Advertisement

ಕಾಂಚಾಣದ್ದೇ ಸದ್ದು, ಹಣ-ಹೆಂಡದ ಮೇಲಾಟ

11:22 PM Apr 21, 2019 | Lakshmi GovindaRaju |

ಬೆಂಗಳೂರು: “ಲೋಕ’ ಸಮರದಲ್ಲಿ ಕಾಂಚಾಣ ಸದ್ದು ಮಾಡಿದ್ದು, ಹಣ ಹಾಗೂ ಹೆಂಡದ ಮೇಲಾಟ ಓಟಿನ ಮೌಲ್ಯದ ಜತೆಗೆ ಚೆಲ್ಲಾಟ ಆಡಿವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಪ್ತಿ ಮಾಡಲಾದ ಅಕ್ರಮ ಹಣ “ಶತಕದ’ ಅಂಚಿಗೆ ಬಂದು ನಿಂತಿದೆ.

Advertisement

ಚುನಾವಣಾ ಅಕ್ರಮಗಳನ್ನು ತಡೆದು, ಹಣ ಮತ್ತು ಹೆಂಡದ ಹಂಚಿಕೆಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಚಾಪೆ ಕೆಳಗೆ ತೂರಿದರೆ ಅಕ್ರಮ ಎಸಗುವ ಅಸಾಮಿಗಳು ರಂಗೋಲಿ ಕೆಳಗೆ ತೂರುತ್ತಾರೆ ಅನ್ನುವುದಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿವರೆಗೆ ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ವಶಪಡಿಸಿಕೊಂಡ ಅಕ್ರಮ ಹಣ 87.43 ಕೋಟಿ ಸಾಕ್ಷಿ.

ಇದು ಲೆಕ್ಕಕ್ಕೆ ಸಿಕ್ಕಿದ್ದು ಮಾತ್ರ, ಲೆಕ್ಕಕ್ಕೆ ಸಿಗದ ಅಕ್ರಮ ಹಣ ನೂರಾರು ಕೋಟಿ ರೂಪಾಯಿ. ರಾಜ್ಯದಲ್ಲಿ ಚುನಾವಣೆಗಿಂತ ಚುನಾವಣೆಗೆ ಅಕ್ರಮಗಳ ಪ್ರಮಾಣ ಏರುಗತಿಯಲ್ಲೇ ಇದೆ. 2014 ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ ನಗದು, ಮದ್ಯ ಸೇರಿ ಒಟ್ಟಾರೆ ಜಪ್ತಿ 37.68 ಕೋಟಿ ಆಗಿತ್ತು.

ಈವರೆಗೆ 87.43 ಕೋಟಿ ರೂ. ಅಕ್ರಮ ಹಣ ಜಪ್ತಿ ಮಾಡಲಾಗಿದ್ದು, ಸಾಮಾನ್ಯವಾಗಿ ಕೊನೆಯ 48 ಗಂಟೆಗಳಲ್ಲಿ ಹಣ ಹಂಚಿಕೆ ಹೆಚ್ಚಾಗಿರುವುದರಿಂದ ಅಕ್ರಮ ಹಣದ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂದು ಆಯೋಗದ ಅಧಿಕಾರಿಗಳು ಹೇಳುತ್ತಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಡೀ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಶಪಡಿಸಿಕೊಂಡಿದ್ದ ನಗದು 28.08 ಕೋಟಿ ರೂ. ಆಗಿತ್ತು.

ಆದರೆ, ಈ ಚುನಾವಣೆಯಲ್ಲಿ ಈವರೆಗೆ 31 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಅಕ್ರಮ ಹಣದ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಈ ಚುನಾವಣೆಯಲ್ಲಿ ಹಣಕ್ಕಿಂತ ಹೆಂಡದ ಹರಿದಾಟ ಹೆಚ್ಚಾಗಿದೆ. ಕಳೆದ ಬಾರಿ 2.82 ಕೋಟಿ ಮೊತ್ತದ ಮದ್ಯ ಜಪ್ತಿ ಮಾಡಿದ್ದರೆ, ಈ ಬಾರಿ ಅಬಕಾರಿ ಇಲಾಖೆಯು 36.89 ಕೋಟಿ ಮೊತ್ತದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದೆ.

