ರಾಯಚೂರು: ನಗರದ ನವೋದಯ ವೈದ್ಯಕೀಯ ಕಾಲೇಜಿನ 40 ಭದ್ರತಾ ಸಿಬ್ಬಂದಿಯನ್ನು ಕಾರಣರಹಿತವಾಗಿ ಯಾವುದೇ ಸೂಚನೆ ನೀಡದೆ ಕೆಲಸದಿಂದ ವಜಾಗೊಳಿಸಿದ್ದು, ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ನೇತೃತ್ವದಲ್ಲಿ ಸಂತ್ರಸ್ತ ಸಿಬ್ಬಂದಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ನವೋದಯ ಎಜ್ಯುಕೇಶನ್ ಟ್ರಸ್ಟ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದರು.
ನವೋದಯ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ದಶಕಕ್ಕಿಂತ ಮುಂಚಿನಿಂದಲೂ 60ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಅವರನ್ನು ಕೆಲಸದಿಂದ ತೆಗೆಯುವಂತ ಯಾವುದೇ ಗುರುತರ ಆರೋಪಗಳು ಅವರ ಮೇಲಿಲ್ಲ. ಆದರೆ, ನಿರ್ವಹಣೆಯನ್ನು ಧಾರವಾಡದ ಪವನ್ ಏಜೆನ್ಸಿ ಎಂಬ ಕಂಪನಿಗೆ ನೀಡಿದ ಬೆನ್ನಲ್ಲೇ ಎಲ್ಲ ಕೆಲಸಗಾರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ದೂರಿದರು.
ಸಂಸ್ಥೆ ಇಷ್ಟು ವರ್ಷ ಕೆಲಸಗಾರರನ್ನು ದುಡಿಸಿಕೊಂಡರೂ ಕಾರ್ಮಿಕ ನಿಯಮಗಳನ್ನು ಪಾಲಿಸಿಲ್ಲ. ಕನಿಷ್ಠ ವೇತನ ಪಾವತಿಸದೆ ದುಡಿಸಿಕೊಂಡಿದೆ. ಬ್ಯಾಂಕ್ ಖಾತೆಗೆ ವೇತನ ಪಾವತಿಸುವ ಬದಲು ಕೈಗೆ ಸಂಬಳ ನೀಡಿದೆ. ಪಿಎಫ್ ಸೌಲಭ್ಯ ಕಲ್ಪಿಸಿಲ್ಲ, ಕಾರ್ಮಿಕ ಕಾಯ್ದೆ ಪ್ರಕಾರ ನೀಡಬೇಕಾದ ಯಾವ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ದೂರಿದರು.
ಕೂಡಲೇ ಎಲ್ಲ ಕಾರ್ಮಿಕರನ್ನು ಮರುನೇಮಕ ಮಾಡಿಕೊಳ್ಳಬೇಕು, ವೇತನ ವ್ಯತ್ಯಾಸ ಅರಿಯರ್ ಪಾವತಿಸಬೇಕು. ಕಳೆದ 10-15 ವರ್ಷಗಳ ಫಿಎಫ್ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಜಿಲ್ಲಾಧ್ಯಕ್ಷ ಜಿ.ಅಮರೇಶ, ಮುಖಂಡಾರ ರವಿ ದಾದಾಸ್, ಜಂಗ್ಲೆಪ್ಪ ಕೋರಿ, ಶರಣಪ್ಪ ನಂದಿಹಾಳ, ಶಿವುಕುಮಾರ, ವಿರುಪಾಕ್ಷಿ, ಎಂ.ಬಾಬು, ರಮೇಶ, ತಿರುಪತಿ, ನರಸಪ್ಪ, ರಾಘವೇಂದ್ರ ಸೇರಿ ಭದ್ರತಾ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.