Advertisement

ಅಂಗನವಾಡಿ ಹೋರಾಟ ಸಂಘಟನೆಯಲ್ಲಿ ಒಡಕು

03:45 AM Mar 23, 2017 | Team Udayavani |

ಬೆಂಗಳೂರು: ಕಳೆದ ಮೂರು ದಿನಗಳಿಂದ ನಗರದಲ್ಲಿ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟಗಾರರಲ್ಲಿ ಒಡಕು ಕಾಣಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಮಾತುಕತೆ ಬಳಿಕ ಈ ಬೆಳವಣಿಗೆ ಕಾಣಿಸಿಕೊಂಡಿರುವುದು ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆಯೇ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.

Advertisement

ಕನಿಷ್ಠ ಹತ್ತು ಸಾವಿರ ರೂ. ಮಾಸಿಕ ಗೌರವಧನಕ್ಕಾಗಿ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು  ಸೋಮವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಇದೀಗ ನಾಲ್ಕನೇ ದಿನಕ್ಕೆ ಕಾಲಿರಿಸಿದೆ.ಮುಖ್ಯಮಂತ್ರಿಗಳ ಜತೆ ಮಾತನಾಡಿದ ಪ್ರತ್ಯೇಕ ನಾಲ್ಕು ಸಂಘಟನೆಗಳ ಪ್ರತಿನಿಧಿಗಳು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿವೆ. ಆದರೆ, ಪ್ರತಿಭಟನೆಗೆ ಕರೆ ನೀಡಿದ್ದ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಅವರು ಪ್ರತಿಭಟನೆ ಹಿಂತೆಗೆದುಕೊಂಡಿಲ್ಲ ಎಂದು ಹೇಳಿದರಲ್ಲದೆ, ಗುರುವಾರ ಅಂಗನವಾಡಿಗಳ ಬಂದ್‌ ನಡೆಸುವುದಾಗಿ ತಿಳಿಸಿದ್ದಾರೆ. ಈ ನಡುವೆ, ಧರಣಿ ನಿರತ ಮೂವರು ಬುಧವಾರ ಅಸ್ವಸ್ಥರಾಗಿದ್ದಾರೆ.

ಬಜೆಟ್‌ ಅಧಿವೇಶನ ಹಾಗೂ ಉಪ ಚುನಾವಣೆ ನಂತರ ಏಪ್ರಿಲ್‌ 19ರಂದು ಸಭೆ ಕರೆದು ಚರ್ಚಿಸುವ ಭರವಸೆ ಸರ್ಕಾರದ ಕಡೆಯಿಂದ ದೊರೆತಿದ್ದರೂ, ತಕ್ಷಣವೇ ಗೌರವ ಧನ ಹೆಚ್ಚಳ ಬಗ್ಗೆ ಆದೇಶ ಹೊರಡಿಸಬೇಕು ಎಂದು ಪಟ್ಟು ಹಿಡಿದಿರುವ ಸಾವಿರಾರು ಮಹಿಳೆಯರು ಬುಧವಾರವೂ ಹಗಲು-ರಾತ್ರಿ ಪ್ರತಿಭಟನೆ, ಧರಣಿಯಲ್ಲಿ ತೊಡಗಿದ್ದರು. ಅಳುವ ಮಕ್ಕಳೊಂದಿಗೆ ರಸ್ತೆಯಲ್ಲೇ ಮಲಗಿ ಊಟ-ತಿಂಡಿಯ ಪರಿವೆಯೇ ಇಲ್ಲದೆ, ಬಿರು ಬಿಸಿಲನ್ನು ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.

ಸಿಎಂ ಜತೆ ಇನ್ನೊಂದು ಸುತ್ತಿನ ಮಾತುಕತೆ
ಈ ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಬುಧವಾರ ರಾತ್ರಿ ಮಾತುಕತೆ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಂಧಿಸಿದ ನಾಲ್ಕು ಸಂಘಟನೆಗಳು , ಮುಷ್ಕರ ವಾಪಸ್‌ ಪಡೆಯುವುದಾಗಿ ಘೋಷಿಸಿದವು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಹಾಮಂಡಲದ ಅಧ್ಯಕ್ಷ ಜಿ.ಆರ್‌.ಶಿವಶಂಕರ್‌ ಹಾಗೂ ಅಂಗನವಾಡಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಶಿವಣ್ಣ , ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷ ಯಾದಗೀರಿ ಸೋಮಶೇಖರ್‌ ಸೇರಿ ನಾಲ್ಕು ಸಂಘಟನೆಗಳು ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಆದಷ್ಟು ಬೇಗ ಬೇಡಿಕೆ ಈಡೇರಿಸುವ ಭರವಸೆ ಪಡೆದು,  ನಮ್ಮ ಸಂಘಟನೆಗಳ ವ್ಯಾಪ್ತಿಗೆ ಒಳಪಡುವ 21 ಸಾವಿರ ಸದಸ್ಯರು ಮುಷ್ಕರ ವಾಪಸ್‌ ಪಡೆದಿದ್ದಾರೆ ಎಂದುಘೊಷಿಸಿದರು.

