Advertisement

ಕಂದಾಯ ಸಚಿವರ ಸಮ್ಮುಖದಲ್ಲಿ ದಿಡ್ಡಳ್ಳಿ ಸಮಸ್ಯೆಗೆ ಪರಿಹಾರ

05:06 PM Apr 13, 2017 | Harsha Rao |

ಮಡಿಕೇರಿ: ಶಾಶ್ವತ ಭೂಮಿಯ ಹಕ್ಕಿಗಾಗಿ ಒತ್ತಾಯಿಸಿ ಹೋರಾಟದ ರೂಪದಲ್ಲಿ ದಿಡ್ಡಳ್ಳಿಯಲ್ಲಿ ತಾತ್ಕಾಲಿಕವಾಗಿ ನೆಲೆ ನಿಂತಿರುವ ಆದಿವಾಸಿಗಳು ಹಾಗೂ ನಿರಾಶ್ರಿತರ ಬೇಡಿಕೆಗಳನ್ನು ಖುದ್ದು ಪರಿಶೀಲಿಸುವುದಕ್ಕಾಗಿ ಎ.17 ಮತ್ತು 18ರಂದು ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. 

Advertisement

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಆದಿವಾಸಿ ಹೋರಾಟಗಾರರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳ ಸಿದ್ದರಾಮಯ್ಯ ಅವರ ನೇತೃತ್ವದ ಸಭೆಯಲ್ಲಿ ಕೊಡಗಿನ ದಿಡ್ಡಳ್ಳಿ, ಪಾಲೆೇಮಾಡು ಹಾಗೂ ಚೆರಿಯಪರಂಬು ವ್ಯಾಪ್ತಿಯ ಜನರ ಭೂಮಿಯ ಹಕ್ಕಿನ ಹೋರಾಟದ ಬಗ್ಗೆ ಚರ್ಚೆ ನಡೆಯಿತು.

ದಿಡ್ಡಳ್ಳಿಯಲ್ಲಿ ಈ ಹಿಂದೆ ಬಡವರು ನೆಲೆಸಿದ್ದ ಜಾಗ ಅರಣ್ಯ ಭೂಮಿ ಅಲ್ಲ ಎನ್ನುವುದನ್ನು ಮುಖ್ಯಮಂತ್ರಿಗಳು, ಸಚಿವರು ಹಾಗೂ ಹಿರಿಯ ಅಧಿಕಾರಿಗಳಿಗೆ ಸಮಿತಿ ಮನವರಿಕೆ ಮಾಡಿಕೊಟ್ಟಿದೆ ಎಂದು ಸಮಿತಿಯ ಪ್ರಮುಖರಾದ ಅಮಿನ್‌ ಮೊಹಿಸಿನ್‌ ತಿಳಿಸಿದ್ದಾರೆ. ಸಭೆೆಯಲ್ಲಿ ಪಾಲ್ಗೊಂಡ ಹೋರಾಟಗಾರರೊಂದಿಗೆ ಮುಖ್ಯಮಂತ್ರಿಗಳು ಸುದೀರ್ಘ‌ವಾಗಿ ಚರ್ಚಿಸಿ, ಕಂದಾಯ ಸಚಿವರನ್ನು ಕೊಡಗಿಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಎ.17 ಮತ್ತು 18ರಂದು ಸಚಿವ ಕಾಗೋಡು ತಿಮ್ಮಪ್ಪ ಅವರು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ದಿಡ್ಡಳ್ಳಿ, ಪಾಲೆೇಮಾಡು ಹಾಗೂ ಚೆರಿಯಪರಂಬು ವಿವಾದಗಳನ್ನು ಬಗೆಹರಿಸಲಿದ್ದಾರೆ ಎಂದು ಅಮೀನ್‌ ಮೊಹಿಸಿನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯನ್ನು ಸ್ಥಳೀಯವಾಗಿಯೇ ಬಗೆಹರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರನ್ನು ಜಿಲ್ಲೆಗೆ ತೆರಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆ ಎಂದು ತಿಳಿಸಿರುವ ಅವರು ಜಿಲ್ಲೆಯಲ್ಲಿ ಸಿ ಮತ್ತು ಡಿ ವರ್ಗದ ಭೂಮಿಯನ್ನು ಹಿಂಪಡೆಯಲು ಸರ್ಕಾರ ಸಹಮತ ವ್ಯಕ್ತಪಡಿಸಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ದಿಡ್ಡಳ್ಳಿಯ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದಲ್ಲವೆಂದು ಸ್ಪಷ್ಟವಾದಲ್ಲಿ ಅದೇ ಜಾಗವನ್ನು ವಸತಿ ರಹಿತ‌ರಿಗೆ ನೀಡಲಾಗುವುದು ಅಥವಾ ಗೊಂದಲ ಮುಂದುವರಿದಲ್ಲಿ ಪರ್ಯಾಯ ಜಾಗದಲ್ಲಿ ತಲಾ 3 ಎಕರೆ ಭೂಮಿ ಮತ್ತು ವಸತಿ ನೀಡುವ ಕುರಿತು ಸರ್ಕಾರ ಭರವಸೆ ನೀಡಿದೆಯೆಂದು ಅಮಿನ್‌ ಮೊಹಿಸಿನ್‌ ತಿಳಿಸಿದ್ದಾರೆ.

