ವರದಿ:ದತ್ತು ಕಮ್ಮಾರ
ಕೊಪ್ಪಳ: ಕೋವಿಡ್ ನಿಯಂತ್ರಣವಾದ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗ ಜಿಪಂ-ತಾಪಂ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಹಲವು ರಾಜಕೀಯ ಚಟುವಟಿಕೆ ಗರಿಗೆದರಿವೆ.
ಇನ್ನು ಸ್ಪರ್ಧಾಕಾಂಕ್ಷಿಗಳು ಸಾಮಾಜಿಕ ಜಾಲತಾಣಗಳಲ್ಲೂ ತಾವು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಜನರ ಗಮನ ಸೆಳೆಯುತ್ತಿದ್ದಾರೆ. ಇಲ್ಲಿನ ಜಿಲ್ಲಾ ಪಂಚಾಯಿತಿಗೆ ಕಳೆದ ಅವ ಧಿಗೆ 29 ಕ್ಷೇತ್ರಗಳಿದ್ದವು. ಆದರೆ ಚುನಾವಣಾ ಆಯೋಗವು ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದ ಬಳಿಕ ಕ್ಷೇತ್ರಗಳ ಸಂಖ್ಯೆಯು 29ರಿಂದ 34ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಮೊದಲು 109 ತಾಪಂ ಕ್ಷೇತ್ರಗಳು ಇದ್ದವು. ಪುನರ್ ವಿಂಗಡಣೆ ವೇಳೆ 100 ಸ್ಥಾನಕ್ಕೆ ಇಳಿಕೆ ಕಂಡಿವೆ. ಈ ಎಲ್ಲ ಕ್ಷೇತ್ರಗಳಿಗೂ ಆಯೋಗ ಮೀಸಲಾತಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಜಿಲ್ಲಾದ್ಯಂತ ಜಿಪಂ, ತಾಪಂ ರಾಜಕೀಯ ಗರಿಗೆದರಿದೆ. ತಾಪಂ ಕ್ಷೇತ್ರಗಳಿಗಿಂತ ಜಿಪಂನ ಕ್ಷೇತ್ರಗಳ ಸ್ಪರ್ಧಾಕಾಂಕ್ಷಿಗಳ ಆತುರವೇ ಜೋರಾಗಿದೆ. ಮೀಸಲಾತಿ ಘೋಷಣೆಗೂ ಮೊದಲೇ ಕೆಲ ಆಕಾಂಕ್ಷಿತರು ಇಂತಹ ಕ್ಷೇತ್ರಗಳಿಂದಲೇ ತಾವು ಸ್ಪರ್ಧಿಸಲಿದ್ದೇವೆ ಎಂಬುದಾಗಿ ತಿಳಿಸಿದ್ದರು. ಈಗ ಮೀಸಲಾತಿ ಪ್ರಕಟವಾಗಿದ್ದು, ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿವೆ.
ಕಳೆದ ಬಾರಿಯ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿದಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜಿಲ್ಲೆಯಲ್ಲೂ ಮೂವರು ಬಿಜೆಪಿಯ ಶಾಸಕರಿದ್ದಾರೆ. ಈ ವೇಳೆ ಮತ್ತೆ ಜಿಪಂನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಇನ್ನು ಕಮಲದ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪ್ರತಿತಂತ್ರ ಹೆಣೆಯುತ್ತಿದ್ದು, ಕೋವಿಡ್ ವೇಳೆ ಸರ್ಕಾರದ ವೈಫಲ್ಯ ಸೇರಿದಂತೆ ಬಡವರಿಗೆ ಆಗಿರುವ ಸಮಸ್ಯೆ ಮುಂದಿಟ್ಟು ಚುನಾವಣೆಯ ರಣಕಣಕ್ಕೆ ಇಳಿಯಲು ಸಿದ್ಧತೆ ನಡೆಸುತ್ತಿದೆ ಎಂದೆನ್ನಲಾಗುತ್ತಿದೆ. ಇನ್ನು ದಳಪತಿಗಳು ನಾವ್ಯಾರಿಗೂ ಕಮ್ಮಿ ಇಲ್ಲವೆಂಬಂತೆ ಕಿಂಗ್ ಮೇಕರ್ ಆಗಲು ಮೈಗೊಡವಿ ನಿಂತಿದ್ದಾರೆ.
ಚುನಾವಣೆ ದಿನಾಂಕದ್ದೇ ಚರ್ಚೆ: ಆಯೋಗವು ಈಗಷ್ಟೇ ಮೀಸಲಾತಿ ಪ್ರಕಟಿಸಿದೆ. ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗೆ 7 ದಿನ ಅವಕಾಶ ನೀಡಿದೆ. ಬಳಿಕ ಆಯೋಗದ ನಿರ್ಧಾರ ಬಗ್ಗೆಯೂ ರಾಜಕೀಯ ಪಕ್ಷಗಳು ಕಾದು ನೋಡುತ್ತಿವೆ. ಅಲ್ಲದೇ ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಜಿಪಂ, ತಾಪಂ ಚುನಾವಣೆಗಳನ್ನು ಡಿಸೆಂಬರ್ ಅಂತ್ಯದವರೆಗೂ ನಡೆಸುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದು ಸಚಿವ ಸಂಪುಟದಲ್ಲೂ ನಿರ್ಧರಿಸಿವೆ. ಸರ್ಕಾರದ ಈ ನಿರ್ಧಾರದ ಮಧ್ಯೆಯೂ ಚುನಾವಣಾ ಆಯೋಗವು ಚುನಾವಣೆಯ ಅಧಿಸೂಚನೆ ದಿನಾಂಕ ಘೋಷಣೆ ಮಾಡಲಿದೆಯಾ? ಅಥವಾ ಡಿಸೆಂಬರ್ ನಂತರವೇ ಅಧಿ ಸೂಚನೆ ಹೊರ ಬೀಳಲಿದೆಯಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇನ್ನು ಕೋವಿಡ್ ಮೂರನೇ ಅಲೆ ಕಾಣಿಸಿಕೊಳ್ಳುವುದರೊಳಗೆ ಜಿಪಂ, ತಾಪಂ ಚುನಾವಣಾ ಪ್ರಕ್ರಿಯೆಯೂ ಪೂರ್ಣಗೊಳ್ಳಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಒಟ್ಟಿನಲ್ಲಿ ಜಿಪಂ-ತಾಪಂ ಕ್ಷೇತ್ರಗಳ ಮೀಸಲು ಪ್ರಕಟಗೊಂಡ ಬೆನ್ನಲ್ಲೇ ಭರ್ಜರಿ ಲೆಕ್ಕಾಚಾರ ಶುರುವಾಗಿವೆ. ಸ್ಪರ್ಧಾಕಾಂಕ್ಷಿಗಳು ಈಗಾಗಲೇ ತಮ್ಮದೇ ನಾಯಕರ ಬೆನ್ನಿಗೆ ಬಿದ್ದು ಟಿಕೆಟ್ ಪಡೆಯಬೇಕೆನ್ನುವ ಲೆಕ್ಕಾಚಾರ ಶುರು ಮಾಡಿದ್ದಾರೆ. ಚುನಾವಣಾ ಆಯೋಗ ಅಧಿ ಸೂಚನೆಯನ್ನು ಯಾವಾಗ ಪ್ರಕಟ ಮಾಡಲಿದೆ ಎನ್ನುವುದೇ ಎಲ್ಲರಲ್ಲೂ ಚರ್ಚಿತ ವಿಷಯವಾಗಿದೆ.