Advertisement

ಎಳೆಯರ ಕಂಗಳ ಫ‌ಳಫ‌ಳ ನಕ್ಷತ್ರ 

06:50 AM Oct 01, 2017 | Harsha Rao |

ಬದುಕು ಎಂಬುದು ಮನಸ್ಸನ್ನು ಬಿಟ್ಟು ಇಲ್ಲ. ಅದು ಮನಸ್ಸಿನೊಂದಿಗೆ, ಕಾಲದೊಂದಿಗೆ ಪಯಣಿಸಬೇಕಾದ ದೀರ್ಘ‌ ಪಯಣ. ಮಗುವಿನ ಮನಸ್ಸು ಎಷ್ಟು ಕೋಮಲವೋ ಅಷ್ಟೇ ಸಂಕೀರ್ಣ, ಸೂಕ್ಷ್ಮ, ಸುಲಭವಾಗಿ ಗ್ರಹಿಸಲಾಗದ್ದು. ಅದೊಂದು ಅಮೂರ್ತ ಲೋಕ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಮಾನಸಿಕತಜ್ಞನೇ ಆಗಬೇಕೆಂದಿಲ್ಲ, ಮಕ್ಕಳನ್ನು ಪ್ರೀತಿಸುವ ಹೃದಯ, ಸೂಕ್ಷ್ಮವಾಗಿ ಅವಲೋಕಿಸುವ ಕಣ್ಣು , ಕಿವಿ ಹಾಗೂ ಅವರ ಭಾವನೆಗಳಿಗೆ ಸ್ಪಂದಿಸುವ ಮನಸ್ಸು ಇದ್ದರೆ ಸಾಕು ಎಂಬುದಕ್ಕೆ ನಿದರ್ಶನ 37 ವರ್ಷಗಳ ಕಾಲ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದುಕೊಂಡು ಮಕ್ಕಳಿಗಾಗಿ ಸಾಹಿತ್ಯ ರಚನೆ ಮಾಡುತ್ತ ಬಾಳಿ ಮೊನ್ನೆ ತಾನೇ ಇನ್ನಿಲ್ಲವಾದ ಮಗುವಂತಹ ಪಳಕಳ ಸೀತಾರಾಮಭಟ್ಟರು. ಇವರ ಚಿಕ್‌ ಚಿಕ್‌ ಚಿವ್‌ ಚಿವ್‌ ಎಂದುಕೊಂಡು ಮರಗಳಲ್ಲಿ ಅತ್ತ ಇತ್ತ ಓಡುತ್ತಿರುವೆ ನಾನು ಯಾರು?, ನನ್ನಪ್ಪ ಇಷ್ಟೆತ್ರ ನನ್ನಮ್ಮ ಇಷ್ಟೆತ್ರ ನಾನು ಮಾತ್ರ ಇಷ್ಟೆ ಎತ್ರ ಯಾಕೋ ಗೊತ್ತಿಲ್ಲ! ಇಂತಹ ಎಷ್ಟೋ ಕವನಗಳ ಮೂಲಕ ಮಗುಮನಗಳು ಅರಳುತ್ತಿವೆ. ಭೌತಿಕ ಶರೀರ ಇಲ್ಲವಾದರೇನಂತೆ? ಹಾಡಿ ಕುಣಿವ ಬಟ್ಟಲು ಕಂಗಳಲ್ಲಿ ಫ‌ಳಫ‌ಳ ನಕ್ಷತ್ರ ಹೊಳೆವಾಗೆಲ್ಲ ಮತ್ತೆ ಮತ್ತೆ ಜೀವ ಪಡೆಯುತ್ತಿರುತ್ತಾರೆ ಎಳೆಯರ ಪಳಕಳ! ಅವರದ್ದು  ಸಾರ್ಥಕ ಬಾಳು ! ಬದುಕಿನಾಚೆಗೂ ಆಯುಷ್ಯ !
