Advertisement

ರಾಜ್ಯ ಸರ್ಕಾರ ಒಪ್ಪಿದ ಬಳಿಕ ಕೇಂದ್ರ ಸರ್ಕಾರಕ್ಕೆ ಮನವಿ

07:20 AM Sep 05, 2017 | |

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಸರ್ಕಾರ ಒಪ್ಪಿದ ನಂತರವಷ್ಟೇ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಸ್ಪಂದಿಸದಿದ್ದರಷ್ಟೇ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗುವುದು ಎಂದು ಸಚಿವರಾದ ಎಂ.ಬಿ.ಪಾಟೀಲ್‌ ಹಾಗೂ ವಿನಯ್‌ ಕುಲಕರ್ಣಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಈಗಾಗಲೇ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ವೀರಶೈವರು ಸಹ ಪ್ರತ್ಯೇಕ ಮನವಿ ನೀಡಿದ್ದಾರೆ. ಹಾಗಾಗಿ ಗೊಂದಲ ಉಂಟಾಗದಂತೆ ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿಗಳನ್ನು ಕೋರಿದ್ದು, ಸರ್ಕಾರ ಒಪ್ಪುವ ವಿಶ್ವಾಸವಿದೆ. ಆದರೆ ರಾಜ್ಯ ಸರ್ಕಾರ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತರ ಸ್ಥಾನ ನೀಡುವವರೆಗೆ ಕೇಂದ್ರ ಸರ್ಕಾರದ ಮೊರೆ ಹೋಗುವ ಪ್ರಶ್ನೆ ಇಲ್ಲ ಎಂದು ಹೇಳಿದರು.

ವೀರಶೈವ, ಪಂಚಮಸಾಲಿ, ಬಣಜಿಗ, ಜಂಗಮ, ಆರಾಧ್ಯ, ಕೂಡು ಒಕ್ಕಲಿಗ, ಶಿವಸಿಂಪಿ ಸೇರಿದಂತೆ ಒಟ್ಟು 99 ಉಪಪಂಗಡಗಳು ಸೇರಿ ಒಂದು ಲಿಂಗಾಯತ ಧರ್ಮವಾಗಿದೆ. ಈ ಬಗ್ಗೆ ಸಾಕ್ಷ್ಯಾಧಾರ, ದಾಖಲೆಗಳೂ ಇವೆ. ಜೈನ, ಬೌದ್ಧ, ಸಿಖ್‌ ಧರ್ಮಗಳಿಗೆ ಮಾನ್ಯತೆ ನೀಡಿದ ಮಾದರಿಯಲ್ಲೇ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂಬುದು ನಮ್ಮ ಆಗ್ರಹ ಎಂದು ಹೇಳಿದರು.

ಜೈನ ಸೇರಿದಂತೆ ಇತರೆ ಧರ್ಮಗಳಿಗೆ ಪ್ರತ್ಯೇಕ ಮಾನ್ಯತೆ ನೀಡಿದ್ದರಿಂದ ಹಿಂರ್ದು ಧರ್ಮ, ಇತರೆ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ. ಅದೇ ರೀತಿ ಲಿಂಗಾಯತರಿಗೆ ಸ್ವತಂತ್ರ ಧರ್ಮ ಮಾನ್ಯತೆ ನೀಡಿದರೆ ಹಿಂದು ಧರ್ಮಕ್ಕೆ ಧಕ್ಕೆಯಾಗುವುದಿಲ್ಲ. ನಮ್ಮ ಬೇಡಿಕೆಗೆ ಈವರೆಗೆ ಯಾವುದೇ ಅನ್ಯಧರ್ಮೀಯರು ವಿರೋಧ ವ್ಯಕ್ತಪಡಿಸಿಲ್ಲ. ಹಾಗಿದ್ದರೂ ವೀರಶೈವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಹಿರಂಗ ಆಹ್ವಾನ
ಬಿಜೆಪಿ ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ ಅವರು ವೀರಶೈವರು ಹಿಂದು ಧರ್ಮದ ಭಾಗ ಎಂದಿದ್ದಾರೆ. ಹೀಗಾಗಿ ಅವರು ನಮ್ಮೊಂದಿಗೆ ಬರುವ ಪ್ರಶ್ನೆಯೇ ಇರುವುದಿಲ್ಲ. ಲಿಂಗಾಯತ ಧರ್ಮ ಒಪ್ಪಿ ಬರುವುದಾದರೆ ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಇಬ್ಬರೂ ಬರಲಿ ಎಂದು ಬಹಿರಂಗ ಆಹ್ವಾನ ನೀಡಿದರು.

