ಗಜೇಂದ್ರಗಡ: ಕಲ್ಯಾಣ ಚಾಲುಕ್ಯರ ಕಾಲದ ಅಕ್ಕಾದೇವಿ ಆಡಳಿತದಲ್ಲಿ ವಿದ್ಯಾಕೇಂದ್ರವಾಗಿದ್ದ ಸೂಡಿ ಗ್ರಾಮದ ಗ್ರಂಥಾಲಯದಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಸ್ವಂತ ಕಟ್ಟಡವಿಲ್ಲ. ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆಯಿಲ್ಲದೆ
1988ರಲ್ಲಿ ಆರಂಭವಾದ ಗ್ರಂಥಾಲಯ ಆರಂಭದ ಸಂದರ್ಭದಲ್ಲಿ ಯಾವ ಸ್ಥಿತಿಯಲ್ಲಿತ್ತೋ ಇಂದಿಗೂ ಅದೇ ಸ್ಥಿತಿಯಲ್ಲಿದೆ. 215 ಸದಸ್ಯರನ್ನು ಒಳಗೊಂಡ ಈ ಗ್ರಂಥಾಲಯದಲ್ಲಿ 4300ಕ್ಕೂ ಅ ಧಿಕ ಪುಸ್ತಕಗಳಿವೆ. ಮೂರೇ ಮೂರು ದಿನಪತ್ರಿಕೆಗಳು ಬರುತ್ತಿವೆ. ಹೊಸ ಹೊಸ ಪುಸ್ತಕಗಳ ಕೊರತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಕ್ಕಾಗಿ ಹಲವಾರು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ.
ಗ್ರಾಪಂ ಹಳೆಯ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಜನಸಂಖ್ಯೆಗೆ ಅನುಗುಣವಾಗಿಲ್ಲ. ತೀರಾ ಕಡಿದಾದ ಸ್ಥಳದಲ್ಲಿ ಹೆಚ್ಚು ಕುರ್ಚಿಯನ್ನಾಗಲಿ, ಟೇಬಲ್‌ನ್ನಾಗಲಿ ಸರಿಯಾಗಿ ಇಡಲು ಸಾಧ್ಯವಾಗಿಲ್ಲ. ಸಾರ್ವಜನಿಕರು ಕುಳಿತು ಓದುವ ಸ್ಥಳ ತೀರಾ ಇಕ್ಕಟ್ಟಾಗಿದೆ. ಗ್ರಂಥಾಲಯ ಓಬೇರಾಯನ ಕಾಲದ ಕಟ್ಟಡದಲ್ಲಿದ್ದು, ಮಳೆ ಬಂದರೆ ಪುಸ್ತಕಗಳು ನೀರಿನಲ್ಲಿ ನೆನೆಯುವ ಸ್ಥಿತಿಯಲ್ಲಿದೆ.ಇಲಿ, ಹೆಗ್ಗಣಗಳ ದಾಳಿಯಿಂದ ಮೊದಲೇ ಹಾಳಾಗಿದ್ದ ಗೋಡೆಯ ಮಣ್ಣು ಉದುರಿ ಬೀಳುತ್ತಿದೆ. ದಿನ ಪತ್ರಿಕೆಗಳಿಗೆ ಪ್ರತಿ ತಿಂಗಳು ಇಲಾಖೆಯಿಂದ ಕೇವಲ 400 ರುಪಾಯಿ ಮಾತ್ರ ಅನುದಾನ ಬರುತ್ತಿದ್ದು, ಸ್ಟೇಷನ್ ಖರೀದಿಗೆ ಕೈಲಿಂದಲೇ ಖರ್ಚು ಮಾಡಬೇಕಾದ ಸ್ಥಿತಿ ಇದೆ. ಇಲಾಖೆ ಮಾತ್ರ ಯಾವುದೇ ಅಭಿವೃದ್ಧಿಗೆ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಗಂಭೀರ ಆರೋಪ. ಅತ್ಯಂತ ಕ್ರಿಯಾಶೀಲವಾಗಿರುವ ಗ್ರಾಪಂ ಆಡಳಿತ ಕೇವಲ ಜನರ ಮೂಲ ಸೌಲಭ್ಯ ನೀಡುವ ಕಾರ್ಯದೊಂದಿಗೆ ಗ್ರಂಥಾಲಯ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ಗ್ರಂಥಾಲಯಕ್ಕೆ ಶ್ರಮಿಸಬೇಕಿದೆ.
ಗ್ರಂಥಾಲಯಕ್ಕೆ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಯುವಕರು ಆಗಮಿಸುತ್ತಾರೆ. ಆದರೆ ಓದುಗರು ಹೆಚ್ಚಿನ ದಿನಪತ್ರಿಕೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಬಯಸುತ್ತಿದ್ದು, ಇಲಾಖೆಗೆ ಮನವಿ ಸಹ ಮಾಡಲಾಗಿದೆ. ಗ್ರಾಪಂನವರು ಆದರೂ ಸ್ಪರ್ಧಾತ್ಮಕ ಪುಸ್ತಕಗಳ ವಿತರಣೆಗೆ ಮುಂದಾಗಬೇಕಿದೆ.
-ಯಮನಪ್ಪ ಭಜೇಂತ್ರಿ, ಸೂಡಿ ಗ್ರಂಥಪಾಲಕ.
-ಡಿ.ಜಿ ಮೋಮಿನ್