Advertisement
ಮಾ. 8 ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ನಡೆದ ಶ್ರೀ ಸಾಯಿನಾಥ ಮಿತ್ರ ಮಂಡಳ ಡೊಂಬಿವಲಿ ಇದರ 13 ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾರಾಷ್ಟ್ರದ ತುಳುನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾದ ಡೊಂಬಿವಲಿಯಲ್ಲಿ ಕಳೆದ 13 ವರ್ಷಗಳಿಂದ ಶ್ರೀ ಸಾಯಿನಾಥ ಮಿತ್ರ ಮಂಡಳಿ ತುಳುನಾಡಿನ ಸಂಸ್ಕೃತಿ, ಕಲೆಯನ್ನು ಉಳಿಸಿ-ಬೆಳೆಸುವುದರ ಜತೆಗೆ ಸಾಮಾಜಿಕ ಕ್ಷೇತ್ರದಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವುದು ಹೆಮ್ಮೆಯ ವಿಷಯ. ಈ ಸಂಸ್ಥೆ ಚಿರಕಾಲ ಬಾಳಿ ತುಳುನಾಡಿನ ಸಂಸ್ಕೃತಿಯ ರಾಯಭಾರಿ ಎಂದೆಣಿಸಲಿ. ಹೆಣ್ಣು ಸಂಸಾರದ ಕಣ್ಣು. ಅವಳು ದೇಲತಾ ಸ್ವರೂಪಿ. ಆದ್ದರಿಂದ ಮಹಿಳೆ ಮನೆಯಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.
Related Articles
Advertisement
ಜೈ ಭವಾನಿ ಶ್ರೀ ಶನೀಶ್ವರ ಮಂದಿರ ಹಾಗೂ ಬಿರುವೆರ್ ಕುಡ್ಲ ಡೊಂಬಿವಲಿ ಘಟಕದ ಅಧ್ಯಕ್ಷ ರವಿ ಮುದ್ದು ಸುವರ್ಣ ಅವರು ಮಾತನಾಡಿ, ಹದಿಮೂರು ವರ್ಷಗಳ ಹಿಂದೆ ನಾನು ಹಾಗೂ ಇಂದ್ರಾಳಿ ದಿವಾಕರ ಶೆಟ್ಟಿ ಅವರು ಜಂಟಿಯಾಗಿ ಈ ಸಂಸ್ಥೆಗೆ ಚಾಲನೆ ನೀಡಿದ್ದೇವು. ಇಂದು ಈ ಸಂಸ್ಥೆ ಅನೇಕ ಏರುಪೇರುಗಳನ್ನು ಎದುರಿಸಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾರೋಗ್ಯದಿಂದ ಬಳಲುವ ಜನರಿಗೆ ಸಹಾಯಹಸ್ತ ನೀಡಿದರೆ ಪರಮಾತ್ಮನ ಮಹಾಪೂಜೆ ಮಾಡಿದಂತೆ. ಅಂತಹ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದ್ದು, ನಮಗೆ ಸಂತಸ ನೀಡಿದೆ ಎಂದರು. ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುಕೇಶ್ ಮೊಗವೀರ ಅವರು ಸಂಸ್ಥೆಯು ನಡೆದು ಬಂದ ದಾರಿಯ ಸಾಧನೆ ಹಾಗೂ ಸಿದ್ಧಿಗಳನ್ನು ವಿವರಿಸಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ವಿಜಯ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಯಕ್ಷಕಲಾ ಸಂಸ್ಥೆ, ಶ್ರೀ ಜಗದಂಬಾ ಮಂದಿರದ ಡೊಂಬಿವಲಿ ಅಧ್ಯಕ್ಷ ಹರೀಶ್ ಶೆಟ್ಟಿ, ಹೊಟೇಲ್ ಕಾರ್ಮಿಕ ನಾರಾಯಣ ಶೆಟ್ಟಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು. ಮಂಡಳದ ಗೌರವಾಧ್ಯಕ್ಷ ಗಣೇಶ್ ಮೊಗವೀರ ದಂಪತಿ, ಅಧ್ಯಕ್ಷ ಮೋಹನ್ ಸಾಲ್ಯಾನ್ ದಂಪತಿ, ದಾಂಪತ್ಯ ಜೀವನದ ಸುವರ್ಣ ಮಹೋತ್ಸವ ಆಚನಿಸಿದ ಆರ್. ಬಿ. ಶೆಟ್ಟಿ ದಂಪತಿ, ಸಮಾಜ ಸೇವಕ ರವಿ ಸನಿಲ್ ಅವರನ್ನು ಗೌರವಿಸಲಾಯಿತು. ಓಂದಾಸ್ ಕಣ್ಣಂಗಾರ್, ವಸಂತ ಸುವರ್ಣ, ಅಶೋಕ್ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಹರೀಶ್ ಶೆಟ್ಟಿ ಅವರು, ತಾವು ನೀಡಿದ ಈ ಸಮ್ಮಾನ ತಾಯಿ ಜಗದಂಬೆಯ ಪ್ರಸಾದವಾಗಿದ್ದು, ನಾನು ಸಂಪಾದಿಸಿದ ಶೇ. 2ರಷ್ಟನ್ನು ನಾನು ಸಮಾಜಕ್ಕಾಗಿ ವಿನಿಯೋಗಿಸುತ್ತಿದ್ದೇನೆ. ತಾವು ನೀಡಿದ ಈ ಸಮ್ಮಾನವನ್ನು ಹೃದಯಾಂತ ರಾಳದಿಂದ ಸ್ವೀಕರಿಸಿದ್ದೇನೆ ಎಂದರು.
ಇನ್ನೋರ್ವ ಸಮ್ಮಾನಿತ ಆರ್. ಬಿ. ಶೆಟ್ಟಿ ಅವರು ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರಿಗೆ ಕಂಕಣ ಭಾಗ್ಯ ಹಾಗೂ ಶೈಕ್ಷಣಿಕ ನೆರವು ನೀಡಿದಾಗ ದೇವರು ಸದಾ ನಮಗೆ ದಯೇ ತೋರುತ್ತಾನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಹಿಳೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿವಿಧ ಸಂಘಟನೆಗಳಿಂದ ನೃತ್ಯ ವೈವಿಧ್ಯ ನಡೆಯಿತು. ನಾರಾಯಣ ಪೂಜಾರಿ ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಮೋಹನ್ ಸಾಲ್ಯಾನ್, ಗಣೇಶ್ ಮೊಗವೀರ, ಚಂದ್ರಶೇಖರ ಪೂಜಾರಿ, ಕಲ್ಲಡ್ಕ ಕರುಣಾಕರ ಶೆಟ್ಟಿ, ರವಿ ಮುದ್ದು ಸುವರ್ಣ, ರವಿ ಪೂಜಾರಿ, ಪ್ರಭಾಕರ ಹೆಗ್ಡೆ, ಚಂದ್ರಶೇಖರ ಬೆಳ್ಚಡ, ಆರ್. ಬಿ. ಶೆಟ್ಟಿ, ಸುರೇಶ್ ಶೆಟ್ಟಿ, ಅಶೋಕ್ ಶೆಟ್ಟಿ, ಭಾಸ್ಕರ್ ಪೂಜಾರಿ, ಸುರೇಶ್ ಮೊಗವೀರ, ವಾಸು ಮೊಗವೀರ, ವಸಂತ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿನ್ಮಯ್ ಸಾಲ್ಯಾನ್ ನಿರ್ವಹಿಸಿದರು. ಸಭಾ ಕಾರ್ಯಕ್ರಮವನ್ನು ವಸಂತ ಸುವರ್ಣ ಅವರು ನಿರ್ವಹಿಸಿದರು.
-ಚಿತ್ರ-ವರದಿ : ಗುರುರಾಜ ಪೋತನೀಸ್