ನಿರ್ದೇಶನ ಮಾಡಬೇಕೆಂಬುದು ಗೀತರಚನೆಕಾರ ಹೃದಯಶಿವ ಅವರ ಅದೆಷ್ಟು ದಿನಗಳ ಕನವರಿಕೆಯೋ ಗೊತ್ತಿಲ್ಲ. ಆ ಕಸನು ಇವತ್ತು ನನಸಾಗುತ್ತಿದೆ. ಹೃದಯಶಿವ ನಿರ್ದೇಶನದ ಮೊದಲ ಚಿತ್ರ “ಜಯಮಹಲ್’ (ತಮಿಳಿನಲ್ಲಿ “ಮಾತಂಗಿ’) ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬ್ರಿಟಿಷರ ಕಾಲದ ಮಾತಂಗಿ ಎಂಬ ರಾಣಿ ಮತ್ತು ಆಕೆಯ ಕುರಿತು ಈ ಚಿತ್ರ ಸುತ್ತುತ್ತದಂತೆ. ಈ ಚಿತ್ರದ ಬಗ್ಗೆ ಮಾತನಾಡುವುದಕ್ಕೆಂದೇ ಹೃದಯಶಿವ ತಮ್ಮ ತಂಡದವರೊಂದಿಗೆ ಬಂದಿದ್ದರು.
ಹೃದಯಶಿವ ಬರೆದು ನಿರ್ದೇಶಿಸುವುದರ ಜೊತೆಗೆ, ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೆಳಿದ್ದಾರೆ. “ಇದೊಂದು ವಿಭಿನ್ನ ಸಿನಿಮಾ. ಸಾಕಷ್ಟು ಹಾರರ್ ಅಂಶಗಳಿವೆ, ಒಳ್ಳೆಯ ಸಂಗೀತವಿದೆ ಮತ್ತು ಎಲ್ಲಕ್ಕಿಂತ ಚೆನ್ನಾಗಿ ಒಂದಿಷ್ಟು ಒಳ್ಳೆಯ ವಿಷಯಗಳಿವೆ. ಹುಟ್ಟು, ಸಾವಿನ ಮಧ್ಯೆದ ಮದುಕನ್ನು ಫಿಲಾಸಫಿಕಲ್ ಆಗಿ ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಈ ವಿಷಯವನ್ನಿಟ್ಟುಕೊಂಡು ಕಥೆ ಮಾಡಿದ್ದೇವೆ’ ಎನ್ನುತ್ತಾರೆ ಹೃದಯಶಿವ.
ಈ ಚಿತ್ರದಲ್ಲಿ ಅಶ್ವತ್ಥ್ ನೀನಾಸಂ ಪ್ರೊಫೆಸರ್ ಪಾತ್ರವನ್ನು ಮಾಡಿದ್ದಾರೆ. “ರೇಷ್ಮೆ ಸೀರೆ ತೊಟ್ಟು, ಕೊರಳಿಗೆ ಆಭರಣ ಧರಿಸಿ ನಾಗವಲ್ಲಿಯ ತರಹ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ, ಚಿತ್ರದಲ್ಲಿ ಅವರೊಳಗೊಂದು “ಆತ್ಮ’ ಎಂಟ್ರಿಯಾಗಿ, ಅವರನ್ನು ಹೀಗೆಲ್ಲಾ ಮಾಡಿಸುತ್ತೆ. ಈ ಭಾಗದ ಚಿತ್ರೀಕರಣವಾದ ನಂತರ ಸಾಕಷ್ಟು ಸಮಸ್ಯೆಯಾಯಿತಂತೆ. “ಮೊದಲು ವಾಂತಿಯಾಯಿತು. ನಂತರ ಜ್ವರ ಬಂತು. ಚರ್ಮದ ಸಮಸ್ಯೆ ಎದುರಾಯಿತು. ಏನೇ ಸಮಸ್ಯೆಗಳಾದರೂ, ಇದೊಂದು ವಿಭಿನ್ನವಾದ ಪಾತ್ರ ಮತ್ತು ಚಿತ್ರ’ ಎಂದು ಅಶ್ವತ್ಥ್.
ಶುಭಾ ಪೂಂಜ ಇಲ್ಲಿ ಫಾರಿನ್ ರಿಟರ್ನ್ಡ್ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಮೊದಲ ಹಾರರ್ ಚಿತ್ರ ಎಂಬುದರ ಜೊತೆಗೆ, ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರುವಂತಹ ಪಾತ್ರ ಈ ಚಿತ್ರದಲ್ಲಿದೆ ಎಂದು ಹೇಳಿಕೊಂಡರು ಶುಭಾ. ಈ ಚಿತ್ರವನ್ನು ರೇಣುಕಾ ಸ್ವರೂಪ್ ಎನ್ನುವವರು ನಿರ್ಮಿಸಿದ್ದಾರೆ. ಚಿತ್ರಕ್ಕಾಗಿ 50 ದಿನಗಳ ಕಾಲ ರಾಮನಗರ, ಮಂಡ್ಯ, ಪಳನಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.