Advertisement

BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು

12:11 AM Jan 01, 2025 | Team Udayavani |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ನಿರ್ಗಮನಕ್ಕೆ ಸಿದ್ಧತೆಯ ಹೊಸ್ತಿಲಲ್ಲೇ ರಾಜ್ಯ ಬಿಜೆಪಿಯ ಆಂತರಿಕ ರಾಜಕಾರಣವೂ ಹೊಸ ಸ್ವರೂಪ ಪಡೆಯುತ್ತಿದೆ. ನಡ್ಡಾ ನಿರ್ಗಮನಕ್ಕೆ ಮುನ್ನ ತಮ್ಮ ಅವಧಿ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಶತಪ್ರಯತ್ನ ನಡೆಸುತ್ತಿದ್ದು, ಅವರ ಪರವಾಗಿ ಯಡಿಯೂರಪ್ಪ ನಿಂತಿದ್ದಾರೆ. ಇದಕ್ಕೆ ಪ್ರತಿಯಾಗಿ ವಿರೋಧಿ ಬಣವು ಹೊಸ ಅಧ್ಯಕ್ಷರ ಪ್ರತಿಷ್ಠಾಪನೆಗೆ ಗುಪ್ತ ಸಮರವನ್ನೇ ನಡೆಸುತ್ತಿದೆ. ಈ ಗದ್ದುಗೆ ಹೋರಾಟದಲ್ಲಿ ಶೋಭಾ ಕರಂದ್ಲಾಜೆ ಹಾಗೂ ಬಸವರಾಜ ಬೊಮ್ಮಾಯಿ ಹೆಸರು ಮುನ್ನೆಲೆಗೆ ಬಂದಿದೆ.

Advertisement

ಈಗ ಬಿಜೆಪಿಯ ಸಂಘಟನ ಪರ್ವ ಅಭಿಯಾನ ನಡೆಯುತ್ತಿದೆ. ಇದಾದ ಬಳಿಕ ನಡ್ಡಾ ಬದಲು ಹೊಸ ಅಧ್ಯಕ್ಷರ ನೇಮಕವಾಗಲಿದೆ. ಫೆಬ್ರವರಿ ವೇಳೆಗೆ ಈ ಪ್ರಕ್ರಿಯೆ ನಡೆಯುತ್ತದೆ. ಆದರೆ ಬಿಜೆಪಿಯ ಪಕ್ಷ ಸಂವಿಧಾನ ಪ್ರಕಾರ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಗೆ ಮುನ್ನ ಪರಿಸ್ಥಿತಿ ಆಧರಿಸಿ ಶೇ. 50ರಷ್ಟು ರಾಜ್ಯಗಳಿಗೆ ಹೊಸ ಅಧ್ಯಕ್ಷರ ನೇಮಕವಾಗಬೇಕು.

ಈ ನಿಯಮ ಆಧಾರವಾಗಿ ಇಟ್ಟುಕೊಂಡು ಈಗ ಬಿಜೆಪಿಯಲ್ಲಿ ಪಟ್ಟದ ಪರ-ವಿರೋಧ ಚಟುವಟಿಕೆ ಗುಪ್ತವಾಗಿ ನಡೆಯುತ್ತಿದೆ.
ಪಟ್ಟು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿಲ್ಲ, ಅನುಭವದ ಕೊರತೆ, ಸರಕಾರದ ವಿರುದ್ಧ ಹೋರಾಟ ನಡೆಸುವುದಕ್ಕೆ ಹಿಂದೇಟು ಸಹಿತ ವಿಜಯೇಂದ್ರ ವಿರುದ್ಧ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಣ ಹಲವು ಸುತ್ತಿನ ಆರೋಪ ಪಟ್ಟಿ ಸಲ್ಲಿಸಿದೆ. ಇದರ ಜತೆಗೆ ತಟಸ್ಥ ಬಣದಿಂದಲೂ ಆಕ್ಷೇಪವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಒಕ್ಕಲಿಗ ಹಾಗೂ ಮಹಿಳಾ ಕೋಟಾದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಿಯೋಜಿಸಬೇಕು.