.
ಪಳಕಳ ಸೀತಾರಾಮ ಭಟ್ಟರು ಮೂಲತಃ ಕೃಷಿಕರಾಗಿದ್ದ ಈಶ್ವರ ಭಟ್ಟ ಮತ್ತು ಲಕ್ಷ್ಮೀಯಮ್ಮ ದಂಪತಿಯ ಐದು ಮಕ್ಕಳಲ್ಲಿ ಮೊದಲನೆಯವರು. ಇವರು ಹುಟ್ಟಿದ್ದು 1930, ಜುಲೈ 5ರಂದು ಜೈನಕಾಶಿಯೆಂದು ಪ್ರಸಿದ್ಧವಾಗಿರುವ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆಯ ಪುತ್ತಿಗೆಯ ಮಿತ್ತಬೈಲಿನ ಪಳಕಳದಲ್ಲಿ. ಗುಡ್ಡಗಾಡು ಗ¨ªೆಬಯಲಲ್ಲಿ ಸಹಜ ಸುಂದರವಾಗಿ ಅರಳಿದ ಕೇಪಳ ಹೂವಿನಂತಹ ಬಾಲ್ಯ,  ಕೃತಕತೆಯ ಲೇಪವಿಲ್ಲ. ಬಡತನವನ್ನೇ ಹಾಸಿ ಹೊದ್ದರೂ ಹರಿದ ಚಾದರದ ತೂತುಗಳಲ್ಲಿ ಇಣುಕುತ್ತಿದ್ದ  ಬೆಳಕು, ನಕ್ಷತ್ರ, ಚಂದಕ್ಕಿಮಾಮ; ಕೊಟ್ಟಿಗೆಯಲ್ಲಿ ನಿತ್ಯ ಕಂಡ ಅಂಬಾಬೂಚಿ, ಕಾಗೆ, ಗುಬ್ಬಿ , ಅಳಿಲು… ಇವರ ಕಥೆ ಕವನಗಳÇÉೆಲ್ಲ ಇವೇ ಹಾಡುತ್ತ ಹೆಜ್ಜೆಹಾಕುತ್ತ ಮಕ್ಕಳನ್ನು ಕೈಬೀಸಿ ಕರೆಯುತ್ತವೆ. ಕೂಡುಕುಟುಂಬದಲ್ಲಿ ಮಕ್ಕಳಿಗೆ ಪ್ರೀತಿಗೆ ಕೊರತೆಯಿರಲಿಲ್ಲ.  ಪೌರಾಣಿಕ, ಜನಪದಕತೆಗಳ ಕೊಪ್ಪರಿಗೆಯಾಗಿದ್ದ ಸೋದರತ್ತೆ ಚೆನ್ನಕ್ಕನಿಂದ, ಕಲ್ಪನೆಯ ಹಾರುಕುದುರೆಯ ಬೆನ್ನೇರಿ ಆಗಸಕ್ಕೆ ಹಾರಲು ಕಲಿತರು. ಕಡಲಕೆರೆ ಪ್ರಾಥಮಿಕ ಶಾಲೆಯ ಹಾದಿಯುದ್ದಕ್ಕೂ ಹಸಿರನ್ನೇ ಹೀರುತ್ತ ನೆಲಬಿಟ್ಟು ಹಾರಿತ್ತು ಹಕ್ಕಿಯಂತೆ ಬಾಲ್ಯ.

