Advertisement

ಬರಗಾಲ ನಿರ್ವಹಣೆಗೆ ರಾಜ್ಯ ಸರ್ಕಾರ ಸಿದ್ಧ

03:45 AM Feb 05, 2017 | Team Udayavani |

ಯಾದಗಿರಿ: ಮುಂಬರುವ ಬೇಸಿಗೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಶನಿವಾರ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬರಗಾಲ ನಿರ್ವಹಣೆಗೆ ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೆ ರಾಜ್ಯ ಸರ್ಕಾರದಿಂದಲೇ ಸಂಪೂರ್ಣ ಹಣ ಖರ್ಚು ಮಾಡಲಾಗುವುದು.
ರಾಜ್ಯ ಸರ್ಕಾರ ಪ್ರಾಮಾಣಿಕ, ಜನಪರ ಆಡಳಿತ ನೀಡುತ್ತಿದೆ. 2013ರಲ್ಲಿ ಅಧಿಧಿಕಾರಕ್ಕೆ ಬಂದ ನಂತರ ಚುನಾವಣೆಯಲ್ಲಿ ಘೋಷಿಸಿದಂತೆ 165 ಭರವಸೆಗಳ ಪೈಕಿ ಈಗಾಗಲೇ 125ನ್ನು ಈಡೇರಿಸಿದ್ದೇವೆ. ಮೇ 13ಕ್ಕೆ ಸರ್ಕಾರ ನಾಲ್ಕು ವರ್ಷ ಪೂರೈಸಲಿದ್ದು, ಇನ್ನೂ ಎರಡು ಬಜೆಟ್‌ ಮಂಡಿಸುತ್ತೇನೆ ಎಂದರು.

ವಾರಕ್ಕೆ ಐದು ದಿನ ಹಾಲು: ರಾಜ್ಯದಲ್ಲಿ ಪ್ರತಿ ದಿನ 70 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಈಗ
ಶಾಲೆಗಳಲ್ಲಿ ವಾರಕ್ಕೆ ಮೂರು ದಿನ ಮಕ್ಕಳಿಗೆ ಹಾಲು ನೀಡಲಾಗುತ್ತಿದೆ. ಏಪ್ರಿಲ್‌ 1ರಿಂದ ವಾರಕ್ಕೆ ಐದು ದಿನ ಹಾಲು ವಿತರಿಸಲು ಸರ್ಕಾರ ತೀರ್ಮಾನಿಸಿದೆ.

1.36 ಕೋಟಿ ಕುಟುಂಬಗಳ ಪೈಕಿ 1.08 ಕೋಟಿ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆಯಾಗುತ್ತಿದೆ. ಸುಮಾರು 4 ಕೋಟಿ ಜನರು ಪಡಿತರ ಆಹಾರ ಧಾನ್ಯ ಬಳಸುತ್ತಿದ್ದಾರೆ. ಕೃಷಿ ಭಾಗ್ಯ ಯೋಜನೆಯಡಿ 1 ಲಕ್ಷ ಕುಟುಂಬಗಳಿಗೆ ಲಾಭ ದೊರೆಯುತ್ತಿದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯಾವಾರು ಅನುದಾನ ಬಿಡುಗಡೆ ಮಾಡಿದ್ದು, ಐದು ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ 60 ಸಾವಿರ ಕೋಟಿ ರೂ. ನೀಡುವ ಮೂಲಕ ಕರ್ನಾಟಕ ಇತಿಹಾಸದಲ್ಲಿ ದಾಖಲೆ ನಿರ್ಮಾಣವಾಗಲಿದೆ. ಹೈದ್ರಾಬಾದ್‌ ಕರ್ನಾಟಕ ಭಾಗಕ್ಕೆ 371 (ಜೆ) ಅನುಷ್ಠಾನಗೊಳಿಸಿದ್ದು ಕಾಂಗ್ರೆಸ್‌ ಸಾಧನೆ ಎಂದರು.

Advertisement

ಹಣ ಬಿಡುಗಡೆ ಮಾಡಿಲ್ಲ: ರಾಜ್ಯದಲ್ಲಿ 170 ತಾಲೂಕುಗಳ ಪೈಕಿ 160 ತಾಲೂಕುಗಳು ಬರ ಪೀಡಿತ ಪ್ರದೇಶಗಳಾಗಿವೆ. ಶೇ. 70ರಷ್ಟು ಮಳೆ ಕೊರತೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 4,702 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರ ಸರಕಾರ 1,782 ಕೋಟಿ ರೂ. ಪರಿಹಾರ ನೀಡುವುದಾಗಿ ಭರವಸೆ ನೀಡಿದೆಯೇ ಹೊರತು ಹಣ ಬಿಡುಗಡೆ ಮಾಡಿಲ್ಲ ಎಂದು ಸಿಎಂ ತಿಳಿಸಿದರು. ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಇದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿ

ಸಾರ್ವಜನಿಕ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದಾಗ ವಾಲ್ಮೀಕಿ ನಾಯಕ ಸಮಾಜದ ಕೆಲವರು ಯಾದಗಿರಿ, ಬೀದರ, ಕಲಬುರಗಿ ಜಿಲ್ಲೆಯಲ್ಲಿ ಗೊಂಡ, ರಾಜಗೊಂಡ ಕುರುಬರಿಗೆ ಪರಿಶಿಷ್ಟ ಪಂಗಡದ
ಪ್ರಮಾಣಪತ್ರ ನೀಡುತ್ತಿರುವುದನ್ನು ಖಂಡಿಸಿ, ಕಪ್ಪು ಪಟ್ಟಿ ಪ್ರದರ್ಶಿಸಿ ಭಾಷಣಕ್ಕೆ ಅಡ್ಡಿ ಪಡಿಸಿದರು. “ಕುರುಬ ಸಮಾಜಕ್ಕೆ ಎಸ್‌ಟಿ ಪ್ರಮಾಣ ಪತ್ರ ನೀಡಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಕೂಗಿದಾಗ, ದಿಗ್ಭ್ರಮೆಗೊಂಡ ಮುಖ್ಯಮಂತ್ರಿಗಳು
ಭಾಷಣ ನಿಲ್ಲಿಸಿದರು. ಆಗ ಸಿಎಂ ಬಳಿ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, “ಇಂತಹ ಬೆದರಿಕೆಗೆ ಹೆದರುವುದಿಲ್ಲ.

ಸಮಸ್ಯೆಗಳಿದ್ದರೆ ಪ್ರತ್ಯೇಕವಾಗಿ ಭೇಟಿಯಾಗಿ ಮನವಿ ಸಲ್ಲಿಸಬೇಕು. ಕಾರ್ಯಕ್ರಮದಲ್ಲಿ ಅತಿಥಿ, ಗಣ್ಯರು ಬಂದಾಗ ಈ ರೀತಿ ವರ್ತಿಸಿ ಅವಮಾನ ಮಾಡಬೇಡಿ’ ಎಂದು ಮನವಿ ಮಾಡಿದರು. ಪೊಲೀಸರು ಲಾಠಿ ರುಚಿ ತೋರಿಸಿ ಕಪ್ಪು ಪಟ್ಟಿ
ಪ್ರದರ್ಶಿಸಿದ 8 ಜನರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next