ಹೊಸಪೇಟೆ: ವಿಶ್ವ ಪರಂಪರಾ ತಾಣ ಹಂಪಿ ಸ್ಮಾರಕಗಳಿಗೆ ರಕ್ಷಣೆ ಕೊರತೆ ಕಾಡುತ್ತಿರುವ ಬೆನ್ನಲ್ಲಿಯೇ ಇದೀಗ ಹಂಪಿ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಮುರ್ರಂ(ಗ್ರಾವೆಲ್) ಸಾಗಾಣಿಕೆ ಪುರಾತನ ಸ್ಮಾರಕಗಳಿಗೆ ಮತ್ತಷ್ಟು ಅಪಾಯ ಭೀತಿ ಎದುರಾಗಿದೆ.
ತಾಲೂಕಿನ ಕಮಲಾಪುರದಿಂದ ಹಂಪಿ ವಿಜಯವಿಠಲ ದೇವಾಲಯಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಬರುವ ತಳವಾರಘಟ್ಟ ಮಹಾದ್ವಾರದ ಬಳಿಯ ಶಿವದೇವಾಲಯದ ಪಕ್ಕದಲ್ಲಿಯೇ ಬೃಹತ್ ಲಾರಿಗಳ ಮೂಲಕ ಅಕ್ರಮ ಮುರ್ರಂ ಸಾಗಣಿಕೆ ಮಾಡಲಾಗುತ್ತಿದೆ. ಹಿಟಾಚಿ ಯಂತ್ರದಿಂದ ಮುರ್ರಂ ಅಗೆಯುವ ಸಂದರ್ಭದಲ್ಲಿ ಕೋಟೆಯ ಗೋಡೆಗೆ ಹಾನಿಯಾಗಿದೆ.
ಹಾನಿ ಸಂಭವ: ಶಿವ ದೇವಾಲಯ ಹಾಗೆಯೇ ಕೋಟೆ ಗೋಡೆಗೆ ಹೊಂದಿಕೊಂಡಿರುವ ಕಲ್ಲು ಗುಂಡಿನ ಮೇಲೆ ಹರಪ್ಪ ನಾಗರಿಕತೆಗೆ ಸಮಾನವಾದ ಲಿಪಿ ಕಂಡು ಬರುತ್ತದೆ. ಈ ಪ್ರದೇಶದಲ್ಲಿ ಮುರ್ರಂ ಸಾಗಣಿಕೆ ಹೀಗೆ ಮುಂದುವರಿದರೆ ಇವೆಲ್ಲವೂ ನಾಶವಾಗುವ ಸಂಭವವಿದೆ. ಆಕ್ರೋಶ: ತಳವಾರಘಟ್ಟದ ಮಹಾದ್ವಾರ ಅನತಿ ದೂರದಲ್ಲಿ ಬೃಹತ್ ಲಾರಿಗಳ ಓಡಾಟದ ಸದ್ದು ಕೇಳಿ ಬರುತ್ತಿದ್ದು, ಹಾಡಹಾಗಲೇ ಅಕ್ರಮ ಸಾಗಾಣಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಮಾತ್ರ ಜಾಣಕುರುಡತನ ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ಆನೆಗುಂದಿ ಮಾರ್ಗದಿಂದ ನವವೃಂದಾವನ ಸಾಗುವ ಕಿರಿದಾದ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಇಲ್ಲಿನ ಮುರ್ರಂ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಮುರ್ರಂ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಹಂಪಿ ಸಂರಕ್ಷಣೆ ಹೊಣೆ ಹೊತ್ತಿರುವ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಹಂಪಿ ವಿಶ್ವಪರಂಪರೆ ಪ್ರದೇಶಾಭಿವೃದ್ಧಿ ನಿರ್ವಹಣಾ ಪ್ರಾಧಿ ಕಾರ ಇದ್ದರೂ ಕೂಡ ಕಳೆದ ಒಂದು ತಿಂಗಳಿಂದ ಬೃಹತ್ ಲಾರಿಗಳಲ್ಲಿ ಮುರ್ರಂ ಸಾಗಣಿಕೆ ನಡೆಯುತ್ತಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಅಕ್ರಮ ಮುರ್ರಂ ಸಾಗಾಣಿಕೆ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯ ವಿಜಯನಗರ ಸ್ಮಾರಕ, ಸಂಸ್ಕೃತಿ ಸಂರಕ್ಷಣಾ ಸೇನೆ ಆಗ್ರಹಿಸಿದೆ. ಭೇಟಿ: ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಈ ವೇಳೆ ಹಿಟಾಚಿ ಯಂತ್ರ ಮಾತ್ರ ಸ್ಥಳದಲ್ಲಿದ್ದು, ಲಾರಿಗಳು ಜಾಗ ಖಾಲಿ ಮಾಡಿವೆ ಎಂದು ಕಂದಾಯ ಇಲಾಖೆ ಗ್ರಾಮ ಲೆಕ್ಕಿಗ ಸುಭಾಷ್ ಕೋರನವರ ತಿಳಿಸಿದ್ದಾರೆ.