ಈ ಹಿಂದೆ “ರಾಜಲಕ್ಷ್ಮೀ’ ಚಿತ್ರವೊಂದು ತಯಾರಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ ಎಂಬ ಕುರಿತು ಹೇಳಲಾಗಿತ್ತು. ಈಗ ಆ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, ಹೊಸ ತಂಡವೊಂದು ಸೇರಿಕೊಂಡು “ರಾಜಲಕ್ಷ್ಮೀ’ ಚಿತ್ರ ಮಾಡಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಕೂಡ ಹೊರತಂದಿದೆ. ನಿರ್ಮಾಪಕ ಎಸ್.ಕೆ.ಮೋಹನ್‌ಕುಮಾರ್ ಅವರು ತಮ್ಮ ತಂದೆ ಹಾಗೂ ತಾಯಿ ಹೆಸರನ್ನೇ ಈ ಚಿತ್ರಕ್ಕೆ ಶೀರ್ಷಿಕೆಯನ್ನಾಗಿಸಿದ್ದಾರೆ.
ಅಷ್ಟಕ್ಕೂ “ರಾಜಲಕ್ಷ್ಮೀ’ ಚಿತ್ರದ ಕಥೆ ಕೂಡ ಹಾಗೆಯೇ ಇರುವುದರಿಂದ, ನಾಯಕ, ನಾಯಕಿ ಕೂಡ ಇಲ್ಲಿ ರಾಜ, ಲಕ್ಷ್ಮಿ ಆಗಿರುವುದರಿಂದ ಚಿತ್ರಕ್ಕೂ ಅದೇ ನಾಮಕರಣ ಮಾಡಿದ್ದಾರೆ. ಅಂದಹಾಗೆ, ಇದೊಂದು ನೈಜ ಘಟನೆಯ ಚಿತ್ರ. ಈ ಹಿಂದೆ ಕೆರಗೂಡು ಗ್ರಾಮದ ಸಮೀಪದದಲ್ಲಿ ನಡೆದ ನೈಜ ಘಟನೆಗಳು ಚಿತ್ರದ ಜೀವಾಳವಂತೆ. ಈ ಚಿತ್ರಕ್ಕೆ ಕಾಂತರಾಜ್ ಗೌಡ ನಿರ್ದೇಶಕರು. ವಕೀಲರಾಗಿರುವ ಅವರು, ಸಿನಿಮಾ ಮೇಲಿನ ಆಸಕ್ತಿ ಇಟ್ಟುಕೊಂಡಿದ್ದರು.
ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವದ ಮೇಲೆ, “ರಾಜಲಕ್ಷ್ಮೀ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ನಿರ್ದೇಶನಕ್ಕೂ ಮುನ್ನ, ಸುಮಾರು ಹದಿನೈದಕ್ಕೂ ಹೆಚ್ಚು ಕಥೆಗಳನ್ನು ನಿರ್ಮಾಪಕರಿಗೆ ಹೇಳಿದ್ದರೂ, ಅವರು ಎಲ್ಲವನ್ನೂ ತಿರಸ್ಕರಿಸಿದ್ದರಂತೆ. ಕೊನೆಗೆ ನೈಜ ಘಟನೆಯ ಕಥೆ ಬಗ್ಗೆ ಹೇಳಿದಾಗ, ಇದು ವರ್ಕೌಟ್ ಆಗುತ್ತೆ ಅಂತ ಗ್ರೀನ್ ಸಿಗ್ನಲ್ ಕೊಟ್ಟಿದ್ದಕ್ಕೆ, “ರಾಜಲಕ್ಷ್ಮೀ’ ಚಿತ್ರ ಆಗಿದೆ ಎಂಬುದು ನಿರ್ದೇಶಕರ ಮಾತು.
ಇದು ನಿರ್ದೇಶಕ ಕಾಂತರಾಜ್‌ಗೌಡ ಅವರ ಮೊದಲ ಚಿತ್ರ. ಎರಡು ಹಾಡುಗಳಿಗೆ ಸಾಹಿತ್ಯವನ್ನೂ ಬರೆದಿದ್ದಾರೆ. ಇದೊಂದು ಪಕ್ಕಾ ಲವ್‌ಸ್ಟೋರಿ ಇರುವ ಕಥೆ. ಅದರಲ್ಲೂ ಗ್ರಾಮೀಣ ಸೊಗಡಿನ ಕಥೆ ಹೊಂದಿದೆ. ಸಂಪೂರ್ಣ ಗ್ರಾಮೀಣ ಭಾಗದಲ್ಲೇ ನಡೆಯುವ ರಾಜಕೀಯ ಚಟುವಟಿಕೆಗಳನ್ನು ತೋರಿಸುವ ಪ್ರಯತ್ನ ಇಲ್ಲಿದೆ. ಬಹುತೇಕ ಮಂಡ್ಯ ಸುತ್ತಮುತ್ತಲ ಗ್ರಾಮಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ನವೀನ್ ತೀರ್ಥಹಳ್ಳಿ ಹೀರೋ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅವರು ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
“ರಾಜಲಕ್ಷ್ಮೀ’ ಚಿತ್ರದಲ್ಲಿ ಅವರು ಕಾಲೇಜು ಹುಡುಗನಾಗಿಯೂ, ರೈತನಾಗಿಯೂ ನಟಿಸಿದ್ದಾರಂತೆ. ಇಲ್ಲಿ ಆ್ಯಕ್ಷನ್‌ಗೂ ಹೆಚ್ಚು ಒತ್ತು ಕೊಡಲಾಗಿದೆ ಎಂಬುದು ನವೀನ್ ಮಾತು. ನಾಯಕಿಯಾಗಿ ರಶ್ಮಿಗೌಡ ನಟಿಸಿದ್ದು, ಆವರಿಗೆ ಇದು ಮೊದಲ ಸಿನಿಮಾ. ಅವರಿಲ್ಲಿ ರಾಜಕಾರಣಿಯ ಮಗಳ ಪಾತ್ರ ನಿರ್ವಹಿಸಿದ್ದಾರಂತೆ. ಸೈಲೆಂಟ್ ಆಗಿ ಕಂಡರೂ, ರಗಡ್ ಹುಡುಗಿಯ ಪಾತ್ರವಂತೆ ಅದು. ಮೂರ್ತಿ ಅವರು ಇಲ್ಲಿ ನಾಯಕಿ ತಂದೆ ಪಾತ್ರ ಮಾಡಿದರೆ, ಕಿರಣ್‌ಗೌಡ ಖಳನಟನಾಗಿ ನಟಿಸುತ್ತಿದ್ದಾರೆ.
ಉಳಿದಂತೆ “ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮುತ್ತುರಾಜ್, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್ ಕೃಷ್ಣ ಇದ್ದಾರೆ. ಎ.ಟಿ.ರವೀಶ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಮಾಗಡಿ ಯತೀಶ್ ಸಂಭಾಷಣೆ ಇದೆ. ಡಿ.ಕೆ.ದಿನೇಶ್ ಅವರ ಛಾಯಾಗ್ರಹಣವಿದೆ. ನಾಗರಾಜ್.ಎಸ್.ಮೂರ್ತಿ, ನೃತ್ಯವಿದೆ. ಹಾಡುಗಳ ಬಿಡುಗಡೆ ವೇಳೆ, ನಾಗೇಂದ್ರಪ್ರಸಾದ್, ಧರ್ಮ, ತಾಂಡವ್, ವಾಣಿಜ್ಯ ಮಂಡಳಿ ಕಾರ್ಯದರ್ಶಿ ನರಸಿಂಹಲು ಇತರರು ಇದ್ದರು. ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.