Advertisement

ಹಳೆಮನೆಯ ಹಳೆಗೋಡೆಯು ಇವರ ಅಧ್ಯಾಪಕನಾಗುವ ಸುಪ್ತ ಹಂಬಲಕ್ಕೆ ಕೈಬೀಸಿ ಕರೆಯುತ್ತ ನಿತ್ಯ ಮೈಯ್ಯೊಡ್ಡಿ ಟೀಚರಾಟಕ್ಕೆ ಕರಿಹಲಗೆಯಾಯಿತು. ಪ್ರಾಥಮಿಕ ಶಾಲೆಯ ಕ್ರಿಶ್ಚಿಯನ್‌ ಮೇಷ್ಟ್ರೊಬ್ಬರು ಪಂಜೆಯವರ ಗುಡುಗುಡು ಗುಮ್ಮಟ ದೇವರು, ಕಾಗೆ ಸತ್ತು ಹೇನು ಬಡವಾಯಿತು, ಇಲಿಗಳ ಥಕಥೈ, ಬಿಟ್ಟಿ ಬಸವಯ್ಯ, ಬೆಲ್ಲದ ಬೈಲು ಬೆರ್ಚಪ್ಪ  ಮುಂತಾದ ಕತೆಗಳನ್ನು ಹಾಗೂ ನಾಗರ ಹಾವೆ, ತೆಂಕಣ ಗಾಳಿಯಾಟ ಮುಂತಾದ ಪದ್ಯಗಳನ್ನು ಅಭಿನಯಿಸುತ್ತ ಹೇಳುತ್ತಿದ್ದರಂತೆ. ಮಕ್ಕಳ ಭಾಷೆ, ಮಕ್ಕಳ ಪುಸ್ತಕ ಹೇಗಿರಬೇಕು ಎಂಬುದಕ್ಕೆ ಮಾದರಿ ಹಾಕಿ ಕೊಟ್ಟವರೇ ಪಂಜೆ ಮಂಗೇಶರಾಯರು ಎಂಬ ಮಾತನ್ನು  ನಾನು ಪಳಕಳರ ಬಾಯಲ್ಲಿ ನೂರಾರುಬಾರಿ ಕೇಳಿದ್ದೇನೆ. ಇವರ ಮೇಲೆ ಪ್ರಭಾವ ಬೀರಿದ ಮತ್ತೂಬ್ಬರು ಜಿ. ಪಿ. ರಾಜರತ್ನಂ. ಪಳಕಳರ ಆರಂಭದ ಟಿಕ್ಕಿ-ಡಿಕ್ಕಿ-ಪಿಕ್ಕಿ, ಕುಣಿದಾಡಿದ ಅಳಿಲಣ್ಣ, ಮಿಠಾಯಿ ಬೊಂಬೆ ಯಂತಹ ಲಯಬದ್ಧ ಕಥೆಗಳಲ್ಲಿ ಪಂಜೆಯವರ ಕಥೆಗಳ ಪ್ರಭಾವವಿದ್ದರೆ, ಹುಲಿಗೆ ಚಳಿ, ಕುದುರೆ ಸವಾರಿಯಂತಹ ಪ್ರಾಸಬದ್ಧ ಕವನಗಳಲ್ಲಿ ಜಿ.ಪಿ. ರಾಜರತ್ನಂ ಅವರ ಕವನಗಳ ಪ್ರಭಾವವನ್ನು ಗಮನಿಸಬಹುದು. ಮುಂದೆ ತಮ್ಮದೇ ಆದ ಸ್ವತಂತ್ರ ಹಾದಿಯನ್ನು ಕಂಡುಕೊಂಡರು. 