ಈ ಪ್ರಸ್ತಾವಕ್ಕೆ ಬಿ.ಎಸ್‌. ಯಡಿಯೂರಪ್ಪ ಕೂಡ ಪ್ರತಿರೋಧ ತೋರಲಾರರು ಎಂಬುದು ದಿಲ್ಲಿಯ ಕೆಲವು ನಾಯಕರ ಲೆಕ್ಕಾಚಾರ. ಆದರೆ ವಿಜಯೇಂದ್ರ ಅವರನ್ನು ವಿರೋಧಿಸುವಷ್ಟೇ ದೊಡ್ಡ ಸಂಖ್ಯೆಯಲ್ಲಿ ಶೋಭಾ ವಿರೋಧಿಗಳೂ ಇದ್ದಾರೆ. ಹೀಗಾಗಿ ಈ ಪ್ರಯೋಗ ಯಶ ನೀಡುತ್ತದೆಯೇ, ಇಲ್ಲವೇ ಎಂಬ ಗೊಂದಲವಿದೆ. ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಯಡಿಯೂರಪ್ಪ ಅವರಿಂದ ನೇರ ವಿರೋಧ ಇರುವುದರಿಂದ 3ನೇ ವ್ಯಕ್ತಿಯಾಗಿ ಬಸವರಾಜ್‌ ಬೊಮ್ಮಾಯಿ ಅವರ ಹೆಸರು ದಿಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ತೇಲಿ ಹೋಗಿದೆ. ಒಟ್ಟಾರೆಯಾಗಿ ನಡ್ಡಾ ಬದಲಾವಣೆಗೆ ಮುನ್ನ ವಿಜಯೇಂದ್ರ ಪದಚ್ಯುತಿಗೆ ಎರಡು ಬಣಗಳು ಪ್ರಯತ್ನಶೀಲವಾಗಿವೆ.

ಯಡಿಯೂರಪ್ಪ ಪಣ
ಇನ್ನೊಂದೆಡೆ ಹೊಸ ಅಧ್ಯಕ್ಷರ ನೇಮಕಕ್ಕೆ ಮುನ್ನ ವಿಜಯೇಂದ್ರ ಅವರನ್ನು ಮತ್ತೂಂದು ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಬೇಕೆಂಬುದು ಮಾಜಿ ಸಿಎಂ ಯಡಿಯೂರಪ್ಪ ಅವರ ಪಣವಾಗಿದೆ. ಒಂದೊಮ್ಮೆ ಈಗ ಅಧಿಕಾರಾವಧಿ ವಿಸ್ತರಣೆಗೊಂಡರೆ ಮುಂದಿನ 3 ವರ್ಷಗಳ ಅವಧಿಗೆ ವಿಜಯೇಂದ್ರ ಬದಲಾವಣೆ ಅಸಾಧ್ಯ. ಜತೆಗೆ ಚುನಾವಣಾ ವರ್ಷವೂ ಎದುರಾಗುವುದರಿಂದ ಮುಂದಿನ ವಿಧಾನಸಭಾ ಚುನಾವಣೆ ಮುಗಿದು ಹೊಸ ಸರಕಾರ ರಚನೆಯಾಗುವವರೆಗೆ ವಿಜಯೇಂದ್ರ ಅವರನ್ನು ಅಲುಗಾಡಿಸುವುದು ಸಾಧ್ಯವಿಲ್ಲ.

Advertisement

ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಹಾಗೂ ವಿಜಯೇಂದ್ರ ವರಿಷ್ಠರ ಮುಂದೆ ತಮ್ಮ ಪಟ್ಟು ಬಿಗಿಗೊಳಿಸಿದ್ದಾರೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಜಯೇಂದ್ರ ಜತೆಗೆ ಯಡಿಯೂರಪ್ಪ ಕೂಡ ದಿಲ್ಲಿಗೆ ತೆರಳಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಜತೆಗೆ ದಿಲ್ಲಿಯ ಆಯಕಟ್ಟಿನ ವ್ಯಕ್ತಿಗಳ ಜತೆಯೂ ರಹಸ್ಯ ಮಾತುಕತೆ ನಡೆದಿದೆ. ಎಷ್ಟೇ ವಿರೋಧ ಎದುರಾದರೂ ವಿಜಯೇಂದ್ರ ರಕ್ಷಣೆಗೆ ಯಡಿಯೂರಪ್ಪ ಪಣ ತೊಟ್ಟಿದ್ದು, 2 ದಿನಗಳ ಹಿಂದಿನ ವಿಜಯೇಂದ್ರ ಅವರ ದಿಲ್ಲಿ ಭೇಟಿ ಇದೇ ಪ್ರಯತ್ನದ ಭಾಗವಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ತಂಡ ಬದಲಾವಣೆ
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಇದೇ ಸಂದರ್ಭದಲ್ಲಿ ಬಿಜೆಪಿಯ ಕೋರ್‌ ಕಮಿಟಿ ಹಾಗೂ ರಾಜ್ಯ ಸಮಿತಿಯ ಸದಸ್ಯರೂ ಬದಲಾಗಲಿದ್ದಾರೆ. ರಾಜ್ಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗೆ ಹೊಸಬರ ನೇಮಕ ಖಚಿತ. ಈ ಮೂಲಕ ಪಕ್ಷದಲ್ಲಿ ಹೊಸ ಚಲನೆ ಸೃಷ್ಟಿಸುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿದೆ.

