ಸೇಡಂ: ಆರ್ಯ ಈಡಿಗ ಸಮಾಜದ ಬಹುತೇಕ ಜನರ ಆಯ್ಕೆಯಂತೆ ನಾನು ಅಧ್ಯಕ್ಷನಾಗಿ ಮುಂದುವರಿಯಲಿದ್ದೇನೆ ಎಂದು ವೆಂಕಟಯ್ಯ ಮುಸ್ತಾಜರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷರು ಎನಿಸಿಕೊಂಡಿರುವ ರಾಜೇಶ ಗುತ್ತೇದಾರ ನಡೆಯಿಂದ ಆರ್ಯ ಈಡಿಗ ಸಮಾಜದಲ್ಲಿ ಒಡಕುಂಟಾಗುತ್ತಿದೆ ಎಂದು ಆರೋಪಿಸಿದರು.
ಕೆಲ ದಿನಗಳಹಿಂದೆ ಸಮಾಜದ ಬಹುತೇಕ ಜನರು ಸಭೆ ಸೇರಿ, ಮುಂದಿನ ಅವಧಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ರಾಜೇಶ ಗುತ್ತೇದಾರ ಅಧ್ಯಕ್ಷರೆಂದು ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ. ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗಬೇಕಾದವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಆರ್ಯ ಈಡಿಗ ಸಮಾಜಕ್ಕೆ ಜಿಲ್ಲಾಧ್ಯಕ್ಷರು, ಗೌರವಾಧ್ಯಕ್ಷರು ಶಾಸಕ ಸುಭಾಷ ಗುತ್ತೇದಾರ ಆಗಿದ್ದಾರೆ. ರಾಜೇಶ ಗುತ್ತೇದಾರ ಹಸ್ತಕ್ಷೇಪ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ನೀರಾ ಹೋರಾಟ ಸಮಿತಿ ಅಧ್ಯಕ್ಷ ಶರಣಯ್ಯ ಕಲಾಲ ಮಾತನಾಡಿ, ಜಿಲ್ಲಾಧ್ಯಕ್ಷರು ಅಧಿಕಾರ ವಹಿಸಿಕೊಂಡು ಅವಧಿ ಮುಗಿಯುವ ಹಂತಕ್ಕೆ ಬಂದರೂ ಒಂದು ಸಭೆ ನಡೆಸಿಲ್ಲ. ಸಮಾಜಕ್ಕಾಗಿ ಎಲ್ಲಿಯೂ ಧ್ವನಿ ಎತ್ತಲಿಲ್ಲ ಎಂದರು.
ಸಮಾಜದ ಮುಖಂಡರಾದ ವಿಜಯಕುಮಾರ ಗುತ್ತೇದಾರ, ಸತ್ತಯ್ಯಗೌಡ ಇಟಕಾಲ್, ವಸಂತ ಗುತ್ತೇದಾರ, ರವಿಗೌಡ ಮದನಾ, ಅನಂತಯ್ಯಗೌಡ, ಲಾಲಯ್ಯ ಗುತ್ತೇದಾರ, ತಮ್ಮಯ್ಯ ಗುತ್ತೇದಾರ, ನಾಗಯ್ಯ ಗುತ್ತೇದಾರ, ಅಮೃತಯ್ಯ ಗುತ್ತೇದಾರ, ನರಸಯ್ಯ ಗುತ್ತೇದಾರ, ಪ್ರಶಾಂತ ಸೂರವಾರ, ಸೀತಾರಾಮಯ್ಯ, ಬಸವರಾಜ ಗುತ್ತೇದಾರ, ಅನಂತಯ್ಯ ಗುತ್ತೇದಾರ, ಸುರೇಶಗೌಡ ಕುರಕುಂಟಾ, ರಂಗಯ್ಯ ಮುಧೋಳ, ಅಶೋಕ ಮದ್ರಿ, ಭೀಮಯ್ಯ ಗೌಡನಹಳ್ಳಿ ಇನ್ನಿತರರಿದ್ದರು.