ಆಗ ಅವರ ಊರಲ್ಲಿದ್ದದ್ದು ಪ್ರಾಥಮಿಕ ಶಾಲೆ ಮಾತ್ರ. ಆ ಕಾಲದಲ್ಲಿ ಪ್ರಾಥಮಿಕ ಶಾಲೆಗೇ ಆರೇಳು ಆಣೆ ತೆರಬೇಕಾದುದರಿಂದ ಹೆಚ್ಚಿನ ಬಡಮಕ್ಕಳಿಗೆ ಪ್ರೌಢ ಶಿಕ್ಷಣವೆಂಬುದು ನೇಲೆ ಮೇಲಿನ ನಿಲುಕದ ಬೆಣ್ಣೆಯಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ರಾಮಚಂದ್ರ ಭಟ್ಟರ ನೆರವಿನಿಂದಾಗಿ ಮೂಡುಬಿದರೆಯ ಜೈನ್‌ ಹೈಸ್ಕೂಲ್‌ ಸೇರಿದರು. ಎಂಟನೆ ಇಯತ್ತೆಯಲ್ಲಿ ಇವರ ಮೊದಲ ಕಥೆ ಹೊಟ್ಟೆನೋವಿನ ಭೂತ ಶಾಲಾಹಸ್ತಪ್ರತಿಯಲ್ಲಿ ಪ್ರಕಟವಾಯಿತು. ರಾ. ಮೊ. ವಿಶ್ವಾಮಿತ್ರರ ಪ್ರೋತ್ಸಾಹದಿಂದ ಬರೆದ ಕತೆ-ಕವನಗಳು ಚಂದಮಾಮ, ಕಥಾವಳಿ, ನವಭಾರತ, ಬಾಲಮಿತ್ರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. 1948-49ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾದರು. ಸಹೋದರರ ಶಿಕ್ಷಣವೂ ಅಗತ್ಯವಾದುದರಿಂದ ಮುಂದೆ ಓದಲಾಗದೆ ಉದ್ಯೋಗದ ಬೇಟೆ ಶುರುವಾಯಿತು. ಗುರುಗಳಾದ ವಿದ್ವಾನ್‌ ಕಾಂತ ರೈಯವರ ನೆರವಿಂದ ಹೆಬ್ರಿ ಹೈಯರ್‌ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭವಾಯಿತು. ಅಲ್ಲಿನ ಆರೇಳು ತಿಂಗಳ ದುಡಿಮೆಯಲ್ಲಿ ಉಳಿಸಿದ್ದು ಸೀತಾನದಿ ಜಾನುವಾರು ಜಾತ್ರೆಯಲ್ಲಿ ಕೊಂಡ ಕರಿಕಂಬಳಿ ಮಾತ್ರ, “ಮಲೆನಾಡಲ್ವಾ?’ ಎಂದು ನಗುತ್ತಿದ್ದರು ಪಳಕಳರು. ಅÇÉೇ ಕಲಿತ ಅಂಬಾತನಯ ಮುದ್ರಾಡಿಯವರು ಪಳಕಳರ ಪ್ರಿಯ ಶಿಷ್ಯ. ಪಳಕಳರನ್ನು ತಮ್ಮ ಮಾನಸಿಕ ಗುರುವೆಂದೇ ಪ. ರಾಮಕೃಷ್ಣ ಶಾಸಿŒ ಹಾಗೂ ಎಷ್ಟೋ ಸಾಹಿತಿಗಳು  ಹೆಮ್ಮೆಯಿಂದ ಹೇಳುತ್ತಾರೆ. ಮುಂದೆ ಒಂದು ವರ್ಷಕಾಲ ಗುಡ್ಡೆಯಂಗಡಿ ಪ್ರಾಥಮಿಕ ಶಾಲೆಯಲ್ಲಿ ದುಡಿದು ಆ ಗಳಿಕೆಯಲ್ಲಿ ಕಾಸರಗೋಡಿನ ಮಾಯಿಪ್ಪಾಡಿ ವೃತ್ತಿ ಶಿಕ್ಷಣ ತರಬೇತಿ ಕೇಂದ್ರಕ್ಕೆ ಸೇರಿದರು. ಗಾಂಧೀಜಿಯವರ ಸಾಬರಮತಿ ಆಶ್ರಮದಲ್ಲಿ ತರಬೇತಿ ಪಡೆದು ಬಂದ ರಾಮಕೃಷ್ಣ ಶೆಟ್ಟಿಯವರು ಮುಖ್ಯಗುರುಗಳು. ಶಿಕ್ಷಣವು ಪುಸ್ತಕದ ಬದನೆಕಾಯಿಯಾಗಿರದೆ ಅನುಭವ ಕೇಂದ್ರಿತ  ಗಾಂಧಿತತ್ವವನ್ನೊಳಗೊಂಡ ದುಡಿಮೆ ಸಹಿತ ಜೀವನಶಿಕ್ಷಣವಾಗಿತ್ತು. ಪಳಕಳರ ಸಹಜ ಸರಳ ಸಜ್ಜನಿಕೆಯ ವ್ಯಕ್ತಿತ್ವದೊಳಗೆ ಅಡಗಿದ್ದ  ಶಾಂತ ಬೆಳಕನ್ನು ಉದ್ದೀಪನಗೊಳಿಸಿತು,  ಪಾಲಡ್ಕ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾದರು, ಮರು ವರ್ಷವೇ ಅದು ಹಿರಿಯ ಪ್ರಾಥಮಿಕ ಶಾಲೆಯಾಗಿ ಅದರ ಮುಖ್ಯೋಪಾಧ್ಯಾಯರಾದರು.

