ಬೆಂಗಳೂರು: ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ಈಗಾಗಲೇ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ನೂತನ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ರಾಜ್ಯ ಸರಕಾರ ಇಳಿಕೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 3ರಿಂದ ಕೇಂದ್ರದ ನೂತನ ಮೋಟಾರು ವಾಹನ ಕಾಯ್ದೆ ದೇಶಾದ್ಯಂತ ಜಾರಿಗೊಂಡಿತ್ತು. ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ಬಿಸಿ ಮುಟ್ಟಿಸಿತ್ತು.
ಭಾರೀ ದಂಡದ ಮೊತ್ತ ಬಿಸಿ ತಾಗುತ್ತಿದ್ದಂತೆಯೇ ದೇಶದ ಹಲವೆಡೆ ವಾಹನ ಸವಾರರು ಅಸಮಾಧಾನ ಹೊರಹಾಕತೊಡಗಿದ್ದರು. ಇದರಿಂದಾಗಿ ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳಿಗೆ ರಾಜ್ಯ ಸರಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಯಾವುದು ಎಷ್ಟು ಇಳಿಕೆಯಾಗಲಿದೆ?
ನೂತನ ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದಂತೆ ಭಾರೀ ಮೊತ್ತದ ದಂಡ ರಾಜ್ಯ ಸರಕಾರ ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಆದರೆ ಯಾವುದಕ್ಕೆ ಎಷ್ಟು ಇಳಿಕೆಯಾಗಿದೆ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.
ಸದ್ಯದ ಮಾಧ್ಯಮಗಳ ವರದಿ ಪ್ರಕಾರ, ಲೈಸೆನ್ಸ್ ರಹಿತ ಚಾಲನೆಗೆ 5 ಸಾವಿರ ರೂ. ಬದಲು 2,500 ರೂ. ಅಪಾಯಕಾರಿ ಚಾಲನೆ 5000 ರೂ. ಬದಲು 3 ಸಾವಿರ ರೂಪಾಯಿ, ಹೆಲ್ಮೆಟ್ ರಹಿತ ಚಾಲನೆ ಒಂದು ಸಾವಿರ ರೂ. ದಂಡದ ಬದಲು 500ರೂ.ಗೆ ಇಳಿಕೆ ಮಾಡುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿತ್ತು. ಈಗಾಗಲೇ ಗುಜರಾತ್ ಸರಕಾರ ನೂತನ ಮೋಟಾರು ಕಾಯ್ದೆಯ ಭಾರೀ ದಂಡದ ಮೊತ್ತ ಇಳಿಕೆ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.