ನವದೆಹಲಿ:ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಹಾಗೂ ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅನರ್ಹ ಶಾಸಕರು ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ ಅವರು ಬುಧವಾರ ಸುಪ್ರೀಂಕೋರ್ಟ್ ನಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ವಾದ ಮಂಡಿಸಿದರು. ಇದೀಗ ಭೋಜನ ವಿರಾಮದ ಬಳಿಕ ಮತ್ತೆ ವಿಚಾರಣೆ ಆರಂಭಿಸುವುದಾಗಿ ಸುಪ್ರೀಂ ಪೀಠ ತಿಳಿಸಿದೆ.
ಸ್ಪೀಕರ್ ಹೆಡ್ ಮಾಸ್ಟರ್ ಅಲ್ಲ; ರೋಹ್ಟಗಿ ವಾದ
ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದರೋ ಅಥವಾ ನೈಜತೆಯಿಂದ ಕೂಡಿದೆಯೇ ಎಂಬುದು ಪರಿಶೀಲನೆ ನಡೆಸುವುದು ಸ್ಪೀಕರ್ ಕೆಲಸ. ಮುಂಬೈನಲ್ಲಿದ್ದರು, ವಿಮಾನದಲ್ಲಿ ಹೋಗಿದ್ದರು ಎಂಬ ಕಾರಣಕ್ಕೆ ಶಾಸಕರನ್ನು ಅನರ್ಹಗೊಳಿಸುವಂತಿಲ್ಲ, ಸ್ಪೀಕರ್ ಹೆಡ್ ಮಾಸ್ಟರ್ ಅಲ್ಲ…ಇದು ಅನರ್ಹ ಶಾಸಕರ ಪರ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಅವರು ನ್ಯಾ.ಎನ್.ವಿ ರಮಣ್ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿ ವಿಚಾರಣೆ ವೇಳೆ ಹೀಗೆ ವಾದ ಮಂಡಿಸಿದರು.
ತಮಗೆ ಖುದ್ದು ರಾಜೀನಾಮೆ ಸಲ್ಲಿಸಬೇಕೆಂದು ಸ್ಪೀಕರ್ ತಗಾದೆ ತೆಗೆದಿದ್ದರು. ಸಂವಿಧಾನದ ಆರ್ಟಿಕಲ್ 164(1)ಬಿ ನಲ್ಲಿ ಶಾಸಕರಿಗೆ ಮರು ಆಯ್ಕೆಯಾಗುವ ಅವಕಾಶ ಇದೆ. ಸ್ಪೀಕರ್ ಅವರು ಶಾಸಕರಿಗೆ ಅಭಿಪ್ರಾಯ ಮಂಡಿಸಲು ಅವಕಾಶ ಕೊಟ್ಟಿಲ್ಲ. ರಾಜೀನಾಮೆ ಬಗ್ಗೆ ಶಾಸಕರು ರಾಜ್ಯಪಾಲರ ಗಮನಕ್ಕೂ ತಂದಿದ್ದರು. ಸ್ಪೀಕರ್ ಶಾಸಕರ ನಿರ್ಧಾರವನ್ನು ಪ್ರಶ್ನಿಸುವಂತಿಲ್ಲ. ರಾಜೀನಾಮೆ ಅಂಗೀಕರಿಸುವ ಬಗ್ಗೆ ಮಾತ್ರ ಅಲೋಚಿಸಬೇಕು ಎಂದು ವಾದಿಸಿದರು.
ಶಾಸಕರ ವಿಚಾರ ಸದನದಲ್ಲಿ ಇತ್ಯರ್ಥವಾಗುತ್ತದೆ. ಸ್ಪೀಕರ್ ರಾಜಕೀಯ ಪಕ್ಷಗಳ ಪರ ವಕಾಲತ್ತು ವಹಿಸಬಾರದು. ಸರಕಾರ ಪತನಗೊಳ್ಳಲಿ ಬಿಡಲಿ ಅದು ಸ್ಪೀಕರ್ ಗೆ ಸಂಬಂಧಿಸಿದ್ದಲ್ಲ, ಅದು ಸದನಕ್ಕೆ ಸಂಬಂಧಪಟ್ಟಿದ್ದು ಎಂದರು.
ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕರಿಸಲಾಗಿದೆ. ಆದರೆ ರಮೇಶ್ ಜಾರಕಿಹೊಳಿಯನ್ನು ಅನರ್ಹಗೊಳಿಸಲಾಗಿದೆ. ಎರಡು ಪ್ರಕರಣ ಒಂದೇ ಆದರೂ ಸ್ಪೀಕರ್ ನಿರ್ಧಾರ ಮಾತ್ರ ಬೇರೆ, ಬೇರೆ ಆಗಿದೆ ಎಂದು ರೋಹ್ಟಗಿ ವಾದಿಸಿದರು.
ಸ್ಪೀಕರ್ ಅನರ್ಹ ಆದೇಶ ತಪ್ಪು. ಹೀಗಾಗಿ ಎಲ್ಲಾ ಅನರ್ಹ ಶಾಸಕರಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕು. ಇಲ್ಲವೇ ಚುನಾವಣೆಯನ್ನು ಮುಂದೂಡಬೇಕು ಎಂದು ವಾದಿಸಿದರು.