ಮೂಡಬಿದ್ರೆ ಜೈನ್‌ ಹೈಸ್ಕೂಲಲ್ಲಿ ಓದುತ್ತಿ¨ªಾಗ ಇವರಿಗೆ ಅಧ್ಯಾಪಕರಾಗಿದ್ದ ಪಿ. ಗುರುರಾಜ ಭಟ್ಟರು ಅಧ್ಯಯನ ಮಾಡಿ ಸಂಶೋಧನೆಗಳ ಮೂಲಕ ಬಹಳ ಪ್ರಖ್ಯಾತರಾದವರು, ಅಪ್ರತಿಮ ತುಳು ಭಾಷಾ ವಿದ್ವಾಂಸರು. ಅವರ ಒತ್ತಾಯದಿಂದ ಮುಂದೆ ಪಳಕಳರೂ ಕೂಡ ಬಿಎ, ಬಿಎಡ್‌, ಎಂಎ ಮಾಡಿ  23 ವರ್ಷಗಳ ಕಾಲ  ಜೈನ್‌ ಹೈಸ್ಕೂಲ್‌ನಲ್ಲಿ ದುಡಿದು ನಿವೃತ್ತರಾದರು.

ಮಕ್ಕಳ ಸಾಹಿತ್ಯ ರಚಿಸಬೇಕಾದರೆ ಮೊದಲನೆಯ ಅರ್ಹತೆಯೆಂದರೆ, ಮಕ್ಕಳ ಬಗ್ಗೆ ಪ್ರೀತಿಯಿರಬೇಕು. ಮಕ್ಕಳ ಆಟ, ಓಟ, ಪಾಠ, ಮಾತು, ವರ್ತನೆ ಎಲ್ಲವನ್ನೂ ತೀರಾ ಹತ್ತಿರದಲ್ಲಿ ಮೌನವಾಗಿ ಸರಿಯಾಗಿ ಗಮನಿಸುತ್ತಲೇ ಇರಬೇಕು. “ಮಕ್ಕಳ ಸಾಹಿತ್ಯಕ್ಕೆ ಮುಖ್ಯವಾಗಿ ಬೇಕಿರುವುದು ಮಕ್ಕಳ ಭಾಷೆ’ ಎನ್ನುತ್ತಿದ್ದ ಪಳಕಳರಿಗೆ ಅವರ ಬಾಲ್ಯ, ವಿದ್ಯಾಭ್ಯಾಸ ಹಾಗೂ ನೌಕರಿ ಈ ಮೂರು ಘಟ್ಟದಲ್ಲೂ ಹತ್ತಿರವಿದ್ದವರು ಮಕ್ಕಳೇ. ಅಂದಿನಿಂದ ಇಂದಿನವರೆಗೂ ಅವರು ಉಸಿರಾಡಿದ್ದು ಮಕ್ಕಳ ಸಾಹಿತ್ಯವನ್ನೇ.