ಬಿಎಸ್‌ವೈ- ಬೊಮ್ಮಾಯಿ ಭೇಟಿಯ ಗುಟ್ಟೇನು?
ಆಂತರಿಕ ಭಿನ್ನಮತ ತೀವ್ರವಾಗಿರುವಾಗಲೇ ಮಾಜಿ ಮಾಜಿ ಸಿಎಂ ಯಡಿಯೂರಪ್ಪ ಗುಟ್ಟಾಗಿ ಸಂಸದ ಬೊಮ್ಮಾಯಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ. ಇದು ಬಿಜೆಪಿಯಲ್ಲಿ ಹಲವು ಚರ್ಚೆಗೆ ಕಾರಣವಾಗಿದೆ. ಈ ಭೇಟಿಯ ಬಳಿಕವೇ ಬೊಮ್ಮಾಯಿಯವರಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಬಯಕೆ ಇನ್ನಷ್ಟು ಬಲವಾಗಿದೆ ಎಂದು ಹೇಳಲಾಗುತ್ತಿದ್ದು, “ಎಲ್ಲವನ್ನೂ ಸರಿ ಮಾಡೋಣ’ ಎಂದು ಬಿಜೆಪಿ ನಾಯಕರಿಗೆ ಬೊಮ್ಮಾಯಿ ಭರವಸೆ ನೀಡಲಾರಂಭಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ತಮ್ಮ ಹಿರಿತನ ಬಿಜೆಪಿಯ ಅಯೋಮಯ ಸ್ಥಿತಿಗೆ ಉತ್ತರವಾಗಬಹುದೆಂಬುದು ಬೊಮ್ಮಾಯಿ ಅವರ ಲೆಕ್ಕಾಚಾರವಾಗಿದ್ದು, ಪುತ್ರನ ಬದಲು ಶಿಷ್ಯನಿಗೆ ಅವಕಾಶ ಸೃಷ್ಟಿಸುವ ಉದಾರತೆಯನ್ನು ಯಡಿಯೂರಪ್ಪ ಮತ್ತೆ ತೋರಬಲ್ಲರೇ ಎಂಬುದು ಪ್ರಶ್ನೆಯಾಗಿದೆ.

ಸಂಸದರ ಸಭೆಯಲ್ಲೂ ರಾಜ್ಯ ನಾಯಕತ್ವದ ಬಗ್ಗೆ ಚರ್ಚೆ ಯತ್ನಾಳ್‌ ನೋಟಿಸ್‌ ಪ್ರಕರಣದ ಬಳಿಕ ದಿಲ್ಲಿಯಲ್ಲಿ 2 ಬಾರಿ ಸಭೆ ನಡೆಸಿರುವ ರಾಜ್ಯ ಬಿಜೆಪಿ ಸಂಸದರು ಕರ್ನಾಟಕದಲ್ಲಿ ಪಕ್ಷದ ಮುಖಂಡರು ನಡೆಸುತ್ತಿರುವ ಯಾದವೀ ಕಲಹದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಜಯೇಂದ್ರ ನಾಯಕತ್ವದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಆದರೆ ಪರ್ಯಾಯ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆ ಸಂದರ್ಭದಲ್ಲಿ ಬೊಮ್ಮಾಯಿ ಅವರು ಲಿಂಗಾಯತ ಹಾಗೂ ಉತ್ತರ ಕರ್ನಾಟಕದ ದಾಳ ಉರುಳಿಸಿದ್ದಾರೆ.

ಆರಂಭದಲ್ಲಿ ಯತ್ನಾಳ್‌ ಪರ ಬೊಮ್ಮಾಯಿ ಈ ರೀತಿ ಲಾಬಿ ಮಾಡಿದ್ದಾರೆಂದು ಭಾವಿಸಲಾಗಿತ್ತು. ಆದರೆ ಇತ್ತೀಚೆಗಿನ ವಿದ್ಯಮಾನದ ಪ್ರಕಾರ ಬೊಮ್ಮಾಯಿ ಪ್ರಯೋಗಿಸಿದ “ಲಿಂಗಾಯತ ಹಾಗೂ ಉತ್ತರ ಕರ್ನಾಟಕ’ ಪದ ತಮ್ಮ ಪಾತ್ರ ಪೋಷಣೆಯ ಉದ್ದೇಶದ್ದು ಎಂದು ಸಂಸದರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

- ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next