Advertisement

ವಿವಿ ಪ್ಯಾಟ್‌ ಜತೆ ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ

09:38 AM Apr 18, 2019 | Team Udayavani |

ಚಾಮರಾಜನಗರ: ಲೋಕಸಭಾ ಕ್ಷೇತ್ರಕ್ಕೆ ಗುರುವಾರ ನಡೆಯಲಿರುವ ಚುನಾವಣೆಯ ಸಲುವಾಗಿ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಬುಧವಾರ ಮಸ್ಟರಿಂಗ್‌ ಕಾರ್ಯ ಸುಗಮವಾಗಿ ನಡೆಯಿತು.

Advertisement

ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಚಾ.ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ಗುಂಡ್ಲುಪೇಟೆ ಕ್ಷೇತ್ರಕ್ಕೆ ಸೇಂಟ್‌ ಜಾನ್‌ ಸ್ಕೂಲ್‌, ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಕೊಳ್ಳೇಗಾಲದ ಎಂಜಿಎಸ್‌ವಿ ಮತ್ತು ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು.

ಮತಗಟ್ಟೆಗಳಿಗೆ ನೇಮಕ ಮಾಡಿರುವ ಮತಗಟ್ಟೆ ಅಧಿಕಾರಿಗಳು ನೇಮಕವಾಗಿರುವ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್‌ ಕೇಂದ್ರ ತಲುಪಲು ಅನುಕೂಲವಾಗುವಂತೆ ಬುಧವಾರ ಬೆಳಗ್ಗೆ 6 ಗಂಟೆಯಿಂದ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮತ್ತೊಮ್ಮೆ ತರಬೇತಿ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಮಸ್ಟರಿಂಗ್‌ ನಡೆಯಿತು. ಕೊಠಡಿಯಲ್ಲಿ ಇಡಲಾಗಿದ್ದ ವಿದ್ಯುನ್ಮಾನ ಯಂತ್ರಗಳನ್ನು ಹೊರತೆಗೆದು, ನಿಯೋಜನಗೊಂಡಿರುವ ಮತಗಟ್ಟೆ ಅಧಿಕಾರಿ ಹಾಗೂ ತಂಡಕ್ಕೆ ಮತ ಯಂತ್ರದ ನಿರ್ವಹಣೆಯ ಬಗ್ಗೆ ಮತ್ತೊಮ್ಮೆ ತರಬೇತಿ ನೀಡಲಾಯಿತು.

ಚುನಾವಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಮತಯಂತ್ರಗಳನ್ನು ಪರೀಕ್ಷಿಸಿದ ನಂತರ, ವಿದ್ಯುನ್ಮಾನ ಯಂತ್ರ ಹಾಗೂ ಸಾಮಗ್ರಿ ಭತ್ಯೆ, ಊಟ ತಿಂಡಿಯ ಟೋಕನ್‌ ಪಡೆದು, ತಮ್ಮ ರೂಟ್‌ಗೆ ನಿಯೋಜನೆಗೊಂಡಿದ್ದ ಸರ್ಕಾರಿ ಬಸ್‌, ವ್ಯಾನ್‌, ಜೀಪ್‌ ಇತ್ಯಾದಿ ವಾಹನಗಳಲ್ಲಿ ಮತಗಟ್ಟೆಗಳಿಗೆ ತೆರಳಿದರು.

Advertisement

ಅಂಚೆ ಮತದಾನದ ವ್ಯವಸ್ಥೆ: ಮತಗಟ್ಟೆ ಸಿಬ್ಬಂದಿ ಅಲ್ಲದೇ, ಭದ್ರತಾ ವ್ಯವಸ್ಥೆಗೆ ನಿಯೋಜನೆಗೊಂಡಿರುವ, ಇನ್ಸ್‌ಸ್ಪೆಕ್ಟರ್‌, ಸಬ್ ಇನ್ಸ್‌ಸ್ಪೆಕ್ಟರ್‌ಗಳು, ಮುಖ್ಯಪೇದೆಗಳು, ಪೇದೆಗಳು, ಜಿಲ್ಲಾ ಶಸ್ತ್ರಸ್ತ್ರಪಡೆ, ಚಾಮರಾಜಪಡೆ, ಪೊಲೀಸ್‌ ಸಿಬ್ಬಂದಿ, ಗೃಹ ರಕ್ಷಕ ದಳವರು, ಕೇಂದ್ರೀಯ ಕೈಗಾರಿಕಾ ರಕ್ಷಣಾ ಪಡೆಯ ಯೋಧರು, ತಮಗೆ ನಿಯೋಜನೆಗೊಂಡ ಸ್ಥಳಗಳಿಗೆ ತೆರಳಿದರು. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿತ್ತು.

ಆರೋಗ್ಯ ತಪಾಸಣೆ: ಚುನಾವಣೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಮಸ್ಟರಿಂಗ್‌ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ನಡೆಸಿದ್ದು ವಿಶೇಷವಾಗಿತ್ತು. ಅಲ್ಲದೇ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು. ಸಿಬ್ಬಂದಿ ರಕ್ತದೊತ್ತಡ, ಮಧುಮೇಹ ತಪಾಸಣೆಗೊಳಗಾದರು.

ಗೊತ್ತಿಲ್ಲದ ಊರುಗಳಿಗೆ ಪಯಣ: ಮಸ್ಟರಿಂಗ್‌ ಕಾರ್ಯಕ್ಕೆ ಬಂದ ಸಿಬ್ಬಂದಿಗೆ ತಮ್ಮನ್ನು ಯಾವ ಊರಿಗೆ ನಿಯೋಜಿಸಲಾಗಿದೆ ಎಂಬ ಕುತೂಹಲವಿತ್ತು. ಸ್ಥಳ ಗೊತ್ತಾದ ನಂತರ, ತಮ್ಮ ಸಹೋದ್ಯೋಗಿಗಳನ್ನು ಪರಿಚಯದವರನ್ನು ನಿಮ್ಮನ್ನು ಯಾವ ಊರಿಗೆ ನಿಯೋಜಿಸಿದ್ದಾರೆ ಎಂದು ಕೇಳುವುದು ಮಾಮೂಲಾಗಿತ್ತು. ಪಟ್ಟಣ ಪ್ರದೇಶ, ಪಟ್ಟಣದ ಹತ್ತಿರದಲ್ಲಿರುವ ಊರುಗಳಿಗೆ ನಿಯೋಜಿಸಲ್ಪಟ್ಟವರು ನಿರಾಳವಾದರೆ, ಅರಣ್ಯದಂಚಿನ ಪ್ರದೇಶ, ದೂರದ ಊರುಗಳಿಗೆ ನಿಯೋಜಿಸಲ್ಪಟ್ಟವರು, ಅಲ್ಲಿ ಹೇಗೋ ಏನೋ ಎಂಬ ಚಿಂತೆಯಲ್ಲಿದ್ದರು.

ಮತಗಟ್ಟೆಗಳಿಗೆ ಸಿಬ್ಬಂದಿಯನ್ನು ಕರೆದೊಯ್ಯಲು ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳು, ಅರಣ್ಯದಂಚಿನ ಗ್ರಾಮಗಳಿಗೆ ತೆರಳಲು ವ್ಯಾನ್‌ ಹಾಗೂ ಜೀಪ್‌ಗ್ಳು ಸಿದ್ಧವಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next