವಂತಾಗಿದೆ ಎಂದು ಕುಲಪತಿಗಳು ಹೇಳುತ್ತಾರೆ.

ಹೊಸ ವಿ.ವಿ.ಗಳು
ಮಂಡ್ಯ ವಿ.ವಿ., ಹಾವೇರಿ ವಿ.ವಿ., ಕೊಪ್ಪಳ ವಿ.ವಿ., ಬಾಗಲಕೋಟೆ ವಿ.ವಿ., ಹಾಸನ ವಿ.ವಿ., ಬೀದರ್‌ ವಿ.ವಿ., ಚಾಮರಾಜನಗರ ವಿ.ವಿ.

ಸಮಸ್ಯೆಗಳೇನು?
-ಕುಲಪತಿ ನೇಮಕವಾದರೂ ಹಂಗಾಮಿ ಕುಲಪತಿಗಳಿಂದಲೇ ನಿರ್ವಹಣೆ
-ಗ್ರಂಥಾಲಯ, ಆಡಳಿತ ಕಚೇರಿ, ಕ್ಯಾಂಟೀನ್‌, ಕ್ರೀಡಾಂಗಣ ಸೇರಿ ಯಾವುದೇ ಮೂಲಸೌಕರ್ಯಗಳಿಲ್ಲ
-ಕುಲಪತಿ, ಕುಲಸಚಿವ ಬಿಟ್ಟು ಬೇರೆ ಹುದ್ದೆಗಳ ನೇಮಕ ಆಗಿಲ್ಲ
-ಕೆಲವು ವಿ.ವಿ.ಗಳಿಗೆ ಅನುದಾನ ಸಿಕ್ಕಿಲ್ಲ. ಜಾಗವೂ ಮಂಜೂರಾಗಿಲ್ಲ
-ಸಿಂಡಿಕೇಟ್‌ ಸಮಿತಿಯೂ ನೇಮಕವಾಗಿಲ್ಲ
-ಪೂರ್ಣಾವಧಿ ಪ್ರಾಧ್ಯಾಪಕರೂ ಇಲ್ಲ

ರಾಜಕೀಯ ಕಾರಣಗಳಿಗೆ ಜಿಲ್ಲಾ ವಾರು ಅವೈಜ್ಞಾನಿಕವಾಗಿ ವಿ.ವಿ.ಗಳನ್ನು ಸ್ಥಾಪಿಸಿರುವ ಕಾರಣ ಹೀಗಾಗಿದೆ. ರಾಜಕೀಯ ಒತ್ತಡ ತಂದು ವಿ.ವಿ. ಸ್ಥಾಪಿಸಿ ಮತ್ತೆ ಅದರ ಬಗ್ಗೆ ನಾವೇ ಚರ್ಚೆ ಮಾಡುತ್ತೇವೆ. ನಾವೆಲ್ಲರೂ ಸೇರಿ ಈ ಬಗ್ಗೆ ಕಠಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
-ಡಾ| ಎಂ.ಸಿ. ಸುಧಾಕರ್‌, ಉನ್ನತ ಶಿಕ್ಷಣ ಸಚಿವ

ಹೊಸ ವಿ.ವಿ.ಯ ಕ್ಯಾಂಪಸ್‌ ನಿರ್ಮಾಣ ಹಾಗೂ ಮೂಲಸೌಕರ್ಯಗಳ ನೀಲ ನಕ್ಷೆ ಸಿದ್ಧಪಡಿಸಿದ್ದು, ಸರಕಾರದಿಂದ ಹಂತ ಹಂತ ವಾಗಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ.
-ಪ್ರೊ| ತಾರಾನಾಥ್‌, ಕುಲಪತಿ, ಹಾಸನ ವಿ.ವಿ.

Advertisement

Udayavani is now on Telegram. Click here to join our channel and stay updated with the latest news.

Next