Advertisement

ಸರ್ಕಾರಿ ಜಮೀನು ಕೈತಪ್ಪುವ ಭೀತಿ: ಅಪ್ಪ-ಮಗಳಿಂದ ಆತ್ಮಹತ್ಯೆ ಯತ್ನ

11:03 AM Apr 08, 2017 | |

ಮುಂಡರಗಿ: ಆರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ 4 ಎಕರೆ ಸರ್ಕಾರಿ ಜಮೀನು ಕೈತಪ್ಪುವ ಭೀತಿಯಿಂದ ರೈತನೊಬ್ಬ ತನ್ನ ಮಗಳ ಜೊತೆಗೂಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಕೋರ್ಲಹಳ್ಳಿ ಗ್ರಾಮದಲ್ಲಿ ಜರುಗಿದೆ.

Advertisement

ರೈತ ಲಿಯಾಖತ್‌ ಬಳ್ಳಾರಿ ಹಾಗೂ ಆತನ ಮಗಳು ಮಾಬುನ್ನೀಸಾ ವಿಷ ಸೇವಿಸಿದ್ದು, ಖುದ್ದು ತಹಶೀಲ್ದಾರ್‌ ಅವರೇ ಇಬ್ಬರನ್ನೂ ತಮ್ಮ ವಾಹನದಲ್ಲಿ ಸಾಗಿಸಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.ನನ್ನೇಸಾಬ ಬಳ್ಳಾರಿ ಎಂಬುವರು 1955-56ನೇ ಸಾಲಿನಿಂದ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿದ್ದರು. ಇವರಿಗೆ ಮೂವರು ಮಕ್ಕಳ ಪೈಕಿ ಲಿಯಾಖತ್‌ ಬಳ್ಳಾರಿಯವರಿಗೂ ನಾಲ್ಕು ಎಕರೆ ಜಮೀನು ಬಂದಿತ್ತು. 2001ರಲ್ಲಿ ಕಂದಾಯ ಇಲಾಖೆ ಕಂಪ್ಯೂಟರ್‌ ಉತಾರ ಪ್ರಕಾರ ಕಾಲಂ-9ರಲ್ಲಿ ಸರಕಾರಿ ಖಾಲಿ ಭೂಮಿ ಹೆಸರಲ್ಲಿದ್ದು, ಸಾಗುವಳಿ ಕಾಲಂನಲ್ಲಿ 1956ರಿಂದಲೂ ನನ್ನೇಸಾಬ ಬಳ್ಳಾರಿ ಮತ್ತವರ ಮಕ್ಕಳ ಹೆಸರಿತ್ತು. 2001ರವರೆಗೂ ಬಳ್ಳಾರಿ ಕುಟುಂಬದಿಂದ ಭೂಮಿಯ ಏಕಸಾಲ ಗೇಣಿ ಕಟ್ಟಿಸಿಕೊಳ್ಳುತ್ತಿದ್ದ ಕಂದಾಯ ಇಲಾಖೆ 2002ರಿಂದ ಗೇಣಿ ಹಣವನ್ನು ಕಟ್ಟಿಸಿಕೊಳ್ಳಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಳ್ಳಾರಿ ಕುಟುಂಬ ಸಲ್ಲಿಸಿದ್ದ ಅರ್ಜಿಯನ್ನು ಭೂನ್ಯಾಯಮಂಡಳಿಯು ಗೋಮಾಳವೆಂಬ ಕಾರಣ ನೀಡಿ ತಿರಸ್ಕೃರಿಸಿತ್ತು. ನ್ಯಾಯಾಲಯವೂ ಸರ್ಕಾರದ ಪರವಾಗಿ ತೀರ್ಪು ನೀಡಿ ಜಮೀನನ್ನು ಕಂದಾಯ ಇಲಾಖೆಗೆ ಬಿಟ್ಟು ಕೊಡುವಂತೆ ಆದೇಶ ನೀಡಿತ್ತು.

ಅದರಂತೆ ತಹಶೀಲ್ದಾರ್‌ ಭ್ರಮರಾಂಬಾ ಗುಬ್ಬಿಶೆಟ್ಟಿ ಶುಕ್ರವಾರ ಸಿಬ್ಬಂದಿಯೊಂದಿಗೆ ಜಮೀನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾಗ ರೈತ ಲಿಯಾಖತ್‌ ಬಳ್ಳಾರಿ ಹಾಗೂ ಆತನ ಮಗಳು ಮಾಬುನ್ನೀಸಾ ವಿಷ ಸೇವಿಸಿದ್ದಾರೆ.

ರೈತ ಲಿಯಾಖತ್‌ ಅವರು ಸಾಗುವಳಿ ಮಾಡುತ್ತಿದ್ದ 12 ಎಕರೆ ಜಮೀನು ಆರ್‌ಟಿಸಿ ಅನ್ವಯ ಸರ್ಕಾರದ್ದು. ಈ ಕುರಿತು ಭೂನ್ಯಾಯ ಮಂಡಳಿ ಮತ್ತು ನ್ಯಾಯಾಲಯಗಳಲ್ಲಿ ತೀರ್ಪು ಸರ್ಕಾರದ ಪರವಾಗಿತ್ತು. ಈ ವಿಷಯವನ್ನು ರೈತನಿಗೆ ವಾರದ ಹಿಂದೆ ತಿಳಿಸಿ, ಈ ಬಾರಿಯ ಬೆಳೆ ಕಟಾವಿನ ಬಳಿಕ ತಂತಿಬೇಲಿ ಹಾಕುವುದಾಗಿ ತಿಳಿಸಲಾಗಿತ್ತು.
– ಭ್ರಮರಾಂಬಾ ಗುಬ್ಬಿಶೆಟ್ಟಿ, ತಹಶೀಲ್ದಾರ್‌, ಮುಂಡರಗಿ
 

Advertisement

Udayavani is now on Telegram. Click here to join our channel and stay updated with the latest news.

Next