Advertisement
ಘಟಪ್ರಭಾ ಪ್ರವಾಹದಿಂದ ಅಕ್ರಮ ಮರಳುಗಾರಿಕೆ ಸಂಪೂರ್ಣ ತಗ್ಗಿತ್ತು. ಇದೀಗ ನದಿಯ ಹರಿವಿನ ಅಬ್ಬರ ಕಡಿಮೆಯಾಗುತ್ತಲೆ ನದಿಗೆ ಬೋಟ್ ಬಿಟ್ಟು ಮರಳು ಎತ್ತುವ ಅಕ್ರಮ ಚಟುವಟಿಕೆ ನಿಧಾನವಾಗಿ ತಲೆಯೆತ್ತುತ್ತಿದೆ. ಮುಧೋಳ ನಗರದಿಂದ ಕೆಲವೇ ಕೆಲವು ಕಿ.ಮೀ ಅಂತರದಲ್ಲಿ ಹಾಡಹಗಲೇ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
Related Articles
Advertisement
ಅಪಾರ ಪ್ರಮಾಣದಲ್ಲಿ ಸಂಗ್ರಹ: ನೀರು ಇಳಿಮುಖವಾಗಿರುವುದರಿಂದ ನದಿಪಾತ್ರದಲ್ಲಿ ಉತ್ತಮ ಗುಣಮಟ್ಟದ ಮರಳು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಗೊಂಡಿದೆ. ಗುಣಮಟ್ಟದ ಮರಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಅಕ್ರಮ ಮರಳು ಸಾಗಣೆದಾರರು ಪ್ರವಾಹ ತಗ್ಗುತ್ತಿದಂತೆ ತಮ್ಮ ದಂಧೆಗೆ ಮುಂದಾಗಿದ್ದಾರೆ. ನದಿ ನೀರು ಸಂಪೂರ್ಣ ಇಳಿಮುಖವಾದರೆ ನದಿಪಾತ್ರದ ಜನರು ಹೆಚ್ಚಿನ ಪ್ರಮಾಣದಲ್ಲಿ ಮರಳುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ದರಸಮರ ಉಂಟಾಗುತ್ತದೆ. ಆದ್ದರಿಂದ ಈಗಲೇ ಹೆಚ್ಚಿನ ಮರಳು ತೆಗೆದು ಮಾರಾಟ ಮಾಡುವ ಇರಾದೆಯಲ್ಲಿದ್ದಾರೆ ಅಕ್ರಮ ಮರಳು ದಂಧೆಕೋರರು.
ಬೋಟ್ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ: ಸದ್ಯ ನದಿ ನೀರು ಇಳಿಮುಖವಾಗಿದ್ದರೂ ಮರಳುಗಾರಿಕೆ ನಡೆಯುವ ಸ್ಥಳಕ್ಕೆ ಟ್ರ್ಯಾಕ್ಟರ್ ಗಳ ಓಡಾಟಕ್ಕೆ ರಸ್ತೆ ನೀರಿನಿಂದ ಕೂಡಿದ್ದು ಅನುಕೂಲಕರವಾಗಿಲ್ಲ. ಅಧಿಕಾರಿಗಳು ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳದಿದ್ದರೆ ಇನ್ನೊಂದು ವಾರದಲ್ಲಿ ಹೆಚ್ಚಿನ ಪ್ರಮಾಣದ ಬೋಟ್ ಗಳು ತಲೆಯೆತ್ತಿ ನದಿ ಸಂಪತ್ತು ಲೂಟಿಗೆ ಮುಂದಾಗುವುದಂತು ಖಚಿತ.
ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಜನಪ್ರತಿನಿಧಿಗಳು: ತಾಲೂಕಿನ ನದಿಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ಸಾಗಿದ್ದರೂ ಕಡಿವಾಣಕ್ಕೆ ಮುಂದಾಗಬೇಕಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿ ನದಿ ಸಂಪತ್ತು ರಕ್ಷಣೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಘಟಪ್ರಭಾ ನದಿ ಪಾತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ಒಂದುವೇಳೆ ಆ ರೀತಿಯೇನಾದರೂ ಇದ್ದರೆ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳುತ್ತೇನೆ.-ವಿನೋದ ಹತ್ತಳ್ಳಿ ತಹಸೀಲ್ದಾರ್ ಮುಧೋಳ – ಗೋವಿಂದಪ್ಪ ತಳವಾರ ಮುಧೋಳ