Advertisement

ಬೆಂಗಳೂರು ದಕ್ಷಿಣ, ಶಿವಮೊಗ್ಗ ಮುಂದೆ: ಚುನಾವಣಾ ನೀತಿ ಸಂಹಿತೆ ಜಾರಿ ತಂಡಗಳು ವಿವಿಧ ಕಡೆ ದಾಳಿ ಮತ್ತು ತಪಾಸಣೆ ನಡೆಸಿ ನಗದು ವಶಪಡಿಸಿಕೊಂಡ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಮುಂದಿವೆ. ಬೆಂಗಳೂರು ದಕ್ಷಿಣದಲ್ಲಿ ಒಟ್ಟಾರೆ 9.09 ಕೋಟಿ ರೂ. ಅಕ್ರಮ ಹಣ ವಶಪಡಿಸಿಕೊಂಡಿದ್ದರೆ, ಶಿವಮೊಗ್ಗದಲ್ಲಿ 10.41 ಕೋಟಿ ವಶಪಡಿಸಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳಲ್ಲಿ 15.17 ಕೋಟಿ ನಗದು ಸೇರಿ 39.48 ಕೋಟಿ ಅಕ್ರಮ ಹಣ ವಶಪಡಿಸಿಕೊಂಡಿದ್ದರು. ಅದೇ ರೀತಿ 2ನೇ ಹಂತದಲ್ಲಿ ಏ.23ರಂದು ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಏ.21ರ ತನಕ 16.64 ಕೋಟಿ ನಗದು ಸೇರಿ 87.43 ಕೋಟಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ.

ಸಾವಿರಗಟ್ಟಲೇ ಪ್ರಕರಣಗಳು: 2013ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ನೀತಿ ಸಂಹಿತೆಯ 5,281 ಪ್ರಕರಣಗಳು ದಾಖಲಾಗಿದ್ದರೆ, 2014 ಲೋಕಸಭಾ ಚುನಾವಣೆಯಲ್ಲಿ 1,934 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ 3,324 ಪ್ರಕರಣಗಳು ದಾಖಲಾಗಿದ್ದವು. 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿತನಕ 17 ಸಾವಿರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2013ರಲ್ಲಿ ದಾಖಲಾಗಿದ್ದ ಒಟ್ಟು ಪ್ರಕರಣಗಳಲ್ಲಿ 1,744, 2014ರಲ್ಲಿನ 472, 2018ರಲ್ಲಿನ 2,406 ಪ್ರಕರಣಗಳು ವಿಚಾರಣಾ ಹಂತದಲ್ಲಿ ಬಾಕಿ ಇವೆ. ಈ ಚುನಾವಣೆಯಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳೂ ಪ್ರಾಥಮಿಕ ವಿಚಾರಣಾ ಹಂತದಲ್ಲಿವೆ.

ಚುನಾವಣಾ ಅಕ್ರಮಗಳ ಇತಿಹಾಸ
ಅಕ್ರಮ ಜಪ್ತಿ 2013ರ ವಿಧಾನಸಭೆ 2014ರ ಲೋಕಸಭೆ 2018ರ ವಿಧಾನಸಭೆ 2019 ಲೋಕಸಭೆ

ನಗದು 14.42 ಕೋಟಿ 28.08 ಕೋಟಿ 92.89 ಕೋಟಿ 31.81 ಕೋಟಿ

ಮದ್ಯ 68 ಸಾವಿರ ಲೀಟರ್‌ 2.82 ಕೋಟಿ ಮೊತ್ತ 24.78 ಕೋಟಿ ಮೊತ್ತ 37.01 ಕೋಟಿ ಮೊತ್ತ

ಮಾದಕ ವಸ್ತುಗಳು 1 ಕೋಟಿ ಮೊತ್ತ 25 ಸಾವಿರ ಮೊತ್ತ 39.80 ಸಾವಿರ ಮೊತ್ತ 11.20 ಸಾವಿರ ಮೊತ್ತ

ಇತರೆ ವಸ್ತುಗಳು 6.78 ಕೋಟಿ ಮೊತ್ತ 66.13 ಕೋಟಿ ಮೊತ್ತ 1.31 ಕೋಟಿ ಮೊತ್ತ

ಒಟ್ಟು 15.42 ಕೋಟಿ 37.68 ಕೋಟಿ 184 ಕೋಟಿ 87.43 ಕೋಟಿ (ಏ.21ರ ತನಕ)

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next