ಅತ್ತ ವಿಧಾನಮಂಡಲದ ಉಭಯ ಸದನಗಳಲ್ಲೂ ಮತ್ತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರ ಪ್ರಸ್ತಾಪವಾಗಿ ಸರ್ಕಾರ ಸಂಘಟನೆ ಮುಖಂಡರನ್ನು ಕರೆದು ಮಾತನಾಡಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರನ್ನು ಮಾತುಕತೆಗೆ ಕಳುಹಿಸುವುದಾಗಿ ಸಕಾರರದ ಪರವಾಗಿ ಉತ್ತರ ನೀಡಲಾಯಿತು.

Advertisement

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಾತುಕತೆ ವೇಳೆಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಅವರೇ ಸಭೆಗೆ ದಿನಾಂಕ ನಿಗದಿಪಡಿಸುವಂತೆ ಹೇಳಿದರು. ಅದರಂತೆ ಏಪ್ರಿಲ್‌ 19 ರಂದು ಸಭೆ ನಿಗದಿ ಮಾಡಲಾಯಿತು. ಜತೆಗೆ ಸಭೆ ನಿಗದಿ ಬಗ್ಗೆ ನೋಟಿಸ್‌ ಸಹ ನೀಡಲು ತಿಳಿಸಿದರು. ಆ ಬಗ್ಗೆ ಲಿಖೀತವಾಗಿ ನೋಟಿಸ್‌ ನೀಡಲಾಯಿತು. ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ತೀರ್ಮಾನ ತಿಳಿಸುವುದಾಗಿ ಹೇಳಿ ಹೋದರು ಆದರೆ, ಪ್ರತಿಭಟನೆ ಮುಂದುವರಿಸಿದ್ದಾರೆ. ಆದರೂ ಸರ್ಕಾರ ಸಹಾನುಭೂತಿಯಿಂದ ಅವರ ಬೇಡಿಕೆ  ಈಡೇರಿಸಲು ಸಿದ್ಧವಿದ್ದು ಪ್ರತಿಭಟನೆ ವಾಪಸ್‌ ಪಡೆಯಬೇಕು ಎಂದು ಸದನದ ಮೂಲಕ ಮನವಿ ಮಾಡುತ್ತೇನೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌,  ಮುಖ್ಯಮಂತ್ರಿಯವರೇ ಸಂಘಟನೆಗಳ ಜತೆ ಮಾತುಕತೆ ನಡೆಸಿ ಪ್ರತಿಭಟನೆ ಕೈ ಬಿಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ, ಅಲ್ಲಿ ಪ್ರತಿಭಟನೆ ಮುಂದುವರಿದಿದೆ. ಸರ್ಕಾರ ಮತ್ತೆ ಮಾತುಕತೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಜೆಡಿಎಸ್‌ ಸದಸ್ಯರು ಕೆಲಕಾಲ ಧರಣಿ ನಡೆಸಿ ಸರ್ಕಾರ  ಈ ವಿಚಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಧರಣಿ ಕೈ ಬಿಟ್ಟರು.

ಏಪ್ರಿಲ್‌ 19 ರಂದೇ ಕರೆದಿರುವ ಸಭೆಯಲ್ಲಿ ಬೇಡಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ತಮ್ಮನ್ನು ಭೇಟಿ ಮಾಡಿದ ನಾಲ್ಕು ಸಂಘಟನೆಗಳ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ. ಕೆಲಸದ ಸಮಯವನ್ನು ಕಡಿತಗೊಳಿಸುವುದು ಹಾಗೂ ಗೌರವ ಧನ ಹೆಚ್ಚಳ ಕುರಿತಂತೆ ಅಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಬೇಡಿಕೆ‌ ಇಟ್ಟಿರುವವರು ನಾವು. ಮುಷ್ಕರದ ನೋಟಿಸ್‌ ಕೊಟ್ಟಿರುವವರು ನಾವು. ಸರ್ಕಾರ, ಜನಬಲ ಇಲ್ಲದ ನಾಲ್ಕು ಸಂಘಟನೆ ಕರೆದು ಸಭೆ ನಡೆಸಿ ಹೋರಾಟದ ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿದೆ. ಗುರುವಾರ ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುವುದಿಲ್ಲ. ಬಂದ್‌ ಮಾಡಲಾಗುವುದು. ಎಐಟಿಯುಸಿಯವರು ನಮಗೆ ಬೆಂಬಲ ನೀಡಿ ಹೋರಾಟಕ್ಕೆ ಸೇರಿಕೊಳ್ಳುತ್ತಿದ್ದಾರೆ. ಇದರಿಂದ ನೌಕರರ ಹಿತಾಸಕ್ತಿ  ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ಯಾವ ಸಂಘಟನೆ ಎಂಬುದು ಗೊತ್ತಾಗುತ್ತದೆ. ಯಾವುದೇ ಕಾರಣಕ್ಕೂ ಬೇಡಿಕೆ ಈಡೇರುವವರೆಗೂ ಹೋರಾಟ ಕೈ ಬಿಡುವುದಿಲ್ಲ.
– ವರಲಕ್ಷ್ಮಿ, ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next