ರಾಮದುರ್ಗ: ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ರಾಮದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 247 ಮತಗಟ್ಟೆಗಳಿಗೆ ಕರ್ತವ್ಯ ನಿರ್ವಹಿಸಲು ಚುನಾವಣಾ ಸಿಬ್ಬಂದಿ ಸೋಮವಾರ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಿಂದ ಮತಗಟ್ಟೆಗೆ ತೆರಳಿದರು.
ಈ ಚುನಾವಣೆಯಲ್ಲಿ 1,03,029 ಪುರುಷರು, 99,741 ಮಹಿಳಾ ಮತದಾರರು ಮತ್ತು 11 ಜನ ತೃತೀಯ ಲಿಂಗಿಗಳು ಇದ್ದಾರೆ. 57 ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ. ಸುವ್ಯವಸ್ಥೆ ಮತ್ತು ದಕ್ಷತೆಯಿಂದ ಕೆಲಸ ನಿರ್ವಹಿಸಲು 17 ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು 432 ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವದು ಎಂದರು.
ಸಿಪಿಐ ಶ್ರೀನಿವಾಸ ಹಾಂಡ್ ಮಾತನಾಡಿ, ಒಬ್ಬರು ಡಿಎಸ್‌ಪಿ, 3 ಸಿಪಿಐ, 3 ಜನ ಪಿಎಸ್‌ಐ, 10 ಎಎಸ್‌ಐ ಎಚ್.ಸಿ, ಕೆಎಸ್‌ಆರ್‌ಪಿ, ಗೃಹ ರಕ್ಷಕ ದಳ, ಪೊಲೀಸ್ ಸಿಬ್ಬಂದಿ ಸೇರಿ 432 ಜನರಿಂದ ಶಾಂತಿಯುತ ಚುನಾವಣೆಗೆ ಇಲಾಖೆ ಸಜ್ಜಾಗಿದೆ ಎಂದು ತಿಳಿಸಿದರು. ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಮಕೇರಿ ಮತಗಟ್ಟೆ ಸಂಖ್ಯೆ 10ನ್ನು ಪಿಂಕ್ ಮತಗಟ್ಟೆಯನ್ನಾಗಿ ಸ್ಥಾಪಿಸಲಾಗಿದೆ. ಈ ಮತಗಟ್ಟೆಯಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವರು ಎಂದು ಅಧಿಕಾರಿಗಳು ತಿಳಿಸಿದರು.
Advertisement
ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ 1100 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಕ್ಷೇತ್ರದಲ್ಲಿ 247 ಮತಗಟ್ಟೆಗಳಿವೆ. ಪ್ರತಿ ಮತದಾನ ಕೇಂದ್ರಕ್ಕೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಮತ್ತು ಇಬ್ಬರು ಸಿಬ್ಬಂದಿಗಳು ಸೇರಿದಂತೆ ಪ್ರತಿ ಮತಗಟ್ಟೆಗೆ 4 ಜನ ಸಿಬ್ಬಂದಿಯಂತೆ ಒಟ್ಟು 988 ಜನರನ್ನು ಮತಗಟ್ಟೆಯ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 112 ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲಾಗಿದೆ. ಒಟ್ಟು 247 ಮತಗಟ್ಟೆಗಳಲ್ಲಿ 15 ಸೂಕ್ಷ್ಮ, 24 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರ್ತಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಬಿ. ಸುರೇಶರಾವ್ ತಿಳಿಸಿದರು.