Advertisement

ಪಳಕಳರ ಪತ್ನಿ ವಸಂತಿ ಎಸ್‌. ಭಟ್‌, ಮೂಲತಃ ಮದ್ರಾಸಿನವರು. ಪೇಟೆಯ ಹುಡುಗಿಯಾದರೂ ಪಳಕಳರು ಅಧ್ಯಯನದಲ್ಲಿ ನಿರತರಾದಾಗ ಗ¨ªೆಕೆಲಸ, ಕೊಟ್ಟಿಗೆ ಕೆಲಸ, ಅಡುಗೆ ಕೆಲಸ ಎಂಬ ಬೇಸರವೇ ಇಲ್ಲದೆ ದುಡಿದವರು. ಪತಿಗೆ ಸಿಗುತ್ತಿದ್ದ ಕಡಿಮೆ ಸಂಬಳದÇÉೇ ಕೂಡು ಕುಟುಂಬವನ್ನು ಸುಧಾರಿಸಿದವರು. ಪಳಕಳರ ಚಿಣ್ಣರ ಹಾಡು, ಕಿರಿಯರ ಕಿನ್ನರಿ, ಮಕ್ಕಳ ಮುದ್ದು ಎಂಬ ಮೊತ್ತಮೊದಲ ಮೂರು ಪುಸ್ತಕಗಳು ಪ್ರಕಟವಾಗಿ, ಮದ್ರಾಸ್‌ ಸರಕಾರದ ಮಕ್ಕಳ ಸಾಹಿತ್ಯ ಬಹುಮಾನ ಪಡೆದಾಗ ಹಿರಿಹಿರಿ ಹಿಗ್ಗಿದವರು ಇವರು. ಅಂದಿನಿಂದ ಮೊನ್ನೆಯವರೆಗೂ ಪಳಕಳರ ಪ್ರಕಟವಾದ ಕೃತಿಗಳ ಸಂಖ್ಯೆ 140ಕ್ಕೂ ಹೆಚ್ಚು. ಅವುಗಳಲ್ಲಿ 36 ಮಕ್ಕಳ ಕವನ ಸಂಕಲನಗಳು, 61 ಮಕ್ಕಳ ಕಥಾಸಂಕಲನಗಳು, 26 ಮಕ್ಕಳ ನಾಟಕಗಳು, 07 ಮಕ್ಕಳ ಜೀವನಚರಿತ್ರೆಗಳು ಹಾಗೂ ಪ್ರೌಢಕೃತಿಗಳು 15.  2013ರ ಕೇಂದ್ರ ಸಾಹಿತ್ಯ ಅಕಾಡೆಮಿಯೂ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಶಿಶು ಸಾಹಿತ್ಯ ಮಾಲೆಯ ಮೂಲಕ ಬೇರೆ ಬೇರೆ ಸಾಹಿತಿಗಳ ಪುಸ್ತಕ ಪ್ರಕಟಿಸಿದ ಪ್ರಕಾಶಕರು, ಪಳಕಳ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶೈಕ್ಷಣಿಕ, ವೈದ್ಯಕೀಯ ನೆರವು ನೀಡಿದ ಸಮಾಜ ಸೇವಕರು ಪಳಕಳರು.

ಏನೂ ಇಲ್ಲದಿದ್ದಲ್ಲೂ ಜಗತ್ತನ್ನೇ ನೋಡುವ ಇಮ್ಯಾಜಿನೇಶನ್‌ ಮಕ್ಕಳಲ್ಲಿರುತ್ತವೆ; ಟಿಕೇಟು ಬೇಡ ರೈಲು ಬೇಡ, ಬಯಸಿದೊಡನೆ ದಿಲ್ಲಿಗೂ ಹೋಗಿ ಬರುತ್ತಾರೆ! ಡಾಕ್ಟರ್‌, ಡ್ರೈವರ್‌, ಟೀಚರ್‌, ಅಮ್ಮ … ಏನು ಬೇಕಾದರೂ ಆಗುತ್ತಾರೆ. ಚಿತ್ರಗಳಲ್ಲಿ ಮೋಡಗಳಿಗೂ ಕಣ್ಣು ಕಿವಿ ಜೀವ ತುಂಬುತ್ತಾರೆ. ದೊಡ್ಡವರು ಮಕ್ಕಳಿಗಾಗಿ ಬರೆದರೆ ಪ್ರೌಢಿಮೆಯ ಒಂದು ಲೇಯರ್‌ ಇದ್ದೇ ಇರುತ್ತದೆ. ಮಕ್ಕಳ ಸಾಹಿತ್ಯ ! ಏನು ಮಹಾ ಎಂದು ಮೂಗು ಮುರಿಯುವವರು ಒಮ್ಮೆ ಈ ಸಾಹಿತ್ಯಸೃಷ್ಟಿಯ ಹೊಣೆ ಹೊತ್ತರೆ ಮಾತ್ರ ಬಾಲ್ಯದ ನೆನಪಿನಾಳದ ಗುಹೆಗೆ ಹೊಕ್ಕು ಮತ್ತೆ ಮಗುವಾಗಿ ಬರೆಯಬೇಕಾದ ಕೆಲಸದಲ್ಲಿನ ಕಷ್ಟದ ಅರಿವಾಗಬಹುದು!