Advertisement

ಕೊಡಗಿನಲ್ಲಿ ನಡೆಯುತ್ತಿರುವ ಜೀತ ಪದ್ಧತಿಯ ಕುರಿತು ಸಮಗ್ರ ತನಿಖೆೆ ನಡೆಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಿವೇಶನ ರಹಿತ‌ರು ನಿವೇಶನ ಮತ್ತು ವಸತಿಗಾಗಿ ಇನ್ನು ಮುಂದೆಯೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿರುವುದಾಗಿ ಅಮಿನ್‌ ಮೊಹಿಸಿನ್‌ ಹೇಳಿದ್ದಾರೆ.

ಸಭೆಯಲ್ಲಿ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ, ಅರಣ್ಯ ಸಚಿವರಾದ ರಮಾನಾಥ್‌ ರೈ, ಸಮಾಜ ಕಲ್ಯಾಣ ಸಚಿವರಾದ ಎಚ್‌. ಆಂಜನೇಯ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಹೊರಾಟ ಸಮಿತಿಯ ಅಹವಾಲುಗಳನ್ನು ಆಲಿಸಿದರು.

ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎಚ್‌.ಎಸ್‌.ದೊರೆಸ್ವಾಮಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ, ಪ್ರಗತಿಪರರಾದ ಗೌರಿ ಲಂಕೇಶ್‌, ಮುತ್ತಮ್ಮ, ಶರೀಫ‌, ಅಪ್ಪಾಜಿ, ಕೆ. ಮೊಣ್ಣಪ್ಪ,  ಪದ್ಮನಾಭ, ಅಪ್ಪು, ವಿನಯ್‌, ನೂರ್‌ ಶ್ರೀಧರ್‌, ಸಮಿತಿಯ ಸಂಚಾಲಕ ಡಿ.ಎಸ್‌.ನಿರ್ವಾಣಪ್ಪ, ಸಿರಿಮನೆ ನಾಗರಾಜ್‌, ಕಂದೆಗಾಲ ಶ್ರೀನಿವಾಸ್‌, ಚಿತ್ರನಟ ಚೇತನ್‌ ಮತ್ತಿತರರು ಪಾಲ್ಗೊಂಡು ಕೊಡಗಿನಲ್ಲಿರುವ ಆದಿವಾಸಿಗಳು ಹಾಗೂ ದುರ್ಬಲರು ಅನುಭವಿಸುತ್ತಿರುವ ಸಂಕಷ್ಟದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ ಎಂದು ಅಮೀನ್‌ಮೊಹಿಸಿನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next