Advertisement

ಸ್ವಾಮೀಜಿ ಹೇಳಿಕೆಗೆ ಉಗ್ರ ಖಂಡನೆ
ಚಿಂತಕ ಎಂ.ಎಂ.ಕಲಬುರ್ಗಿ ಅವರೇ ವೀರಶೈವ ಲಿಂಗಾಯತ ಧರ್ಮವನ್ನು ಒಡೆದರು ಎಂಬುದಾಗಿ ಶಿವಯೋಗ ಮಂದಿರದ ಅಧ್ಯಕ್ಷರಾದ ಹಾಲಕೆರೆ ಅನ್ನದಾನೀಶ್ವರ ಸ್ವಾಮೀಜಿ ನೀಡಿರುವ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ. 

ಎಂ.ಎಂ.ಕಲಬುರ್ಗಿ ಅವರು ನಿಜವಾದ ಲಿಂಗಾಯತ ಧರ್ಮ ಪ್ರತಿಪಾದಕರು. ವೈದಿಕ ಧರ್ಮದ ಮುಖವಾಡವನ್ನು ಅವರು ಕಳಚಿದ್ದರು. ಅವರಿಂದಾಗಿ ಲಿಂಗಾಯತ ಧರ್ಮದ ಬಗ್ಗೆ ಜಾಗೃತಿಯಾಗಿದೆ ಎಂದು ಹೇಳಿದರು.

ಇನ್ನೊಂದೆಡೆ ಲಿಂಗಾಯತರು ಬೇರೆ, ವೀರಶೈವರು ಬೇರೆ ಎನ್ನುವವರು ಚುನಾವಣೆಗೆ ಸಿದ್ಧರಾಗಿ ಎಂಬುದಾಗಿ ಅನ್ನದಾನೀಶ್ವರ ಸ್ವಾಮೀಜಿ ಅವರ ಸವಾಲನ್ನು ನಾವು ಸ್ವೀಕರಿಸುತ್ತೇವೆ. ಈ ಹಿಂದೆ ವೀರೇಂದ್ರ ಪಾಟೀಲ್‌, ಜೆ.ಎಚ್‌.ಪಟೇಲ್‌ ಅವರಿಂದ ಹಿಡಿದು ಎಂ.ಬಿ.ಪಾಟೀಲ್‌, ವಿನಯ್‌ ಕುಲಕರ್ಣಿವರೆಗೆ ಎಲ್ಲರೂ ಲಿಂಗಾಯತ ಕೋಟಾದಲ್ಲೇ ಅಧಿಕಾರ ಪಡೆದಿದ್ದೇವೆ. ಇನ್ನು ಮಂದೆ ವೀರಶೈವರು ತಮ್ಮದೇ ವೀರಶೈವ ಕೋಟಾದಡಿ ಅಧಿಕಾರ ಕೇಳಲಿ. ಲಿಂಗಾಯತ ಕೋಟಾಕ್ಕೆ ಕೈಹಾಕಬಾರದು ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದರು.

ಲಿಂಗಾಯತರು ಮೂಲತಃ ಕನ್ನಡಿಗರಾಗಿದ್ದರೆ ವೀರಶೈವರು ಮೂಲತಃ ಕನ್ನಡಿಗರಲ್ಲ. ತಮಿಳುನಾಡಿನಿಂದ ವಲಸೆ ಬಂದ ಬಹಳಷ್ಟು ವೀರಶೈವರು ಲಿಂಗಾಯತ ಧರ್ಮ ಸ್ವೀಕರಿಸಿದರು. ಕೆಲವರು ಆಂಧ್ರ ಪ್ರದೇಶದಿಂದಲೂ ವಲಸೆ ಬಂದಿದ್ದರು. ಅವರು ಲಿಂಗಾಯತ ಧರ್ಮದ ಉಳಿದ ಎಲ್ಲ ಪಂಗಡಗಳ ಜೊತೆಯಲ್ಲೇ ಜೀವನ ನಡೆಸಿದ್ದರು. ಆದರೆ ಕ್ರಮೇಣ ತಮ್ಮದೇ ಧರ್ಮವೆಂದು ಪ್ರತಿಪಾದಿಸಿದರು. ಈಗಲೂ ಶೇ.90ರಷ್ಟು ಮಂದಿ ಲಿಂಗಾಯತರೇ ಆಗಿದ್ದು, ಶೇ.10ರಷ್ಟು ಮಂದಿಯಷ್ಟೇ ವೀರಶೈವರೆನಿಸಿದ್ದಾರೆ. ಇದಕ್ಕೆ ಬೀದರ್‌, ಬೆಳಗಾವಿ ಮತ್ತು ಲಾತೂರಿನಲ್ಲಿ ನಡೆದ ಸಮಾವೇಶದ ಜನಸಮೂಹವೇ ಸಾಕ್ಷಿ. ಇದಕ್ಕೆ ಸೂಕ್ತ ಸಾಕ್ಷ್ಯಧಾರಗಳು ನಮ್ಮಲ್ಲಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next