ಸಹಜವಾಗಿ ಮಾಗಬೇಕಾದ ಬಾಳೆಗೊನೆಯನ್ನು ರಾಸಾಯನಿಕ ಇಂಜೆಕ್ಟ್ ಮಾಡಿ ಬಲವಂತವಾಗಿ ಪಕ್ವವಾಗಿಸುವಂತೆ ಜಾಗತೀಕರಣವು ಮಕ್ಕಳನ್ನು ಸಹಜ ಹರೆಯ ಬರುವ ಮುನ್ನವೇ ಅಸಹಜ ಪ್ರಬುದ್ಧರನ್ನಾಗಿಸುತ್ತಿದೆ. ಹೆತ್ತವರು ಇದನ್ನು ಬುದ್ಧಿವಂತಿಕೆಯ ಚೌಕಟ್ಟಿನೊಳಗೇ ಅವಲೋಕಿಸುತ್ತಾರೆ. ಹರೆಯ ಬರುವ ಮುನ್ನವೇ ಹರೆಯ ತಂದುಕೊಳ್ಳುವುದು ಬುದ್ಧಿವಂತಿಕೆಯೇ? ಮಲ್ಲಿಗೆಯ ಬದಲು ಮಕ್ಕಳು ಗನ್‌ ಅನ್ನು ಪ್ರೀತಿಸತೊಡಗಿ¨ªಾರೆ. ಮಕ್ಕಳು ನಿಸರ್ಗದತ್ತ ಬಾಳಿನ ಕಾಮನಬಿಲ್ಲಿನ ಪ್ರೀತಿ ಕಳೆದುಕೊಂಡು ಯಂತ್ರ ಜಗತ್ತಿನ ಕೃತಕ ಬಣ್ಣಕ್ಕೆ ಮರುಳಾಗುತ್ತಿರುವುದಕ್ಕೆ ಮಾತೃಭಾಷೆಯ ಭಾವನಾತ್ಮಕ ಬಂಧದಿಂದ  ದೂರವಾಗುತ್ತಿರುವುದೇ ಕಾರಣ ಎಂದು ತೋರುತ್ತದೆ. ಹಸಿರು ಜೀವ ಜಗತ್ತನ್ನು ಆಸ್ವಾದಿಸುವ, ಆರಾಧಿಸುವ ಮೂಲಗುಣ ಪಡೆದುಕೊಂಡು ಮಗು ಹೃದಯವಂತನಾಗಿ ಬೆಳೆಯಬೇಕಾದರೆ ಪಳಕಳ ಸೀತಾರಾಮಭಟ್ಟರಂತಹ ಮಕ್ಕಳ ಸಾಹಿತಿಗಳ ಬರಹಗಳು ಅತ್ಯಗತ್ಯ, ಜತೆಗೆ ವಾಸ್ತವ ಜಗತ್ತÇÉೇ ಯಂತ್ರವಾಗಿ ಎಚ್ಚರವಾಗಿಯೇ ಇರುವುದಕ್ಕಿಂತ ಸಂಗೀತ, ನಾಟಕ, ನೃತ್ಯ ಲಲಿತಕಲೆಗಳ ಮೂಲಕ ಮಗು ಆಗಾಗ ಮೈಮರೆಯಬೇಕಿರುವುದೂ ಅಗತ್ಯ.

– ಕಾತ್ಯಾಯಿನಿ ಕುಂಜಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next